ಬೊಗಳೆ ರಗಳೆ

header ads

ಎಲ್ಲರೂ ಜೈಲಲ್ಲಿದ್ದರೆ ಚುನಾವಣೆ ಸುಲಭ

(ಬೊಗಳೂರು ವಿದೇಶೀ ಸಂಚಾರ ಬ್ಯುರೋದಿಂದ)
ಬೊಗಳೂರು, ನ.15- ಪಾತಕಿಸ್ತಾನದಲ್ಲಿ ಎಲ್ಲರನ್ನೂ ಒಂದೇ ಕಡೆ ಒಟ್ಟುಗೂಡಿಸಿದಲ್ಲಿ ಮಹಾ ಚುನಾವಣೆಗಳನ್ನು ನಡೆಸಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಸಾಮಾನ್ಯ (ಜನರಲ್) ಸರ್ವಾಧಿಕಾರಿ ಮುರ್ವೇಜ್ ಪುಷರಫ್ ಸಮರ್ಥಿಸಿಕೊಂಡಿದ್ದಾರೆ.

ಬೊಗಳೆ ರಗಳೆಗೆ ವಿಶೇಷ ಸಂದರ್ಶನ ನೀಡುತ್ತಿದ್ದ ಅವರು, "ಅದು ಹೇಗೆ" ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ ಸಂದರ್ಶಕರ ಪ್ರಶ್ನೆಗೆ ಮತ್ತಷ್ಟು ಕಕ್ಕಾಬಿಕ್ಕಿಯಾಗಿಯೇ ಉತ್ತರಿಸತೊಡಗಿದರು.

ನೋಡಿ ನಮ್ಮಲ್ಲಿ ಉಗ್ರಗಾಮಿಗಳೇ ಎಲ್ಲೆಡೆ ರಾರಾಜಿಸುತ್ತಿದ್ದುದರಿಂದ ವಿಶ್ವಮಟ್ಟದಲ್ಲಿ ನಮ್ಮ ದೇಶವು ಪಾತಕಿಸ್ತಾನ ಎಂಬ ಪ್ರಸಿದ್ಧಿ ಗಳಿಸಿದೆ. ನಾನು ಸಮವಸ್ತ್ರ ತೊಟ್ಟುಕೊಂಡು ದೇಶದ ಆಡಳಿತ, ಸೈನ್ಯದ ಆಡಳಿತ, ಐಎಸ್ಐ ಕುತಂತ್ರಗಳು, ಭಾರತದ ವಿರುದ್ಧ ಉಗ್ರರ ಛೂಬಿಡುವಿಕೆ, ಅಮೆರಕದೊಂದಿಗೆ ಕಪಟ ಮೈತ್ರಿ... ಇವೆಲ್ಲವನ್ನೂ ನಾನೊಬ್ಬನೇ ನಿಭಾಯಿಸಬೇಕಾಗುತ್ತದೆ. ಇಷ್ಟೆಲ್ಲದರ ಮಧ್ಯೆ, ಈ ದೇಶದ ಹಾಳು ಪ್ರಜೆಗಳಿಗೂ ನಾನು ಆಗಾಗ ಉತ್ತರ ನೀಡಬೇಕಾಗುತ್ತದೆ ಎನ್ನುತ್ತಾ ಅವರು ಒಂದು ನಿಮಿಷ ಮಾತು ನಿಲ್ಲಿಸಿ, ನೀರು ಕುಡಿದರು.

ನಮಗೂ ನೀರು ಕುಡಿಸಿ ಮುಂದುವರಿಸಿದ ಅವರು, ಎಲ್ಲವನ್ನೂ ಏಕಕಾಲಕ್ಕೆ ಮಾಡುವುದರೊಂದಿಗೆ ಚುನಾವಣೆಯೆಂಬ ಕಾಟಾಚಾರವನ್ನೂ ಮುಗಿಸಬೇಕಾಗುತ್ತದೆ. ಹಾಗಾಗಿ ಉಗ್ರಗಾಮಿಗಳು, ರಾಜಕಾರಣಿಗಳು, ಪತ್ರಕರ್ತರು, ಹೋರಾಟಗಾರರು, ಪ್ರಜಾಪ್ರಭುತ್ವ ಪ್ರಜಾಪ್ರಭುತ್ವ ಎಂದು ಬೊಬ್ಬಿಡುವ ಕಾರ್ಯಕರ್ತರು... ಇವರೆಲ್ಲರನ್ನೂ ಒಂದೇ ಕಡೆ ಕೂಡಿ ಹಾಕಿದರೆ ಚುನಾವಣೆ ಸುಲಭವಾಗುತ್ತದೆ. ಅವರನ್ನೆಲ್ಲಾ ಒಂದೇ ಬಾರಿ ಬೆದರಿಸಿ ಓಟು ಹಾಕಿಸಿದರೆ ಸಮಯ ಉಳಿತಾಯವಾಗುತ್ತದೆ. ಇದೇ ಕಾರಣಕ್ಕೆ ನಾವು ನಮ್ಮ ದೇಶದ ಜೈಲು ಜೈಲುಗಳನ್ನು ತುಂಬಿಸತೊಡಗಿದ್ದೇವೆ. ಇದರಿಂದ ಎಲ್ಲರೂ ಒಂದೇ ಕಡೆ ಸಿಗುವಂತಾಗುತ್ತಾರೆ ಎಂಬ ಸಮರ್ಥನೆ ನೀಡಿದರು.

ಉತ್ತರ ಕೇಳಿ ತತ್ತರಿಸಿ ಅಲ್ಲಿಂದ ಎದ್ದು ಹೊರಡುವುದು ಹೇಗೆ ಎಂದು ಚಡಪಡಿಸುತ್ತಿದ್ದ ನಮ್ಮ ಒದರಿಗಾರರನ್ನು ಎತ್ತಿ ಕುಕ್ಕಿ ಒತ್ತಿ ಕುಳ್ಳಿರಿಸಿದ ಅವರು, ಇನ್ನಷ್ಟು ಹೇಳಲಿಕ್ಕಿದೆ ಎಂದು ಬಾಯಿ ತೆರೆಯುತ್ತಿದ್ದರು. ಅವರು ದೊಡ್ಡದಾಗಿ ಬಾಯಿ ತೆರೆದಾಗ, ಪೊದೆ ಮೀಸೆಯು ಅವರ ಕಣ್ಣಿಗೆ ಅಡ್ಡ ಬಂದ ತಕ್ಷಣವೇ ಒದರಿಗಾರರು ಅಲ್ಲಿಂದ ಕಾಲು ಕಿತ್ತು ಹಿಂದೆ ತಿರುಗಿಯೂ ನೋಡದೆ ಒಂದೇ ಉಸಿರಿನಿಂದ ಓಡಿ ವಾಘಾ ಗಡಿ ದಾಟಿ ಭಾರತದೊಳಕ್ಕೆ ಕಾಲಿರಿಸಿದ ಬಳಿಕವೇ ಉಸಿರೆಳೆದುಕೊಂಡರು ಎಂದು ಗೊತ್ತಾಗಿದೆ.

ಈ ಒದರಿಗಾರರನ್ನೂ ಸಂದರ್ಶಿಸಲಾಯಿತು. ಒಂದೇ ಪ್ರಶ್ನೆ: "ಹೀಗೇಕೆ ಓಡಿ ಬಂದಿರಿ?". ಅದಕ್ಕೆ ಅವರು ನೀಡಿದ ಉತ್ತರ: "ನಮ್ಮನ್ನೂ ಒಂದೇ ಕಡೆ ಕೂಡಿ ಹಾಕುವ ಪ್ರಾಣಿಗಳ ಪಟ್ಟಿಗೆ ಸೇರಿಸಿದರೆ ಎಂಬ ಆತಂಕ"!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಬೊಗಳೆ ರಗಳೆ ದಿನ ಪತ್ರಿಕೆ ಆಗಿರುತ್ತಿದ್ದರೆ ಚೆನ್ನಾಗಿರುತ್ತಿತ್ತು.......:)

    ಪ್ರತ್ಯುತ್ತರಅಳಿಸಿ
  2. ಅಸತ್ಯಾನ್ವೇಷಿಗಳೆ,
    ಜಾರಕಾರಣಿಗಳನ್ನು ಕೂಡಿ ಹಾಕುವ ಸೆರೆಮನೆಗಳೆಲ್ಲ ಅರಮನೆಗಳಂತೆ ಇರುತ್ತವೆ,ಬಿಡಿ!

    ಪ್ರತ್ಯುತ್ತರಅಳಿಸಿ
  3. ಹುಂ ಹುಂ ಹುಂ

    ಕರಟಕ ದಮನಕ ಕಥೆಯಿದ್ದಂತಿದೆ. ಇಲ್ಲಿಯವರೆವಿಗೆ ವದರಿರೋದನ್ನೆಲ್ಲಾ ಒಂದು ಪುಸ್ತಿಕೆ ಮಾಡಿದರೆ ಹೇಗೆ? :o
    ನನಗೊಂದು ಪುಕ್ಕಟೆ ಕಾಪಿ ಕೊಡಿ ಸಾರ್ ...

    ಪ್ರತ್ಯುತ್ತರಅಳಿಸಿ
  4. ವೀ ಅವರೆ,
    ನಿಮ್ಮ ಮನಸ್ಸಿನ ಮಾತನ್ನೇನೋ ನೀವು ಹೇಳಿಬಿಟ್ಟಿದ್ದೀರಿ. ಈಗಾಗಲೇ ಓದುಗರ ಸಂಖ್ಯೆ ಒಂದು ಇದ್ದದ್ದು ಒಂದೂವರೆಗೆ ಏರಿಕೆಯಾಗಿರುವುದರಿಂದ ಪತ್ರಿಕೆಯನ್ನು ಮುದ್ರಿಸಲು ಕಷ್ಟವಾಗುತ್ತಿದೆ.

    ಆಮೇಲೆ ಜಾರಕಾರಣಿಗಳ ಕಾಟವೂ ಹೆಚ್ಚಾಗಿರುವುದರಿಂದ ಅವರು ಪತ್ರಿಕೆ ಮುದ್ರಿಸಲು ಬಿಡುತ್ತಲೇ ಇಲ್ಲ... ಏನು ಮಾಡೋದೂಂತ ಇನ್ನೊಂದು 100 ವರ್ಷ ಯೋಚಿಸುತ್ತಾ ಕುಳಿತಿರುತ್ತೇವೆ. ಆ ಮೇಲೆ ನೋಡೋಣ... ನಿಮ್ಮ ಸಲಹೆ ಕಾರ್ಯಗತವಾಗುವುದೆಂಬ ಆಶ್ವಾಸನೆ ನೀಡುತ್ತೇವೆ.

    ಪ್ರತ್ಯುತ್ತರಅಳಿಸಿ
  5. ಸುಧೀಂದ್ರರೆ,

    ಸೆರೆಮನೆಯಲ್ಲಿ ಎರಡೂ ಬಗೆಯ ಅರಮನೆಗಳಿರುತ್ತವೆ. ದ್ವೇಷ ರಾಜಕಾರಣಕ್ಕೊಂದು, ಪ್ರೇಮ ರಾಜಕಾರಣಕ್ಕೊಂದು ಅಂತ. ಹಾಗಾಗಿ ಭಯವಿಲ್ಲ ಬಿಡಿ.

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,

    ಓಹ್... ನೀವು ಪುಸ್ತಕಕ್ಕೆ ಕೈ ಹಚ್ಚಿದ್ದೀರಿ. ಓಕೆ ಓಕೆ.. ಒಂದು ಪುಟದ ಪುಸ್ತಕ ಮಾಡಲಾಗುತ್ತದೆಯಾ ಅಂತ ಯಾರಲ್ಲಾದರೂ ವಿಚಾರಿಸಿ ಹೇಳಿ. ಸಾವಿರಾರು ಪ್ರತಿಗಳನ್ನು ನೀವು ಮಾರಾಟ ಮಾಡಿ. ಹಣ ಮಾತ್ರ ನಂಗೆ ಕೊಟ್ಟರೆ ಸಾಕು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D