(ಬೊಗಳೂರು ಭವಿಷ್ಯ ವಿಶ್ಲೇಷಣೆ ಬ್ಯುರೋದಿಂದ)
ಬೊಗಳೂರು, ನ.13- ಕೊನೆಗೂ ಬೊಗಳೂರಿನ ರಾಜಧಾನಿಯಾಗಿರುವ ಕರು-ನಾಟಕದಲ್ಲಿ ಹೊಸ ಸರಕಾರವು ಅಸ್ತಿತ್ವಕ್ಕೆ ಬಂದು, ನಾಟಕದ ಹಳೆಯ ಅಂಕಕ್ಕೆ ಪರದೆ ಬಿದ್ದು, ಅಸ್ಥಿರತೆ, ಕಾಲೆಳೆಯುವ ರೋಚಕ ದೃಶ್ಯಗಳಿರುವ ಹೊಸ ಅಂಕವೊಂದಕ್ಕೆ ನಾಂದಿ ಹಾಡಲಾಗಿದೆ.

ಕಾಲೆಳೆಯುವ ಅಂಕ ಎಂದು ಇದನ್ನು ಹೆಸರಿಸಲಾಗಿದೆ. "ವಚನ ಭ್ರಷ್ಟ" ಎಂಬ ಪದವನ್ನು ಅನಾಮತ್ತಾಗಿ ತಮ್ಮ ತಲೆಯಿಂದ ಅತ್ಯಂತ ಸುಲಭವಾಗಿ ತೊಲಗಿಸಿಕೊಂಡ ಮಾಜಿ ಮುಮ ಕುಮಾರ ಸ್ವಾಮೀಜೀ ಅವರು, ಪಿತೃವಾಕ್ಯ ಪರಿಪಾಲನೆ ನಿಮಿತ್ತ "ಕೋಮುವಾದಿ"ಗಳ ಸಂಗ ಕಳಚಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರ ತಪಸ್ಸಿಗೆ ಆರಂಭಿಸಿದ್ದಾರೆ ಎಂಬುದನ್ನು ನಮ್ಮ ಬುಡರಹಿತ ಮೂಲಗಳು ವರದಿ ಮಾಡಿವೆ.

ಆರಂಭದ ದಿನವೇ ತಮ್ಮವರು ಹೊಸ ವೇದಿಕೆಯಲ್ಲಿ ಕಾಲೆಳೆದಾಟ ಶುರು ಮಾಡದಂತೆ ತಡೆ ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್ ಗೂಡಿನ ಬೀಗ ಹಾಕಲಾಗಿತ್ತು. ಈ ಕಾರಣದಿಂದಾಗಿ ಜೇಡಿಸ್‌ನಿಂದ ಯಾರೊಬ್ಬರೂ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿರಲಿಲ್ಲ.

ಇದರ ಹಿಂದಿನ ಅನೃತವಾದ ಕಾರಣ ಏನು ಎಂದು ಸಂಶೋಧನೆ ನಡೆಸಿದಾಗ ಎರಡು ಕಾರಣಗಳು ದೊರೆತಿವೆ. ಒಂದನೆಯದು ಪ್ರಮಾಣ ವಚನ ಎಂಬ ಶಬ್ದದ ಉತ್ತರಾರ್ಧದಲ್ಲಿರುವ "ವಚನ" ಎಂಬ ಪದ. ಅದರ ಉತ್ತರ ಪ್ರತ್ಯಯವಾಗಿರುವ "ಭ್ರಷ್ಟ" ಎಂಬ ಪದವನ್ನಷ್ಟೇ ನೋಡಿದಾಕ್ಷಣ ಎಲ್ಲಾ ರಾಜಕಾರಣಿಗಳು ನೆನಪಾಗುತ್ತಾರಾದರೂ, ಎರಡೂ ಸೇರಿಕೊಂಡ ತಕ್ಷಣ ನೆನಪಾಗುವುದು ಜೇಡೀಎಸ್ಸೇ!

ಎರಡನೇ ಕಾರಣ ಎಂದರೆ, ಈಗಲೇ ಕಾಲು ಕೆರೆದು ಜಗಳಕ್ಕೆ ತಮ್ಮ ಗೂಡಿನೊಳಗಿದ್ದವರನ್ನು ಬಿಟ್ಟೇ ಬಿಟ್ಟರೆ, ಜಗಳ ಅನ್ನೋದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಅವರನ್ನು ಮತ್ತಷ್ಟು ಕಾಲ ಕಟ್ಟಿ ಹಾಕಿದರೆ, ಮನಸ್ಸಿನೊಳಗಿನ ರೋಷ, ಆವೇಶ, ತುಡಿತ ಎಲ್ಲವೂ ಶೇಖರಣೆಯಾಗಿ, ಅದು ಜ್ವಾಲಾಮುಖಿ ಹಂತಕ್ಕೆ ತಲುಪುತ್ತದೆ. ಅವರನ್ನು ಸರಿಯಾದ ಸಮಯಕ್ಕೆ ಗೂಡಿನಿಂದ ಹೊರ ಬಿಟ್ಟರೆ ಭಾರೀ ವೇಗದಿಂದ, ಧಾವಂತದಿಂದ, ಬಲವಾಗಿ ಕಾಲು ಕೆರೆಯಬಹುದು ಎಂಬ ಚಾಣಾಕ್ಷ ನೀತಿ. ಕುರ್ಚಿಯೂರಪ್ಪ ಅವರು ಕುಳಿತಿರುವ ಕುರ್ಚಿಯಡಿ ಇರುವ ರತ್ನಗಂಬಳಿಯನ್ನು ಸುಲಭವಾಗಿ ಸೆಳೆಯಬಹುದು ಎಂಬುದು ಅತ್ಯಂತ ಪ್ರಮುಖ ತಂತ್ರಗಾರಿಕೆ.

ಒಟ್ಟಿನಲ್ಲಿ ಇನ್ನು ಹತ್ತೊಂಬತ್ತು ತಿಂಗಳ ಅವಧಿಯಲ್ಲಿ ಮತ್ತಷ್ಟು ರಂಜನಾತ್ಮಕ ಕ್ಷಣಗಳು ರಾಜ್ಯದ ಜನತೆಗೆ ಕಾದಿವೆ. ಅತ್ಯಂತ ಹೊಸ ಹೊಸ ಪದ ಪ್ರಯೋಗಗಳೂ ಈ ವೇಳೆ ಡಿಕ್ಷ-ನರಿಗೆ ಸೇರ್ಪಡೆಯಾಗಲಿವೆ ಎಂದು ನಮ್ಮ ಬೊಗಳೂರು ಬ್ಯುರೋ ಕುಳಿತಲ್ಲಿಂದಲೇ ವದರಿ ಮಾಡುತ್ತಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಇನ್ನು ಹತ್ತೊಂಬತ್ತು ತಿಂಗಳುಗಳಲ್ಲಿ ಏನೇನೋ ಆಗಿಹೋಗಿ, ಬಿಂಕದ ಸಿಂಗಾರಿ ಕಂಬಿಕೀಳುವುದು ಖಂಡಿತ, ನಾಟಕದ ಅಂಕಣದಲ್ಲಿ ಇನ್ನೂ ಹೆಚ್ಚಿನ ಅಂಕು ಡೊಂಕುಗಳು ಕಂಡುಬರುವುದು, ಕರು ಹಸುವಾಗೋಲ್ಲ ಅಂತ ಇಲ್ಲಿಯ ಕೃಷ್ಣಪ್ಪ ಜ್ಯೋತಿಷಿಗಳು ಹೇಳ್ತಿದ್ದಾರೆ.

  ಕೃಷ್ಣಪ್ಪ ಜ್ಯೋತಿಷಿಗಳಿಗೆ ಕರುವಿನ ದಾನ ಬೇಕಿದೆಯಂತೆ. ಯಾರಾದರೂ ದುರ್ದಾನಿಗಳು ದುರ್ವಾಸನೆ ಸಹಿತ ಕೊಡುವಂತಿದ್ದರೆ ತಿಳಿಸಿ. ಈ ವ್ಯವಹಾರದಲ್ಲಿ ನನಗೆ ಸಿಗೋ ದಲ್ಲಾಳಿಯಲ್ಲಿ ನಿಮಗೂ ಸ್ವಲ್ಪ ...
  ಶ್ ಶ್ ಶ್ ಶ್ ಶ್ ಶ್ ಶ್ ವಿಷಯ ನಮ್ಮ ನಮ್ಮಲ್ಲಿಯೇ ಇರಲಿ

  ReplyDelete
 2. "ಕುರ್ಚಿ ಓಕೆ,ನಾಚ್ಕೆ ಯಾಕೆ?" ಅನ್ನುವ ಈ ಅಸಂಗತ, ಹಾಸ್ಯಾಸ್ಪದ ನಾಟಕದ ಬಿಂಕದ ಅಂಕದ ಪರದೆ ಎಳೆದದ್ದಕ್ಕಾಗಿ ಧನ್ಯವಾದಗಳು,ಅನ್ವೇಷಿಯವರೆ.ಈಗಿನ ತುಟ್ಟಿ ದಿನಗಳಲ್ಲಿ ನಮ್ಮ ಜಾರಕಾರಣಿಗಳು ಕರುಣಿಸುತ್ತಿರುವ ಪುಕ್ಕಟೆ ಮನೋರಂಜನೆಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೇವೆ. " ಅಂಕದ ಪರದೆ ಜಾರಿದ ಮೇಲೆ,ನಾಟಕವಿನ್ನೂ ಉಳಿದಿಹದೆ?" ಎನ್ನುವ ಕನ್ನಡದ ಒಂದು ಹಳೆಯ ಚಿತ್ರಗೀತೆ ನಿಮಗೆ ಗೊತ್ತೆ?

  ReplyDelete
 3. ಶ್ಶ್ ಶ್ಶ್ ಶ್ಶ್ ಶ್ರೀನಿವಾಸರೆ,

  ಲೋಕದ ಅಂಕು ಡೊಂಕ ನೀವೇಕೆ ತಿದ್ದುವಿರಿ ಎಂದು ಶರಣರು ಹೇಳಿದ್ದಾರಾದುದರಿಂದ ನಾವು ತಿದ್ದಲು ಹೋಗುವುದಿಲ್ಲ. ಅದಾಗಿಯೇ ತಿದ್ದಿ ತಿದ್ದಿ, ಚಿತ್ತು ಆಗಿ... ಹೋಗುತ್ತದೆ...

  ನಮ್ಮಲ್ಲಿ ದುರ್ವಾಸನೆಗೇನೂ ಕೊರತೆ ಇಲ್ಲ. ಹಾಗಾಗಿ ತಕ್ಷಣವೇ ಗ್ಯಾಸ್ ಪೈಪ್ ಲೈನ್ ಸ್ಥಾಪಿಸಿ ಕಳುಹಿಸಿಕೊಡಲಾಗುತ್ತದೆ. ಅಧ್ವಾನ್ಸ್ ಕಳುಹಿಸಿ..

  ReplyDelete
 4. ಸುಧೀಂದ್ರರೆ,
  ಈಗೀಗ ತುಟಿಯೂ ತುಟ್ಟಿಯಾಗುತ್ತಿದೆ ಅಂತ ಕೇಳಿಬರುತ್ತಿರುವುದರಿಂದಾಗಿಯೇ ಜಾರಕಾರಣಿಗಳು ಪ್ರಜೆಗಳ ಮನಸ್ಥಿತಿ ಕಂಡು ಪುಕ್ಕಟ್ಟೆ ಮನರಂಜನೆ ನೀಡಲು ನಿರ್ಧರಿಸಿದ್ದಾರೆ. ಯಾಕಂದ್ರೆ ಇನ್ನೂ 19 ತಿಂಗಳನ್ನು ಹೇಗಾದರೂ ಕಳೆಯಬೇಕಲ್ಲ...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post