(ಬೊಗಳೂರು ಬೇಲಿ ಹಾರೋ ಬ್ಯುರೋದಿಂದ)
ಬೊಗಳೂರು, ಅ.22- ಮೋಟುಗೋಡೆಯಾಚೆ ಇಣುಕಿ ಏನು ನಡೆಯುತ್ತಿದೆಯೆಂದು ವೀಕ್ಷಿಸಲು ನೆರವಾಗುವ ಉಪಕರಣ ಸಂಶೋಧಿಸಲಾಗಿದೆ ಎಂಬ ವರದಿ ಇಲ್ಲಿ ಪ್ರಕಟವಾದ ತಕ್ಷಣವೇ ಅದರ ತಯಾರಕರು ನಾಪತ್ತೆಯಾಗಿದ್ದಾರೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಈ ಸುದ್ದಿ ಪ್ರಕಟವಾಗುವ ಮುಂಚೆಯೇ ಅದಕ್ಕೆ ಬೊಗಳೂರಿನಿಂದ ಭಾರೀ ಬೇಡಿಕೆ ಬಂದಿರುವುದು. ಪಕ್ಕದ ಮನೆಯಲ್ಲಿ ಏನು ನಡೀತಾ ಇದೆ, ಪಕ್ಕದ ಕೋಣೆಯಲ್ಲಿ ಏನು ನಡೀತಾ ಇದೆ ಎಂಬುದನ್ನು ತಿಳಿದುಕೊಳ್ಳಬಹುದೆಂಬ ಈ ಬಹೂಪಯೋಗಿ ಯಂತ್ರವನ್ನು ನಮಗೆ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಗಳು ಸಾಕಷ್ಟು ಬಂದಿವೆ ಎಂದು ತಿಳಿದುಬಂದಿದೆ.

ಪಕ್ಕದ ಮನೆಯಲ್ಲಿ ಬಂದ ಟಿವಿಯ ಅಗಲ ಎಷ್ಟು, ಸೀರೆಯ ಬಣ್ಣ ಯಾವುದು, ಏನು ತಿಂಡಿ ಮಾಡುತ್ತಿದ್ದಾರೆ, ಅವರು ತಂದಿರೋ ಒಡವೆ ನಿಜಕ್ಕೂ ಬಂಗಾರದ್ದೇ ಅಥವಾ ಗಿಲೀಟಿನದ್ದೇ? ಎಂಬಿತ್ಯಾದಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬೊಗಳೂರಿನ ಗೃಹಿಣಿಯರು ಒಂದು ಕಡೆಯಿಂದ ಧಮಕಿ ನೀಡಲಾರಂಭಿಸಿದ್ದಾರೆಂದು ಪತ್ತೆಯಾಗಿದೆ.

ಇನ್ನೊಂದು ಕಡೆಯಿಂದ ಪೋಲಿ ಹುಡುಗರಿಂದಲೂ ಸಾಕಷ್ಟು "ಧಮಕಿ ಭರಿತ ಬೇಡಿಕೆ"ಗಳು ಬಂದಿದ್ದು, ಪಕ್ಕದ ಮನೆಯಲ್ಲಿರೋರು ಏನು ಮಾಡ್ತಾರೆ, ಬೇಲಿಯಾಚೆ ಹಾರೋದು ಹೇಗೆ, ಕಂಪೌಂಡಿನಾಚೆ ಯಾರು ಎಷ್ಟು ಹೊತ್ತಿಗೆ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ಮತ್ತೊಂದೆಡೆಯಿಂದ ಕನ್ಯಾಪಿತರು ಕೂಡ ಇದಕ್ಕಾಗಿ ಅರ್ಜಿ ಗುಜರಾಯಿಸಿದ್ದಾರೆ. ಪಕ್ಕದ್ಮನೆ ಹುಡುಗ ನಮ್ಮನೆ ಹುಡ್ಗಿ ಜತೆ ಗೋಡೆಯಾಚೆ ನಿಂತು ಏನು ಮಾತಾಡುತ್ತಾನೆ, ಏನು ಮಾಡುತ್ತಾನೆ ಎಂದೆಲ್ಲಾ ನೋಡುವುದಕ್ಕಾಗಿ ಹೇಳಿ ಮಾಡಿಸಿದಂತಿರುವ ಈ ಯಂತ್ರವನ್ನು ಹಣ ಎಷ್ಟೇ ಆಗಲಿ, ಕೊಡದಿದ್ದರೆ ಸಾಯಿಸಿ ಬಿಡುವುದಾಗಿ ಅವರೇ ಈ ಸಂಶೋಧಕರಿಗೆ ಬೆದರಿಕೆಯೊಡ್ಡಿದವರು ಎಂದು ತಿಳಿದುಬಂದಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಜನಸಾಮಾನ್ಯರ ಬಹುದಿನಗಳಿಂದ ಬೇಡಿಕೆಯಲ್ಲಿದ್ದ ಉಪಕರಣವೊಂದನ್ನು ಕಂಡುಹಿಡಿದದ್ದಕ್ಕಾಗಿ ಅಭಿನಂದನೆಗಳು. ಮೋಟುಗೋಡೆಯಾಚೆ ಏನಿದೆ ಅಂತ ನೋಡಲು ಇಷ್ಟು ದಿನ ಮೋಟುಗೋಡೆ blogsiteಗೆ ಹೋಗುತ್ತಿದ್ದೆ. ಅಲ್ಲಿ ನೋಡಿದ್ದೆ ನೋಡಿ ಬೇಜಾರಾಗತೊಡಗಿತ್ತು. ಈಗ ನಿಮ್ಮ ಉಪಕರಣದಿಂದ ರೋಚಕವಾದ ಹೊಸ ಹೊಸ ದೃಶ್ಯಗಳನ್ನು ನೋಡಬಹುದು. ದಯವಿಟ್ಟು ನಿಮ್ಮ ಓದುಗರಿಗೆ ಕಂತಿನಲ್ಲಿ ಕೊಡುವ ವ್ಯವಸ್ಥೆ ಮಾಡಲು ಕೋರುತ್ತೇನೆ.

    ReplyDelete
  2. ಸುಧೀಂದ್ರರೇ,

    ನೀವು ಹಾಕಿದ ಬೆದರಿಕೆ ಪತ್ರ ಬಂದು ತಲುಪಿದೆ. ವ್ಯವಸ್ಥೆ ಮಾಡದಿದ್ದರೆ ಏನಾಗುತ್ತದೆ ಎಂಬುದು ಕೂಡ ಮಂಡೆಯೊಳಗೆ ಹೊಕ್ಕಿದೆ. ಹಾಗಾಗಿ ಕೂಡಲೇ ಕಳುಹಿಸಲಾಗುತ್ತದೆ ಎಂದು ರಾಜಕಾರಣಿಗಳ ತರ ಆಶ್ವಾಸನೆ ನೀಡುತ್ತಿದ್ದೇವೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post