(ಬೊಗಳೂರು ಟಾಯ್ಲೆಟ್ ಕ್ಲೀನಿಂಗ್ ಬ್ಯುರೋದಿಂದ)
ಬೊಗಳೂರು, ಅ.18- ಈ ತಿಂಗಳಾಂತ್ಯದಲ್ಲಿ ಬೊಗಳೂರಿನ ವಿಧಾನಸೌಧದಿಂದ ಹಲವಾರು ಮಂದಿ ನಾಪತ್ತೆಯಾಗಲಿದ್ದಾರೆ ಎಂದು ಬೊಗಳೂರು ಬ್ಯುರೋ ಭವಿಷ್ಯ ನುಡಿಯುತ್ತಿದೆ.

ಇದಕ್ಕೆ ಕಾರಣ, ರಾಜ್ಯದಲ್ಲಿ ಕೊಳೆತು ನಾರುತ್ತಿರುವ ರಾಜಕೀಯವೇ ಆಗಿದೆ. ಇದರಲ್ಲಿ ಪಾಲ್ಗೊಂಡು ಅನುಭವವಿರುವವರೆಲ್ಲರೂ ವಿಶ್ವಮಟ್ಟದಲ್ಲಿ ತಮ್ಮ ಕಲಾಪ್ರದರ್ಶನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಬ್ಬುನಾತ ರಾಜಕೀಯದಲ್ಲಿ ಪಳಗಿದವರೆಲ್ಲರೂ ದಿಲ್ಲಿಯಾತ್ರೆ ಕೈಗೊಳ್ಳುತ್ತಿರುವ ಕಾರಣವನ್ನು ಈ ವರದಿಯ ಕೊನೆಯಲ್ಲಿ ನೀಡಲಾಗುತ್ತದೆ. ಈ ದಿಲ್ಲಿ ಯಾತ್ರೆ ಕೈಗೊಂಡಲ್ಲಿ ತಾವು ಮಾಡಿದ, ಮಾಡುತ್ತಿರುವ, ಮಾಡಲಿರುವ ಪಾಪಗಳೆಲ್ಲವೂ ಕೂಪಗಳಲ್ಲಿ ತೊಳೆದು ಹೋಗುತ್ತದೆ, ಇದರಿಂದ ಮತ್ತಷ್ಟು ಪಾಪ ಮಾಡಲು ಶಕ್ತಿ ಬರಲಿದೆ ಎಂಬುದು ಈ ಜಾರಕಾರಣಿಗಳ ಒಕ್ಕೊರಲ ಅಭಿಪ್ರಾಯ.

ಕೊಳಚೆ ಮೇಲೆ ಬಿದ್ದು ಹೊರಳಾಡುವುದು ಹೇಗೆ, ಕೆಸರು ಎರಚುವುದು ಹೇಗೆ, ಇನ್ನೇನು ಮತ್ತೊಬ್ಬರು ಟಾಯ್ಲೆಟ್ ಮೇಲೆ ಕೂರುತ್ತಾರೆ ಎಂದಾದಾಗ ಅವರ ಕಾಲು ಹಿಡಿದೆಳೆಯುವುದು ಹೇಗೆ ಎಂಬಿತ್ಯಾದಿ ವಿಧಿ ವಿಧಾನಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯಲಿದ್ದು, ಪ್ರಾತ್ಯಕ್ಷಿಕೆಗಾಗಿಯೇ ಈ ಮಂದಿಯನ್ನು ಅಲ್ಲಿಗೆ ಕರೆಸಲಾಗಿದೆ ಎಂದು ಏನೂ ಹೇಳಲೊಲ್ಲದ ಮೂಲಗಳು ತಿಳಿಸಿವೆ.

ಇಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಅವರು ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ತೋರಿಸುತ್ತಾರೋ ಅಥವಾ ಅವರನ್ನೇ ಕ್ಲೀನ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆಯೋ ಎಂಬ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಆದರೂ ನಮ್ಮ ಬ್ಯುರೋ ವರದಿಗಾರರು ಇದನ್ನು ಪತ್ತೆ ಹಚ್ಚಲು ಪರದಾಡುತ್ತಿದ್ದಾರೆ.

ಈ ನಾಲ್ಕು ದಿನಗಳ "ಟಾಯ್ಲೆಟ್ ಕ್ಲೀನ್ ಮಾಡುವುದು ಹೇಗೆ" ಎಂಬ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವು ಗಬ್ಬು ರಾಜಕೀಯದ ಪ್ರಧಾನ ಕೇಂದ್ರವಾಗಿರುವ ದಿಲ್ಲಿಯಲ್ಲೇ ಅಕ್ಟೋಬರ್ 31ರಿಂದ ನಡೆಯಲಿದೆ ಎಂಬುದೇ ಈ ಮಂದಿಯ ದಿಲ್ಲಿ ಯಾತ್ರೆಗೆ ಕಾರಣ ಎಂದು ಹೇಳಿ ನಮ್ಮ ಎರಡು ಮಾತುಗಳನ್ನು ಕೊನೆಗೊಳಿಸುತ್ತೇವೆ.

ಧನ್ಯವಾದ.

2 Comments

ಏನಾದ್ರೂ ಹೇಳ್ರಪಾ :-D

 1. ಗಬ್ಬು ನಾರುತ್ತಿರುವ ಗಬ್ಬೂರಿನ ವರ ಮಹಾಶಯನು ಒಬ್ಬಳಿಗೆ ಡೈವೋರ್ಸ್ ಕೊಟ್ಟು ಮತ್ತೊಬ್ಬಳಿಗೆ propose ಮಾಡುತ್ತಿದ್ದಾನೆ. ಕವಿ ನರಸಿಂಹಸ್ವಾಮಿಗಳ ಭಾಷೆಯಲ್ಲಿ ಹೇಳುವದಾದರೆ:
  "ಗಬ್ಬೂರಿನೊಳಗೆಲ್ಲ ನೀನೆ ಬಲು ಕೊಳಕಿ,
  ಅದಕೆ ನಮ್ಮಿಬ್ಬರಿಗೆ ನಾಳೆಯೆ ಉಡಕಿ!"

  ReplyDelete
 2. ಸುಧೀಂದ್ರರೆ,

  ನೀವು ನರಸಿಂಹಸ್ವಾಮಿ ಅವರ ಮಾತುಗಳನ್ನು ಹೇಳಿದ್ದು ಒಳ್ಳೇದಾಯ್ತು. ಅಂಥ ಮಹಾನುಭಾವರೇ ಈ ರೀತಿ ಹೇಳಿದ್ದಾರೆಂದ ಮೇಲೆ ನಾವು ಖಂಡಿತವಾಗಿಯೂ ಅದನ್ನು ಪಾಲಿಸುತ್ತೇವೆ ಅಂತ ಸುಕುಮಾರಸ್ವಾಮಿ ಹೇಳಲಾರಂಭಿಸುತ್ತಾರೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post