ಬೊಗಳೆ ರಗಳೆ

header ads

ಬೊಗಳೆಗೆ ಸೆಡ್ಡುಹೊಡೆಯುವ ಜಾರಕಾರಣಿಗಳು!

(ಬೊಗಳೂರು ವಚನಭ್ರಷ್ಟ ಬ್ಯುರೋದಿಂದ)
ಬೊಗಳೂರು, ಅ.10- ರಾಜಕಾರಣಿಗಳ ಯಾವುದೇ ಹೇಳಿಕೆಗಳು ಬೊಗಳೆ ರಗಳೆಗೆ ಮಾತ್ರವೇ ಮೀಸಲಾಗಿದ್ದ ಒಂದು ಕಾಲವಿತ್ತು. ಆದರೆ ಈಗ ಅವರ ಪ್ರತಿಯೊಂದು ಹೇಳಿಕೆಗಳು ಕೂಡಾ ನಮ್ಮ ವಿರೋಧೀ ಪತ್ರಿಕೆಗಳಲ್ಲಿಯೂ ಪ್ರಕಟವಾಗುತ್ತಿರುವುದು ಎರಡ್ಮೂರು ಇದ್ದ ಬೊಗಳೆ ರಗಳೆಯ ಪ್ರಸಾರ ಸಂಖ್ಯೆಯನ್ನು ಒಂದಕ್ಕೆ ಇಳಿಸುವ ತಂತ್ರ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.

ಇದೀಗ ರಾಜಕಾರಣಿಗಳು ನೀಡುವ ಪ್ರತಿಯೊಂದು ಹೇಳಿಕೆಯನ್ನೂ ವಿರೋಧಿ ಪತ್ರಿಕೆಗಳು ಪ್ರಕಟಿಸುತ್ತಿವೆ (ಪ್ರಕಟಿಸದೆ ಅವುಗಳಿಗೆ ವಿಧಿಯಿಲ್ಲ). ಅವುಗಳ ಓದುಗರೂ ಮನರಂಜನೆ ಅನುಭವಿಸುತ್ತಿರುವುದರಿಂದ ಬೊಗಳೆ ರಗಳೆ ಅಪಪ್ರಚಾರ ಸಂಖ್ಯೆಯು ದಯನೀಯವಾಗಿ ಕುಸಿಯತೊಡಗಿದೆ ಎಂದು ಈ ಸಂದರ್ಭ ತಿಳಿದುಬಂದಿದೆ.

ಹಾಗಾಗಿ ರಾಜಕಾರಣಿಗಳ ಹೇಳಿಕೆ ಬೊಗಳೆ ರಗಳೆಗೆ ಮಾತ್ರ ಸೀಮಿತ ಎಂದು ಒತ್ತಿ ಒತ್ತಿ ಹೇಳುತ್ತಿದ್ದೇವೆ. ಇನ್ನು ಮುಂದಾದರೂ ವಿರೋಧಿ ಪತ್ರಿಕೆಗಳು ಈ ಬಗ್ಗೆ ಗಮನ ಹರಿಸದಿದ್ದಲ್ಲಿ, ಅವುಗಳನ್ನು ಓದುವವರಲ್ಲಿ ನಮ್ಮ ಬ್ಯುರೋ ಮಾತೇ ಆಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಅದಿರಲಿ... ವಿಷಕ್ಕೆ ಬರೋಣ, ಮಹಾಭಾರತದ ಕೃಷ್ಣನನ್ನು ಉಲ್ಲೇಖಿಸಿ ರಾಜ್ಯದಲ್ಲಿ ಅಧಿಕಾರ ತ್ಯಾಗ ಮಾಡಿ ಪಕ್ಷವನ್ನು ಬಲಿದಾನ ಮಾಡಿದ ನಿರ್ಗಮನ ಮುಖ್ಯಮಂತ್ರಿಯವರು, ಮಹಾಭಾರತದ ಕೃಷ್ಣನೂ ಸುಳ್ಳು ಹೇಳಲಿಲ್ಲವೇ? ನಾನೂ ಸುಳ್ಳು ಹೇಳಿದರೆ ತಪ್ಪೇನು ಎಂಬ ಒಂದು ಸತ್ಯಾಂಶವುಳ್ಳ ಪ್ರಶ್ನೆಯನ್ನು ಮುಂದಿಟ್ಟಿದ್ದರು. ರಾಜಕಾರಣಿಗಳ ಬಾಯಲ್ಲೂ ಇಂಥ ಸತ್ಯವಾಕ್ಯಗಳು ಬರುತ್ತಿದೆ ಎಂದರೆ ಅದು ಕಲಿಯುಗದ ಮಹಾತ್ಮೆಯೇ ಇರಬೇಕು ಎಂದು ವಿಶ್ಲೇಷಿಸಲಾಗಿದೆ.

ಇದುವರೆಗೆ ಬೊಗಳೆ ರಗಳೆಯಲ್ಲಿ ಪ್ರಕಟವಾಗುತ್ತಿದ್ದ ವದರಿಗಳೆಲ್ಲವನ್ನೂ ಕನಿಷ್ಠ ಪಕ್ಷ ಒಬ್ಬರಾದರೂ ನಂಬುತ್ತಿರಲಿಲ್ಲ. ಆದರೆ ಈಗ ಎಲ್ಲರೂ ನಂಬಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದಕ್ಕೆ ಪ್ರತಿಯಾಗಿ, ನಮ್ಮ ವಿರೋಧಿ ಪತ್ರಿಕೆಗಳಲ್ಲಿಯೂ ರಾಜಕಾರಣಿಗಳು ಹೇಳುವ ಅಸತ್ಯಗಳ ಅಣಿಮುತ್ತುಗಳು ಹೆಚ್ಚು ಹೆಚ್ಚು ಪ್ರಕಟವಾಗತೊಡಗಿವೆ. ಇದರಿಂದ ಬೊಗಳೆ ರಗಳೆ ಪತ್ರಿಕೆಯ ಪ್ರಸಾರ ವಿಭಾಗವು ಭಯಭೀತವಾಗಿದೆ.

ಶ್ರೀ ಕೃಷ್ಣನು ಜಗದೋದ್ಧಾರದ ಉದ್ದೇಶದಿಂದ ಸುಳ್ಳು ಹೇಳುವಂತಹ ಪ್ರಸಂಗಗಳನ್ನು ಸೃಷ್ಟಿಸಿದ್ದರೆ, ಇದು ಆಧುನಿಕ ಯುಗ ಮತ್ತು ರಾಜಕೀಯ ಆಗಿರುವುದರಿಂದಾಗಿ ಈ ಆಧುನಿಕ ಕೃಷ್ಣ ಏನು ಹೇಳಿದರೂ ಅದು ಸುಳ್ಳೇ ಆಗುತ್ತಿರುವುದು ವಿಶೇಷ. ನಾನು ನಾಡಿನ ಉದ್ಧಾರ ಮಾಡುತ್ತೇನೆ, ಮಣ್ಣಿನ ಮಗನನ್ನು ಮಣ್ಣಿನಿಂದ ಮೇಲೆತ್ತುತ್ತೇನೆ, ಅ.3ರಂದು ಅಧಿಕಾರವನ್ನು ಪಾಂಡವರಿಗೆ ಬಿಟ್ಟುಕೊಡುತ್ತೇನೆ, ಎಂದೆಲ್ಲಾ ಹೇಳಿದ ಬಳಿಕ, ಈ ಎಲ್ಲಾ ಸತ್ಯಗಳ ತಲೆ ಮೇಲೆ ಹೊಡೆಯುವಂತೆ "ಕೊಟ್ಟ ಮಾತಿಗೆ ತಪ್ಪುವವನಲ್ಲ" ಎಂದೂ ಸೇರಿಸಿಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜಕಾರಣಿಗಳು ಹೇಳುವ ಮಾತುಗಳೆಲ್ಲವೂ ಬೊಗಳೆ ರಗಳೆಗೆ ಮಾತ್ರವೇ ಸೀಮಿತವಾಗುತ್ತದೆ ಎಂಬುದು ಈ ದೊಡ್ಡ ದೊಡ್ಡ ಪತ್ರಿಕೆಗಳಿಗೆ ಯಾಕೆ ಅರ್ಥವಾಗುವುದಿಲ್ಲ? ಎಂಬ ಕಗ್ಗಂಟನ್ನು ಬಿಡಿಸಲು ಬೊಗಳೆ ರಗಳೆಯ ಏಕ ಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸಿಬ್ಬಂದಿಗಳು ಕೆಲವು ದಿನಗಳಿಂದ ಹೆಣ-ಗಾಡುತ್ತಿದ್ದಾರೆ.

ಹಾಗಾಗಿ, ಅಡಿಗೆ ಬಿದ್ದರೂ ಮೂಗು ಮೇಲೆ ಮಾಡಿಕೊಂಡಿರುವ ಬೊಗಳೆ ರಗಳೆ ಬ್ಯುರೋ, ಇದೀಗ "ವಚನಭ್ರಷ್ಟ-ಶ್ರೇಷ್ಠ" ಎಂಬ ವಿನೂತನ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದು, ಅದಕ್ಕೆ ಓದುಗರು ಅರ್ಹರ ಹೆಸರನ್ನು ಸೂಚಿಸಬಹುದು. ಆದರೆ ಈ ಪ್ರಶಸ್ತಿಗೆ ಬೊಗಳೆ ರಗಳೆಯನ್ನಾಗಲಿ, ಅಸತ್ಯಾನ್ವೇಷಿಯನ್ನಾಗಲಿ ಪರಿಗಣಿಸಿ ಹೆಸರು ಸೂಚಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಅಸತ್ಯಾನ್ವೇಷಿಯ ಹೆಸರು ಸೂಚಿಸಬಾರದೆನ್ನುವದು ಆತ್ಮರಕ್ಷಣೆಯ ತಂತ್ರವೇನೋ ಹೌದು.ಆದರೆ ಸುಳ್ಳನ್ನೇ ಹೇಳುತ್ತೇನೆ ಎನ್ನುವ ನಿಮ್ಮ ವಚನವನ್ನು ನೀವು ಮುರಿದದ್ದಕ್ಕಾಗಿ ನಿಮ್ಮ ಮೇಲೆ ಆ ಆರೋಪವನ್ನು ಹೊರಿಸಬೇಕಾಗುತ್ತದೆ. ಆದರೂ ಸಹ ನಮ್ಮ ಜಾರಕಾರಣಿಗಳ ಎದುರು ನೀವು ಕೇವಲ ಬಚ್ಚಾ. ಹೀಗಾಗಿ ಕೆಳಗಿನ ಪ್ರಶಸ್ತಿಗಳನ್ನು ಕೊಡಲು ಸೂಚಿಸುತ್ತೇನೆ:
  ೧)ವಚನಭ್ರಷ್ಟ ರತ್ನ:ವದಿಯೊಗೌಡ
  ೨)ವಚನಭ್ರಷ್ಟ ಭೂಷಣ:ಗಮಾರಸ್ವಾಮಿ
  ೩)ವಚನಭ್ರಷ್ಟಶ್ರೀ: ವೇರಣ್ಣ

  ಈ ಎಲ್ಲ ಪ್ರಶಸ್ತಿಗಳೂ ಒಂದೇ ಕುಟುಂಬಕ್ಕೆ, ಅಂದರೆ ಮಣ್ಣಿನ ಮಗ ಹಾಗು ಮಣ್ಣಿನ ಮೊಮ್ಮಕ್ಕಳಿಗೆ ಸಿಗುತ್ತಿರುವದು ಕೇವಲ ಯೋಗಾಯೋಗವೇ ಹೊರತು, ವಂಶಪಾರಂಪರ್ಯದ ಕುರುಹು ಅಲ್ಲ ಎಂದು ಹೇಳಬಯಸುತ್ತೇನೆ.

  ಪ್ರತ್ಯುತ್ತರಅಳಿಸಿ
 2. ಸುಧೀಂದ್ರರೆ,

  ಹಾಗಿದ್ದರೆ ಈ ಪ್ರಶಸ್ತಿಯನ್ನೇ ಎರಡು ತುಂಡು ಮಾಡಿ ಟ್ವೆಂಟಿ ಟ್ವೆಂಟಿ ಹಂಚಿ ಬಿಡೋಣ. ಅಂದರೆ ವಚನ ಮತ್ತು ಭ್ರಷ್ಟ- ಎರಡು ಕೊಟ್ಟರೆ ಇಬ್ಬರಿಗೂ ಸಮಾಧಾನ.

  ಮಣ್ಣು ತಿನ್ನಿಸುವ ಕುಟುಂಬಕ್ಕೇ ಈ ಪ್ರಶಸ್ತಿ ಸೀಮಿತವಾಗುತ್ತಿರುವುದು ನಾವು ಘೋಷಿಸಿದ ಪ್ರಶಸ್ತಿಯೇ ಮಣ್ಣು ಪಾಲಾಗುತ್ತಿರುವುದರ ಸಂಕೇತ ಎಂದು ನಾವು ಭಾವಿಸುತ್ತೇವೆ.

  ಪ್ರತ್ಯುತ್ತರಅಳಿಸಿ
 3. ದಿನೇಶ್ ಅವರೆ,

  ನೀವು ನೈಸ್ ಮತ್ತು ನೈಸ್ ಅಂತ ಎರಡು ಬಾರಿ ಹೇಳಿರುವುದು ಬೆಂಗಳೂರು-ಮೈಸೂರು ನಡುವಿನ ಕಾರಿಡಾರ್ ಯೋಜನೆ ನಿರ್ವಹಿಸುತ್ತಿರುವ ಕಂಪನಿಯ ನೆನಪು ಮಾಡಿ ನಮ್ಮನ್ನು ಬೆಚ್ಚಿ ಬೀಳಿಸಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D