ಬೊಗಳೆ ರಗಳೆ

header ads

Oneದೇ ದಿನಕ್ಕೆ ಧೋಣಿ ಕಪ್ತಾನ?

(ಬೊಗಳೂರು ಟಿಕ್20 ಬ್ಯುರೋದಿಂದ)
ಬೊಗಳೂರು, ಸೆ.24- ಹೊಡೆಬಡಿಯ ದಾಂಡಿಗ ಎಂದೇ ಖ್ಯಾತನಾಗಿ, ಲಯ ಕಳೆದುಕೊಂಡು ಇದೀಗ ಟಿಕ್20 ಕಿರಿಕೆಟ್ಟಾಟದಲ್ಲಿ ಹೊಡೆದಾಟ ಆರಂಭಿಸಿರುವ ಸಿಂಹೇಂದ್ರ ಮಂಗ್ ಧೋಣಿಯನ್ನು ಒಂದೇ ದಿನಕ್ಕೆ (One Day) ನಾಯಕನನ್ನಾಗಿ ಆರಿಸಿರುವುದು ಹಲವರ ಹುಬ್ಬುಗಳು ಮೇಲೇರಿ ತಲೆಕೂದಲಿನೊಂದಿಗೆ ಸೇರಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿವೆ.
ಭಾರತೀಯ ಕ್ರಿಕೆಟ್ಟು ಮುಂದೆ ಸಾಗಬೇಕಿದ್ದರೆ ದೋಣಿಯೇ ಏಕೆ ಬೇಕು, ಹಳಿಗೆ ಮರಳಿದ ಚಚ್ಚಿಂಗ್ ಚೆಂಡುಲ್ಕರ್, ಎಚ್ಚೆತ್ತುಕೊಂಡ ಗೌರವ್ ಸಂಗೂಲಿ ಇದ್ದರಲ್ಲ ಎಂಬ ಆಮಶಂಕೆಯ ನಡುವೆಯೇ ದೋಣಿಯನ್ನು ಒಂದೇ ದಿನ ನೀರಿನಲ್ಲಿ ಬಿಡಲು ನಿರ್ಧರಿಸಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ನೀರಲ್ಲಿ ದೋಣಿಯನ್ನು ಬಿಡುವ ಬದಲು ಈಗಾಗಲೇ ಎಳ್ಳುಂಡೋಳಿಗೆ ಮೆದ್ದಿರುವ ಗಣಪನನ್ನು ಬಿಡಲು ಎಲ್ಲಾ ಕಡೆ ಸಿದ್ಧತೆಗಳು ನಡೆದಿವೆ ಮತ್ತು ಕೆಲವೆಡೆ ಈಗಾಗಲೇ ಈ ಕೆಲಸ ಪೂರೈಸಿ ಕೈತೊಳೆದುಕೊಳ್ಳಲಾಗಿದೆ.
ಈಗಾಗಲೇ ಚಪ್ಪೆಲ್ ಹರಿದು ಹೋಗಿದ್ದು, ಗೋಡೆಯೂ ದ್ರಾವಿಡ ಪ್ರಾಣಾಯಾಮ ಮಾಡಿ ಈ ರಾಜಕೀಯವಾಗಿ ಬಿಸಿ ಇರುವ ಸ್ಥಾನತ್ಯಾಗ ಮಾಡಿದ ಬಳಿಕ ಬಿಸಿ ತಣ್ಣಗಾಗಿಸುವುದಕ್ಕಾಗಿಯೇ ದೋಣಿಯನ್ನು ನಡು ನೀರಿನಲ್ಲಿ ಇರಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಮತ್ತು ಬಿಸಿಬಿಸಿ ರಾಜಕೀಯ ನಡೆಯುತ್ತಿರುವ ಬಿಸಿಬಿಸಿಬಿಸಿಐಯೊಳಗಿನ ಮೇಲಾಟಗಳನ್ನು ನೋಡಿದರೆ ದೋಣಿಯನ್ನು ಒಂದೇ ದಿನಕ್ಕೆ ನಾಯಕನನ್ನಾಗಿಸಿದ್ದರಲ್ಲಿ ತಪ್ಪಿಲ್ಲ, ಎಷ್ಟಿದ್ದರೂ ಮರುದಿನ ಮತ್ತೊಬ್ಬ ನಾಯಕ ಬಂದೇ ಬರುತ್ತಾನೆ ಎಂಬ ಸಮರ್ಥನೆಯೂ ದೊರೆಯುತ್ತದೆ.
ಇನ್ನೊಂದೆಡೆ, ನಾಯಕತ್ವ ಸ್ಥಾನ ಸಿಗದ ಅತೃಪ್ತಿಯಿಂದಾಗಿ ಯುವರಾಜ್ ಸಿಂಗ್ ಚೆಂಡನ್ನು ಮನಬಂದಂತೆ ಚಚ್ಚುತ್ತಾ, ಕ್ಯಾಪ್ಟನ್ಸಿ ತನಗೂ ಬೇಕು ಎಂಬ ಬೇಡಿಕೆಯನ್ನು ಅಪ್ಪನ ಮೂಲಕ ಮುಂದಿರಿಸಿದ್ದಾರೆ. ಹೀಗಾಗಿ ಧೋಣಿ ಏಕ್ ದಿನ್ ಕಾ ಬಾದಶಾ ಆಗಿದ್ದಾರೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಕಿರಿಕೆಟ್ಟಿನಲ್ಲಿಯೂ ಸಹ ಬೊಂ-ಬಾಯಿಯವನೇ ಬದಕುತ್ತಾನೆ ಎನ್ನುವ ಅಸತ್ಯವನ್ನು ಬೌಂಡರಿ ದಾಟುವಂತೆ ಬಾರಿಸಿದ್ದೀರಿ. ಭಲೆ, ಅಸತ್ಯಾನ್ವೇಷಿಯವರೆ, The Myths of Indian Cricket ಅನ್ನು ಚಚ್ಚಿ ಹಾಕಿದ್ದೀರಿ!

    ಪ್ರತ್ಯುತ್ತರಅಳಿಸಿ
  2. ಹರೀಶರೇ,

    ನಿಮ್ಮ ಬಾಳ ದೋಣಿಯಲ್ಲಿ ಪ್ರಯಾಣಿಸುತ್ತಲೇ ಇಲ್ಲೊಂದಿಷ್ಟು ಚೆನ್ನಾಗಿದೆ ಅಂತ ಹೇಳಿ ನಮ್ಮ ಬ್ಯುರೋದ ಮೌಲ್ಯವನ್ನು ಮೂರು ಕಾಸಿಗೆ ಏರಿಸಿದ್ದೀರಿ. ಧನ್ಯವಾದ. ಬರುತ್ತಾ ಇರಿ.

    ಪ್ರತ್ಯುತ್ತರಅಳಿಸಿ
  3. ಸುಧೀಂದ್ರರೆ,

    ಮೆಲ್ಲಗೆ ಹೇಳಿ, ಬೊಂಬಾಯಿಯ ಶ್ರೀಶ್ರೀಶ್ರೀ ಮಹಾಸ್ವಾಮಿಗಳು ಕೇಳಿಸಿಕೊಂಡಾರು.

    ಅದಿರಲಿ, ಯುವರಾಜನಿಗೆ ಆರಕ್ಕೆ ಒಂದುಕೋಟಿ ಸಿಕ್ಕಿದೆ. ಆದರೆ ನಾವು ಚಚ್ಚಿದ್ದಕ್ಕೆ ಯಾರೂ ಯಾರ ಮಾನವನ್ನೂ ಹರಾಜು ಹಾಕುತ್ತಿಲ್ಲ. ಆದರೂ ಚಚ್ಚಿ ಚಚ್ಚಿ ಬಿಡುತ್ತೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D