Subscribe Us

ಜಾಹೀರಾತು
header ads

ಬೊಗಳೆ: ಶಾಲಾಪ್ರವೇಶಪತ್ರದಲ್ಲಿ ಮತ್ತಷ್ಟು ಹೊಸ ಕಾಲಂ

(ಬೊಗಳೂರು ಆಟಪಾಠ ಬ್ಯುರೋದಿಂದ)
ಬೊಗಳೂರು, ಸೆ.18- ಶಾಲಾ ಪ್ರವೇಶ ದಾಖಲಾತಿ ವೇಳೆ ಜಾತಿ ನಮೂದಿಸುವ ಕಾಲಂ ಅನ್ನು ಕಿತ್ತು ಹಾಕಬೇಕು ಎಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದರೂ, ಕೆಲವು ಕಾಲಂಗಳಲ್ಲಿ ಬದಲಾವಣೆಯನ್ನಾದರೂ ಮಾಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿಪಿತರ ಸಂಘವು ನಿರ್ಧರಿಸಿದೆ.

ಶಾಲೆಗಳಲ್ಲಿ ಪ್ರವೇಶಕ್ಕಾಗಿ ಸಲ್ಲಿಸುವ ಅರ್ಜಿಯಲ್ಲಿ ಮದರ್ ಟಂಗ್ ಎಂಬುದನ್ನು ಅಕ್ಷರಶಃ ಭಾಷಾಂತರಿಸಿ ಕನ್ನಡದಲ್ಲೇ ನೀಡಿದರೆ, ನಮಗೆ ಅದರ ಮುಂದೆ "ತುಂಬಾ ಉದ್ದ" ಎಂದು ಬರೆಯಲು ಸಾಧ್ಯವಾಗುತ್ತದೆ ಎಂಬ ಬೇಡಿಕೆಯೂ ಈ ಪ್ರಸ್ತಾಪಿತ ಮನವಿಯಲ್ಲಿ ಸೇರಿಕೊಂಡಿದೆ.

ಅಲ್ಲದೆ, ಆತ ಅಲ್ಪಸಂಖ್ಯಾತನೇ ಅಲ್ಲವೇ, ಹಿಂದುಳಿದವನೇ ಅಥವಾ ಅಲ್ಲವೇ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿದರೆ, ಮೀಸಲಾತಿ ಮತ್ತು ಇತರ ಸೌಕರ್ಯ ನೀಡದಿದ್ದರೆ ನೇರವಾಗಿ ಮಾವನ ಸಂಪನ್ಮೂಲ ಸಚಿವ ದುರ್ಜನ ಸಿಂಗರಿಗೆ ದೂರು ಕೊಡಲು ಸಹಕಾರಿಯಾಗುತ್ತದೆ ಎಂಬುದು ವಿದ್ಯಾರ್ಥಿಪಿತರ ಒತ್ತಾಸೆ.

ಇನ್ನೊಂದೆಡೆ, ಶಾಲಾ ಆಡಳಿತ ಮಂಡಳಿಗಳು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಶಾಲಾ ಪ್ರವೇಶ ಅರ್ಜಿಗಳಲ್ಲಿ ಮತ್ತಷ್ಟು ಕಾಲಂಗಳನ್ನು ಸೇರಿಸಬೇಕು ಎಂದು ಒತ್ತಾಯಿಸಿವೆ.

ಅವುಗಳು ಸಲ್ಲಿಸಲು ನಿರ್ಧರಿಸಿರುವ ಪಿಲ್ (PIL)ನಲ್ಲಿ, ವಿದ್ಯಾರ್ಥಿಯ ಅಪ್ಪನ ಜೇಬು ಎಷ್ಟು ದೊಡ್ಡದು (ಅದರ ಅಗಲ, ಉದ್ದ, ಮತ್ತು ದಪ್ಪ), ವಿದ್ಯಾರ್ಥಿಯ ಅಪ್ಪನ ರಾಜಕೀಯ ಪ್ರಭಾವ ಎಷ್ಟು, ವಿದ್ಯಾರ್ಥಿಯ ಅಪ್ಪ ಮೀಸಲಾತಿಗೆ ಅರ್ಹನೇ? ವಿದ್ಯಾರ್ಥಿಯ ಅಪ್ಪನಿಗೆ ಹಿಂದೆ ಮೀಸಲಾತಿ ವಿರುದ್ಧ ಹೋರಾಟ ಮಾಡಿದ ಅನುಭವವಿದೆಯೇ ಎಂಬಿತ್ಯಾದಿ ಕಾಲಂಗಳೂ ಸೇರಿವೆ.

ಅಲ್ಲದೆ, ವಿದ್ಯಾರ್ಥಿಯ ಅಪ್ಪನ ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ನ ನಕಲು ಪ್ರತಿಯೊಂದನ್ನು ಕೂಡ ಅರ್ಜಿ ಜತೆ ಲಗತ್ತಿಸಲು ಅವಕಾಶ ಮಾಡಿಕೊಡಬೇಕು. ಮನೆಯಲ್ಲಿ ಫ್ರಿಜ್, ಟಿವಿ, ಬೈಕು, ಕಾರು ಇತ್ಯಾದಿ ಇವೆಯೇ ಎಂಬುದನ್ನು ನಮೂದಿಸುವ ಕಾಲಂ ಬೇಕು ಎಂಬ ಆಗ್ರಹ ಅವರದು.

ಡೊನೇಶನ್ ಹೇಗೂ ಯಾರೂ ನೀಡಬೇಕಾಗಿಲ್ಲ, ಶಾಲೆಯ ಅಭಿವೃದ್ಧಿ ಕಾರ್ಯದ ನೆಪದಲ್ಲಿ ಮಕ್ಕಳನ್ನು ಸಾಕಷ್ಟು ಮಟ್ಟಿಗೆ ದೋಚಬಹುದು. ಮತ್ತಷ್ಟು ದೋಚುವಂತಾಗಲು, ಶಾಲೆಯಿಂದಲೇ ಪುಸ್ತಕ ಒದಗಿಸುತ್ತೇವೆ, ಶಾಲೆಯಿಂದಲೇ ಸಮವಸ್ತ್ರ ಒದಗಿಸುತ್ತೇವೆ ಎಂಬಿತ್ಯಾದಿ ತಂತ್ರಗಳನ್ನು ಚಾಣಕ್ಯನ ಅರ್ಥಶಾಸ್ತ್ರದಿಂದ ಕದ್ದು ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಇದರಿಂದಾಗಿ ಹಿಂದೆ ಡೊನೇಶನ್ ಇದ್ದ ಸಮಯದಲ್ಲಿ ನೀಡುತ್ತಿದ್ದಕ್ಕಿಂತಲೂ ಹೆಚ್ಚು ಹಣವನ್ನು ವಿದ್ಯಾರ್ಥಿ ಪಿತರು ಕಕ್ಕುವಂತಾಗುತ್ತದೆ. ಅದು ತೆರಿಗೆ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ವಿದ್ಯಾರ್ಥಿಪಿತರಿಗೆ ಅನುಕೂಲವೇ ಆಗಲಿದೆ ಎಂಬುದು ಶಾಲಾ ಆಡಳಿತಮಂಡಳಿಯ ಸಮಜಾಯಿಷಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಕಲಾಂ ಹೋಗಿ ಕಾಲಂ ಬಂತು
  ಪಿಲ್ ಹೋಗಿ ಬಿಲ್ ಬಂತು
  ಬೊ-ರ ಒಳಗೆ ಇನ್ನೇನು ಬರತ್ತೋ
  ಹರ ಹರಾ ಶ್ರೀ ಚನ್ನ ಸೋಮೇಶ್ವರಾ!!!

  ಸ್ವಲ್ಪ ಬಿಜಿ ಇರೋದ್ರಿಂದ ಇತ್ತ ಕಣ್ಣು ಹಾಯಿಸಲಾಗುತ್ತಿಲ್ಲ
  ಬೊ-ರಣ್ಣನವರು ಮನ್ನಿಸಬೇಕು

  ಒಟ್ಟೇ‍ಗ್ ಆಕ್ಯಳ್ಳಿ ಸೋಮಿ

  ಪ್ರತ್ಯುತ್ತರಅಳಿಸಿ
 2. ಹರಿ ಹರೀ ಶ್ರೀ ಶ್ರೀನಿವಾಸೇಶ್ವರಾ,

  ಒಟ್ಟೇಗ್ ಆಕ್ಕಳ್ಳೋಕ್... ಒಂದ್ ಸ್ವಲ್ಪ ಕಳಿಸ್ಕೊಟ್ರೆ ಮಾತ್ರಾ ಸಾಧ್ಯ ಸೋಮೀಯೋರೇ.... :)

  ಪ್ರತ್ಯುತ್ತರಅಳಿಸಿ
 3. ವಿದ್ಯಾರ್ಥಿಯನ್ನು ಶಾಲೆಗೆ ಸೇರಿಸಲು ಅವಶ್ಯವಿರುವ ಕಾಲಮ್ಮುಗಳ ಬಗೆಗೆ ವಿದ್ವತ್ಪೂರ್ಣ ಲೇಖನ ಬರೆದುದಕ್ಕಾಗಿ ಮೊದಲಿಗೆ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸರಕಾರವು ನೀವು ನೀಡಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ತರುವದು ಅವಶ್ಯವೆಂದು ಮು.ಮಂ. ಗಮಾರಸ್ವಾಮಿ/ಅಡವೀರಪ್ಪ (ಯಾರು ಇರುತ್ತಾರೊ ಅವರಿಗೆ) ಈ ಮೂಲಕ ಸೂಚನೆ ಸಹ ನೀಡುತ್ತೇನೆ. ಕೂಸು ಹುಟ್ಟುವಾಗಲೆ ಈ ಕಾಲಮ್ಮುಗಳನ್ನು ಗಣಕದ ಒಂದು ಚಿಪ್ಪಿನಲ್ಲಿ ತುಂಬಿ ಕೂಸಿನ ಕೊರಳಿಗೆ ತಾಯತದಂತೆ ಕಟ್ಟಿದರೆ ಹೇಗೆ ಎನ್ನುವದನ್ನು ಸಮಾಜವಿಜ್ಞಾನಿಗಳು ಗಂಭೀರವಾಗಿ ಚಿಂತಿಸಬೇಕು. ಕೂಸು ಬೆಳೆದಂತೆಲ್ಲ ಈ ವಿವರಗಳನ್ನು update ಮಾಡುತ್ತ ಹೋಗಬೇಕು. ಹಾಞ್, ಈ ಕೂಸಿನ ಕಾಕಾ, ಮಾಮಾ ಅಥವಾ ಇತರ ಸಂಬಂಧಿಗಳು ಯಾವ ಯಾವ ಅರಾಜಕೀಯ ಹುದ್ದೆಯಲ್ಲಿ ಇದ್ದಾರೆನ್ನುವ ಕಾಲಮ್ಮು ಸಹ ಇರುವದು ಅವಶ್ಯವೆಂದು ನಮ್ಮ ಭಾವನೆ.

  ಪ್ರತ್ಯುತ್ತರಅಳಿಸಿ
 4. ಸುಧೀಂದ್ರರೆ,

  ನಮ್ಮ ವಿಧ್ವಂಸಕಪೂರ್ಣ ಲೇಖನವನ್ನು ನೋಡಿ ಬೆಚ್ಚಿ ಕೊಂಡಾಡಿದ್ದಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಆದರೆ, ನೀವು ಹೇಳಿದಂತೆ ಕೊರಳಿಗೆ ಕಟ್ಟುವ ತಾಯಿತಕ್ಕೆ ಹಲವು ವೈರಸುಗಳು ಬಾಧಿಸುತ್ತವೆ ಎಂಬುದನ್ನು ನೆನಪಿಸಲು ಇಚ್ಛಿಸುತ್ತೇನೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D