(ಬೊಗಳೂರು ಲಬೋಲಬೋ ಬ್ಯುರೋದಿಂದ)
ಬೊಗಳೂರು, ಸೆ.13- ಮೊಬೈಲ್ ನಿಷೇಧ ಕುರಿತು ಸರಕಾರ ಕೈಗೊಂಡಿರುವ ನಿರ್ಧಾರವು ಕೇವಲ ಬೊಗಳೂರು ಬ್ಯುರೋಗೆ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ, ಇದು ಎಲ್ಲಾ ಊರುಗಳಿಗೂ, ವಿಶೇಷವಾಗಿ ಶಾಲಾ-ಕಾಲೇಜು ಪರಿಸರಕ್ಕೆ ಅನ್ವಯವಾಗುತ್ತದೆ ಎಂದು ಅಂಗನವಾಡಿ ವಿದ್ಯಾರ್ಥಿ ಸಂಘದ ಪದಚ್ಯುತ ಅಧ್ಯಕ್ಷ ಪುಟಾಣಿ ರಾಜ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೊಬೈಲ್ ನಿಷೇಧ ಹಿಂತೆಗೆತಕ್ಕೆ ಆಗ್ರಹಿಸಿದ ಬೆನ್ನಿಗೇ, ಸರಕಾರವು ಅವರನ್ನು ಅಂಗನವಾಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷಪಟ್ಟದಿಂದ ಉಚ್ಚಾಟಿಸಿದ್ದು, ವಿದ್ಯಾರ್ಥಿ ಸಂಘವನ್ನೇ ವಿಸರ್ಜಿಸಿತು. ಆ ಬಳಿಕವೂ ಅವರು ಮಾತನಾಡುವುದನ್ನು ನಿಲ್ಲಿಸದೆ, ಮತ್ತೊಂದು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಪಾನಗೋಷ್ಠಿ ಇಲ್ಲದ ಕಾರಣ ಬಹುತೇಕ ಪತ್ರಕರ್ತರು ಹಾಜರಾಗದ ಪರಿಣಾಮವಾಗಿ, ಬೊಗಳೆ ರಗಳೆಯ ಪ್ರತಿನಿಧಿ ಮಾತ್ರವೇ ಅಲ್ಲಿ ಹಾಜರಿದ್ದು, ಈ ವರದಿ ನೀಡಿದ್ದಾರೆ. ಬೊಗಳೂರಿನಲ್ಲಿ ಮಾತ್ರವೇ ಪುಟಾಣಿ ವಿದ್ಯಾರ್ಥಿಗಳು ಈ ಬಗ್ಗೆ ಪ್ರತಿಭಟನೆಯ ಧ್ವನಿಯೆತ್ತಿದ ಕಾರಣ ಅವರು ಈ ಸ್ಪಷ್ಟನೆ ನೀಡಲು ಬಯಸಿದ್ದರು.

ಮೊಬೈಲ್ ನಿಷೇಧದ ಕಾರಣದಿಂದಾಗಿ ತಮ್ಮ ಪದಚ್ಯುತಿಯ ಸಂದರ್ಭ, ತಮ್ಮ ಮಾನ ಉಳಿಸಿಕೊಳ್ಳಲು ಯಾರನ್ನೂ ಸಂಪರ್ಕಿಸಲು ಸಾಧ್ಯವೇ ಆಗಲಿಲ್ಲ. ಇದೊಂದೇ ಸಾಕಲ್ಲವೇ ಮೊಬೈಲ್ ನಿಷೇಧದ ದುಷ್ಪರಿಣಾಮದ ತೀವ್ರತೆಯನ್ನು ಅರಿಯಲು? ಎಂದು ಪ್ರಶ್ನಿಸಿರುವ ಅವರು, ಹೀಗಾದರೆ ನಾವು ಬೆಳೆದು ದೊಡ್ಡವರಾದ ಬಳಿಕ, ರಾಜಕೀಯಕ್ಕೆ ಅನಿವಾರ್ಯವಾದ ಅರ್ಹತೆಯಾದ ಬ್ಲ್ಯಾಕ್‌ಮೇಲ್ ಮತ್ತು ಗೂಂಡಾಗಿರಿ, ಇನ್‌ಫ್ಲುಯೆನ್ಸ್ ಎಲ್ಲವನ್ನೂ ಪ್ರಯೋಗಿಸಲು ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪರೀಕ್ಷೆಯಲ್ಲಿ ಕೂಡ ಮೊಬೈಲ್ ಮೂಲಕವೇ ಕೇಳಿ ಕೇಳಿ ಬರೆಯಬಹುದು. ಇದರಿಂದ ಇದ್ದ ಮಕ್ಕಳೆಲ್ಲರೂ ಪ್ರತಿಭಾವಂತರಾಗುತ್ತಾರೆ, ಯಾರು ಕೂಡ ಫೇಲ್ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿರುವ ಅವರು, ಮೊಬೈಲ್ ಫೋನ್ ಬಳಕೆಯು ಮಕ್ಕಳ ಮೂಲಭೂತ ಹಕ್ಕು, ಈ ಹಕ್ಕನ್ನು ಕಿತ್ತುಕೊಳ್ಳುವ ಪಾಲಕರ ಮೊಬೈಲುಗಳನ್ನೇ ಕಿತ್ತು ಮಕ್ಕಳ ಕೈಯಲ್ಲಿ ಕೊಡಬೇಕೆಂಬ ಸುಧೀಂದ್ರರ ಸಲಹೆಯನ್ನು ಬಿದ್ದು ಬಿದ್ದು ನಗುತ್ತಾ ಸ್ವಾಗತಿಸಿದ್ದಾರೆ.

2 Comments

ಏನಾದ್ರೂ ಹೇಳ್ರಪಾ :-D

  1. ಪುಟಾಣಿ ರಾಜನನ್ನು ರಾಜಕೀಯದಲ್ಲಿ ಬೆಳೆಯಗೊಡಬಾರದೆನ್ನುವ
    ಮಣ್ಣಿನ ಮೊಮ್ಮಗನ ಹುನ್ನಾರವು ಈ ಮೊಬೈಲ್ ನಿಷೇಧದ ಸಂಚಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಮೊಬೈಲ್ ಫೋನಿನ ಸಂಕೇತದಲ್ಲಿ ಪುಟಾಣಿ ರಾಜನು ಶಾಲಾ ಚುನಾವಣೆಗೆ ಸ್ಪರ್ಧಿಸಿದಲ್ಲಿ ಎಲ್ಲಾ ಪೋಕರಿಗಳ ವೋಟು ಅವನಿಗೇ ಬೀಳುವದು ಗ್ಯಾರಂಟಿ.

    ReplyDelete
  2. ಸುಧೀಂದ್ರರೆ,
    ಇನ್ನೊಂದು ಕಾರಣವೂ ಇವೆ. ಪುಟಾಣಿರಾಜರು ಎಸ್ಎಂಎಸ್ ಮಾಡುತ್ತಾ ಮಾಡುತ್ತಾ, ಮೊಬೈಲ್ ಕೀಪ್ಯಾಡ್ ಸವೆದು ಹೋಗಿ, ದಿನಕ್ಕೊಂದು ಮೊಬೈಲ್ ಕೊಡಿಸಬೇಕಾದ ಅನಿವಾರ್ಯತೆಯೂ ಮಣ್ಣಿನವರಿಗೆ ಎದುರಾಗಬಹುದೆಂಬ ಭಯ. ಅದೇ ರೀತಿ, ಕೈ ಬೆರಳಿಗೊಂದು ಸವೆಯದ ಲೋಹವನ್ನು ಕೂಡ ಅಳವಡಿಸಬೇಕಾಗಬಹುದು ಅಂತ ಅವರ ಚಿಂತೆ-ಚಿಂತನೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post