(ಬೊಗಳೂರು ಕಿರಿಕಿರಿಆಟ ಬ್ಯುರೋದಿಂದ)
ಬೊಗಳೂರು, ಸೆ.20- ಒಂದು ಓವರಿನಲ್ಲಿ ಐದು ಸಿಕ್ಸ್ ಹೊಡೆಸಿಕೊಂಡು ಚಚ್ಚಿಸಿಕೊಳ್ಳಲೂ ಗೊತ್ತಿದೆ, ಚಚ್ಚಲೂ ಗೊತ್ತಿದೆ ಅಂತ ಸಾಬೀತುಪಡಿಸಿದ ಯುವರಾಜ್ ಸಿಂಗ್ ಅವರು ಒಂದು ಓವರಿನಲ್ಲಿ ಕೇವಲ ಆರು ಸಿಕ್ಸ್ ಹೊಡೆಯಲು ಕಾರಣಗಳೇನು ಎಂಬುದನ್ನು ಬೊಗಳೂರು ಬ್ಯುರೋ ತನ್ನ ದಿವ್ಯ ಅಜ್ಞಾನದಿಂದ ಕಂಡುಕೊಂಡಿದ್ದು, ಆ 12 ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.1. ಒಂದು ಓವರಿನಲ್ಲಿ ಇಂಗ್ಲೆಂಡ್ ಬೌಲರ್ ಕೇವಲ ಆರು ಬಾರಿ ಮಾತ್ರ ಚೆಂಡೆಸೆದದ್ದು.
2. ಯುವರಾಜ್ ಸಿಂಗ್ ಕಾಲಿನ ಬದಲು ಬ್ಯಾಟ್ ಬೀಸಿದ್ದು... ಅಲ್ಲಲ್ಲ ಎತ್ತಿ ಎತ್ತಿ ಒಗೆದದ್ದು.
3. ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಟಿಕ್-20 ಪಂದ್ಯ ನಡೆದದ್ದು.
4. ಬೌಲರ್ ಯಾವುದೇ ನೋಬಾಲ್ ಮತ್ತು ವೈಡ್ ಎಸೆಯದೇ ಇದ್ದದ್ದು.
5. ಯುವರಾಜ್ ಸಿಂಗ್ ಕೈಯಲ್ಲಿ ಕ್ರಿಕೆಟಿಗರು ಆಡುವ ಬ್ಯಾಟ್ ಇದ್ದದ್ದು.
6. ಬ್ರಾಡ್ ಮತ್ತು ಸಿಂಗ್ ಇಬ್ಬರು ಕೂಡ ಒಂದೇ ಗ್ರೌಂಡಿನಲ್ಲಿ ಕ್ರಿಕೆಟ್ ಆಡುತ್ತಿದ್ದದ್ದು.
7. ಬೌಲರ್ ಓ.......ಡಿ ಬಂದು ಚೆಂಡು ಎಸೆದದ್ದು.
8. ಬ್ಯಾಟಿಗೆ ತಾಗುವಂತೆ ಬೌಲರು ಚೆಂಡನ್ನು ಬಿಸಾಕಿದ್ದು.
9. ಆ ಸ್ಟುವರ್ಟ್ ಬ್ರಾಡ್ 19ನೇ ಓವರನ್ನು ಎಸೆದಿದ್ದು ಕೂಡ ಮತ್ತೊಂದು ಕಾರಣ.
10. ಬ್ರಾಡ್ ಮತ್ತು ಸಿಂಗ್ ವಿರುದ್ಧ ತಂಡಗಳ ಪರವಾಗಿ ಆಡುತ್ತಿದ್ದದ್ದು.
11. ಹಳೆಯ ಕಾರಣಗಳಲ್ಲೊಂದು: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು.
12. ಕೊನೆಯ ಮತ್ತು ಪ್ರಧಾನ ಕಾರಣ: ಇಂಗ್ಲೆಂಡ್ ಬೌಲರ್ ಬೇರೆ ಯಾವುದೋ ಗುಂಡಗಿನ ವಸ್ತುವಿನ ಬದಲು ಚೆಂಡನ್ನೇ ಎಸೆದದ್ದು!
ಇದೀಗ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ತಂಡದ ಮೇಲೆ ಸೇಡು ತೀರಿಸಿಕೊಂಡ ಯುವರಾಜ್ ಸಿಂಗ್ ವಿರುದ್ಧ ಹೀಗೆ ಟೀಕೆ ಮಾಡುತ್ತಿದ್ದಾರೆ ಎಂದು ನಿನ್ನೆ ರಾತ್ರಿಯಿಡೀ ನಿದ್ದೆಗೆಟ್ಟು ಡರ್ಬನ್ ಸುತ್ತಾಡಿದ್ದ ನಮ್ಮ ಒದರಿಗಾರರು ತಿಳಿಸಿದ್ದಾರೆ.
"ಯುವರಾಜ್ ಸಿಂಗ್ ಆರು ಸಿಕ್ಸ್ ಹೊಡೆಯಲು ಆರು ಎಸೆತಗಳನ್ನು ತೆಗೆದುಕೊಂಡರು. ಆದರೆ ನಮ್ಮ ಸಾಧನೆ ಇನ್ನೂ ದೊಡ್ಡದು. ನಾವು ಎರಡು ವಾರದ ಹಿಂದೆ ಯುವರಾಜ್ ಅವರ ಕೇವಲ ಒಂದೇ ಒಂದು ಓವರಿನಲ್ಲಿ ಐದು ಸಿಕ್ಸ್ ಬಾರಿಸಿರಲಿಲ್ಲವೇ?"
ಈ ಕುರಿತು ಯುವರಾಜ್ ಸಿಂಗ್‌ರನ್ನು ಮಾತನಾಡಿಸಿದಾಗ, ನನ್ನ ಬಾಲಿಗೆ 5 ಸಿಕ್ಸ್ ಹೊಡೆಸಿಕೊಂಡ ಬಳಿಕ ಯಾರು ಕೂಡ ನನಗೆ ಫೋನ್ ಮಾಡುತ್ತಿರಲಿಲ್ಲ. ನನಗೆ ಯಾವುದೇ ಫೋನ್ ಬಾರದೆ ತಲೆಬಿಸಿಯಾಗಿತ್ತು. ಅದಕ್ಕಾಗಿಯೇ ಈ ರೀತಿ ಮಾಡಿದೆ ಎಂದರು.
ಅದೂ ಅಲ್ಲದೆ, ಆಂಡ್ರ್ಯೂ ಫ್ಲಿಂಟಾಫ್ ಅವರು ತಮ್ಮ ಬ್ಯಾಟರಿಗೆ ರೀಚಾರ್ಜ್ ಮಾಡಿಸಿದರು ಎಂದೂ ಯುವರಾಜ್ ಸ್ಪಷ್ಟಪಡಿಸಿದರು. ಈ ಕಾರಣದಿಂದ, ಯುವರಾಜ್ ಬ್ಯಾಟಿಂಗ್‌ಗೆ ಹೋಗುವಾಗ ಅವರನ್ನು ಫುಲ್ಲೀ ಚಾರ್ಜ್ ಮಾಡಿಯೇ ಕಳುಹಿಸುತ್ತೇವೆ ಎಂದು ತಂಡದ ನಾಯಕ ದೋಣಿ ಬಿಟ್ಟಿದ್ದಾರೆ.
2 ಕಾಮೆಂಟ್‌ಗಳು
ಇದು ಭಾರತೀಯರ Give and Take policy.
ಪ್ರತ್ಯುತ್ತರಅಳಿಸಿಹೌದು ಸುಧೀಂದ್ರರೆ,
ಪ್ರತ್ಯುತ್ತರಅಳಿಸಿನಿನ್ನೆಯ ಪಂದ್ಯದಲ್ಲಿ ಕೂಡ ಭಾರತೀಯ ಮತ್ತೊಂದು ದಾಖಲೆ ಮಾಡಲು ಹೊರಟಿದ್ದರು. ಅಂದರೆ ಆರು ಎಸೆತದಲ್ಲಿ ಆರು ವಿಕೆಟ್ ಕಳೆದುಕೊಳ್ಳುವುದು. ಏನೋ, ರೋಹಿತ್ ಶರ್ಮಾ ಮತ್ತು ಧೋನಿ ತಪ್ಪಿಸಿಕೊಂಡರು. ಆದರೆ ಆರು ಎಸೆತದಲ್ಲಿ ಆರು ರನ್ ಮಾಡುವ ದಾಖಲೆಯನ್ನು ಮಾತ್ರ ಮಾಡಿಯೇ ಬಿಟ್ಟಂತಿದ್ದರು.
ಏನಾದ್ರೂ ಹೇಳ್ರಪಾ :-D