(ಬೊಗಳೂರು ಸಮುದಾಯರಕ್ಷಣಾ ಬ್ಯುರೋದಿಂದ)
ಬೊಗಳೂರು, ಜು.12- ದೇಶದ ಘನತೆವೆತ್ತ ವಿತ್ತಮಂತ್ರಿಯಾಗಿ ಕಾರ್ಯನಿರ್ವಹಿಸಿ, ಈಗ ಹಲವಾರು ಸಾಧನೆಗಳಿಂದಾಗಿ ಘನತೆ ಕಳೆದುಕೊಂಡ ನಿಧಾನಿಯವರು ತಮಗೆ ನಿದ್ದೆ ಬರುತ್ತಿಲ್ಲ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ನಿದ್ದೆ ಮಾತ್ರೆ ಕೊಡಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿರುವುದಾಗಿ ವರದಿಯಾಗಿದೆ.

ಎಲ್ಲರಿಗೂ ಭಯೋತ್ಪಾದಕ ಪಟ್ಟ ಕಟ್ಟಿ ಅವರನ್ನು ತನಿಖೆಗಾಗಿ ಗಡೀಪಾರು ಮಾಡಿಬಿಟ್ಟರೆ ನಾವು ಮುಂದೆ ಚುನಾವಣೆಯಲ್ಲಿ ಆರಿಸಿಬರುವುದಾದರೂ ಹೇಗೆ, ನಮ್ಮ ಪಕ್ಷದ ಅಧ್ಯಕ್ಷೆಯ ಸೇವೆ ಮಾಡುವುದಾದರೂ ಹೇಗೆ ಎಂಬ ಮಂಡೆಬಿಸಿ ಮಾಡಿಕೊಂಡಿರುವ ಅವರು, ಇತ್ತೀಚೆಗೆ ನಿದ್ರೆ ಮಾಡುವುದನ್ನು ಮರೆತುಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಹಿಂದೆ ಭಾರೀ ಸಂಚಿದೆ. ನಮ್ಮ ಓಟಿನ ಬ್ಯಾಂಕಿನ ಮೇಲೆ ಪ್ರತಿಪಕ್ಷದವರು ಸಂಚು ಹೂಡಿ, ಅವರನ್ನೆಲ್ಲಾ ಭಯೋತ್ಪಾದಕರು ಎಂದು ವಿದೇಶಗಳಲ್ಲಿಯೂ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಸೊಪ್ಪು ಹಾಕಬೇಡಿ ಎಂದು ಬ್ರಿಟನ್ ಪ್ರಧಾನಿಗೂ ಸೂಚಿಸಿರುವ ನಿಧಾನಿಗಳು, ಬಾಂಬ್ ತಯಾರಿ ಬಗ್ಗೆ ಮಾಹಿತಿ ದೊರಕಿರುವುದೆಲ್ಲಾ ನಮ್ಮನ್ನು ಕಂಡರಾಗದವರ ಸಂಚು ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕಾಗಿಯೇ ಕಫೀಲ್ ಮತ್ತು ಆತನ ಸಹೋದರನ ಬಗ್ಗೆ ಮಾಧ್ಯಮಗಳು ಕೂಡ ತಪ್ಪು ತಪ್ಪಾಗಿ ವರದಿ ಮಾಡುತ್ತಿವೆ. ಅವರಿಗೆ ವರದಿ ಮಾಡಲು ಗೊತ್ತೇ ಇಲ್ಲ... ಅವರೇಕೆ ಒಂದು ಸಮುದಾಯದವರ ವಿರುದ್ಧ ಮಾತ್ರವೇ ಬರೆಯುತ್ತಿದ್ದಾರೆ? ಇದು ಪ್ರತಿಪಕ್ಷದ ಸಂಚು ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕೇ? ಎಂದೂ ಕೇಳಿರುವ ಅವರು, ಬೆಂಗಳೂರು ಈಗ ಸಾಫ್ಟ್‌ವೇರ್ ತಂತ್ರಜ್ಞಾನದಲ್ಲಿ ಹೆಸರು ಪಡೆಯುತ್ತಿದೆ. ಸಿರಿಂಜ್ ಬಾಂಬ್ ತಯಾರಿಕೆ ಕೂಡ ಉನ್ನತ ತಂತ್ರಜ್ಞಾನದ ಪ್ರತೀಕವಲ್ಲವೇ? ಇದು ನಮ್ಮ ದೇಶ ಪ್ರಗತಿ ಸಾಧಿಸಿದೆ ಎಂಬುದಕ್ಕೆ ಸಾಕ್ಷಿ ಎಂದು ಸ್ಪಷ್ಟೀಕರಿಸಿದ್ದಾರೆ.

ನಮ್ಮ ಓಟಿನ ಬ್ಯಾಂಕಿನ ಮೇಲೆ ಮಾತ್ರವೇ ಕಣ್ಣು ಇಟ್ಟಿರುವುದೇಕೆ ಎಂದು ಪ್ರಶ್ನಿಸಿರುವ ಅವರು, ಹೀಗೇ ಮುಂದುವರಿದರೆ ವಿದೇಶದಲ್ಲಿ ಶಸ್ತ್ರಾಭ್ಯಾಸ... ಅಲ್ಲಲ್ಲ ಶಸ್ತ್ರಕ್ರಿಯೆ ಮತ್ತು ತಂತ್ರಜ್ಞಾನ (ಬಾಂಬ್ ತಯಾರಿಕೆ ಇತ್ಯಾದಿ) ಬಗ್ಗೆ ಉನ್ನತ ವ್ಯಾಸಂಗಕ್ಕೆ ತೆರಳುವ ನಮ್ಮ ಪ್ರತಿಭೆಗಳ ಗತಿಯೇನು? ಎಂದೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಉನ್ನತ ವ್ಯಾಸಂಗಕ್ಕೆಂದು ವಿದೇಶಕ್ಕೆ ತೆರಳುತ್ತಿರುವವರು, ಜೆಹಾದಿಗಳ 'ಸಂಗ' ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಮ್ಮ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳು ಘೋಷಿಸಿದ್ದು, ಇದರಿಂದ ಈ ಭಯೋತ್ಪಾದಕರೇ ಮೇಳೈಸುವ ರಾಜ್ಯದಲ್ಲಿ ಚಟುವಟಿಕೆ ಸ್ವಲ್ಪ ಮಟ್ಟಿಗೆ ಶಾಂತವಾದೀತು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

ತೀರಾ ಇತ್ತೀಚಿನ ವರದಿಗಳ ಪ್ರಕಾರ, ನಿಧಾನಿಗೆ ನಿದ್ದೆ ಮಾತ್ರೆಯೊಂದನ್ನು ಸಂಶೋಧಿಸಲಾಗಿದ್ದು, ಅವರ ಓಟಿನ ಬ್ಯಾಂಕನ್ನು ಭದ್ರಪಡಿಸಿದ ತಕ್ಷಣವೇ ಅವರಿಗೆ ನಿದ್ದೆ ಬರುತ್ತಿರುವ ಲಕ್ಷಣಗಳು ಗೋಚರವಾಗಿವೆ ಎಂದು ತಿಳಿದುಬಂದಿದೆ.

ಸೂಚನೆ: ಚಾಟ್ ವಿಂಡೋದಲ್ಲಿ ನಕಲಿ ಅನ್ವೇಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದನ್ನು ತೆಗೆದುಹಾಕಲಾಗಿದೆ.

8 Comments

ಏನಾದ್ರೂ ಹೇಳ್ರಪಾ :-D

 1. ಅಸಲಿ ನಕಲಿ ಗುದ್ದಾಟದಲ್ಲಿ ಚಾಟ್ ಕಿಟಕಿ ಬಲಿ...

  ReplyDelete
 2. ಮಾಜಿ ನಿಧಾನಿಗಳು ಸದ್ಯದಲ್ಲಿಯೇ ಜಾರಕಾರಣಿಗಳಿಗೆ ಕುಳಿತಲ್ಲಿಯೇ ನಿಂತಲ್ಲಿಯೇ ನಿದ್ರೆ ಮಾಡುವ ಕಲೆಯ ಬಗ್ಗೆ ತರಗತಿಯನ್ನು ತೆಗೆದುಕೊಳ್ಳಲಿದ್ದಾರಂತೆ. ಇದು ಇಂದಿನ ವಿಶೇಷ ಸುದ್ದಿ.

  ನಕ್ಕಲ್ಲಿ ಚಾಟು ಡಬ್ಬಿ ಬಲಿ ಆಗ್ಬೇಕಾ? ಯಾರದು ಅಂಥಾ ದುರಾತ್ಮ, ನಮ್ಮ ಅನ್ವೇಷಿಗಳಿಗೆ ಕಿರುಕುಳ ಕೊಡ್ತಿರೋನು? ಅನ್ವೇಷಿಗಳೇ, ನಾನು ನಿಮ್ಮ ಹಿಂದೆ ನಿಂತಿರ್ತೀನಿ - ನೀವು ಚಾಟು ಡಬ್ಬಿಯನ್ನು ಮತ್ತೆ ಅಳವಡಿಸಿ. ನಿಮಗೇನೂ ತೊಂದರೆ ಬರದ ಹಾಗೆ ನೋಡಿಕೊಳ್ಳೋದು ನನ್ನ ಕೆಲಸ. ಅದಕ್ಕೇ ಫೀ! ಬೇಡ ಬಿಡಿ, ನೀವು ನನ್ನ ಜಿಗರೀ ದೋಸ್ತ್

  ReplyDelete
 3. ನಮ್ಮ ನಿಧಾನಿಗಳು ನಿದ್ದೆ ಮಾಡುವ ಸಮಯದಲ್ಲಿ ಮಾತ್ರ ಅತ್ಯಂತ ದಕ್ಷತೆಯಿಂದಿರುತ್ತಾರೆ. ದೇಶದ ಹಿತದ ದೃಷ್ಟಿಯಿಂದ ಇವರು ದಿನದ ಇಪ್ಪತ್ತುನಾಲ್ಕೂ ಗಂಟೆ ನಿದ್ದೆ ಮಾಡುವದು ಒಳ್ಳೆಯದು. ಅಂತಹ ನಿದ್ರೆ ಮಾತ್ರೆ ಇದೆಯಾ?

  ReplyDelete
 4. ಅನ್ವೇಷಿಗಳೇ, ನಿಧಾನಿಗೆ ನಿದ್ದೆ ಮಾತ್ರೆ ಕೊಡಿಸುವುದಕ್ಕಿಂತ ಇನ್ನೊಬ್ಬ ಮಾಜಿ ನಿಧಾನಿ ಹತ್ತಿರ tution ತೆಗೆದುಕೊಳ್ಳುವಂತೆ ಸಲಹೆ ನೀಡಿ.

  ReplyDelete
 5. ಶ್ರೀನಿಧಿ ಅವರೆ,
  ನಕಲಿಗಳು ಹೋಗಲಿ
  ಅಸಲಿಗಳು ಬಲಿ ಆಗಲಿ
  ಚಾಟು ಡಬ್ಬ ಬಂದಿದೆ ಮರಳಿ!

  ReplyDelete
 6. ಶ್ರೀನಿವಾಸರೆ,
  ನೀವು ಕೊಟ್ಟ ರದ್ದಿಯನ್ನು ಹಾಲಿ ನಿಧಾನಿಗೆ ಅರುಹಲಾಗುತ್ತದೆ.

  ಮತ್ತೆ ಚಾಟು ಡಬ್ಬದ ಬಗ್ಗೆ ಹೇಳೋದಾದ್ರೆ... ಅನ್ವೇಷಿಗೆ ಕಿರುಕುಳ ಕೊಡ್ತಿರೋರಿಗೆ ತಿಳಿ ಹೇಳಲು ನೀವೇ ಲಾಯಕ್ಕು. ಆದರೆ ಫೀ ಫೀ ಅಂತ ಏನನ್ನೂ ಊದಬೇಡಿ...

  ReplyDelete
 7. ಸುಧೀಂದ್ರ ಅವರೆ,
  ಖಾಯಂ ಆಗಿ ನಿದ್ರೆ ಮಾಡುವಂತಹಾ ಮಾತ್ರೆಯ ಸಂಶೋಧನೆಗೆ ನೀವು ಸಲಹೆ ನೀಡಿರುವುದು ಇಹಲೋಕದ ಮೇರೆ ಮೀರಿದ ಸಂಶೋಧನೆಗೆ ನಾಂದಿಯಾಗುತ್ತದೆ. ಹಾಗಾಗಿ ಅದರ ಸಂಶೋಧನೆಯಾಗಿದ್ದರೂ, ಅಧಿಕೃತವಾಗಿ ಇನ್ನೂ ಬಿಡುಗಡೆ ಮಾಡಿಲ್ಲ.

  ReplyDelete
 8. ಶ್ರೀತ್ರೀ ಅವರೆ,
  ಮಾಜಿ ನಿಧಾನಿಗಳು ಇನ್ನೂ ಹಿಂದಿ ಟ್ಯೂಶನ್ ಪೂರ್ಣಗೊಳಿಸಿಲ್ಲ. ಹಾಗಾಗಿ ಅವರಿಗೂ (ತಕ್ಕ ಪಾಠ) ಕಲಿಸಲು ಪುರುಸೊತ್ತಿಲ್ಲವಂತೆ... ಜಾರಕಾರಣಿಗಳಿಗೆ ನಿವೃತ್ತಿ ಇಲ್ಲದಿದ್ದರೂ, ಮತದಾರರೇ ಏನಾದರೂ ಕಡ್ಡಾಯ ನಿವೃತ್ತಿ ನೀಡಿದರೆ, ಆ ಬಳಿಕ ಸುಖನಿದ್ದೆ ಮಾಡಲು ಮಾಜಿ ನಿಧಾನಿಗಳ ಮನೆ ಬಾಗಿಲಲ್ಲಿ ಟ್ಯೂಶನಿಗಾಗಿ ಅವರೆಲ್ಲಾ ಕ್ಯೂ ನಿಲ್ಲಬಹುದು.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post