ಬೊಗಳೆ ರಗಳೆ

header ads

ಭಾ(ರೀ) ಜ(ಗ್ಗಾಡೋ) ಪ(ಕ್ಷ)ದಲ್ಲಿ ಭರ್ಜರಿ ಬದಲಾವಣೆ

(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೂರು, ಜೂ.25- ರಾಜ್ಯದ ಭಾರೀ ಜಗ್ಗಾಟ ಪಕ್ಷ(ಭಾಜಪ)ದಲ್ಲಿ ಉತ್ತರ ಧ್ರುವವು ದಕ್ಷಿಣ ಧ್ರುವಕ್ಕೂ, ದಕ್ಷಿಣ ಧ್ರುವವು ಉತ್ತರ ದಿಕ್ಕಿಗೂ ಆಗಾಗ್ಗೆ ಚಲಿಸುತ್ತಾ ಸಂಚಲನ ಮೂಡಿಸುತ್ತಿರುವುದು ಹೊಸ ವಿದ್ಯಮಾನವಾಗಿದೆ.

ಆಗಾಗ್ಗೆ ಬೇರ್ಪಡುವ ಈ ಎರಡೂ ಧ್ರುವಗಳು ಮತ್ತೆ ಮತ್ತೆ ಒಂದುಗೂಡುವ ಪ್ರಕ್ರಿಯೆಯು ಹೊಸ ನೈಸರ್ಗಿಕ ಪ್ರಕೋಪವೇ ಎಂದು ಬೊಗಳೂರಿನ ಜನತೆ ತೀವ್ರ ಆತಂಕ ವ್ಯಕ್ತಪಡಿಸಿರುವುದಾಗಿ ವರದಿಯಾಗಿದ್ದು, ಇದು ಮತ್ತೊಂದು ಬಾರಿ ಬೇರ್ಪಡುವ ಹೊಸ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

ಇದಲ್ಲದೆ, ಈ ಹಿಂದೆ ಚುನಾವಣೆ ಫಲಿತಾಂಶ ಹೊರಬರುವ ಮೊದಲೇ ಮಂತ್ರಿ-ಮುಖ್ಯಮಂತ್ರಿ ಅಭ್ಯರ್ಥಿಗಾಗಿ ತಾಕಲಾಟ ನಡೆಸಿದ್ದ ಅನುಭವೀ ಪಕ್ಷವೊಂದು ಅಧಿಕಾರ ಸಿಕ್ಕಾಗ ತಮ್ಮ ಕಚೇರಿಯೊಳಗೆ ಸಾಕಷ್ಟು ಉಸುಕು ತಂದು ಮುಸುಕಿನೊಳಗೆ ಅದನ್ನು ಹಾಕಿ ಗುದ್ದಾಟ ನಡೆಸುತ್ತಿರುವುದು ಸರ್ವವಿದಿತ. ಇದಕ್ಕಾಗಿಯೇ ವರಿಷ್ಠರು ಮರಳು ತಂದು ಹಾಕಿ ಮರುಳು ಮಾಡುತ್ತಿದ್ದಾರೆ ಎಂದು ಒಂದು ಪಂಗಡವು ಬೊಗಳೆ ರಗಳೆ ಬ್ಯುರೋದೆದುರು ಅಲವತ್ತುಕೊಂಡಿದೆ.

ಗಿಟ್ಟಿಸಿಕೊಂಡ ಅಧಿಕಾರವನ್ನು ಕಳೆದುಕೊಳ್ಳುವುದು ಹೇಗೆ ಎಂಬ ಕುರಿತಾಗಿ ಪಕ್ಷದೊಳಗೆ ತೀವ್ರ ಚಟುವಟಿಕೆಗಳು ನಡೆಯುತ್ತಿರುವುದರಿಂದ ಆಗಾಗ್ಗೆ ಭೂಕಂಪವಾದಂತಹ ಸದ್ದು ಕೇಳಿ, ಪೋಖರಣ್ ಸ್ಫೋಟವನ್ನು ನೆನಪಿಸುವ ವಿದ್ಯಮಾನಗಳು ನಡೆಯುತ್ತಿರುವುದು ಸಾಮಾನ್ಯವಾಗಿರುವುದರಿಂದ ಜನತೆ ಭಯಭೀತರಾಗದಂತೆ ಕೋರಿಕೊಳ್ಳಲಾಗಿದೆ.

ಇತ್ತೀಚೆಗೆ ಮಂತ್ರಿ ಮಹೋದಯರ ಯುರೋಪ್ ಪ್ರವಾಸವನ್ನು ರದ್ದುಪಡಿಸಿದ ಕಾರಣದಿಂದಾಗಿ ದೇಶದೊಳಗಾದರೂ ವಿಮಾನದಲ್ಲಿ ಸುತ್ತೋಣ ಎಂದುಕೊಂಡಂತಿರುವ ಜಾರಕಾರಣಿಗಳು ಇದೀಗ ದೆಹಲಿ-ಬೆಂಗಳೂರು ವಿಮಾನ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗುವಂತೆ ನೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗಸದಲ್ಲಿ ಟ್ರಾಫಿಕ್ ಜಾಮ್ ಆದಲ್ಲಿ ಇನ್ನಷ್ಟು ಕಾಲ ಅರಸೊತ್ತಿಗೆಯ (ಅಧಿಕಾರದ) ಸುಖದ ಸುಪ್ಪತ್ತಿಗೆ ತೇಲಾಡುತ್ತಿರಬಹುದು, ಇಲ್ಲವಾದಲ್ಲಿ ಕೆಳಗಿಳಿಯಬೇಕಾದೀತು ಎಂಬುದರ ಅರಿವಿರುವ ಜಾರಕಾರಣಿಗಳು, ಈ ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ವರಿಷ್ಠರು ಕೇಂದ್ರದಿಂದ ಬಂದು, "ಗುಂಪುಗಾರಿಕೆ ಬೇಡ, ಜಗಳ ಬೇಡ, ಒಂದಾಗಿ ಇರಿ, ಅಸಮಾಧಾನವನ್ನು ಮಾಧ್ಯಮಗಳೆದುರು ಹೊರಗೆಡಹಬಾರದು, ಪಕ್ಷದ ವರ್ಚಸ್ಸು ಹಾಳು ಮಾಡಬೇಡಿ, ಕೆಸರಿಗೆ ಕಲ್ಲೆಸೆಯಬೇಡಿ" ಎಂಬಿತ್ಯಾದಿ ಈ ಹಿಂದೆ ರೆಕಾರ್ಡ್ ಮಾಡಿಟ್ಟುಕೊಂಡ ಸಲಹೆಗಳ ಪಟ್ಟಿಯನ್ನು ಮತ್ತೊಮ್ಮೆ ಪ್ಲೇ ಮಾಡಿ ಹೋಗುತ್ತಾರೆ. ಅವರು ಅತ್ತಕಡೆ ತೆರಳಿದ ತಕ್ಷಣ ಈ ಟೇಪ್ ರೆಕಾರ್ಡರ್ ಹಾಳಾಗುತ್ತದೆ ಮತ್ತು ಹಳೆಯ ಜಗಳ ಮರೆಯುವ ನಾಯಕರು, ಹೊಸ ಜಗಳ ಆರಂಭಿಸುತ್ತಾರೆ ಎಂದು ಶ್ರುತಪಟ್ಟಿದೆ.

ಆದರೆ, ಈ ಅಧಿಕಾರಕ್ಕಾಗಿನ ಕಿತ್ತಾಟದ ಮಧ್ಯೆ, ಎರಡು ಧ್ರುವಗಳ ಜಂಗೀಕುಸ್ತಿಯ ನಡುವೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾಗುವುದಿಲ್ಲ, ಮೇಲಾಟ ಬದಲಾಗುವುದಿಲ್ಲ, ಎಳೆದಾಟ, ಕಿತ್ತಾಟ ಬದಲಾಗುವುದಿಲ್ಲ, ಕುರ್ಚಿಗಾಗಿ ಹಪಹಪಿಕೆ ಬದಲಾಗುವುದಿಲ್ಲ... ಹಾಗಿದ್ದರೆ ಏನು ಬದಲಾಗುತ್ತದೆ? ಎಂಬ ಪ್ರಶ್ನೆಗೆ ಬೊಗಳೆ ರಗಳೆಯ ಅಸತ್ಯಶೋಧನಾ ಸಮಿತಿಯು ಉತ್ತರ ಕಂಡುಕೊಂಡಿದೆ.
ಬದಲಾಗುವುದು: ಜಗಳ ನಿಲ್ಲಿಸಲು ಬರುವ ವರಿಷ್ಠ ನಾಯಕರು ಮಾತ್ರ!!!
ಈ ಹಿಂದೆ ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ ಮತ್ತಿತರರು (ಸಾಕಷ್ಟು ಮಂದಿ ಬಂದು ಹೋಗುವುದರಿಂದ ಹೆಸರು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ) ಬಂದಿದ್ದಾರೆ, ಟೇಪ್ ರೆಕಾರ್ಡರ್ ಹಚ್ಚಿದ್ದಾರೆ, ಹೋಗಿದ್ದಾರೆ. ಇದೀಗ ಯಶವಂತ ಸಿನ್ಹಾ ಬಂದಿದ್ದಾರೆ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈಮಾನಿಕ ಯಾತ್ರೆ ತೀರಾ ಅಗ್ಗವಾಗಿರುವುದರಿಂದಾಗಿ ಜಗಳ ದೆಹಲಿಗೆ ರವಾನೆಯಾಗಿದೆ.
______________________
[ಎರಡೇ ರೆಕ್ಕೆಯಲ್ಲಿ ಹಾರಾಡುತ್ತಿದ್ದ ಪಾತರಗಿತ್ತಿ ಇದೀಗ ನಾಲ್ಕು ರೆಕ್ಕೆಗಳನ್ನು ಒಟ್ಟಾಗಿಸಿಕೊಂಡು ಹೊಸ ಹೂದೋಟದಲ್ಲಿ ಹಾರಾಡುತ್ತಿದೆ. ಬೊಗಳೂರು ಬ್ಯುರೋದಿಂದ ಶುಭಾಶಯಗಳು.]

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಭಾರಿ ಜಗ್ಗಾಟ ಪಕ್ಷದ ಜಾರಕಾರಣಿಗಳು ಎರಡು ಧ್ರುವಗಳಲ್ಲಿ ನಿಂತುಕೊಂಡು "ಹಗ್ಗ ಜಗ್ಗಾಟ”ದ ಸ್ಪರ್ಧೆಯನ್ನು ನಡೆಸುತ್ತಿರುವದು ನಿಮ್ಮ ಬ್ಯೂರೋದ ವದರಿಯಿಂದ ವಿದಿತವಾಯಿತು. ದೆಹಲಿಯಿಂದ ಬಂದ ಟೇಪಿಸ್ಟುಗಳು ಎರಡೂ ಕೊನೆಯ ಸ್ಪರ್ಧಿಗಳಿಗೆ ಸಾಕಷ್ಟು ಉದ್ದನೆಯ ಹಗ್ಗವನ್ನು ಕೊಟ್ಟು ಹೋಗಿದ್ದಾರಂತೆ. ಆದರೆ ಹಗ್ಗ ಜಗ್ಗಾಟದಲ್ಲಿ ತುಂಬಾ ಅನುಭವವಿರುವ ಹಳೆಯ ರಾಷ್ಟ್ರೀಯ ಪಕ್ಷವೊಂದು ತನ್ನದೇ ಹಗ್ಗವನ್ನು ಮೈದಾನದಲ್ಲಿ ಎಸೆದು ಈ ಸ್ಪರ್ಧಿಗಳಲ್ಲಿ ಕೆಲವರನ್ನು ತನ್ನತ್ತ ಎಳೆಯಲು ಪ್ರಯತ್ನ ಮಾಡುತ್ತಿದೆಯೆನ್ನುವ ಸುದ್ದಿಯನ್ನು ಬೊಗಳೆ ಬ್ಯೂರೋದ ಗುಪ್ತ (ರೋಗಗಳ)ವದರಿಗಾರರು ಕಿವಿಯಲ್ಲಿ ಉಸುರಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಪಾತರಗಿತ್ತಿಯ ಬಗ್ಗೆ ಬರೆದ ಶುಭಾಷಯದ ಸಾಲು ತುಂಬಾನೆ ಇಷ್ಟವಾಯಿತು. ಹಾಗಾದ್ರೆ ಇನ್ನು ಈ ಪಾತರಗಿತ್ತಿ ಇನ್ನೂ ತುಂಬಾ ದೂರ ಹಾರಬಹುದು (ಇನ್ನೂ ಜಾಸ್ತಿ ಲೇಖನಗಳು) ಅಲ್ವಾ !!

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ದೆಹಲಿಯಿಂದ ಟೇಪಿಸ್ಟುಗಳನ್ನು ಕರೆಸಿಕೊಂಡಿದ್ದರಿಂದ ಬಚಾವ್... ಏನಾದರೂ ಟೈಪಿಸ್ಟ್ ಗಳನ್ನು ಕರೆಸಿದ್ದಿದ್ದರೆ???

    ಜಾರಕಾರಣಿಗಳೆಲ್ಲಾ ಬೇರೊಬ್ಬರ ಹಗ್ಗ ಕಸಿದುಕೊಂಡು ಕೆಲವರು ಅದರಲ್ಲಿ ಸ್ಕಿಪ್ಪಿಂಗ್ ನಡೆಸುತ್ತಿದ್ದರೆ, ಮತ್ತೆ ಕೆಲವರು ಕುತ್ತಿಗೆಗೆ ಬಿಗಿದುಕೊಳ್ಳುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಎಂಡಿ ಅವರೆ,
    ಪಾತರಗಿತ್ತಿಯಿಂದ ಮತ್ತಷ್ಟು ಪುಸ್ತಕಗಳು ಬರಲಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

    ಪ್ರತ್ಯುತ್ತರಅಳಿಸಿ
  5. ಅಪ್ಪಯ್ಯ ಜಪ್ಪಯ್ಯ ಅಂದರೂ ಜಗ್ಗದೇ ಇರೋವ್ರಿಗೆ ಭಾಜಪ್ಪ ಅಂತಾರೆ ಅಲ್ವಾ ಅನ್ವೇಷಿಗಳೇ?

    ಪ್ರತ್ಯುತ್ತರಅಳಿಸಿ
  6. ನಿಮ್ಮ ವಿವರಣೆ ಸರಿ ಶ್ರೀನಿವಾಸರೆ,
    ಜಪ್ಪಯ್ಯ ಅಂದರೂ ಜಗ್ಗದವರು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D