(ಬೊಗಳೂರು ಪತ್ತೆಹಚ್ಚೋ ಬ್ಯುರೋದಿಂದ)
ಬೊಗಳೂರು, ಜೂ.23- ಭೂಮಿಯಿಂದ ಈ ಹಿಂದೆ ದಿವ್ಯಾಭಾರತಿ, ಸೌಂದರ್ಯ ಮೊದಲಾದ ತಾರೆಗಳು ಕಣ್ಮರೆಯಾದ ಪ್ರಕರಣಗಳ ಬೆನ್ನಿಗೇ, ಈಗ ಆಕಾಶದಿಂದಲೂ ತಾರೆಗಳು ಕಣ್ಮರೆಯಾಗುತ್ತಿರುವುದು ತೀವ್ರ ಆತಂಕ ಮೂಡಿಸಿರುವ ವಿಚಾರವಾಗಿದೆ.
ಈ ವರದಿಯಿಂದ ಬೆಚ್ಚಿ ಬಿದ್ದ ಬೊಗಳೆ ಬ್ಯುರೋದ ಸಿಬ್ಬಂದಿ (ನಭೋಮಂಡಲಕ್ಕೆ) ನೆಗೆದುಬಿದ್ದ ಪರಿಣಾಮವಾಗಿ, ದಾರಿಯಲ್ಲೇ ತಾರೆಯೊಂದು ಧರೆಗಿಳಿಯುತ್ತಿರುವುದು ಕಂಡುಬಂತು. ಆದರೆ ಇದು ಭೂಮಿಯಿಂದಲೇ ಖುಷಿಯಿಂದಲೇ ನಾಪತ್ತೆಯಾಗಿ ಮತ್ತಷ್ಟು ಖುಷಿಯಿಂದ ಮರಳಿ ಬರುತ್ತಿರುವ ಸುನೀತಾ ವಿಲಿಯಮ್ಸ್ ಎಂಬ ತಾರೆ ಎಂಬುದು ಆಮೇಲೆ ಅರಿವಿಗೆ ಬಂದ ಬಳಿಕ ಬೊಗಳೆ ರಗಳೆ ಬ್ಯುರೋ ಇದ್ದ ಗಗನ ನೌಕೆಯು, ಅಟ್ಲಾಂಟಿಸ್ ನೌಕೆಗೆ ಡಿಕ್ಕಿ ಹೊಡೆಯದೇ, ಅದನ್ನು ತಡೆಯದೆ ಮುಂದೆ ಸಾಗಿ ತನಿಖೆ ಆರಂಭಿಸಿತು.
ಈ ಹಿಂದೆ ಕಲ್ಪನಾ ಚಾವ್ಲಾ ಎಂಬ, ಭೂಮಿಯಿಂದ ಆಗಸಕ್ಕೆ ತೆರಳಿದ ಧ್ರುವತಾರೆಯೊಂದು ಮರಳಿ ಬರುವಾಗಲೇ ಮರಳಿ ಬಾರದ ಲೋಕಕ್ಕೆ ತೆರಳಿ ಜಗತ್ತನ್ನು ದುಃಖದ ಮಡುವಿನಲ್ಲಿ ಮುಳುಗಿಸಿದ್ದ ಹಿನ್ನೆಲೆಯಲ್ಲಿ ಬೊಗಳೂರು ಬ್ಯುರೋ, ಅಟ್ಲಾಂಟಿಸ್ ನೌಕೆಗೆ ಶುಭ ಹಾರೈಸಿ ಮೇಲಕ್ಕೆ ಹಾರಿತು.
ಆದರೆ ನಿಜವಾದ ಕಾಳಜಿ, ಕಳಕಳಿ ವ್ಯಕ್ತವಾಗುವುದು ಆಗಸದಿಂದ ತಾರೆಯರು ಕಣ್ಮರೆಯಾಗುತ್ತಿರುವ ಸುದ್ದಿ ಇಲ್ಲಿ ಪ್ರಕಟವಾಗಿದ್ದರಿಂದ. ಇದಕ್ಕೆ ಬೇರೆಯೇ ಕಾರಣವಿದೆ ಎಂಬುದನ್ನು ಈ ಸಂದರ್ಭದಲ್ಲಿ ಪತ್ತೆ ಮಾಡಲಾಗಿದೆ. ಆಗಸದಲ್ಲಿ ಪ್ರೇಮಿಸುತ್ತಾ ಸುಖವಾಗಿದ್ದ ತಾರೆಯರು, ಇದೀಗ ಮಾನವರ ಕಾಟ ಇಲ್ಲಿಯೂ ಆರಂಭವಾಯಿತು ಎಂದು ತಿಳಿದುಕೊಂಡು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು ಎಂಬ ಅಮೂಲ್ಯವಾದ ಅಂಶವೊಂದನ್ನು ಓದುಗರ ಗಮನಕ್ಕೆ ತರಲಾಗುತ್ತಿದೆ.
ವರದಿಯಾಗಿರುವಂತೆ, ತಾರೆಯರು ಆಕಾಶದಲ್ಲೇ ಸ್ಫೋಟಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು, ಪ್ರೇಮ ಪ್ರಕರಣಕ್ಕೆ ಪೋಷಕರ ವಿರೋಧವೇ ಕಾರಣ ಎಂದು ತಿಳಿದುಕೊಳ್ಳಲಾಗಿದೆ.
ಒಟ್ಟಿನಲ್ಲಿ ನಭೋಮಂಡಲದ ತಾರೆಗಳ ತೋಟಕ್ಕೂ, ಕಾಲೇಜು ಪರಿಸರದ ತಾರೆಗಳ ತೋಟಕ್ಕೂ ಯಾವುದೇ ವ್ಯತ್ಯಾಸಗಳಿಲ್ಲ. ಎರಡೂ ಕಡೆಯ ತಾರೆಗಳ ತೋಟದಲ್ಲಿ ತಾರೆಗಳು ಪರಾರಿಯಾಗಲು ಅಥವಾ ಕಣ್ಮರೆಯಾಗಲು ಕಾರಣ ಮಾತ್ರ ಏಕಪ್ರಕಾರವಾಗಿ ಇರುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು.
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
ನಭೋಮಂಡಲದಲ್ಲಿಯೇ ಆಗಲಿ, ಕಾಲೇಜು ಪರಿಸರದಲ್ಲಿಯೇ ಆಗಲಿ ಕಪ್ಪು ಕುಳಿಗಳೆಂಬ ಧೂರ್ತರು ಹೊಂಚು ಹಾಕುತ್ತ ಕುಳಿತಿರುತ್ತಾರೆ. ಸ್ವಚ್ಛಂದವಾಗಿ ವಿಹರಿಸುವ ತಾರೆಗಳನ್ನು ಈ ಧೂರ್ತ ಕುಳಿಗಳು ಕಬಳಿಸಿ ಬಿಡುತ್ತವೆ. ತಾರೆಗಳು ಈ ಕುಳಿಗಳಿಂದ ದುರದಲ್ಲೇ ಇರಬೇಕು.
ReplyDeleteಸುನಾಥರೆ,
ReplyDeleteನೀವು ಹೇಳಿದ ಕಪ್ಪು ಕುಳಿಗಳೂ ಕಪ್ಪು ಕಪ್ಪು ಕುಳಗಳೂ ಆಕಾಶದಲ್ಲೂ, ಭೂಮಿಯಲ್ಲೂ ತಾರೆಗಳಿಗೆ ತೊಂದರೆ ಕೊಡುವುದು ಸರ್ವವಿದಿತ. ಹಾಗಾಗಿ ಎಲ್ಲಿ ಅಡಗೋದು ಎಂಬುದೇ ತಿಳಿಯುತ್ತಿಲ್ಲ.
Post a Comment
ಏನಾದ್ರೂ ಹೇಳ್ರಪಾ :-D