ಬೊಗಳೆ ರಗಳೆ

header ads

ಕೋರ್ಟಿನಲ್ಲಿ ಮೂಕ ಪ್ರೇಕ್ಷಕನಾದ ಗಾರ್ದಭ!

(ಬೊಗಳೂರು ಅ-ಮಾನವ ಬ್ಯುರೋದಿಂದ)
ಬೊಗಳೂರು, ಮೇ 5- ತಮ್ಮ ಅಪಸ್ವರದ ಬಗೆಗೇ ಅಪಸ್ವರ ಎತ್ತಿ ತಮ್ಮ ಮೇಲೆಯೇ ಕೇಸು ಜಡಿದ ಮಾನವ ಸಮುದಾಯದ ಮೇಲೆ ಗಾರ್ದಭ ಸಮಾಜವು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದೆ.

ನಮ್ಮ ಮೇಲೆಯೇ ಕೇಸು ಜಡಿಯುತ್ತಿರುವ ಮಾನವ ಪ್ರಾಣಿಗಳಂತೆ ನಾವೇನೂ ನ್ಯಾಯಾಲಯದಲ್ಲಿ "ನಾನು ತಪ್ಪಿತಸ್ಥನಲ್ಲ" ಎಂದು ಕಿರುಚಾಡಲಿಲ್ಲ, ಸತ್ಯವನ್ನೇ ಹೇಳುತ್ತೇನೆ ಎಂಬ ಸುಳ್ಳು ಪ್ರಮಾಣವನ್ನೂ ಮಾಡಲಿಲ್ಲ ಎಂದು ಗಾರ್ದಭ ಸಮಾಜದ ಅಧ್ಯಕ್ಷ ಗಾರ್ದಭ ರಾಜ್ ಅವರು ಕಿಕ್ಕಿರಿದು ತುಂಬಿದ್ದ, ಬೊಗಳೆ ರಗಳೆ ಬ್ಯುರೋದ ಏಕಮಾತ್ರ ವರದಿಗಾರನ ಉಪಸ್ಥಿತಿಯ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದರು.

ನ್ಯಾಯಾಲಯದಲ್ಲಿ ನಮ್ಮ ವರ್ತನೆಯಿಂದಾಗಿ ಆಶ್ಚರ್ಯಗೊಂಡ ನ್ಯಾಯಾಧೀಶರೇ ನಮ್ಮನ್ನು ಹೊಗಳೆ ಅಟ್ಟಕ್ಕೆ.... ಅಲ್ಲಲ್ಲ... ಲಾಯಕ್ಕೆ ಏರಿಸಿದರು. ಸ್ವತಃ ನ್ಯಾಯಾಧೀಶರಿಗೆ ಅಚ್ಚರಿಯಾಗಿ, ಮೂಗಿನ ಮೇಲೆ ಬೆರಳಿಟ್ಟುಕೊಂಡ ಪರಿಣಾಮವಾಗಿ ಅವರ ಬಾಯಿಯಿಂದ ತೀರ್ಪು ಉದುರುವುದು ಸಾಧ್ಯವಾಗಲೇ ಇಲ್ಲ ಎಂದು ವಿವರಿಸಿದ ಗಾರ್ದಭ ರಾಜ್, ಇನ್ನು ಮುಂದಾದರೂ ನಮ್ಮ ಮೇಲೆ ಕೇಸು ಜಡಿಯುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

ಅರಚುತ್ತೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ಕೇಸು ಜಡಿದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಲ್ಲಿ ನಾವು ಮೌನವಾಗಿಯೇ ಎಲ್ಲವನ್ನೂ ಕೇಳಿಸಿಕೊಂಡಿದ್ದೇವೆ.... ಎಲ್ಲಾದರೂ ಅರಚಾಡಿದ್ದೇವೆಯೇ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಪತ್ರಿಕಾಗೋಷ್ಠಿಗೆ ಏಕಮಾತ್ರ ಸದಸ್ಯರಿರುವ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳೂ ಕಿಕ್ಕಿರಿದು ಹಾಜರಾಗಿರುವುದು ಸಂತಸ ತಂದಿದೆ. ಉಳಿದ ಪತ್ರಿಕೆಗಳು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ, ಬೊಗಳೆಯೊಂದೇ ನಮ್ಮ ರಕ್ಷಕನಾಗಿದ್ದು, ನಮ್ಮ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಉತ್ತಮ ಮರದಲ್ಲಿ ಮಾಡಿರುವ ಮಣೆ ಹಾಕುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಈ ಹಿಂದೆಯೂ ಇಂಥದ್ದೇ ವರದಿ ಪ್ರಕಟಿಸಿ ನಮ್ಮ ಇಲ್ಲದ ಮಾನವನ್ನು ಹಿಡಿದೆತ್ತಿ ತೋರಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಸಂಸತ್ತಿನ ಒಳಗಿರುವ ಗಾರ್ದಭಗಳಿಗೆ ಮಾತ್ರ ಒದರುವ ಹಕ್ಕಿರುತ್ತದೆ.ಈ ಗಾರ್ದಭಗಳ ಒದುರುವಿಕೆಯನ್ನು ತಡೆಯುವದು ಅವುಗಳ ಹಕ್ಕುಚ್ಯುತಿ ಹಾಗು ಶಿಕ್ಷಾರ್ಹ ಅಪರಾಧ. ಆದರೆ ಸಂಸತ್ತಿನ ಹೊರಗಿರುವ ಗಾರ್ದಭಗಳಿಗೆ ಇಂತಹ ಸಾಂವಿಧಾನಿಕ ರಕ್ಷಣೆಯಿಲ್ಲ. ಅವು ಮೂಕ ಪ್ರೇಕ್ಷಕರಾಗುವದು ಅವುಗಳ ಅನಿವಾರ್ಯವಾದ ಹಣೆಬರಹ. ಯಾವಾಗಲೋ ಒಮ್ಮೆ ಬೊಗಳೆ ಬ್ಯೂರೋವಿನ ಕರುಣಾಳು ಪತ್ರಕರ್ತರು ಈ ಹೊರಗಿನ ಗಾರ್ದಭಗಳಿಗೆ ವಕ್ತಾರರಾಗಬೇಕಷ್ಟೆ!

    ಪ್ರತ್ಯುತ್ತರಅಳಿಸಿ
  2. ಗಾರ್ದಭಕ್ಕೂ ಬೊ.ರ ಕ್ಕೂ ಅದೆಂತಹ ಭಾಂದವ್ಯ,ಅದೆಂತಹ ವಾತ್ಸಲ್ಯ !

    ಎಲ್ಲೇ ಕತ್ತೆಗಳಿಗೆ ಅನ್ಯಾಯವಾದಗ ಬೊ.ರ ಅದರ ವಿರುದ್ದ ಹೋರಾಡುವುದು ಕಂಡು ಆ ಗಾರ್ದಭ ಸಮಾಜವು ಶ್ರೀಮಾನ್ ಅಸತ್ಯಿಗಳಿಗೆ ಸನ್ಮಾನಿಸಬೇಕೆಂದು ಯೋಜಿಸುತ್ತಿದ್ದಾರೆ ಅಂತಾ ಎಲ್ಲಾ ಬಲ್ಲ ಮೂಲಗಳಿಂದ ತಿಳಿದುಬಂದಿದೆ..

    ಪ್ರತ್ಯುತ್ತರಅಳಿಸಿ
  3. ಈ ವರದಿ ಮೊದಲೂ ಎಲ್ಲೋ ಓದಿದ ಹಾಗೆ ನೆನಪು. ಆದರೆ ಒಂದು ವ್ಯತ್ಯಾಸವಿದೆ. ಅದರಲ್ಲಿ ನ್ಯಾಯಾಧೀಶರು ಮೂಗಿನೊಳಗೆ ಬೆರಳಿಟ್ಟುಕೊಂಡರೆ, ಇದರಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

    ಬೊ-ರ ದಲ್ಲೂ ಗಾರ್ದಭಗಳು ಪ್ರತಿಕ್ರಿಯೆಯನ್ನು ನೀಡಲು ಒತ್ತಾಸೆ ಮಾಡುತ್ತಿದ್ದಾರೆ ಎಂದು ಬಲ್ಲಿದರು ಹೇಳುತ್ತಿದ್ದಾರೆ, ಇದು ನಿಜವೇ ಸತ್ಯರೇ!

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಗಾರ್ದಭ ವಕ್ತಾರ ಎಂಬ ಬಿರುದು ನೀಡಿ ಅವಮಾನಿಸಿದ್ದಕ್ಕೆ ಧನ್ಯವಾದಗಳು. ಸಮಾನತೆಗೆ ಹೋರಾಡುವ ನಮ್ಮ ಮಾನ ತೆಗೆಯುವ ನಿಮ್ಮ ಯತ್ನ ಶ್ಲಾಘನೀಯ.

    ಪ್ರತ್ಯುತ್ತರಅಳಿಸಿ
  5. ಶಿವ್ ಅವರೆ,
    ಗಾರ್ದಭ ಸಮಾಜದ ಸನ್ಮಾನ ಏನಂತ ಗೊತ್ತೇ? ಅದು ಲತ್ತೆ ಅಂತ ತಿಳಿದುಬಂದಿದ್ದು, ಬಿರುದು ಕೂಡ ಅಸತ್ತೆ ಎಂದಿರುತ್ತೆ ಅಂತೆ.

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,
    ಮೂಗಿನ ಮೇಲೆ ಬೆರಳಿಟ್ಟರೆ ನಿಧಿ ಕೊರೆಯಬಹುದು, ಮೂಗಿನ ಒಳಗೆ ಬೆರಳಿಟ್ಟರೆ ನಿಧಿ ಪತ್ತೆಯಾಗಬಹುದು ಎಂದು ಬಲ್ಲ ಮೂಲಗಳು ಒದರಿವೆ.

    ನಿಮ್ಮ ಎರಡನೇ ಪ್ರಶ್ನೆ ಚಿಂತನೆಗೆ ಅರ್ಹವಾಗಿದೆ. ಚಿಂತಿಸುತ್ತೇವೆ. ಚಿಂತೆ ಮಾಡುತ್ತೇವೆ.

    ಪ್ರತ್ಯುತ್ತರಅಳಿಸಿ
  7. ಕುಂಟಿನಿ ಅವರೆ,
    ನಿಮಗೆ ನಮ್ಮ ಬೊಗಳೆಗೆ ಸ್ವಾಗತ. ನೀವು ಬಂದು ಹೋದ ಕುರುಹು ಸಿಕ್ಕಿತು. ಆದರೆ ಏನೋ ತೊಡಕಾಗಿದ್ದರಿಂದ ನಿಮ್ಮ ಕಾಮೆಂಟ್ ಡಿಲೀಟ್ ಆಗಿಹೋಯಿತು. ದಯವಿಟ್ಟು ಕ್ಷಮಿಸಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D