ಬೊಗಳೆ ರಗಳೆ

header ads

ಜೀವವಿಮಾ ದಂಧೆಗೆ ಉಗ್ರರ ಒಲವು

(ಬೊಗಳೂರು ಉಗ್ರರ ಬ್ಯುರೋದಿಂದ)
ಬೊಗಳೂರು, ಮೇ 3- ಕೇಂದ್ರದಲ್ಲಿ ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ತಮಗೆ ಉದ್ಯೋಗಾವಕಾಶಗಳು ಹೆಚ್ಚಾಗತೊಡಗಿರುವ ಬಗ್ಗೆ ಉಗ್ರಗಾಮಿಗಳು, ಭಯೋತ್ಪಾದಕರು ಎಂಬಿತ್ಯಾದಿ ನಾಮವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಅಖಂಡ ಭಾರತ ಭಯೋತ್ಪಾದಕರ ಸಂಘವು ಹರ್ಷ ವ್ಯಕ್ತಪಡಿಸಿದೆ.

ಈಗಾಗಲೇ ಪುರೋಹಿತಶಾಹಿ ವೃತ್ತಿಯೆಂದೇ ಹೇಳಲಾಗುತ್ತಿರುವ (ಮಾರಣ)ಹೋಮ, (ರುಧಿರ)ಅಭಿಷೇಕ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ದೇಶಾದ್ಯಂತ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡುತ್ತಿದ್ದ ಈ ಸಮುದಾಯವು ಹೊಸ ಹೊಸ ಉದ್ಯೋಗ ಸಾಧ್ಯತೆಗಳಿಂದಾಗಿ ಕೇಂದ್ರ ಸರಕಾರವನ್ನು ಅಭಿನಂದಿಸುತ್ತಿದೆ.

ಗುರು ಹತ್ಯೆ ಮಹಾಪಾಪ ಎಂದುಕೊಂಡಿರುವ ಕೇಂದ್ರದ ನೀತಿಯಿಂದಾಗಿ ನಮ್ಮ ಸಮುದಾಯಕ್ಕೆ ಉತ್ತಮ ಪ್ರೋತ್ಸಾಹ ದೊರಕಿದಂತಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡದಿರುವ ಈ ಸಮುದಾಯವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಷೇರು ಮಾರುಕಟ್ಟೆಗಳಲ್ಲಿ ಕೂಡ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಸುದ್ದಿ ಮಾಡಿರುವುದು ಹಳೆಯ ಸುದ್ದಿ ಆಗಿರುವುದರಿಂದ ಅದನ್ನು ಬೊಗಳೆ ರಗಳೆ ಬ್ಯುರೋ ಇಲ್ಲಿ ಮತ್ತೆ ಗಮನಕ್ಕೆ ತರಲು ಇಚ್ಛಿಸುವುದಿಲ್ಲ.

ತೈಲೋದ್ಯಮದಲ್ಲಿ ಭಾಗಿಯಾಗಿರುವ ಮೂಲಕ ವಿಶ್ವಮಾರುಕಟ್ಟೆಗೂ ಕಾಲಿಟ್ಟಿರುವ ಈ ಸಂಘವು, Unರಿಯಲ್ ಎಸ್ಟೇಟ್ ಉದ್ಯಮದಲ್ಲೂ ಕಾಶ್ಮೀರ ಗಡಿಯಲ್ಲಿ ಭಾರತದೊಳಕ್ಕೆ ನುಸುಳುವಂತೆ ಒಳನುಸುಳಿ ಭರ್ಜರಿ ಮುನ್ನಡೆ ಸಾಧಿಸತೊಡಗಿದೆ.
ಈ ಬಗ್ಗೆ ಅಭಾಭಸಂ ಅಧ್ಯಕ್ಷರನ್ನು ಮಾತನಾಡಿಸಲಾಯಿತು. ಬೊಗಳೆ ಎಂದ ಕೂಡಲೇ ಉಗ್ರಗಾಮಿಯೆಂದುಕೊಂಡೇ ಬೆಚ್ಚಿಬಿದ್ದ ಅವರನ್ನು ನಿಮ್ಮ ಮುಂದಿನ ಗುರಿ ಏನು ಎಂದು ಪ್ರಶ್ನಿಸಲಾಯಿತು.

ಅದಕ್ಕೆ ಅವರು ಒಂದೇ ಮಾತಿನಲ್ಲಿ ನೀಡಿದ ಉತ್ತರ : "ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜನರು ಮಾರಣಹೋಮ ಇತ್ಯಾದಿಗಳಿಂದಾಗಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿರುವುದರಿಂದ, ಇನ್ನು ಮುಂದೆ ನಾವು ಜೀವ ವಿಮಾ ಕ್ಷೇತ್ರಕ್ಕೂ ಕಾಲಿಡಲಿದ್ದೇವೆ"!

ಅಭಾಭಸಂದ ಈ ಘೋಷಣೆ ಕೇಳಿದ ತಕ್ಷಣವೇ ವಿಶ್ವಾದ್ಯಂತ ನಿರುದ್ಯೋಗಿಗಳು ಹೊಸ ಉದ್ಯೋಗಾವಕಾಶ ಸೃಷ್ಟಿಯಾದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವುದಾಗಿ ವರದಿಯಾಗಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರದಲ್ಲಿಲ್ಲದ ಸರಕಾರದ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಉಗುರು ಗಾಮಿಗಳಿಗೇಕೆ ಇಂತಹ ಕೆಟ್ಟ ಬಂದಿತೋ ತಿಳಿಯದು. ಅವರಿಗೆ ಬೇಕಾಗಿರೋದು ಹೋಮ, ಹವನ, ಸಂಭಾವನೆ, ರಸಕವಳ. ಅದು ಬಿಟ್ಟು ಜೀವವಿಮೆ ಮಾಡಿಸಿ, ಆ ಕಂಪನಿಗೆ ಹಣ ಕಟ್ಟೋದೇ? ಇವರಿಗೆಲ್ಲೋ ಹುಚ್ಚು ಹಿಡಿದಿದೆ ಅನ್ಸತ್ತೆ.

  ಅದಿರ್ಲಿ, ಈ ಮರಣ ಹೋಮ ಅಂದ್ರೇನು, ಮರಣ ಹೊಂದುವಾಗ ಮಾಡುವ ಹೋಮವೋ ಅಥವಾ ಚಿತೆಗೆ ಬೆಂಕಿ ಹಚ್ಚುವುದೋ? ಈ ಹೋಮ ಮಹಾಪಾಪವಾ? ಮಹಾಪಾಪ ಅಂದ್ರೆ ದೊಡ್ಡ ಮಗು ಎಂಬರ್ಥ ಅಲ್ವಾ?

  ಇಂದಿನ ವರದಿಯಲ್ಲಿ ತುಂಬಾ ಕೊಂಡಿಗಳಿರುವುದರಿಂದ - ಓದಲು ತೊಂದರೆ ಆಗ್ತಿದೆ. ಒಂದು ಕೊಂಡಿಗೆ ತಾಗಿಕೊಂಡರೆ ಮರಳಿ ಬರೋಕ್ಕೇ ಮನಸ್ಸಾಗ್ತಿಲ್ಲ. ಇದಕ್ಕೇನಾದರೂ ಅಪಾಯವಿಲ್ಲದ ಉಪಾಯವನ್ನು ಯೋಚಿಸಿ, ಸೂಚಿಸಿ.

  ಪ್ರತ್ಯುತ್ತರಅಳಿಸಿ
 2. ಭಯೋತ್ಪಾದಕರಿಗೆ ಉದ್ಯೋಗ ಒದಗಿಸಲು ಜೀವವಿಮಾನಿಗಮವು ಹರ್ಷ ವ್ಯಕ್ತಪಡಿಸುತ್ತದೆ. ಸದ್ಯಕ್ಕಿರುವ ನಿಗಮದ ಏಜಂಟರು ಭಯೋತ್ಪಾದಕರಿಗಿಂತ ಹೆಚ್ಚಿನ ಪರಿಣತಿ ಹಾಗು ಅನುಭವ ಹೊಂದಿರುವದರಿಂದ, ಈ ಏಜಂಟರಿಂದಲೇ ಉಗ್ರಗಾಮಿಗಳಿಗೆ ತರಬೇತಿ ಕೊಡಸಲಾಗುವದು.

  ಪ್ರತ್ಯುತ್ತರಅಳಿಸಿ
 3. ಮಾರಣ ಹೋಮ ನಡೆಸಿ, ತೀರ್ಥ ಸೇವನೆಯಲ್ಲಿ ನಿರತರಾಗಿದ್ದ ಪುರೋಹಿತರು ಬೊಗಳೆ ವರದಿಯಿಂದ ಸಿಟ್ಟಿಗೆದ್ದಿದ್ದು , ಸಂಪಾದಕರಿಗೆ ಸದ್ಗತಿ ಕಾಣಿಸಲು ಸಂಚು ಹೂಡಿರುವ ಬಗ್ಗೆ ತಿಳಿದು ಬಂದಿದೆ. ನೀವು ಈ ಕೂಡಲೇ ಅದೃಶ್ಯ ಮಂತ್ರವನ್ನು ೧೧೧ ಬಾರಿ ಪಠಿಸಿ ಮಾಯವಾಗಬೇಕೆಂದು ಆಕಾಶವಾಣಿಯಾಗಿದೆ!

  ಪ್ರತ್ಯುತ್ತರಅಳಿಸಿ
 4. ಶ್ರೀನಿವಾಸರೆ,
  ಜೀವ ತೆಗೆದು ವಿಮೆ ಹಣವನ್ನೆಲ್ಲಾ ಇತರ ಉಗುರುಗಾಮಿ ಚಟುವಟಿಕೆಗೆ ವಿನಿಯೋಗಿಸ್ತಾರೆ.

  ಮಾರಣಹೋಮ ಅಂದ್ರೆ ಮರಣ ಹೊಂದುವ ಮೊದಲೇ ಮಾಡುವ ಹೋಮ ಎಂಬುದು ತಿಳಿದಿಲ್ಲವೇ ನಿಮಗೆ?

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗದೆ. ಆದರೆ ತೀವ್ರ ಹಸಿವಿನಿಂದಾಗಿ ತಲೆ ತಿನ್ನುವ ಈ ಏಜೆಂಟರಿಂದಾಗಿ ಉಗ್ರಗಾಮಿಗಳು ಪಲಾಯನ ಮಾಡತೊಡಗಿದ್ದಾರಂತೆ.

  ಪ್ರತ್ಯುತ್ತರಅಳಿಸಿ
 6. ಶ್ರೀತ್ರೀ ಅವರೆ,
  ಸಿಟ್ಟಿಗೆದ್ದ ಮಾರಣಹೋಮಿಗಳ ಬರುವಿಕೆ ತಡೆಯಲು ಮನೆಬಾಗಿಲಲ್ಲೇ "ಜೀವ ವಿಮಾ ಏಜೆಂಟ್" ಅಂತ ಬೋರ್ಡು ತಗುಲಿಸಿಕೊಳ್ಳಲಾಗುತ್ತದೆ.
  ಆದರೂ ಆಕಾಶದಿಂದ ಬರುವ ವಾಣಿಯನ್ನು ನಮ್ಮ ಭದ್ರತೆಗಾಗಿ ಕಾಪಾಡಲಾಗುತ್ತದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D