ಬೊಗಳೆ ರಗಳೆ

header ads

ಜೀವನ ನಶ್ವರ : ಅವೇಕ್ ಒಬೀರಾಯ

(ಬೊಗಳೂರು ಆಧ್ಯಾತ್ಮಿಕ ಬ್ಯುರೋದಿಂದ)
ಬೊಗಳೂರು, ಏ.21- ಜೀವನವೇ ನಶ್ವರ ಎಂದು ಅವೇಕ್ ಓಬೀರಾಯ ತಿಳಿಸಿದ್ದಾರೆ.

ಈಗೀಗ ಆಜನ್ಮ ಬ್ರಹ್ಮಚಾರಿ ಆಂಜನೇಯ ಸ್ವಾಮಿಯ ಗುಡಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ಮನದಾಳವನ್ನು ಬಿಚ್ಚಿಟ್ಟರು.

ಇತ್ತೀಚೆಗೆ ಎಲ್ಲಾ ಪತ್ರಿಕೆಗಳು, ಸುದ್ದಿ ಚಾನೆಲ್‌ಗಳೂ ಸೇರಿ ಮುಂಬಯಿಯನ್ನೇ ತಮ್ಮ ಮುಖ್ಯಾಲಯವಾಗಿಸಿಕೊಂಡು, ಗಲ್ಲಿ ಗಲ್ಲಿಯಲ್ಲಿ, ಬೀದಿ ಬೀದಿಯಲ್ಲಿ, ಸಂದಿ ಗೊಂದಿಗಳಲ್ಲಿ ವರದಿಗಾರರನ್ನು ಇರಿಸಿ, ವಿಶ್ವದಲ್ಲೇ ಮೊಟ್ಟ ಮೊದಲಬಾರಿಗೆ ನಡೆಯುತ್ತಿರುವ ಐಸ್-ಛೋಟಾ ಬಚ್ಚಾ ವಿವಾಹಕ್ಕೆ ಸಂಬಂಧಿಸಿ ಕ್ಷಣ ಕ್ಷಣದ ರೋಚಕ ಕಥನಗಳನ್ನು ನೀಡುತ್ತಾ ಅದ್ಭುತ ಕವರೇಜ್ ನೀಡತೊಡಗಿರುವ ಹಿನ್ನೆಲೆಯಲ್ಲಿ ಐಸ್ ಮಾಜಿ ಗೆಳೆಯ ಅವೇಕ್... ಅವೇಕ್... ಓಬೀರಾಯರನ್ನು ಬೊಗಳೆ ರಗಳೆ ಬ್ಯುರೋ ಮಾತನಾಡಿಸಿತು.

ಪ್ರತಿಯೊಬ್ಬನೂ ಹುಟ್ಟಲೇ ಬೇಕು, ಹುಟ್ಟಿದವನು ಬೆಳೆಯಲೇ ಬೇಕು, ಬೆಳೆದು ದೊಡ್ಡವರಾದ ಬಳಿಕ ಮದುವೆಯಾಗಲೇಬೇಕು ಎಂದು ಯಾರಿಗೂ ಗೊತ್ತಿಲ್ಲದ ಸಂಗತಿಯನ್ನು ಹೇಳಿದ ಅವರು, ಹುಟ್ಟು ಬದುಕು ಮತ್ತು ಸಾವುಗಳ ನಡುವಣ ಜೀವನ ಯಾವತ್ತಿಗೂ ನಶ್ವರವಾಗಿರುತ್ತದೆ ಎಂದು ತಮ್ಮ ಅನುಭವಜನ್ಯ ಮಾತುಗಳಿಂದ ಗಮನ ಸೆಳೆದರು.

ಐಸ್ ಜತೆಗಿನ ತಮ್ಮ ಮದುವೆಯ ಯೋಜನೆಯನ್ನು ಮುರಿದು ಹಾಕಿದ ನ್ಯೂಸ್ ಚಾನೆಲ್‌ಗಳು, ಇದೀಗ ಅಭಿ ಜತೆಗೆ ಐಸ್ ವಿವಾಹವನ್ನು ಅದ್ದೂರಿಯಾಗಿ ಮಾಡಿಬಿಡುತ್ತಿವೆ. ಇದರೊಂದಿಗೆ ಜಗತ್ತಿಗೇ ಕ್ಷಣಕ್ಷಣದ ಕುತೂಹಲ ಕಥನವನ್ನು ಕಳೆದ ಕೆಲವು ದಿನಗಳಿಂದ ಧಾರಾವಾಹಿ ಮಾದರಿಯಲ್ಲಿ ಪ್ರಸಾರ ಮಾಡುತ್ತಿವೆ ಎಂದು ನುಡಿಯದ ಅವರು, ಆಧ್ಯಾತ್ಮವೊಂದೇ ಶಾಶ್ವತ. ಇಲ್ಲಿ ಸರಸ-ವಿರಸದ ಮಾತೇ ಇಲ್ಲ ಎಂದು ಖಚಿತ ಮಾತುಗಳಲ್ಲಿ ನುಡಿದರು.

"ಮದುವೆ ನಂಬರ್ 1" ಬಗ್ಗೆ ಏನಾದರೂ ಹೇಳಿ ಎಂದು ಬ್ಯುರೋ ಸಿಬ್ಬಂದಿಗಳಲ್ಲಿ ಕೆಲವರು ವಿರಹಿಗಳಂತೆ ಅತ್ತು ಗೋಗರೆದಾಗ ಅವೇಕ್, ಹುಟ್ಟಿದವನು ಮದುವೆಯಾಗಲೇಬೇಕು ಎಂದು ಮನೋಜ್ಞ ಉತ್ತರ ನೀಡಿದರು.

ನೀವು ಮಾಜಿ ಐಸ್ ಕ್ಯೂಬ್‌ಗಳ ಸಂಘಕ್ಕೆ ಅಧ್ಯಕ್ಷರಾಗುತ್ತೀರಾ ಎಂದು ಪ್ರಶ್ನಿಸಿದಾಗ, ಪ್ರತಿಸಲಮಾನ ಕಳೆದುಕೊಳ್ಳುತ್ತಿರುವವರು ಇದ್ದಾರೆ ಎಂದು ಸೂಚ್ಯವಾಗಿ ತಿಳಿಸಿದರು.

ಈ ಮಧ್ಯೆ, ಐಶ್-ಅಭಿ ಮದುವೆಗೆ ಸಲಮಾನಖಾನ ಮತ್ತು ಅವೇಕ್ ಅವರು ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎಂಬ ಕುರಿತಾದ ಸಣ್ಣದೊಂದು ಮಾಹಿತಿಯನ್ನು ಕೇವಲ ಬೊಗಳೆ ರಗಳೆ ಬ್ಯುರೋ ತನ್ನದೇ ಓದುಗರಿಗೆ ಮಾತ್ರ ಒದಗಿಸುತ್ತಿದ್ದು, ಅದು ಇಲ್ಲಿದೆ.

(ಆಂಜನೇಯ ಗುಡಿಯಲ್ಲಿ ಅವೇಕ್ ಓಬೀರಾಯನ ಚಿತ್ರ ನಮ್ಮ ವಿಶೇಷ ಬ್ಯುರೋದಿಂದ ಅಂಚೆಯಲ್ಲಿ ಬರುವಾಗ ತಡವಾಗಿತ್ತು....)

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

  1. ಮಾರುತಿ ಗುಡಿಯ ಗಂಟೆಯನ್ನು ಈಗ ಬಾರಿಸಿದರೆ ಏನು ಪ್ರಯೋಜನ? ಈ ಮೊದಲೇ ಕೇರಳದಲ್ಲಿ ಗೋಲ ಬಾಪಾಲ ಶಾಸ್ತ್ರಿಗಳಿಂದ ಸಹಸ್ರ ಚಂಡಿಕಾ ಯಜ್ಞ ಮಾಡಿಸಿದ್ದರೆ ಐಸ್ ಕ್ಯೂಬ್ ಅವಿವೇಕ ರಾಯನಿಗೇ ಲಭಿಸುತ್ತಿತ್ತು.ಎಲ್ಲಾ ಅವರವರ ಕರ್ಮ!

    ಪ್ರತ್ಯುತ್ತರಅಳಿಸಿ
  2. ಅದರೆ ಮದುವೆ ಗೆಟ್ ಅಪ್‍ನಲ್ಲಿ ಅಭಿ ದೇವದಾಸ ತರ ಗಡ್ಡದಾರಿ ಆಗಿದ್ದು ಯಾಕೇ! ಅ ದೇವದಾಸ್ ಲುಕ್ ಇರಬೇಕಾಗಿದ್ದು ಅಸಲಮಾನ್ ಮತ್ತು ಅವಿವೇಕಿಗೆ ಅಲ್ವೇ?

    ಇರಲಿ..ಜಿಸ್ ಕಾ ಕೋಯಿ ನಹಿ ಹೋತಾ ಉಸ್ಕಾ ಹನುಮಾನ್ ಹೊತಾ ಹೈ..

    ಪ್ರತ್ಯುತ್ತರಅಳಿಸಿ
  3. ಐಸ್ ಮದುವೆ ಮರಿದುಹೋಗಿದ್ದು ಓಬಿರಾಯನ ಕಾಲದ ಸುದ್ದಿ. ಅವಿವೇಕಿಗೆ ಈಗ ವಿವೇಕ ಬಂದಿದ್ದು, ಓಬಿರಾಯ ಹೊಟೆಲ್‍ನಲ್ಲಿರುವ ಉಸ್ ಜೊತೆ ಮದುವೆ ಆಗ ಹೊರಟಿದ್ದಾರಂತೆ. ಅದನ್ನು ವಿರೋಧಿಸಲು ರಂಗಿನ ಅಂಗಿ ಹಾಕಿಕೊಳ್ಳದ ಭಜನೆ ಅಂಗಿ ಪಡೆಯವರು ಮೋರ್ಚಾ ಹೊರಟಿದ್ದಾರಂತೆ.
    ಇದರ ಬಗ್ಗೆ ನಿಮ್ಮ ಬೀರುನವರು ಏನು ಹೇಳ್ತೀರಿ? :D

    ಪ್ರತ್ಯುತ್ತರಅಳಿಸಿ
  4. ಸುನಾಥ್ ಅವರೆ,
    ಅದನ್ನೇ ಅವೇಕ್ ಹೇಳುತ್ತಿದ್ದಾರೆ ಈಗ... ನಾ ಮಾಡಿದಾ ಕರ್ಮ... ಬಲವಂತವಾದರೆ.... ಅಂತ...
    ಬಹುಶಃ ಅವರ ಬಾಯಿಯೇ ಅವರಿಗೆ ಕುತ್ತಾಗಿದ್ದಿರಬಹುದು.

    ಪ್ರತ್ಯುತ್ತರಅಳಿಸಿ
  5. ಶಿವ್ ಅವರೆ,
    ಅಭಿ ಈಗ ಐಸ್ ದೇವಿದಾಸ ಆಗಿಬಿಟ್ಟಿದ್ದಾರಲ್ಲ...

    ಅದಿರಲಿ, ನಿಮ್ಮ ಹೇಳಿಕೆಯಲ್ಲಿ ಸಣ್ಣ ಬದಲಾವಣೆ....
    ಜಿಸ್ಕಾ ಕೋಯಿ ನಹೀ ಹೋತಾ.... ವಹ್ ಬಂದರ್ ಹೋತಾ ಹೈ ಅಥವಾ "ಹೋತ" ಹೋತಾ ಹೈ!

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,
    ಉಸ್ ಜತೆಗಿನ ಸಂಬಂಧವೂ ಟುಸ್ ಆಗಲಿರುವ ಸಾಧ್ಯತೆಯಿರುವುದರಿಂದಲೇ awake ರಾಯರು ಕಾಷಾಯ ವಸ್ತ್ರಧಾರಿಗಳಾಗತೊಡಗಿರಬೇಕು ಅಂತ ನಮ್ಮವರು ಬೀರಿನಿಂದ ಬೀರು ಹೀರುತ್ತಾ ಸೂರು ಕಿತ್ತು ಹೋಗುವಂತೆ ಊರೂರು ಸಾರುತ್ತಿದ್ದಾರೆ.

    ಪ್ರತ್ಯುತ್ತರಅಳಿಸಿ
  7. ಅವೇಕರಿಗೆ ವಿವೇಕ ಬಂದಿದ್ದು ವಿಶ್ವ ಗೋ ಸಮ್ಮೇಳನಕ್ಕೆ ಮುಂಬಯಿಯಿಂದ go ಎಂದು ಹೋಗಿದ್ದಾರೆ. ಅಲ್ಲಿ ಎಲ್ಲ ರೀತಿಯ ಪಾನೀಯಗಳನ್ನು ಪಾನ ಮಾಡಿ ಎಲ್ಲ ಪಾಪಗಳನ್ನು ಕಳೆದು ಆಶ್ ಬೂದಿಯಿಂದ ಪುನ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುತ್ತಾರೆ ಎಂದು ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  8. ಪಬ್ಬಿಗರೇ,
    ಅವೇಕರು ಎಲ್ಲ ರೀತಿಯ ಪಾನೀಯಗಳ ಪಾನ ಮಾಡುವುದರಲ್ಲಿ ನಿಮ್ಮ ಪಬ್ಬಿನ ಕೈವಾಡ ಸುಸ್ಪಷ್ಟವಾಗತೊಡಗಿದೆ ಎಂಬ ವರದಿ ನಿಜವೇ? ashನಿಂದ ಫೀನಿಕ್ಸ್ ಮೇಲೆದ್ದು ಬರುತ್ತಿರುವಾಗ ಅದು ತೂರಾಡುತ್ತಾ ಇರುವುದೇ ಎಂಬ ಶಂಕೆ ದಟ್ಟವಾಗಿದೆ.

    ಪ್ರತ್ಯುತ್ತರಅಳಿಸಿ
  9. ಐಸ್ ಈಗ ಶ್ರೀಮತಿ ಯಾದಳು. ಇನ್ನವಳನ್ನ ಮಿಸೆಸ್ ವರ್ಲ್ಡ್ ಅಂತ ಕರೀಬಹುದು. ವಿವೇಕ್, ಸಲ್ಮಾನ್ ಇನ್ನೂ ಕುವರರಾಗಿಯೇ ಉಳಿದಿದ್ದಾರೆ. ಅವರಿಗೆ ಪೂಜೆಯೊಂದೇ ಗತಿ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D