(ಬೊಗಳೂರು ವೇದನಾ ಬ್ಯುರೋದಿಂದ)
ಬೊಗಳೂರು, ಏ.24- ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ದೇಶವನ್ನು, ದೇಶದ ಬಡ ಜನತೆಯನ್ನು ಪ್ರತಿನಿಧಿಸುತ್ತಾ ಬಂದಿರುವ ತಮಗೆ ಕಡಿಮೆ Rank ದೊರಕಿಸಿಕೊಟ್ಟಿರುವುದರ ವಿರುದ್ಧ ತೀವ್ರವಾಗಿ ಕೆಂಡ ಕಾರಿರುವ "ಕಂಸ"ದರು, ಈ ಕುರಿತು ಸಮೀಕ್ಷೆ ನಡೆಸಿದ ಮಾಧ್ಯಮಗಳ ವಿರುದ್ಧ ಯದ್ವಾ ತದ್ವಾ ಕಿಡಿ ಕಾರಿದ್ದಾರೆ. ಮಾತ್ರವಲ್ಲದೆ ಕ್ರಿಮಿನಲ್‌ಗಳ ಸಂಖ್ಯೆಯನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ತೋರಿಸಿರುವುದರಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅರ್ಧ ಸಹಸ್ರಕ್ಕೂ ಹೆಚ್ಚು ಸದಸ್ಯರಿರುವ 14ನೇ ಲೋಕಸಭೆಯಲ್ಲಿ ಕೇವಲ 136 ಮಂದಿ ಮಾತ್ರ ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ಬೊಗಳೆ ರಗಳೆಗೆ ತೀವ್ರ ಪೈಪೋಟಿಯೊಡ್ಡುತ್ತಿರುವ ಪತ್ರಿಕೆಯು ಇಲ್ಲಿ ವರದಿ ಮಾಡಿತ್ತು.

ಇದರಿಂದ ಕೋಪಾವಿಷ್ಟರಾಗಿರುವ ಸಂಸದರು, ತಮ್ಮ ಇದ್ದ ಮರ್ಯಾದೆ ತೆಗೆಯಲೆಂದೇ ಇಷ್ಟು ಕ್ಷುಲ್ಲಕ ಲೆಕ್ಕಾಚಾರದಲ್ಲಿ ನಮ್ಮನ್ನು ಅಳೆಯಲಾಗುತ್ತದೆ. ಸಂಸತ್ತಿನಲ್ಲಿ ಕೇವಲ 25 ಶೇಕಡಾ ಮಂದಿಗೆ ಮಾತ್ರ ಕ್ರಿಮಿನಲ್ ಎಂಬ ಕಿರೀಟ ಇದೆ ಎಂಬುದು ಶುದ್ಧ ಸುಳ್ಳು. ಕನಿಷ್ಠ ಪಕ್ಷ ಈ ಶೇಕಡಾವಾರು ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಪ್ರಕಟಿಸಬಹುದಿತ್ತಲ್ಲಾ... ಈ ಕಿರೀಟ ಪಡೆದುಕೊಳ್ಳಲು ನಾವು ಮಾಡಿರುವ ಶ್ರಮ ಎಲ್ಲಾ ನಿರರ್ಥಕವಾಯಿತಲ್ಲಾ ಎಂದು ಗಳಗಳನೆ ಕೂಗಾಡಿದ್ದಾರೆ.

ಇಷ್ಟು ಸಣ್ಣ ಸಂಖ್ಯೆ ತೋರಿಸಿ ತಮ್ಮನ್ನು ಕೀಳಂದಾಜು ಮಾಡಿರುವ ಪತ್ರಕರ್ತರು ಮತ್ತು ಈ ವರದಿ ತಯಾರಿಸಿರುವ ಬ್ಯುರೋದ ಮಂದಿಗೆ ತಕ್ಕ ಶಾಸ್ತಿ ಮಾಡಿಯಾದರೂ, ತೋಳ್ಬಲದ ಮೂಲಕವೇ ಈ ಕ್ರಿಮಿನಲ್ ಸಂಸದರ ಸಂಖ್ಯಾಬಲವನ್ನು ಹೆಚ್ಚಿಸಲಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ತೀವ್ರ ಇಚ್ಛೆ ವ್ಯಕ್ತಪಡಿಸಿರುವ ಸಂಸದರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಡಳಿತಾಮೂಢ ಪಕ್ಷದ ಸದಸ್ಯರೊಬ್ಬರು, ಇದು ಬಹುಶಃ ವರದಿಗಾರರ ಕೈತಪ್ಪಿನಿಂದ ಪ್ರಕಟವಾಗಿರಬೇಕು. ವಾಸ್ತವವಾಗಿ ಅದು ಮಂತ್ರಿ ಮಂಡಲದಲ್ಲಿರುವ ಸಂಸದರ ಸಂಖ್ಯೆಯಾಗಿರಬಹುದೇನೋ ಎಂದು ಶಂಕೆಯಿಂದಲೇ ಕೇಳಿದ್ದಾರೆ.

ಒಂದು ನಿಮಿಷದೊಳಗೆ ಸ್ಪಷ್ಟನೆ ಪ್ರಕಟಿಸದಿದ್ದರೆ ಶೇ.25 ಎಂಬ ಸಂಖ್ಯೆಯನ್ನು ಶೇ.100 ಆಗಿಸುವಂತಾಗಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತದೆ ಎಂದೂ ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ನ ಬಾಹು-ಬಲರು ಘೋಷಿಸಿದ್ದಾರೆ.

ನಾವು ಗಿನ್ನೆಸ್ ದಾಖಲೆ ಮಾಡಲು ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೇವೆ. ಭಾರತಕ್ಕೆ ಭ್ರಷ್ಟಾಚಾರದಲ್ಲಿ ನಂ.1 ಎಂಬ ಹೆಗ್ಗಳಿಕೆ ದೊರಕಿಸಲು ಪ್ರಯತ್ನಿಸಿದ್ದೇವೆ. ಇದ್ದ ಬದ್ದ ಎಲ್ಲಾ ಮೂಲೆ ಮೂಲೆಯಲ್ಲೂ ಭ್ರಷ್ಟಾಚಾರ ಮಾಡಲು ಹವಣಿಸಿದ್ದೇವೆ. ಆದರೂ ಇಷ್ಟು ಕಡಿಮೆ ಸಂಖ್ಯೆಯ ಮೊತ್ತ ದೊರಕಿರುವುದು ಭಾರತವು ವಿಶ್ವ ಕಪ್ ಕ್ರಿಕೆಟ್ ಆಡಿದಂತಾಯಿತಲ್ಲಾ ಎಂದು ಅವರು ಹಲುಬಿದ್ದಾರೆ.

6 Comments

ಏನಾದ್ರೂ ಹೇಳ್ರಪಾ :-D

 1. ಬೊಗಳೆ ಬ್ಯೂರೋವಿನ sting operationದಲ್ಲಿ ಸಿಕ್ಕ ಕಂಸದರ ಸಂಖ್ಯೆ ೧೩೬ ಎಂದೂ, ಈ operation ಮುಂದುವರೆದಂತೆ, ಎಲ್ಲಾ ೫೨೬(?) ಸದಸ್ಯರಿಗೂ ಪ್ರಮಾಣಪತ್ರ ಸಿಗುವದಾಗಿಯೂ ನಂಬಿದ್ದೇನೆ. ದಯವಿಟ್ಟು ಕಂಸದರನ್ನೂ ಹಾಗು ಅವರನ್ನೇ ನಂಬಿರುವ ಜನತೆಯನ್ನೂ ನಿರಾಶಗೊಳಿಸಬೇಡಿ.

  ReplyDelete
 2. ಗಿನ್ನೆಸ್ ದಾಖಲೆಯ ಸಂಸ್ಥೆಯವರಿಗೇ ಸ್ವಲ್ಪ ಕೈ ಬೆಚ್ಚಗೆ ಮಾಡಿದ್ರಾಯ್ತು. ಇದೇನು ಹೊಸ ವಿಷಯವೇ? ನಮ್ಮ ಕಂಸದರು ಯಾವಾಗ್ಲೂ ಕಂಸಗಳಲ್ಲೇ [ ] ಅಡಗಿಕೊಂಡಿರುವುದರಿಂದ ವಿಷಯ ಇತರರಿಗೆ ಸುಲಭವಾಗಿ ತಿಳಿಯುವುದಿಲ್ಲ.

  ಅಯ್ಯೋ! ನಾನೂ ಒಬ್ಬ ಕಂಸದರ ಎಂದು ಹೇಳಿಕೊಂಡುಬಿಟ್ನೇ - ಅನ್ವೇಷಿಗಳ ನನ್ನ ಹಿಂದೆ ಬರ್ಬೇಡಿ - ಬಿಟ್ಬಿಡಿ ಪ್ಲೀಸ್ - ಬೇಕಿದ್ರೆ ನಿಮಗೂ ಸ್ವಲ್ಪ ...

  ReplyDelete
 3. ಸುನಾಥರೆ,
  ನಮ್ಮ ಸ್ಟಿಂಗ್ ಆಪ-ರೇಶನ್‌ಗೆ ಕಂಸದರೆಲ್ಲಾ ಸೇರಿ ಒಂದೊಂದು ರೇಶನ್ ಕಾರ್ಡ್ ಕೊಡಿಸಿದ್ದಾರೆ ಎಂಬುದನ್ನು ನಾವು ಯಾರಿಗೂ ಹೇಳದಿರಲು ನಿರ್ಧರಿಸಿದ್ದೇವೆ.

  ಏನೇ ಆಗಲಿ, ಎಲ್ಲ ಕಂಸದರಿಗೂ ಕ್ರಿಮಿನಲ್ ಪ್ರಮಾಣ ಪತ್ರ ಕೊಡಿಸಿಯೇ ಸಿದ್ಧ ಎಂದು ನಮ್ಮ ಬ್ಯುರೋದ ಯಾವುದೋ ಮೂಲೆಯಿಂದ ಪ್ರತಿಜ್ಞೆಯೊಂದು ಕೇಳಿ ಬಂದಿದೆ. ಎಲ್ಲಿಂದ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

  ReplyDelete
 4. ಶ್ರೀನಿವಾಸರೆ,
  ನೀವು ಕಂಸದೊಳಗೆ ಅಡಗಿದ್ದಾಗ ಮಾಡಿದ್ದೆಲ್ಲಾ ಹಂತ ಹಂತವಾಗಿ ಹೊರ ಬೀಳುತ್ತದೆ. ಒಮ್ಮೆಗೇ ವರದಿ ಪ್ರಕಟಿಸುವುದಿಲ್ಲ ಎಂದು ಅಭಯದಾನ ಮಾಡುತ್ತಿದ್ದೇವೆ. ಆದರೂ ಕೊಡೋದು ಕೊಟ್ಬಿಡಿ ಅಂತಾನೂ ಒಂದು ವಾಕ್ಯ ಸೇರಿಸಿಬಿಡುತ್ತೇವೆ.

  ReplyDelete
 5. ಅವನೇರೋ ನೋಡ್ರೀ ಬೇರೆ ಹೆಂಗಸನ್ನ ತನ್ನ ಪತ್ನಿಯ ಪಾಸಪೋರ್ಟ್ನ್ನಲ್ಲಿ ಕರಕೊಂಡು ಹೋಗೋಕೆ ಹೋಗಿದ್ದನಂತೆ..ಛೇ ಛೇ..ಸ್ಪಲ್ಪನಾದರೂ ಕಲಿಯಬಾರದ ಲಾಲುಜಿ-ಮಯಾವತಿಜಿ ಅವರಂತ ಸೀನಿಯರ್ಸಿಂದ..

  ReplyDelete
 6. ಶಿವ್ ಅವರೆ,
  ಇನ್ನು ವಿದೇಶಕ್ಕೆ ಹೋಗೋರನ್ನೆಲ್ಲಾ ಸರಿಯಾಗಿಯೇ ಚೆಕಪ್ ಮಾಡಬೇಕಾದ ಅನಿವಾರ್ಯತೆ ಬಂದುಬಿಡ್ತಲ್ಲಾ....

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post