Subscribe Us

ಜಾಹೀರಾತು
header ads

ಗಂಡಸರಿಗೆ ಹೆರಿಗೆ ರಜೆ: ಹೆಂಗಸರಿಗೆ ಶಂಕೆ

(ಬೊಗಳೂರು ರಜೆ ಬ್ಯುರೋದಿಂದ)
ಬೊಗಳೂರು, ಏ.18- ದೇಶಾದ್ಯಂತ ಸರಕಾರಿ ಕಚೇರಿಗಳಲ್ಲಿ ಈಗಾಗಲೇ ಧೂಳು ತಿನ್ನುತ್ತಿರುವ ಫೈಲುಗಳ ಸಾಲಿಗೆ ಮತ್ತಷ್ಟು ಫೈಲುಗಳು ಸೇರ್ಪಡೆಯಾಗತೊಡಗಿದ್ದು, ಅವುಗಳನ್ನು ಇರಿಸುವುದೆಲ್ಲಿ ಎಂಬ ಬಗ್ಗೆ ಸರಕಾರಿ ಅಧಿಕಾರಿಗಳು ತೀವ್ರವಾಗಿ ತಲೆಕೆಡಿಸಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಗಂಡಸರಿಗೆ ಕೂಡ ಹೆರಿಗೆ ರಜೆ ದೊರೆತಿರುವುದೇ ಆಗಿದೆ.

ಈ ಅಸತ್ಯದ ಬೆನ್ನ ಹಿಂದೆ ಬಿದ್ದ ಬೊಗಳೆ ರಗಳೆ ಬ್ಯುರೋ, ಸರಕಾರವು ಇಬ್ಬರು ಮಕ್ಕಳಿದ್ದವರಿಗೆ ಮಾತ್ರವೇ ಈ ರಜೆ ನೀಡುವುದಾಗಿ ಪ್ರಕಟಿಸಿದ್ದರೂ ಕೂಡ ಸಾಕಷ್ಟು ಮಂದಿ ರಜೆಯಲ್ಲಿ ತೆರಳಲಾರಂಭಿಸಿದ್ದೇಕೆ ಎಂಬುದರ ಕುರಿತು some-ಶೋಧನೆ ನಡೆಸಿತು.

ಅದರ ಫಲವಾಗಿ ಈ ವರದಿ ಹೊರಬಿದ್ದಿದೆ. ಕೆಲಸದ ದಿನಗಳಲ್ಲೂ ರಜೆಯ ಮಜಾ ಅನುಭವಿಸುತ್ತಿದ್ದರೂ, ಪುಕ್ಕಟೆ ರಜೆ ಸಿಗುತ್ತದೆ ಎಂಬ ಕಾರಣಕ್ಕೆ, ಮಕ್ಕಳಿಲ್ಲದವರೆಲ್ಲರೂ ಮಕ್ಕಳು ಮಾಡಲು ಹೊರಟಿದ್ದಾರೆ ಮತ್ತು ಒಂದು ಮಗುವಿದ್ದವರು ಎರಡನೇ ಮಗುವಿಗೂ ತಯಾರಿ ನಡೆಸುತ್ತಿದ್ದಾರೆ ಎಂಬ (ಜನಸಂಖ್ಯಾ) ಸ್ಫೋಟಕ ವರದಿಯನ್ನು ಬೊಗಳೆ ರಗಳೆ ಬ್ಯುರೋ ಹೊರಗೆಡಹಿದೆ.

ಸರಕಾರವು ಇಬ್ಬರು ಮಕ್ಕಳಿಗೇ ತಮ್ಮನ್ನು ಸೀಮಿತಗೊಳಿಸಿದವರಿಗೆ ಮಾತ್ರ ರಜೆ ನೀಡಲು ನಿರ್ಧರಿಸಿದೆಯಾದರೂ, ಸರಕಾರಿ ನೌಕರರು ಮಾತ್ರ ಹಲವಾರು ಮಕ್ಕಳನ್ನು ಎರಡನೇ ಮಗುವಾಗಿ ಪರಿಗಣಿಸಿ ರಜೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿರುವುದು ಹೊಸ ಬೆಳವಣಿಗೆ.

ಮತ್ತೊಂದು ಕಡೆಯಿಂದ, ಈ ತೀರ್ಮಾನದ ವಿರುದ್ಧ ಹೆಂಡಂದಿರು ಕೂಡ ದಂಗೆಯೇಳುವ ಲಕ್ಷಣಗಳು ಭರ್ಜರಿಯಾಗಿ ಗೋಚರಿಸತೊಡಗಿವೆ. ತಮ್ಮ ಗಂಡಂದಿರು ತಮಗೇ ತಿಳಿಯದಂತೆ ಹೆರಿಗೆ ರಜೆ ಪಡೆದು ಎಲ್ಲಿಗೋ ತೆರಳುತ್ತಿರುವುದನ್ನು ತಿಳಿದ ಅಖಿಲ ಭಾರತ ಹೆಂಡಂದಿರ ಸಂಘವು, ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಹಿಂದೆ ಏನೋ ನಡೆಯುತ್ತಿದ್ದು, ಗಂಡಂದಿರಿಗೆ ರಜೆ ನೀಡಲು ಅವರವರ ಹೆಂಡಂದಿರಿಂದ ಮಾನ್ಯತಾ ಪತ್ರ ಕಡ್ಡಾಯಗೊಳಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಒಂದು ಹೆರಿಗೆಗೆ 15 ದಿನ ರಜೆ ದೊರೆಯುವುದರಿಂದ ಕೆಲವು ಮಂದಿಯಂತೂ, ಪ್ರತಿ ಹದಿನೈದು ದಿನಕ್ಕೊಮ್ಮೆ ಅರ್ಜಿ ಗುಜರಾಯಿಸತೊಡಗಿದ್ದು, ಸರಕಾರಿ ಕಚೇರಿಯ ಕೆಲಸದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿವೆ ಎಂದು ತಿಳಿದುಬಂದಿದೆ. ಅವರ ಹೆಂಡಂದಿರಂತೂ ಗಂಡಂದಿರು ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ತಿಳಿಯದೆ ಕಂಗಾಲಾಗತೊಡಗಿದ್ದಾರೆ.

ಇದೂ ಅಲ್ಲದೆ, ಸರಕಾರವು ತಮ್ಮ ಸ್ವಂತ ಮಕ್ಕಳ ಹೆರಿಗೆಗಾಗಿ ಮಾತ್ರ ರಜೆ ನೀಡಲಾಗುತ್ತದೆ ಎಂಬುದನ್ನೇನೂ ಕಡ್ಡಾಯಗೊಳಿಸಿಲ್ಲದಿರುವುದು ಕೂಡ ಹೆಂಡಂದಿರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕಾಗಿ ತಮ್ಮದೇ ಗಂಡಂದಿರ ವಿರುದ್ಧ ಹದ್ದಿನ ಕಣ್ಣಿಡಲು ಅವರು ತೀರ್ಮಾನಿಸಿದ್ದಾರೆ ಮತ್ತು ರಜಾ ಅರ್ಜಿ ವಜಾ ಮಾಡಲು ಸರಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ ಎಂದು ತಿಳಿದುಬಂದಿದ್ದು, ಈ ಕಾಯಿದೆಯನ್ನು ಸ್ತ್ರೀ ದೌರ್ಜನ್ಯ ಎಂದು ಪರಿಗಣಿಸಿ ಪ್ರತಿಭಟಿಸಲು ಮುಂದಾಗಿದ್ದಾರೆ.

ಮತ್ತೊಂದೆಡೆಯಿಂದ ಗಂಡಸರೂ ಕೂಡ ಪ್ರತಿಭಟನೆಗೆ ಇಳಿಯತೊಡಗಿದ್ದಾರೆ. ಇದಕ್ಕೆ ಕಾರಣ ಸ್ತ್ರೀ ಸಮಾನತೆಯ ಬಗ್ಗೆ ಇಷ್ಟೆಲ್ಲಾ ಚರ್ಚೆಯಾಗುತ್ತಿದ್ದರೂ, ಗಂಡಸರಿಗೆ 15 ದಿನ ಮಾತ್ರ ಘೋಷಿಸಲಾಗಿದೆ. ಆದರೆ ಹೆಂಗಸರಿಗೆ 90 ಇದ್ದ ರಜೆಯನ್ನು 135ಕ್ಕೆ ಏರಿಸಿ ಅನ್ಯಾಯ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲೂ ಸಮಾನತೆ ಬೇಕು, ನಮಗೂ ಹೆಚ್ಚು ರಜೆ ಬೇಕು ಎಂದವರು ಒತ್ತಾಯಿಸಲು ಆರಂಭಿಸಿದ್ದಾರೆ.

Post a Comment

8 Comments

 1. ತಮ್ಮ ತಮ್ಮ ಹೆಂಡತಿಯ ಕೈಯಿಂದ ಸಹಿ ಹಾಕಿದ ಅನುಮತಿ ಪತ್ರ ತಂದವರಿಗೆ ಮಾತ್ರ " ರಜೆ" ಅಂತ ಹೇಳಿದ್ದಿದ್ರೆ ಸರಿ ಆಗ್ತಾ ಇತ್ತು!!!

  ReplyDelete
 2. ಗಂಡಸರ ಹೆರಿಗೆಗೆ ರಜೆ ಕೊಟ್ರೆ ಹೆಂಗಸರಿಗೇಕೆ ಆಮಶಂಕೆ ಅನ್ನೋದೇ ತಿಳಿಯುತ್ತಿಲ್ಲ.

  ReplyDelete
 3. 'ಧರ್ಮಪತ್ನಿ’ ಎನ್ನುವ ಪದವನ್ನು ಹೆರಿಗೆ ರಜೆ ಕಾನೂನಿನಲ್ಲಿ ಉಪಯೋಗಿಸಿಲ್ಲ. ದಯವಿಟ್ಟು ಗಮನಿಸಬೇಕು.

  ReplyDelete
 4. ಈ ಹೆರಿಗೆ ರಜೆ ಕೊಡ್ತಿರೋದು ಲಾಲು ನಾಡಿನಲ್ಲಿ !
  ಎನಾದರೂ ರೂಲ್ ಉಪಯೋಗಿಸಿ ಲಾಲು ಎನಾದರೂ ಇದಕ್ಕೆ ಅರ್ಜಿ ಹಾಕಿದರೆ..ಎಷ್ಟು ದಿವಸ ರಜೆ ಸಿಗ್ತಾ ಇತ್ತು ಅಲ್ವಾ !!

  ಅಂದಾಗೆ ಗಂಡ-ಹೆಂಡತಿ ಇಬ್ಬರೂ ನೌಕರರಾಗಿದ್ದರೆ..ಆವಾಗ ೪ ಹೆರಿಗೆಗಳ ರಜೆ ಪಡೆಯಬಹುದಲ್ವಾ :)

  ReplyDelete
 5. ಅನಾನಿಮಸ್ಗಿರಿಯವರೆ
  ಓಹ್... ನೀವು ರಜೆ ಕೊಡಿಸದೇ ಇರೋದು ಹೇಗೆ ಅಂತ ಪ್ಲಾನ್ ಮಾಡ್ತಾ ಇದ್ದೀರಿ!!!!

  ReplyDelete
 6. ಶ್ರೀನಿವಾಸರೆ
  ಏನೂ ಗೊತ್ತಿಲ್ಲದವರನ್ನು, ಪಾಪದವರನ್ನು, ಯಾವುದೇ ತಂಟೆ ತಕರಾರು ಮಾಡದೆ ವಿಧೇಯರಾಗಿರುವವರನ್ನು ನಮ್ಮ ಶಾಲೆಯಲ್ಲಿ ಗಾಂಧಿ ಎಂದು ಕರೀತಾ ಇದ್ರು!!!

  ReplyDelete
 7. ಸುನಾಥ್ ಅವರೆ,
  ಅದಕ್ಕಾಗಿಯೇ 'ಧರ್ಮಪತ್ನಿ'ಯ ಮೊದಲು 'ಅ' ಸೇರಿಸಲು ಮತ್ತು ಅದನ್ನು ಅಳಿಸಿಹಾಕಲು ಅವಕಾಶ ಮಾಡಿಕೊಡಲಾಗಿದೆ.

  ReplyDelete
 8. ಶಿವ್ ಅವರೆ,
  ಇದು ಲಾಲು ನಾಡಿನಲ್ಲಾಗಿರೋದ್ರಿಂದ, ಸರಕಾರಿ ನೌಕರರು ಹಿಡಿಶಾಪ ಹಾಕ್ತಾ ಇರೋದು ಯಾಕಂದ್ರೆ,,, ಈಗಾಗಲೇ ನಾವು 365 ದಿನಾನೂ ಅದು ಇದು ಅಂತ ರಜಾ ಹಾಕ್ತಿದೀವಿ,,, ಈ 15 extra ರಜೆಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದೇ ತಿಳೀತಾ ಇಲ್ಲ ಅಂತ ಗೋಗರೀತಾ ಇದ್ದಾರೆ ಕಣ್ರೀ....

  ReplyDelete

ಏನಾದ್ರೂ ಹೇಳ್ರಪಾ :-D