ಬೊಗಳೆ ರಗಳೆ

header ads

ಅಮೆರಿಕದ ಸಾಲ ಮನ್ನಾ: ಭಾರತ ಯೋಜನೆ

(ಬೊಗಳೂರು ಲಾಸ್ ಮನ್ನಾ ಬ್ಯುರೋದಿಂದ)
ಬೊಗಳೂರು, ಏ.17- ಮೀಸಲಾತಿ ಎಂಬ ಧನಂ-ಜಯ ಜಪ ಆರಂಭಿಸಿರುವ ಭಾರತದ ಮಾವನ ಸಂಪನ್ಮೂಲ ಅಭಿವೃದ್ಧಿ ಸಚಿವ ದುರ್ಜನ್ ಸಿಂಗ್ ಅವರಿಂದಾಗಿ ಭಾರತದಲ್ಲಿ ಸಿಕ್ಕಾಪಟ್ಟೆ ಸಂಪನ್ಮೂಲ ಅಭಿವೃದ್ಧಿಯಾಗುತ್ತಿರುವುದರಿಂದ ಕ್ಯೂಬಾಕ್ಕೆ ನೀಡಿರುವ 62 ದಶಲಕ್ಷ ಡಾಲರ್ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಿರುವುದಾಗಿ ಘೋಷಿಸಲಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರದಿಂದ ತೀವ್ರ ಸಂತಸಗೊಂಡಿರುವ ದೇಶದ ರೈತರು, ಒಂದಲ್ಲ ಒಂದು ದಿನ ತಮ್ಮ ಸಾಲವನ್ನೂ ಕೇಂದ್ರ ಸರಕಾರ ಮನ್ನಾ ಮಾಡುತ್ತದೆ ಎಂಬ ಆಶಾಭಾವನೆಯಿಂದ ಈ ಕ್ರಮವನ್ನು ಮನೆತುಂಬಿದ ಸಾಲದಿಂದ ಸ್ವಾಗತಿಸಿದ್ದಾರೆ.

ದೇಶದಲ್ಲಿನ ಪ್ರಜೆಗಳು ಹೇಗೂ ಹಣ ನೀಡುತ್ತಿದ್ದಾರೆ. ಈಗಾಗಲೇ ತಿನ್ನಬಹುದಾದಂತಹ ವಸ್ತುಗಳ ಬೆಲೆಯು ಕೈಗೆ ಸಿಗದಷ್ಟು ಮೇಲಕ್ಕೇರಿದೆ. ಯಾರ ಕೈಗೂ ಸಿಗದಂತೆ ಬೆಲೆಯನ್ನು ಉಡಾವಣೆ ಮಾಡಿರುವುದರಿಂದ ದೇಶದ ಆರ್ಥಿಕತೆ ಪ್ರಬಲವಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಹೆಚ್ಚು ಹೆಚ್ಚು ಆದಾಯ ಬರುತ್ತಿದೆ. ಹೀಗಾಗಿ ಪುಟ್ಟ ರಾಷ್ಟ್ರ ಕ್ಯೂಬಾಕ್ಕೆ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದಿರುವ ಕೇಂದ್ರ ಸರಕಾರ, ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿದಲ್ಲಿ ನಾವು ಭವಿಷ್ಯದಲ್ಲಿ ಅಮೆರಿಕದ ಸಾಲವನ್ನೂ ಮನ್ನಾ ಮಾಡಲು ಶಕ್ತರಾಗಲಿದ್ದೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಸಾಲು ಸಾಲು ಸಾಲ ಮನ್ನಾದಿಂದ ನಮಗೇನೂ ಲಾಸು ಆಗದು ಎಂದು ತಿಳಿಸಿರುವ ಅವರು, ನಾವು ಕ್ಯೂಬಾಕ್ಕೆ ಸಾಲ ಮನ್ನಾ ಮಾಡುವುದು ಕೇವಲ 62 ಲಕ್ಷ ಡಾಲರ್ ಮಾತ್ರ, ಆದರೆ ದೇಶದ ರೈತರ ಸಾಲ ಮನ್ನಾ ಮಾಡಬೇಕಿದ್ದರೆ ನೂರಾರು ಕೋಟಿ ರೂಪಾಯಿ ಬಿಚ್ಚಬೇಕಾಗುತ್ತದೆ. ಹಾಗಾಗಿ ಅತ್ಯಂತ ಕಡಿಮೆಯಲ್ಲಿ ಯಾವುದು ಮನ್ನಾ ಆಗುತ್ತದೋ ಅದರಿಂದಲೇ ನಾವು ಆರಂಭಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಆಹಾ ! ಮನಸ್ಸು ತುಂಬಿ ಬರ್ತಾ ಇದೆ..
  ಎಷ್ಟು ದಿವಸದಿಂದ ನಮ್ಮದು developing ದೇಶ ಅಂತಾ ಓದಿ ಓದಿ ಬೇಜಾರಾಗಿಬಿಟ್ಟಿತು..
  ಈಗಲಾದರೂ ನಾವೂ ಸಾಲಮನ್ನ ಮಾಡೋ ಮಟ್ಟ ಮುಟ್ಟಿದಿವಿ..ಇನ್ಮೇಲಾದರೂ ನಮ್ಮದು developed ದೇಶ..

  ಯಾರರೀ ಅದು..ದೇಶದಲ್ಲಿ ಎಷ್ಟೋ ಜನಕ್ಕೆ ತಿನ್ನೋಕೇ ಒಂದೊತ್ತಿನ ಊಟ ಇಲ್ಲಾ ಅಂತಿರೋದು..ಯಾರ್ರೀ ರೈತರು ಆತ್ಮಹತ್ಯೆ ಅಂತಿರೋದು..ಹಾಕ್ರೀ ಹೊರಗೆ ಅವರನ್ನ..

  ಪ್ರತ್ಯುತ್ತರಅಳಿಸಿ
 2. ಕ್ಯೂಬಾಕ್ಕೆ ಸಾಲ ಮನ್ನಾ ಮಾಡೋರು ಗೂಬಾಗಳು. ಸಾಲ ಮಾಡಿದವನು ಉತ್ತಮ - ಸಾಲ ಕೊಟ್ಟೋನು ಅಧಮ. ಸಾಲ ಮಾಡಿ ಮಜ ಮಾಡಿದ್ರೇನೇ ಬುದ್ಧಿವಂತ ಅಂತ ಅನ್ನಿಸ್ಕೊಳ್ಳೋದು. ಇದು ನನ್ನ ಸ್ನೇಹಿತನ ಉವಾಚ. ನನಗೇನೂ ಗೊತ್ತಿಲ್ರೀ - ಬಿಟ್ಬಿಡ್ರೀ! ನಾನು ನಿಮ್ಮ ಹತ್ರ ಸಾಲ ಇಸ್ಕಳಲ್ಲ, ಇಸ್ಕೊಂಡಿರೋ ಸಾಲ ವಾಪಸ್ಸು ಕೊಡೋಲ್ಲ. ಕೊಟ್ರೆ ನಾ ಕೋಡಂಗಿ ಆಗ್ತೀನಂತೆ.

  ಅಂದ ಹಾಗೆ ಬಿಟ್ಟಿ ಸಾಲ ಎಲ್ಲಿ ಕೊಡ್ತಿದ್ದಾರೆ - ಒಂದು ಕೋಟಿ ಕೊಡಿಸ್ಕೊಟ್ರೆ - ನಿಮಗೆ ಶೇಕಡಾ ೨೫ ಕೊಡುವೆ. ಯಾರಿಗೂ ಹೇಳ್ಬೇಡಿ, ಈ ವಿಷಯ ನಮ್ಮಿಬ್ಬರಲ್ಲೇ ಇರಲಿ.

  ಪ್ರತ್ಯುತ್ತರಅಳಿಸಿ
 3. ಒಬ್ಬ ಭಿಕ್ಷುಕ ಮತ್ತೊಬ್ಬ ಭಿಕ್ಷುಕನ ಸಾಲ ಮನ್ನಾ ಮಾಡಿದನಂತೆ!
  ಅಲ್ಲದೆ ಕ್ಯೂಬಾದಿಂದ ಸಾಲ ವಸೂಲಿ ಮಾಡೋದಾದರು ಹ್ಯಾಗೆ?
  ಸಾಲ ಮನ್ನಾ ಮಾಡಿ ಕಿರೀಟ ಹಾಕ್ಕೋ ಬಹುದು.

  ಪ್ರತ್ಯುತ್ತರಅಳಿಸಿ
 4. @ ಶಿವ್,
  ನಿಜಕ್ಕೂ ನಮ್ ದೇಶ ಎಷ್ಟೊಂದು ಅಭಿವೃದ್ಧಿಯಾಗಿದೆ ಅಂತ ಸಂತೋಷವಾಗ್ತಾ ಇದೆ. ಏನೇ ಕೊಳ್ಳಬೇಕಿದ್ರೂ ಕನಿಷ್ಠ 100 ರೂಪಾಯಿ ಅಂದರೆ ಸರಿಸುಮಾರು ಎರಡೂಕಾಲು ಡಾಲರ್ ವ್ಯಯ ಮಾಡ್ಬೇಕಾಗುತ್ತದೆ. ಅಂದ್ರೆ ನಮ್ ಜನಗಳ ಜೀವನದ ಮಟ್ಟ ಸುಧಾರಿಸಿದೆ ಎಂದಾಯಿತಲ್ಲಾ!

  ಪ್ರತ್ಯುತ್ತರಅಳಿಸಿ
 5. @ ಶ್ರೀನಿವಾಸ್,
  ಇಸ್ಕೊಂಡಿರೋ ಸಾಲ ವಾಪಸ್ ಕೊಟ್ರೆ ಕೋಡಂಗಿ ಅಂತ ಹೇಳಿಯೂ ನೀವು ನಮಗೆ ಶೇ.25 ಕೊಡಲು ಹೊರಟಿರುವುದು ಯಾವ ನ್ಯಾಯ????

  ನೀವು ಸಾಲ ಮಾಡಿ ಮಜಾ ಮಾಡಲು ಹೊರಟಿದ್ದೀರಿ ಅಂತ ಗುಸುಗುಸು ಹಬ್ಬಿರುವಾಗ ಈ ರೀತಿ ಓಪನ್ ಆಗಿ ಸಾಲ ಕೇಳೋದು ಸರಿಯಲ್ಲ. ಬಿಟ್ಟಿ ಸಾಲ ನಾವೇ ಕೊಡುತ್ತೇವೆ. ಶೇ.100 ಬಡ್ಡಿ ಮಾತ್ರ.

  ಪ್ರತ್ಯುತ್ತರಅಳಿಸಿ
 6. @ ಸುನಾಥ್,
  ಭಿಕ್ಷುಕರು ಸಾಲ ಮನ್ನಾ ಮಾಡಿಕೊಂಡು ವಿಶ್ವ ದಾಖಲೆ ಮಾಡಿ ಹೆಸರು ಗಳಿಸುತ್ತಿದ್ದಾರೆ ಎಂಬ ನಿಮ್ಮ ಗುಮಾನಿ ನಿಜ. ಸಾಲ ಮನ್ನಾ ಮಾಡಿಯೇ ನೋಬೆಲ್ ಪ್ರಶಸ್ತಿ ಪಡೆಯುವ ಯತ್ನ ನಡೆಯುತ್ತಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D