ಬೊಗಳೆ ರಗಳೆ

header ads

ಭವಿಷ್ಯಕ್ಕೆ ತಯಾರಿ ನಡೆಸಿರುವ ಪುಟಾಣಿ

(ಬೊಗಳೂರು ಕಷ್ಟನಷ್ಟ ಬ್ಯುರೋದಿಂದ)
ಬೊಗಳೂರು, ಮಾ.12- ಜೀವನದಲ್ಲಿ ಕಷ್ಟ ನಷ್ಟಗಳು ಎದುರಾಗುವುದು ಸಹಜ. ಅಂತೆಯೇ ಯಾರೇ ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ ಬಿಸಿಯಿಂದ ಕಣ್ಣೀರು ಸುರಿಯುವುದು ಸಹಜ. ಹೀಗಾಗಿ ಈಗಿನ ಮಕ್ಕಳು ಭವಿಷ್ಯದಲ್ಲಿ ಹೇಗೆ ಕಷ್ಟಪಡಬೇಕು ಎಂಬುದನ್ನು ಕಲಿತುಕೊಂಡೇ ಹುಟ್ಟತೊಡಗುತ್ತವೆ.

ಈ ಫಿಲಾಸಫಿಯೊಂದಿಗೆ ಅಸ್ಸಾಂ ಪುಟಾಣಿಯೊಬ್ಬ ಮೆಣಸು ತಿಂದು ಜೀವನ ನಡೆಸುವುದು ಹೇಗೆ ಎಂಬುದರಲ್ಲಿ ಪರಿಣತಿ ಸಾಧಿಸಿದ್ದಾನೆ.

ಅಪ್ಪ ಕೇಳಿದರೆ ಐಸ್ ಕ್ಯಾಂಡಿ ಕೊಡಿಸುವುದಿಲ್ಲ. ಹೀಗಾಗಿ ಸ್ವಾಭಿಮಾನದಿಂದಾಗಿ ಐಸ್ ಕ್ಯಾಂಡಿಯಂತೆಯೇ ಕಾಣಿಸುವ ಕೆಂಪು ಮೆಣಸು ತಿನ್ನಲು ಆರಂಭಿಸಿದ ಆತ, ಸ್ವಾವಲಂಬನೆಯಲ್ಲಿ ದೃಢ ಹೆಜ್ಜೆ ಇರಿಸಿದ್ದಾನೆ ಎಂದು ವಿಶ್ಲೇಷಿಸಲಾಗಿದೆ.

ಅಂದರೆ ಐಸ್ ಕ್ಯಾಂಡಿ ಕೊಡಿಸಲು ಯಾರಿಗೂ ಕಾಡಬೇಕಿಲ್ಲ. ತಾನೇ ಹೋಗಿ ಗದ್ದೆಯಲ್ಲಿನ ಈ ಮೆಣಸು ತಿಂದರಾಯಿತು ಎಂಬುದು ಈತನ ಸಿದ್ಧಾಂತ. ಮುಂದೆ ಬೆಲೆ ಏರಿಕೆಯಿಂದಾಗಿ ಏನೂ ತಿನ್ನವುದು ಸಾಧ್ಯವಾಗದಿದ್ದರೆ ಈಗಿಂದಲೇ ಕಷ್ಟಪಡಲು ಆತ ಪ್ರಾಕ್ಟೀಸ್ ಆರಂಭಿಸಿದ್ದಾನೆ ಎಂದು ತಿಳಿದುಬಂದಿದೆ.

ಆದರೆ, ಆತ ಮೆಣಸು ತಿನ್ನುವಾಗ ಕಣ್ಣೀರು ಬರುತ್ತಿದ್ದು, ಆತ ಅಳುತ್ತಿದ್ದ ಎಂಬುದು ಯಾರಿಗೂ ತಿಳಿದಿಲ್ಲ. ಮೆಣಸಿನ ಖಾರದಿಂದಾಗಿಯೇ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಸುತ್ತ ನೆರೆದಿದ್ದವರು ತಿಳಿದುಕೊಂಡಿದ್ದರೇ ಎಂಬುದರ ಕುರಿತು ಬೊಗಳೆ ರಗಳೆ ತನಿಖೆ ನಡೆಸುತ್ತಿದೆ.

ನಿಮ್ಮ ಬ್ಲಾಗು ನಮಗೆ ಕೊಡಿ !
ಆತ್ಮೀಯ ಬ್ಲಾಗೋದುಗರೆ ಮತ್ತು ಬ್ಲಾಗಿಗರೇ,
ಕನ್ನಡ ಬ್ಲಾಗ್ ಜಗತ್ತು ಬೆಳೀತಾ ಇದೆ. ಹಾಗಾಗಿ ಈ "ಬೊಗಳೆ ರಗಳೆ"ಯಲ್ಲಿ ಎಲ್ಲಾ ಕನ್ನಡ ಬ್ಲಾಗುಗಳನ್ನು ಲಿಂಕಿಸುವ ನಿಟ್ಟಿನಲ್ಲಿ ನಿಮ್ಮಿಂದ ಸಹಾಯ ಕೋರಿಕೆ.

ಕನ್ನಡ ಬ್ಲಾಗೋತ್ತಮರ ಪಟ್ಟಿಯಲ್ಲಿ ಕನ್ನಡದಲ್ಲಿ ಸಕ್ರಿಯವಾಗಿರುವ ಬ್ಲಾಗುಗಳು ಯಾವುದಾದರೂ ಬಿಟ್ಟು ಹೋಗಿದ್ದರೆ ಲಿಂಕಿಸುವ ಅನುಮತಿಯೊಂದಿಗೆ ಅದರ URL ಮತ್ತು ಶೀರ್ಷಿಕೆಯನ್ನು ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ.

ಬ್ಲಾಗು ಲಿಂಕಿಸಲು ಆಕ್ಷೇಪ ಇಲ್ಲ ಎಂಬುದು ನಮಗೆ ಖಚಿತವಾದರೆ ಸಾಕು.
- ಧನ್ಯವಾದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಮೆಣ ಸುಖ ಆರ - ಜೀವನದ ಖಾರವನ್ನು ಅರಿಯುವಾತನು ಎಲ್ಲದರಲ್ಲಿಯೂ ಸುಖವನ್ನು ಕಾಣುವನಂತೆ. ಇದನು ನನ್ನ ಸ್ನೇಹಿತರೊಬ್ಬರು ಹೇಳಿದ್ದು. ಬೊ-ರಣ್ಣನವರ ತನಿಖೆ ಮುಗಿದ ಮೇಲೆ ತನಿಖಾ ವರದಿಯನ್ನು ಸ್ವಲ್ಪವೂ ಕತ್ತರಿಸದೇ - ಅಂಟಿಸದೇ ನನಗೆ ಕಳುಹಿಸಿಕೊಡಿ.

  ಪ್ರತ್ಯುತ್ತರಅಳಿಸಿ
 2. ಓಹ್...ಈ ಹುಡುಗನಿಗೆ ನಮ್ಮ ಕಡೆ ಸಿಗುವ " ಚುರುಕು ಮೆಣಸಿನಕಾಯಿ" ಕೊಡಬೇಕು....ತಿನ್ನಪ್ಪಾ...ಜಾಣ! ಅಂತ...ಒಂದು ತಿಂದ್ರೆ ಸಾಕು, ಇನ್ನು " ಮೆಣಸಿನ ತಂಟೆಗೇ ಹೋಗಲ್ಲಾ..!

  ಪ್ರತ್ಯುತ್ತರಅಳಿಸಿ
 3. ಮೆಣೆಸಾನ್ವೇಷಿಗಳೆ,

  ಈ ಕಡೆ ಬಂದು ಬಹಳ ದಿನಗಳಾಯಿತು. ಹುಡುಗ ದಾಖಲೆ ಪುಸ್ತಕ ಸೇರುವುದರಲ್ಲಿ ಹರ ಹರ ಎನ್ನದಿದ್ದರೆ ಸಾಕು.

  ಇಂತಿ
  ಭೂತ

  ಪ್ರತ್ಯುತ್ತರಅಳಿಸಿ
 4. ಅನ್ವೇಷಿಗಳೇ, ನಿಮ್ಮ ಬ್ಲಾಗು ನನಗೆ ಕೊಡಿ, ಎಂದು ನೀವು ಪದೆಪದೇ ಕೇಳುತ್ತಿರುವುದು ನನ್ನಲ್ಲಿ ಅನೇಕ ಅನುಮಾನಗಳನ್ನು ಉಂಟು ಮಾಡುತ್ತಿದೆ. ಇಲ್ಲೇನಾದರೂ ನಿಮಗೆ ಕಮಿಷನ್ ಸಿಗುವ ವ್ಯವಸ್ಥೆ ಮಾಡಿಕೊಂಡಿದ್ದೀರಾ ಹೇಗೆ? :))

  ಪ್ರತ್ಯುತ್ತರಅಳಿಸಿ
 5. ಶ್ರೀನಿವಾಸರೆ,
  ತನಿ ಖಾರವರದಿಯನ್ನು ನಿಮ್ಮಲ್ಲಿಗೆ ಕಳುಹಿಸುವಾಗ ಕಣ್ಣಿನಿಂದ ಬಾಯಿಯಿಂದ ನೀರು ಬಂದದ್ದು ಹೆಚ್ಚಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇವೆ.

  ಪ್ರತ್ಯುತ್ತರಅಳಿಸಿ
 6. ಅನಾನಿಮಸ್ಗಿರಿಯವರೆ,
  ಕೆಲವೊಮ್ಮೆ ಘಾಟಿ ಹುಡುಗಿಯರಿಗೂ ಚುರುಕು ಮೆಣಸಿನಕಾಯಿ ಅಂತ ಕರೆಯುತ್ತಾರಲ್ಲ. ಆದುದರಿಂದ ನಿಮ್ಮ ಸಲಹೆ ಬಗ್ಗೆ ಮಾನವ ಹಕ್ಕಿಗಳ ಆಯೋಗಕ್ಕೆ ದೂರು ನೀಡಲಾಗುತ್ತದೆ!!!

  ಪ್ರತ್ಯುತ್ತರಅಳಿಸಿ
 7. ಫ್ಯಾಂಟಮ್ ಭೂತ,
  ಕಳೆದ ಕೆಲವು ದಿನಗಳಿಂದ ಭೂತ ಕಾಟವಿಲ್ಲದೆ ಬೋರಾಗಿತ್ತು. ಯಾವ ಲೋಕದಲ್ಲಿ ವಿಹರಿಸ್ತಾ ಇದ್ರಿ?

  ಪ್ರತ್ಯುತ್ತರಅಳಿಸಿ
 8. ಶ್ರೀತ್ರೀ ಅವರೆ,
  ನಾವು ಇದನ್ನು ಮಾಡೋದು ಕಮ್ಮಿ-ಶನಿಗಾಗಿಯೇ ಇರುವುದರಿಂದ ಬೊಗಳೆ ರಗಳೆ ಬ್ಯುರೋದ ಈ ಅಡ್ಡಕಸುಬಿನ ಬಗ್ಗೆ ಯಾರಿಗೂ ಹೇಳ್ಬೇಡಿ

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D