ಬೊಗಳೆ ರಗಳೆ

header ads

ಹೊಟ್ಟೆ loose ಆಗಿಸುವ ಐಷಾರಾಮಿ ಲೂ!

(ಬೊಗಳೂರು ಆರಾಮ ಬ್ಯುರೋದಿಂದ)
ಬೊಗಳೂರು, ಫೆ.8- ಇದು ತಾಂತ್ರಿಕ ಯುಗ. ಮನುಷ್ಯರಿಗೆ ಯಾವುದಕ್ಕೂ ಪುರುಸೊತ್ತು ಇಲ್ಲ. ಹಾಗಾಗಿ ಅವರಿಗೆ ಏಕಕಾಲಕ್ಕೆ ಹಲವಾರು ಕೆಲಸಗಳನ್ನು ಪೂರೈಸಿಕೊಳ್ಳುವಂತೆ ಬೊಗಳೂರು ಬ್ಯುರೋದ ಕೋರಿಕೆ ಮೇರೆಗೆ ಹೊಸದೊಂದು "ಲೂ" ಸಂಶೋಧಿಸಲಾಗಿದ್ದು, ಇದರ ಪ್ರಚಾರಾರ್ಥ "Loo becomes loose" ಎಂಬ ಸ್ಲೋಗನ್ ಸಿದ್ಧಪಡಿಸಲಾಗಿದೆ.

ಈ "ಸಿಂಹಾಸನ"ವನ್ನು ಏರಲು 49 ಬೊಂಬೆಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿಲ್ಲ. ಮತ್ತು ಕೇಂದ್ರದಲ್ಲಿ ಅಥವಾ ರಾಜ್ಯಗಳ ಅಧಿಕಾರ ಕೇಂದ್ರಗಳಲ್ಲಿ ಅಧಿಕಾರದ ಗದ್ದುಗೆ ಏರಲು ವಿಫಲರಾದವರೆಲ್ಲರೂ ತಮ್ಮ ಮಹತ್ವಾಕಾಂಕ್ಷೆಯನ್ನು ಈ ಸಿಂಹಾಸನವೇರಿ ಪೂರೈಸಿಕೊಳ್ಳಬಹುದಾಗಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇಲ್ಲಿ ಏನೆಲ್ಲಾ ಇದೆ?

ಇಂದಿನ ಕಾಲದಲ್ಲಿ ಜಂಕ್ ಫುಡ್‌ಗಳೇ ಅವಸರದ ಮನುಷ್ಯನಿಗೆ ಸತ್ವ ನೀಡುವುದು ಸತ್ಯವಾಗಿರುವುದರಿಂದ ಅದು ಬೇಗನೆ ಶರೀರದಿಂದ ಹೊರಬರಲು ಕೇಳುವುದಿಲ್ಲ. ಇದಕ್ಕೆ ಸಾಕಷ್ಟು ಸಮಯ ತಗುಲುತ್ತದೆ. ಹಾಗಾಗಿ ಚಲನಚಿತ್ರ ವೀಕ್ಷಿಸುತ್ತಲೇ ಇಲ್ಲಿ ಗಂಟೆಗಟ್ಟಲೆ ಕಳೆಯಲು ಟಿವಿ ವ್ಯವಸ್ಥೆಯೂ ಇದೆ.

ಎಷ್ಟು ಕಷ್ಟಪಟ್ಟರೂ ತ್ಯಾಜ್ಯ ಹೊರಬರುವುದಿಲ್ಲ ಎಂದಾದರೆ ಕುಳಿತಲ್ಲೇ, ವ್ಯಾಯಾಮ ಮಾಡಿ ಅದನ್ನು ಹೊರಬರಿಸುವ ಯತ್ನಗಳನ್ನು ಮಾಡಲು ಸೈಕ್ಲಿಂಗ್ ವ್ಯಾಯಾಮ ಯಂತ್ರವಿದೆ. ಹೊಟ್ಟೆಯಲ್ಲಿ ಸಾಕಷ್ಟು ಕಶ್ಮಲ ಇಲ್ಲವೆಂದಾದರೆ, ಮತ್ತಷ್ಟು ಕಸ ಕಡ್ಡಿಯನ್ನು ಅದರೊಳಗೆ ತೂರಿಸಲು ಡ್ರಿಂಕ್ಸ್ (ಹಾಟ್/ಕೋಲ್ಡ್), ಜಂಕ್ ಫುಡ್ ಇತ್ಯಾದಿಗಳ ವ್ಯವಸ್ಥೆಯೂ ಇದೆ.

ಇಷ್ಟೆಲ್ಲಾ ಕಸರತ್ತು ಮಾಡಿಯೂ ಹೊರಬರಲಿಲ್ಲವೇ? ಹೊಚ್ಚ ಹೊಸ ವ್ಯವಸ್ಥೆಯೊಂದನ್ನು ವಿದೇಶೀ ಕಂಪನಿ ಶೋಧಿಸಿದೆ. ಚೂಯಿಂಗ್ ಗಮ್‌ನಂತೆ ಎಳೆದೆಳೆದು ಉದ್ದವಾಗುತ್ತಿರುವ ಧಾರಾವಾಹಿಗಳ ಕೆಲವು ದೃಶ್ಯಗಳನ್ನು ನೋಡಿಬಿಟ್ಟರಾಯಿತು, ವಾಂತಿಯ ಮೂಲಕ ಶರೀರದ ಕಶ್ಮಲವೆಲ್ಲವೂ ಹೊರಬರಬಹುದಾಗಿದೆ ಎಂಬುದು ಕಂಪನಿಯ ಉಚಿತ ಸಲಹೆ!

ನುಂಗಿದ್ದನ್ನು ಹೊರ ಹಾಕಲು ಇಷ್ಟು ಶ್ರಮ ಪಟ್ಟ ಮೇಲೆ ಆಯಾಸವಾಗದಿರುತ್ತದೆಯೇ? ಅದಕ್ಕಾಗಿ ಪಕ್ಕದಲ್ಲೇ ಸುಖಾಸೀನ ಹಾಸಿಗೆಯೊಂದನ್ನು ಅಳವಡಿಸಲು ಕಂಪನಿಗೆ ಬೊಗಳೆ ರಗಳೆ ಬ್ಯುರೋ ಸಲಹೆ ನೀಡಿದೆ.

ಸರಾಸರಿ ಮನುಷ್ಯನೊಬ್ಬ ತನ್ನ ಜೀವಿತಾವಧಿಯಲ್ಲಿ 11,862 ಗಂಟೆಗಳನ್ನು (1 ವರ್ಷ, 4 ತಿಂಗಳು, 5 ದಿನ) ಟಾಯ್ಲೆಟ್‌ನಲ್ಲೇ ಕಳೆಯುತ್ತಿದ್ದಾನೆ. ಆದರೆ ಇತ್ತೀಚಿನ ಜಂಕ್‌ಫುಡ್ ಯುಗದಲ್ಲಿ ಈ ಅವಧಿ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ದಟ್ಟವಾಗಿವೆ. ಈ ಕಾರಣಕ್ಕೆ ಅದಕ್ಕೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ ಎಂಬುದು ಲೂಸ್ ತಯಾರಿಕಾ ಕಂಪನಿಯ ವಾದ.

ಆದರೆ ಒಮ್ಮೆ ಟಾಯ್ಲೆಟ್ ಹೊಕ್ಕವರು ಅದರಿಂದ ಹೊರಬರಲು ಕೇಳದೇ ಇದ್ದರೆ ನಾವು ಜವಾಬ್ದಾರರಲ್ಲ ಎಂದು ಕೂಡ ಕಂಪನಿಯು ಯಾರ ಕಣ್ಣಿಗೂ ಕಾಣಿಸದಷ್ಟು ಪುಟ್ಟ ಅಕ್ಷರಗಳಲ್ಲಿ ಪ್ರಕಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಹೊಸ ಸಂ-ಶೋಧನೆಯ ಬಗ್ಗೆ ಅವೈಜ್ಞಾನಿಕವಾಗಿ ವರದಿ ಮಾಡಿದಕ್ಕೆ ಮತ್ತಷ್ಟು ಬೊಗಳೆ ಧನ್ಯವಾದಗಳು.

    ಅಂದಹಾಗೆ ಕೆಲವರಿಗೆ `ಪೀಠಾ'ಧಿಪತಿಗಳಾಗಿ ಅಂದಿನ ರದ್ದಿ, ಅಲಲ್ಲ ಸುದ್ದಿ ಪತ್ರಿಕೆಯನ್ನು ಓದದಿದ್ದರೆ ಅತಿಥಿ ಹೊರ ಬರುವುದೇ ಇಲ್ಲವಂತೆ ಎಂಬ ಸ್ಕೂಪ್‍ನ್ನು ಬೊಗಳೆ ಬ್ಯೂರೋಗೆ ಕರ್ಟಸಿಯಿಂದ ರವಾನಿಸುತ್ತಿದ್ದೇವೆ.

    ಪೀಠದ ಮೇಲೆ ಕುಳಿತು ಕಾವ್ಯ ರಚನೆ ಮಾಡಿ ಘ್ನಾನ ಪೀಠ ಪಡೆಯಬಹುದು ಅಂತ ಮಾಜಿ ಬರಹಗಾರರು, ಹಾಲಿ ಬಡಾಯಿಗಾರರೊಬ್ಬರು ಕಾಯಿನ್ ಬೂತ್‍ನಿಂದ ಫೋನಾಯಿಸಿ ನಮಗೆ ಮಾತ್ರ ಹೇಳಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ!

    ಪ್ರತ್ಯುತ್ತರಅಳಿಸಿ
  2. ಉದರದೊಳಗಿನ ಅತಿಥಿ ಹೆಚ್ಚು ತೆಳುವಾದರೆ 'ಲೂ' ಬದಲು 'ವಾಟರ್‌ ಲೂ' ಎಂಬ ಹೆಸರು ಇಡೋಣವಾಗಲಿ ಎಂಬ ಪುಕ್ಕ'ಲು' ಸಲಹೆಯನ್ನು ಕೊಡಲಾಗಿದೆ

    ಪ್ರತ್ಯುತ್ತರಅಳಿಸಿ
  3. ಸುಪ್ರೀತರೆ,
    ಪೀಠಾಧಿಪತಿಗಳನ್ನು ಇಲ್ಲಿ ತಂದು ಕೂರಿಸಿದ್ದಕ್ಕೆ ಧನ್ಯವಾದ. ನೀವು ಸೌಜನ್ಯಯುತವಾಗಿ ರವಾನಿಸಿದ ಸುದ್ದಿಯಿಂದಾಗಿ ನಾವು ಬೆಚ್ಚಿ ಬಿದ್ದಿದ್ದೇವೆ. ನಮ್ಮ ರದ್ದಿ ಪತ್ರಿಕೆಯಾಗಿರಬಹುದೇ ಎಂಬುದು ಒಂದು ಶಂಕೆ.

    ಪ್ರತ್ಯುತ್ತರಅಳಿಸಿ
  4. ವೇಣುವಿನೋದಿನಿ ಅವರೆ,
    ಲೂಗೆ ವಾಟರ್ ಸೇರಿಸಿದರೆ ಆಸ್ಕರ್ ಪ್ರಶಸ್ತಿಗೆ ಅರ್ಜಿ ಹಾಕಬಹುದು. ಆದುದರಿಂದ ನಿಮ್ಮ ಸಲಹೆ ಇಲ್ಲಿ ಮಾನ್ಯವಾಗಿದೆ.

    ಪ್ರತ್ಯುತ್ತರಅಳಿಸಿ
  5. ಶ್ರೀನಿವಾಸರೆ,
    ಗೂ ಅಂದ್ರೆ ಗೂಸಾ ಅಂತ ನಮ್ಮ ಅನುಭವಕ್ಕೆ ಬಂದ ಸಂಗತಿ.
    ತಿನ್ನೋದು ಬೂಸಾ ಆದ್ರೆ ಹೊರ ಬರೋದು ಲೂಸೇ ಆಗಿರಬಹುದು.

    ಪ್ರತ್ಯುತ್ತರಅಳಿಸಿ
  6. if "loo" become "loose"
    then
    "soo" become "soose"?
    ಏನ್ರಿ ಅನ್ವೇಷಿಗಳೆ, ಇಲ್ಲಿ ನಿಮ್ಮ ವಾಕ್ಯದ ಪ್ರಕಾರ ಗ್ರಾಮರ್ ವರ್ಕ್ ಆಗ್ತಾ ಇಲ್ಲ್ವಲ್ರಿ.

    ನಿಮ್ಮ ಲೆಕ್ಕಾಚಾರ ಏನೊ ಸರಿಯಾಗಿರಬಹುದು, ಆದರೆ MURDER ದೇವತೆ ಬಂದ ನಂತರ ಯುವಕರ ವೇಳೆ ಟಾಯ್ಲೆಟನಲ್ಲಿ ಜಾಸ್ತಿ ಪೋಲು ಆಗ್ತಾ ಇದೆ ಅಂತ ನಿಮ್ಮಂಥದ್ದೇ ಬೊಗಳೆ ಬಿಡುವವರ ಅನಿಸಿಕೆ. ಆದರೆ ಇದನ್ನು ಬರೀ ಬೊಗಳೆ ಎಂದು ನಿರಾಕರಿಸುವಂತಿಲ್ಲ ಎಂಬುದು ಪಬ್ಬಿಗನ (ಎಲ್ಲಿ ಪಬ್ಬಿಗ ನಾಪತ್ತೆ !!) ಸ್ಟ್ರಾಂಗ್ ಕಮೆಂಟು.
    ಯುವಕರ ವೇಳೆ (ದೇಶದ ಸಂಪತ್ತು)ಈ ತರಹ ಪೋಲಾಗುವದನ್ನು ತಡೆಗಟ್ಟಲು ಬೊಗಳೆ ಬ್ಯುರೋ ಏನಾದರೂ ಪರಿಹಾರ ಕಂಡು ಹಿಡಿಯಲೇ ಬೇಕು ಅಂತ ಮೊನ್ನೆ ವಿಧಾನಸಭೆಯಲ್ಲಿ ತವಿಶ್ರಿಗಳು ಬ್ಲಾಕ್ ಚಾಳೀಸು ಹಾಕಿಕೊಂಡು ಕೂಗಾಡಿದ್ದಾರೆ.
    ಇತಿ
    ನಿಮ್ಮ ಬೊಗಳೆ ಬ್ಯುರೋಗೆ ಸೇರಲು ಬಯಸುವ ಅಕಾಂಕ್ಷಿ

    ಪ್ರತ್ಯುತ್ತರಅಳಿಸಿ
  7. md ಅವರೆ,
    loo ಇರೋದು loose ಆಗೋವಲ್ಲಿಗೆ ಮಾತ್ರಾ ನಾವು ಆ ಸರಣಿಯನ್ನು ನಿಲ್ಲಿಸುತ್ತಿದ್ದೇವೆ. ಇದಕ್ಕೆ ಕಾರಣ... hoo, boo, koo, moo ಎಂದೆಲ್ಲಾ ಪದಗಳು ಸಾಲುಗಟ್ಟಿ ನಿಲ್ಲುತ್ತಿರುವುದೇ ಆಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

    ದಿನಕ್ಕೆ ಕನಿಷ್ಠ ಐದು ವರದಿ ನೀಡಿದರೆ... ಅಲ್ಲಲ್ಲ... ದಿನಕ್ಕೆ ಐದು ಕನಿಷ್ಠ ವರದಿಗಳನ್ನು ನೀಡಿದರೆ ನಿಮ್ಮನ್ನು ಬ್ಯುರೋಗೆ ಸೇರಿಸಿಕೊಳ್ಳಲಾಗುವುದು. ಸಂಬಳ ಒಂದು ಲಕ್ಷ ಸೊನ್ನೆ ರೂಪಾಯಿ ಮಾತ್ರ. ಅನುಭವದ ಆಧಾರದಲ್ಲಿ ಮತ್ತೊಂದು ಸೊನ್ನೆ ಹೆಚ್ಚು ಮಾಡಬಹುದಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D