(ಬೊಗಳೂರು ರೋಡ್‌ಪತಿ ಬ್ಯುರೋದಿಂದ)
ಬೊಗಳೂರು, ಫೆ.16- ಸರಕಾರಿ ಕೆಲಸದಲ್ಲಿ ಸಾಕಷ್ಟು ಕಮಾಯಿ ಆಗದ ಕಾರಣದಿಂದಾಗಿಯೇ ತಾನು ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಲು ತೆರಳಿರುವುದಾಗಿ, ಕೆಲಸ ಕಳೆದುಕೊಂಡು ಬೀದಿಗೆ ಬಿದ್ದು ಈಗ ರೋಡ್‌ಪತಿಯಾಗಿಬಿಟ್ಟಿರುವ ಸರಕಾರಿ ಅಧಿಕಾರಿಯೊಬ್ಬರು ಬೊಗಳೆ ರಗಳೆ ಬ್ಯುರೋದೆದುರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಜನರಿಗೆ ಏನೋ ಆಗಿದೆ. ಸರಿಯಾಗಿ ಗಿಂಬಳವನ್ನು ಪಾವತಿಸಲು ಹಿಂದೆ ಮುಂದೆ ನೋಡುತ್ತಾರೆ. ಇಂಥವರಿಗೆಲ್ಲಾ ಯಾವಾಗ ಬುದ್ಧಿ ಬರುತ್ತೋ ಎಂಬುದು ತಿಳಿಯದಂ ಕಂಗಾಲಾಗಿ ತಾನು ಇಲ್ಲಿಗಿಂತ ಹೆಚ್ಚು ಕಮಾಯಿಸೋಣ ಎಂದು ಕೌನ್ ಬನೇಗಾದಲ್ಲಿ ಭಾಗವಹಿಸಲು ರಜೆಗಾಗಿ ಕೇಳಿದೆ. ಥೂ... ಅವರೂ ರಜೆ ಕೊಡಲು ನಿರಾಕರಿಸುವುದೇ? ನಮ್ಮ ಹಣೆ ಬರಹ ಹೇಗೂ ನೆಟ್ಟಗಿಲ್ಲ ಎಂಬುದು ಖಚಿತವಾದ ಕಾರಣವೇ ಕೆಬಿಸಿ-2ಗೆ ನೇರವಾಗಿ ತೆರಳಿದೆ ಎಂದು ಆತ ಹೇಳಿದ್ದಾನೆ.

ಕೆಬಿಸಿಯಲ್ಲಾದರೆ ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತಾರೆ. ಮಂಡೆ ಖರ್ಚು ಮಾಡಬೇಕಾಗುತ್ತದೆ. ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಸುಮ್ಮನೆ ಕುಳಿತರೆ ಯಾವುದೇ ದುಡ್ಡು ಸಿಗುವುದಿಲ್ಲ. ಅದಕ್ಕಿಂತ ಸರಕಾರಿ ಕೆಲಸವೇ ಮೇಲು. ಸ್ವಲ್ಪಾನೂ ತಲೆ ಉಪಯೋಗಿಸಬೇಕಿಲ್ಲ. ಸುಮ್ಮನೆ ಕುಳಿತರೆ ದುಡ್ಡು ಬರುತ್ತದೆ ಎಂದು ಜ್ಞಾನೋದಯವಾಗಿರುವ ಆತ, ಕರೋಡ್‌ಪತಿಗಿಂತ ಸರಕಾರಿ ಕೆಲಸವೇ ಮೇಲು ಎಂದುಕೊಂಡು ಪುನಃ ಆ ಕೆಲಸಕ್ಕೆ ಅರ್ಜಿ ಹಾಕುತ್ತಿರುವುದಾಗಿ ತಿಳಿಸಿದ್ದಾನೆ.

ಇದೀಗ ಆತ ಕೆಲಸ ಸಿಗುವವರೆಗೂ ಮತ್ತೆ ಟಿವಿ ಎದುರು ಕೂತಿರಲು ದೃಢ ನಿಶ್ಚಯ ಮಾಡಿದ್ದಾನೆ.

4 Comments

ಏನಾದ್ರೂ ಹೇಳ್ರಪಾ :-D

 1. ಕೆಬಿಸಿಯ ಪ್ರಶ್ನೆಗಳು ಲೀಕ್ ಆಗಿ ಬೊ.ರ ಹತ್ತಿರ ಇದೆ ಅಂತಾ ಸುದ್ದಿ ಇದೆ..ಅಸತ್ಯಿಗಳು ಇದಕ್ಕೆ ಎನನ್ನುತ್ತಾರೆ?

  ReplyDelete
 2. ಓಹ್! ಬೊ-ರ ವರದಿಗಾರರಿಗೆ ಲೌಕಿಕ ಜ್ಞಾನ ಕಡಿಮೆ ಎಂದರಿವಾಗಿದೆ. ಅವರನ್ನು ತಕ್ಷಣವೇ ಕೆಲಸದಿಂದ ತೆಗೆದುಹಾಕಿ, ನಮ್ಮ ವರದಿಗಾರರನ್ನು ನಿಮ್ಮಲ್ಲಿಗೆ ಸೇರಿಸಿಕೊಂಡರೆ, ಪತ್ರಿಕೆ ಮೇಲೇರುತ್ತದೆ, ಇಲ್ಲದಿದ್ದರೆ ರೋಡ್‍ಪತಿಯಂತೆ ಡಾಂಬರು ಹಾಕಲು ಹೋಗಬೇಕಾದೀತು.

  ಆ ಸರಕಾರೀ ಅಧಿಕಾರಿ ತರಕಾರಿ ಮಾರೋದಕ್ಕೂ ಲಾಯಕ್ಕಿಲ್ಲ ಎಂಬುದು ನಿಮ್ಮ ವರದಿಯಿಂದ ಸ್ಪಷ್ಟವಾಗಿದೆ. ಸರಕಾರದಲ್ಲಿ ಕೆಲಸ ಮಾಡೋವ್ರು ಎಂದಿಗೂ ರಜೆಯನ್ನು ಕೇಳುವುದಿಲ್ಲ, ರಜೆ ಚೀಟಿ ಕೊಡದೇ ಮಾಯವಾಗುವರು. ಮರಳಿ ಕೆಲಸಕ್ಕೆ ಬಂದ ಮೇಲೆ, ಇಷ್ಟ ಬಂದರೆ ರಜೆ ಚೀಟಿಯನ್ನು ಕೊಡುವುದು.

  ಮತ್ತೆ ಇನ್ನೊಂದು ವಿಷಯ. ಗಿಂಬಳ ನಿಮಿತ್ತಂ ಬಹುಕೃತ ವೇಷಂ ಎಂದು ಮಹಾನ್ ವ್ಯಕ್ತಿಗಳೇ ಸಾರಿದ್ದಾರೆ. ಕೆಲಸಕ್ಕೆ ಹಾಜರಿರದಿದ್ದರೂ, ಕೆಲಸ ಮಾಡಿಕೊಟ್ಟು ಗಿಂಬಳ ತೆಗೆದುಕೊಳ್ಳುವ ಕಲೆ ಗೊತ್ತಿಲ್ಲದ ಆ ತರಕಾರಿ ಅಧಿಕಾರಿಗೆ ತರಬೇತಿಯ ಅವಶ್ಯಕತೆ ಇದೆ. ತರಬೇತಿಯನ್ನು ರಿಯಾಯಿತಿ ದರದಲ್ಲಿ ಕೊಡಲು ನಮ್ಮ ಬೀರುದವರು ಅನುವು ಮಾಡಿಕೊಡುವರು. ಪಕ್ಕಕ್ಕೆ ಬಂದು ಆ ಅಧಿಕಾರಿಯ ವಿಳಾಸವನ್ನು ಕೊಟ್ಟರೆ, ನಿಮ್ಮ ಕೈಯನ್ನೂ ಸ್ವಲ್ಪ ಬೆಚ್ಚಗೆ ಮಾಡುವೆವು.

  ReplyDelete
 3. ಶಿವ್ ಅವರೆ,
  ಕೆಬಿಸಿ ಪ್ರಶ್ನೆ ಲೀಕ್ ಆಗಿ ನಾವು ಆಗಲೇ ಪ್ರಕಟಿಸಿಬಿಟ್ಟಿರೋದ್ರಿಂದ ಅದಕ್ಕೆ ಲೀಕ್-ಪ್ರೂಫ್ ಸಿಮೆಂಟ್ ಹಚ್ಚುವ ಯತ್ನಗಳು ನಡೆಯುತ್ತಿವೆ. ಪ್ರಮುಖ ಕಾರಣವೆಂದರೆ ಈ ಅಮಾನತುಗೊಂಡ ಅಧಿಕಾರಿ ಈಗಾಗಲೇ ಬೊ.ರ. ವಿರುದ್ಧ ಅವಮಾನ ನಷ್ಟ ದಾವೆ ಹಾಕಲು ಸಿದ್ಧತೆ ನಡೆಸಿದ್ದಾನೆ.

  ReplyDelete
 4. ಶ್ರೀನಿವಾಸರೆ,
  ನೀವು ಹೇಳಿದಂತೆ ನಮ್ಮ ವರದಿಗಾರರ Love-kick ಜ್ಞಾನ ಕಡಿಮೆ ಇರುವುದರಿಂದ ಅದಕ್ಕೆ ತರಬೇತಿ ನೀಡಲು ಕೋರಲಾಗಿದೆ.

  ರಜೆ ತೆಗೆದುಕೊಳ್ಳಲು ನೀವು ನೀಡಿರುವ ಸಲಹೆ ಮತ್ತು ಸರಕಾರಿ ನೌಕರರು ಅನುಸರಿಸುತ್ತಿರುವ ವಿಧಾನವನ್ನು ಖಾಸಗಿಯಲ್ಲೂ ಅನುಸರಿಸಲು ತೀವ್ರವಾಗಿ ಯತ್ನಿಸಲಾಗುತ್ತಿದ್ದು, ಕಾರ್-ಮಿಕ ಸಂಘಟನೆಗಳಿಗೆ ಹೇಳಿ ಪ್ರಚೋದನೆ ನೀಡಲು ಇಚ್ಛಿಸಿದ್ದೇವೆ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ... ನಿಮ್ಮಯ ಮನೆ ಮಠ ರಕ್ಷಿಸಿಕೊಳ್ಳಿ.... ಕೂ....

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post