ಬೊಗಳೆ ರಗಳೆ

header ads

ಕಾವೇರಿ ಅಪಹರಣಕ್ಕೆ ಸಂಚು!

(ಬೊಗಳೂರು ಕಾವೇರಿಸುವ ಬ್ಯುರೋದಿಂದ)

ಬೊಗಳೂರು, ಫೆ.6- ಕನ್ನಡ ನಾಡಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಅದನ್ನು ಆರಿಸಲು ಬೇಕಾದಷ್ಟು ಕಾವೇರಿಸುವ ನೀರು ರಾಜ್ಯದಲ್ಲಿಲ್ಲ. ಹಾಗಾಗಿ ಬೆಂಕಿಗೆ ನೀರು ಸಿಗದಿದ್ದರೆ ತುಪ್ಪ ಸುರಿಯಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡನ್ನು ತನ್ನ ಕಾರಸ್ಥಾನ ಮಾಡಿಕೊಂಡಿರುವ ಬೊಗಳೆ ರಗಳೆ ಬ್ಯುರೋ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ.

ಕಾವೇರಿ ವಿವಾದ ಮಂಡಳಿಯು ಲೆಕ್ಕ ತಪ್ಪಿದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ಬೊಗಳೂರಿನಿಂದ ಕದ್ದುಮುಚ್ಚಿ ವರದಿ ಮಾಡುತ್ತಿರುವ ನಮ್ಮ ವದರಿಗಾರರು ಸುದ್ದಿ ರವಾನಿಸಿದ್ದಾರೆ.

ತೀರ್ಪಿನಿಂದಾಗಿ ಕರ್ನಾಟಕದಾದ್ಯಂತ ತಾಪಮಾನ ಹೆಚ್ಚಾಗಿದ್ದು, ಯಾವತ್ತೂ ಬಿಸಿಯಾಗಿರುವ ತಮಿಳುನಾಡಿನಲ್ಲಿ ತಂಪುತಂಪಿನ ಅನುಭವ ಇರುವ ಹಿನ್ನೆಲೆಯಲ್ಲಿ, ಸಂತಸಗೊಂಡಿರುವ ತಮಿಳುನಾಡು, ಕಾವೇರಿಯನ್ನೇ ಅಪಹರಿಸುವ ಸಂಚು ರೂಪಿಸುತ್ತಿರುವುದು ಕೂಡ ಈ ವದರಿಗಾರಿಕೆ ವೇಳೆ ಬೆಳಕಿಗೆ ಬಂದಿದೆ.

ಚೀನಾವು ಅರುಣಾಚಲ ಪ್ರದೇಶವನ್ನು ತನ್ನದು ಎನ್ನುತ್ತಿದೆ. ಅದೇ ರೀತಿ ಕಾವೇರಿ ನಮ್ಮದು. ಕಾವೇರಿಯನ್ನು ಅಪಹರಿಸಿ ತಮಿಳುನಾಡಿನ ಶೋಕವನದಲ್ಲಿ ಇರಿಸಿದರೆ ವಿವಾದವೇ ಪರಿಹಾರವಾಗಬಹುದು. ಆ ಮೇಲೆ ಅಲ್ಲಿ ಇಲ್ಲಿ ಬಸ್ಸುಗಳ ದಹನ ಸಂಭವಿಸಬಹುದು. ಲಂಕೆಯೇ ಉರಿದು ಹೋದ ಬಳಿಕ ರಾವಣ ಲಂಕೆಯನ್ನು ಪುನರ್ನಿರ್ಮಿಸಿಲ್ಲವೇ ಎಂಬುದು ತಮಿಳು ತಲೆಗಳ ವಾದ.

ಈ ಮಧ್ಯೆ, ವಿವಾದಗಳಿಗೆ ಎಂದಿಗೂ ಅಂತ್ಯ ಇಲ್ಲ ಎಂಬ ಪರಿಸ್ಥಿತಿ ಇರುವುದರಿಂದಾಗಿ ಇದುವೇ ಅಂತಿಮ ತೀರ್ಪು ಎಂದು ಸಂತಸಪಟ್ಟುಕೊಳ್ಳಬೇಕಿಲ್ಲ ಎಂಬುದಾಗಿ 1968ರಿಂದ ಕಾವೇರಿಗಾಗಿ ಕರ್ನಾಟಕದ 11 ಮುಖ್ಯಮಂತ್ರಿಗಳ ಜತೆಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡಿರುವ, ಜ್ಞಾನಕ್ಕಿಂತಲೂ ವಯೋ-ವೃದ್ಧರಾಗಿರುವ ತಮಿಳುನಾಡು ಅಮುಖ್ಯಮಂತ್ರಿ ನರುಣಾಕಿಢಿ ಒಳಗೊಳಗೆ ಆತಂಕಭರಿತರಾಗಿ ಬೊಗಳೆ ರಗಳೆ ಬ್ಯುರೋದೆದುರು ಅಲವತ್ತುಕೊಂಡಿದ್ದಾರೆ.

ನಮ್ಮ ಬ್ಯುರೋಗೆ ವಿಶೇಷ ಸಂದರ್ಶನ ನೀಡಿದ ಅವರು, ಕರ್ನಾಟಕದಲ್ಲಿ "ರಕ್ತ ಕೊಟ್ಟೇವು ನೀರು ಕೊಡೆವು" ಮತ್ತು "ಕಾವುಏರಿಸುವೆವು, ಕಾವೇರಿ ಬಿಡೆವು" ಎಂಬ ಆಂದೋಲನಕ್ಕೆ ಪ್ರತಿಯಾಗಿ ತಮಿಳುನಾಡಿನಲ್ಲೂ "ಬೀರು ಹೀರುವೆವು, ನೀರು ಬಿಡೆವು" ಎಂಬ ಆಂದೋಲನ ಆರಂಭಿಸುವುದಾಗಿ ಹೇಳಿದ್ದಾರೆ.

ಸಂದರ್ಶನ ಸಂದರ್ಭ ಅವರ ಬಾಯಿಯಿಂದ ಉದುರದಿರುವ ಮಾತು ಹೀಗಿತ್ತು : "ಕಾವೇರಿಯಲ್ಲಿ ಕರ್ನಾಟಕ ರೈತರಿಗೆ ಬೇಕಾಗುವಷ್ಟು ನೀರಿಲ್ಲ ಎಂಬುದು ನಮಗೂ ಗೊತ್ತಿದೆ. ನಾವು ನಿಜವಾಗಿ ಕೇಳಿದ್ದು 560 ಟಿಎಂಸಿ ನೀರು, ಅನ್ಯಾಯ ಮಂಡಳಿಗೆ ಲೆಕ್ಕ ತಪ್ಪುತ್ತದೆ ಮತ್ತು ನಮಗೆ ಅದಕ್ಕಿಂತ ಕಡಿಮೆ ಸಿಗುತ್ತದೆ ಎಂಬುದು ಖಚಿತವಾಗಿ ತಿಳಿದಿತ್ತು. ಈಗ ಕರ್ನಾಟಕದ ರೈತರ ಕಣ್ಣೀರು ಕೂಡ automatic ಆಗಿ ಕಾವೇರಿಗೆ ಸೇರಿಕೊಂಡು ನಾವು ಬೇಡಿಕೆ ಮುಂದಿಟ್ಟಷ್ಟು ನೀರನ್ನು ಪಡೆಯುತ್ತೇವೆ ಎಂಬ ಹುನ್ನಾರ ನಮ್ಮದು".

ಇಷ್ಟೆಲ್ಲಾ ಹೋರಾಟಕ್ಕೆ ಎಲ್ಲ ಕಡೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ತನ್ನಿಂದಾಗಿ-ತನಗಾಗಿ ಈ ಜನ ಗಲಾಟೆ, ಹೋರಾಟ ಹೆಸರಿನಲ್ಲಿ ಎಲ್ಲ ಆಸ್ತಿ ಪಾಸ್ತಿ, ಪ್ರಾಣ ಹಾನಿ ಮಾಡೋದು ಬೇಡ ಎಂದುಕೊಂಡಿರುವ ಕಾವೇರಿ, ತಾನಾಗಿಯೇ ಪರಾರಿಯಾಗಲು ಸಂಚು ರೂಪಿಸಿದ್ದಾಳೆ ಎಂಬುದು ತೀರಾ ಇತ್ತೀಚಿನ ವಿದ್ಯಮಾನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

 1. ಅನ್ವೇಷಿಗಳೇ,

  ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ ನಿಮ್ಮ ವರದಿಗಾರನಿಗೆ ತಲೆನೋವೇ ಇರ್ತಾ ಇರಲಿಲ್ಲ ನೋಡಿ:)

  ಪ್ರತ್ಯುತ್ತರಅಳಿಸಿ
 2. ಶ್ರೀನಿವಾಸರೆ,

  ನೀವು ಉಚಿತವಾಗಿ ವಿತರಿಸಿದ ಖಾಲಿ ಬಿಂದಿಗೆಗಳನ್ನು ಮಾತ್ರವೇ ಎಲ್ಲರೂ ತೆಗೆದುಕೊಳ್ಳಲು ಸಿದ್ಧರಿದ್ದು, ನೀರಿಲ್ಲದ ಟ್ಯಾಂಕರು ಎಲ್ಲ ಬೇಡ ಎಂದು ಘಂಟಾಘೋಷವಾಗಿ ಸಾರಿದ್ದಾರೆ.

  ನಿಮಗೆ ಬರುವ ವರಮಾನದಲ್ಲಿ ವರ ನೀವೇ ಇಟ್ಕೊಳ್ಳಿ. ಮಾನ ಮಾತ್ರ ಅಲ್ಲೇ ಇರಲಿ. ತೆಗೀಬೇಡಿ.

  ನಿಮ್ಮ ಜಾಹೀರಾತಿನ ಬಿಲ್ ಕಳುಹಿಸಲಾಗಿದೆ. ಹೃದಯ ಗಟ್ಟಿ ಮಾಡಿಕೊಳ್ಳಿ.

  ಪ್ರತ್ಯುತ್ತರಅಳಿಸಿ
 3. ಶ್ರೀತ್ರೀ ಅವರೆ,
  ವಿಶ್ವೇಶ್ವಯ್ಯರವರೇನೋ ಕಾವೇರಿ ಸರಿಯಾಗೆ ಹರಿಯುವಂತಾಗಲು ಒಡ್ಡು ಕಟ್ಟಿ ಹೋದರು. ಆದರೆ ಈಗ ನಮ್ಮ ರಾಜ್ಯಗಳೆಲ್ಲಾ ಕಾವೇರಿಗಾಗಿ ಪರಸ್ಪರ ಬಾಯಿಬಾಯಿ ಹರಿದುಕೊಳ್ಳುತ್ತಿವೆಯಲ್ಲಾ!.

  ಪ್ರತ್ಯುತ್ತರಅಳಿಸಿ
 4. ಈ ಕಾವೇರಿದ ಸಂದರ್ಭದಲ್ಲಿ ಮದ-ರಸದಲ್ಲಿರುವ ಬೋ.ರ. ಪತ್ರಿಕಾಯವರು ಅದರ ಸಂಪಾದಕರು ತಮ್ಮ ಬಗ್ಗೆ ಕಾಳಜಿ ತಗೋಬೇಕು ಅಂತಾ ನಮ್ಮ ಕೋರಿಕೆ..

  ಪ್ರತ್ಯುತ್ತರಅಳಿಸಿ
 5. ಶಿವ್ ಅವರೆ,
  ನಮ್ಮ ಪತ್ರಿಕಾ ಲಾಯಕ್ಕೆ ಯಾರು ಕೂಡ ಪ್ರವೇಶಿಸದಂತೆ ನಾಲ್ಕೂ ಕಡೆಗಳಲ್ಲಿ ಗೋಡೆ ಕಟ್ಟಿಸಿದ್ದೇವೆ. ಸೊಳ್ಳೆ ಕೂಡ ಪ್ರವೇಶಿಸದಂತೆ ಒಂದೇ ಒಂದು ಬಾಗಿಲಾಗಲಿ, ಕಿಟಕಿಯಾಗಲಿ ಇಲ್ಲವೇ ಇಲ್ಲ. ಬೆಳಕು ಮತ್ತು ಗಾಳಿಯೂ ಬಾರದ ಹಾಗೆ ಮಾಡಿಕೊಂಡಿದ್ದೇವೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D