Subscribe Us

ಜಾಹೀರಾತು
header ads

ವಿಮಾನ ಏರುವ ಮುನ್ನವೇ ತೇಲಿದ ಪೈಲಟ್‌ಗಳು

(ಬೊಗಳೂರು ತೇಲಾಟ ಬ್ಯುರೋದಿಂದ)
ಬೊಗಳೂರು, ಫೆ.5- ವಿಮಾನ ಮೇಲೇರಿ ಗಾಳಿಯಲ್ಲಿ ಹಾರಾಡುವ ಮೊದಲು, ಭೂಮಿಯಲ್ಲಿದ್ದಾಗಲೇ ಗಾಳಿಯಲ್ಲಿ ತೇಲಾಡುತ್ತಿದ್ದ ಪೈಲಟ್‌ಗಳನ್ನು ಅಮಾನತುಗೊಳಿಸಿರುವುದು ಇಲ್ಲಿ ವರದಿಯಾಗಿದೆ.

ಈ ಕುರಿತು ಬಂಧಿತ ಪೈಲಟ್‌ಗಳ ಪರವಾಗಿ ವಾದ ಮಂಡಿಸಲೆಂದು ಬೊಗಳೆ ರಗಳೆ ಬ್ಯುರೋ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಗದಾಗ ಅಲ್ಲಿ ಭರ್ಜರಿ ಸ್ವಾಗತವೇ ದೊರೆಯಿತು.

ಆಕಾಶದಲ್ಲಿ ತೇಲಾಡುವ ಪೈಲಟ್‌ಗಳೆಲ್ಲರೂ ತೂರಾಡುತ್ತಾ ಹಾರ ಹಿಡಿದು ನಿಂತಿದ್ದರು.

ಅಮಲಿನಿಂದಾಗಿ ಅಮಾನತುಗೊಂಡ ಪೈಲಟಾನಂದನನ್ನು ಮಾತನಾಡಿಸಿದಾಗ, ಆತ ತಾನು ಸೇವಿಸಿದ್ದು ಮದ್ಯ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ಆಕಾಶದಲ್ಲಿ ಹಾರಾಡುತ್ತಿದ್ದಾಗ ಮಧ್ಯ ಮಧ್ಯದಲ್ಲಿ ತಮ್ಮ ವಿಮಾನ ಕೆಳಗೆ ಇಳಿಯುತ್ತಿರುವ ಅನುಭವವಾಗಿತ್ತು. ಹಾಗಾಗಿ ಆ ವಿಮಾನವನ್ನು ಮತ್ತೆ ಮೇಲೆಯೇ ಹಾರಾಡುವಂತೆ ಮಾಡಲು ಫುಟ್ಬಾಲ್‌ನ ಒಂದು ಭರ್ಜರಿ ಕಿಕ್ ಬೇಕಾಗಿತ್ತು. ಅದಕ್ಕಾಗಿ ಒಂದು ಬಾಟಲಿಯನ್ನು ಮಧ್ಯ ಮಧ್ಯ ಸುರಿದುಕೊಳ್ಳುತ್ತಿದ್ದೆವು ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಮತ್ತೊಬ್ಬ ತೇಲಟ್‌ನನ್ನು ಕೂಡ ಕಷ್ಟಪಟ್ಟು ಮಾತನಾಡಿಸಲಾಯಿತು. ಆತನ ಹೇಳಿಕೆ ಪ್ರಕಾರ, ನಾವು ಇಡೀ ವಿಮಾನ-ಪ್ರಯಾಣಿಕ ಸಮೂಹವನ್ನೇ ಆಕಾಶದಲ್ಲಿ ತೇಲಿಸುವವರು. ನಮಗೂ ತೇಲುವಿಕೆಯ ಸುಖಾನುಭವನ ಆಗುವುದು ಬೇಡವೇ ಎಂದು ಪ್ರಶ್ನಿಸಿದ್ದಾನೆ. ಆಗಸದಲ್ಲಿ ತೇಲುವುದಕ್ಕೆ ಭೂಮಿಯಲ್ಲಿರುವಾಗ ತರಬೇತಿ ಕೊಡಿಸುವ ಯೋಚನೆಯನ್ನು ನಮ್ಮ ಕಂಪನಿ ಮಾಡಿರಲಿಲ್ಲ. ಹಾಗಾಗಿ ನಾವು ನಾವೇ ವ್ಯವಸ್ಥೆ ಮಾಡಿಕೊಳ್ಳಲಾಯಿತು ಎಂದು ಹೇಳುತ್ತಾ ಮತ್ತೆ ತೇಲಲೆಂದು ಆತ ವಿಮಾನ ನಿಲ್ದಾಣದ ಲಾಂಜ್‌ನ ಮೂಲೆಗೆ ತೆರಳಿದ.

ಶೀಘ್ರವೇ ಅಮಾನತುಗೊಳ್ಳಲಿರುವ ಮತ್ತೊಬ್ಬ ತೇಲಟ್‌ನನ್ನು ಹಿಡಿದು ನಿಲ್ಲಿಸಿ ಪ್ರಶ್ನಿಸಲಾಯಿತು. ಆತ ತೇಲುತ್ತಾ ಹೇಳಿದ್ದು : "ನಮ್ಮ ರಕ್ತದಲ್ಲೇ ಅಮಲು ಇದೆ. ಹಾಗಾಗಿ ಅದನ್ನು ಬೇರ್ಪಡಿಸುವುದು ಸಾಧ್ಯವಿಲ್ಲ!"

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಎರ್ ಸಹಾರದ ತೇಲಟ್‍ಗಳು ಸೇವಿಸಿದ್ದು ಕಿಂಗ್ ಫಿಶರ್ ಆಗಿತಂತೆ..ಆದ್ದರಿಂದ ಇರರ ಹಿಂದೆ ಯು.ಬಿ. ಕೈವಾಡ ಇದೆ ಅಂತೆ.

  ಈ ಸುದ್ದಿ ನೋಡಿ ಮಲ್ಯ ಅಂಕಲ್..ನಮ್ಮ ವಿಮಾನ ಓಡೋದೇ ಮದ್ಯದ ಮೇಲೆ ಅಂತಾ ಇನ್ನೋಂದು ಪೆಗ್ ಹಾಕಿದರಂತಲ್ಲ!

  ಪ್ರತ್ಯುತ್ತರಅಳಿಸಿ
 2. ಈ ಫೈಲಟ್‍ಗಳಿಗೆ ಈಗ ಬಸ್ ಓಡಿಸುವ ಶಿಕ್ಷೆ ಕೊಡುತ್ತಾರೆಯೇ?

  ಪ್ರತ್ಯುತ್ತರಅಳಿಸಿ
 3. ನಿಮ್ಮ ವರದಿಯಲ್ಲಿ ನನಗೇನೋ ಸಂದೇಹ ಮೂಡುತ್ತಿದೆ. ನಿಮ್ಮ ವರದಿಗಾರ ಅಲ್ಲಿಗೆ ಹೋಗದೆಯೇ ಕಬ್ಬಿಗರ ಕಬ್‍ನಲ್ಲಿ ಕುಳಿತು ವರದಿ ತಯಾರು ಮಾಡಿರಬಹುದೇ? ಆಕಾಶದಲ್ಲಿ ಹಾರ ಹಿಡಿದು ತೇಲಾಡುತ್ತಿದ್ದ ಅಮಲಾನಂದ ಮತ್ತು ತೈಲಟ್‍ರನ್ನು ನಿಮ್ಮ ವರದಿಗಾರ ಭೇಟಿಯಾದದ್ದೆಲ್ಲಿ. ಅವರೂ ತೇಲಾಡಲು ಹೋಗಿದ್ದರು ತಾನೆ. ಅವರೂ ಸರ್ವರೋಗ ನಿವಾರಕ ಮದ್ದನ್ನು ಸೇವಿಸಿ ತೇಲಾಡುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ನನ್ನ ಪ್ರತಿಕ್ರಿಯೆಯನ್ನು ಮರಳಿ ಹಿಂದೆಗೆದುಕೊಳ್ಳಬೇಕೆಂದಿದ್ದರೆ, ಸ್ವತಃ ನಿಮ್ಮ ವರದಿಗಾರರೇ ಬಂದು ನನ್ನನ್ನು ಮುಖತಃ (ಒಬ್ಬನೇ ಇರುವೆಡೆಯಲ್ಲಿ) ಕಾಣಬೇಕು. ಬರುವ ಮೊದಲು ಯಾರಿಗೂ ವಿಷಯವನ್ನು ತಿಳಿಸಿರಬಾರದು. ಹಾಗೇನಾದರೂ ತಿಳಿಸಿದರೆ ನಿಮ್ಮ ಪತ್ರಿಕೆಯ ಗತಿ ನೆಟ್ಟಗಾಗುವುದಿಲ್ಲ ಎಂದು ಒಣ ಬೆದರಿಕೆಯನ್ನು ನೀಡುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ
 4. ಶಿವ್ ಅವರೆ,
  ಪಿಂಗ್ ಕಿಸರ್ ಕಂಪನಿಯವರು ಸಹಾರದವರಿಗೆ ಆಮಿಷ ನೀಡಿದ್ದು ನಿಜ ಎಂಬುದು ಖಚಿತವಾಗಿದೆ. ಅಂದರೆ ವಿಮಾನಗಳ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಪೈಲಟ್‌ಗಳ ಸಂಖ್ಯೆ ಕಡಿಮೆ. ಹಾಗಾಗಿ ಪೈಲಟ್‌ಗಳನ್ನು ಅಲ್ಲಿ ಅಮಾನತು ಮಾಡಿದರೆ ಅಥವಾ ಕೆಲಸದಿಂದ ತೆಗೆದುಹಾಕಿದರೆ ತಮ್ಮಲ್ಲಿ ಸೇರಿಸಿಕೊಳ್ಳೋದು ಸುಲಭ ಅನ್ನೋ ದುರಾಲೋಚನೆಯ

  ಪ್ರತ್ಯುತ್ತರಅಳಿಸಿ
 5. ಶ್ರೀತ್ರೀ ಅವರೆ,
  ಇದುವರೆಗೆ ಮೇಲಕ್ಕೆ (ಪೆಗ್)ಏರಿಸ್ತಾ ಇದ್ದ ಪೈಲಟ್‌ಗಳು ಇನ್ನು ಇಳಿಸ್ತಾರಂತೆ. ಅವರನ್ನು ಈಗಾಗಲೇ ವಿಮಾನದಿಂದ ಇಳಿಸಿಯಾಗಿದೆ.

  ಪ್ರತ್ಯುತ್ತರಅಳಿಸಿ
 6. ಶ್ರೀನಿವಾಸರೆ,

  ನೀವು ನಮ್ಮ ವರದಿಗಾರರ ಜಾತಕ ಬಯಲು ಮಾಡಿ ಮರ್ಯಾದೆ ಮೂರಾಬಟ್ಟೆ ಮಾಡಿದ್ದು ಕೇಳಿ ಸಂತೋಷವಾಯಿತು. ಧನ್ಯವಾದ.

  ನಮ್ಮ ವರದಿಗಾರರು ನಾಳೆ ನಿಮ್ಮ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10 ಗಂಟೆಗೆ ನಿಮ್ಮ ಮುಖಕ್ಕೆ ಭೆಟ್ಟಿ ಮಾಡಲಿದ್ದಾರೆ ಅನ್ನುವ ವಿಷಯವನ್ನು ಯಾರಿಗೂ ತಿಳಿಸುವುದಿಲ್ಲ. ಆದರೆ ಒಂದು ಷರತ್ತು, ದಯವಿಟ್ಟು ಪತ್ರಿಕೆಯನ್ನು ನೆಟ್ಟಗೆ ಮಾಡಬೇಡಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D