(ಬೊಗಳೂರು ಚುನಾವಣಾ ಬ್ಯುರೋದಿಂದ)
ಬೊಗಳೂರು, ಜ.24- ಆಧ್ಯಾತ್ಮಿಕ ರಾಜಕಾರಣದಲ್ಲಿ ಹೊಸ ಪ್ರಯೋಗವೊಂದು ಹಲವಾರು ವರ್ಷಗಳ ಹಿಂದೆ ಆರಂಭವಾಗಿದ್ದು, ಈ ಪ್ರಯೋಗಕ್ಕೆ ಶತಶತಕೋಟಿ ರಾಮಮಂದಿರ ಜಪ ಯಜ್ಞ ಎಂದು ಹೆಸರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಎಲ್ಲ ರಾಜಕಾರಣಿಗಳು ಕೂಡ ಅಯೋಧ್ಯೆಯಲ್ಲಿ ಈ ವರ್ಷವೇ ಮಂದಿರ ನಿರ್ಮಿಸುತ್ತೇವೆ ಎಂಬ ಹೇಳಿಕೆ ನೀಡಲು ಪ್ರತಿಜ್ಞೆ ಕೈಗೊಂಡಿದ್ದಾರೆ. ಹೀಗಾಗಿ, ಹೋದ ಹೋದಲ್ಲೆಲ್ಲಾ ಅವರು "ಈ ವರ್ಷವೇ ಮಂದಿರ ನಿರ್ಮಿಸುತ್ತೇವೆ" ಎಂಬ ಪರಮಧ್ಯೇಯ ಮಂತ್ರವನ್ನು ಜಪಿಸುತ್ತಾ ಇರುತ್ತಾರೆ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಆದರೆ, ಚುನಾವಣೆಗಳು ಬಂದಾಗ ಈ ಜಪ ಯಜ್ಞದ ಸಂಖ್ಯೆಯು ಹಗರಣಭರಿತ ಶೇರು ಮಾರುಕಟ್ಟೆಯ ಸೂಚ್ಯಂಕದ ಮಾದರಿಯಲ್ಲಿ ರೊಂಯ್ಯನೆ ಮೇಲಕ್ಕೇರುತ್ತದೆ.

ಅದರಲ್ಲೂ ಉತ್ತರ ಪ್ರದೇಶದ ಚುನಾವಣೆಗಳು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಕಾರಣಿಗಳಿಂದ ಈ ಶತಕೋಟಿ ರಾಮಜಪ ಯಜ್ಞಕ್ಕೆ ಉತ್ತಮ ಕಾಣಿಕೆಗಳು ಬರುತ್ತಿವೆ ಎಂದು ನಮ್ಮ ಭಾಷೆಯಿಲ್ಲದ ಬಾತ್ಮೀದಾರರು ಆತುರಾತುರವಾಗಿ ವರದಿ ಮಾಡಿದ್ದು, ಬಳಿಕ ಜಪ ಯಜ್ಞದ ವರದಿ ಮಾಡಲು ಪಕ್ಕದೂರಿಗೆ ದೌಡಾಯಿಸಿದ್ದಾರೆ.

ಆದರೆ ಅರ್ಧ ಕುಂಭ ಮೇಳದಲ್ಲಿ ಮಾಡಿರುವ ಘೋಷಣೆಗೂ ಉತ್ತರ ಪ್ರದೇಶ ಚುನಾವಣೆಗೂ ಸಂಬಂಧವಿದೆಯೇ ಎಂಬುದನ್ನು ಶೋಧಿಸಬೇಕಾಗಿದ್ದು, ಈ ಬಗ್ಗೆ ಕಾದುನೋಡುವ ತೀರ್ಮಾನ ಮಾಡಲಾಗಿದೆ.

ಈ ನಡುವೆ, ಔರಂಗಜೇಬನ ಅವಸಾನ ಕಾಲದಲ್ಲಿ ಆರಂಭವಾದ ಈ ಕಾರ್ಯಕ್ರಮವು ಯಾವಾಗ ಪೂರ್ಣಗೊಳ್ಳುತ್ತಿದೆ ಎಂಬುದು ಕಾದುನೋಡಬೇಕಾದ ಅಂಶ.

4 Comments

ಏನಾದ್ರೂ ಹೇಳ್ರಪಾ :-D

 1. ನಮ್ಮ ದೇಶದ ಅನೇಕ ಮುಗಿಯದ ಕಥೆಗಳಲ್ಲಿ ಇದೂ ಒಂದು!

  ReplyDelete
 2. ಅರ್ಧ ಕುಂಭ ಮೇಳದಲ್ಲಿ ಅರ್ಧ ತಲೆ ಬೋಳಿಸಿದ್ದಾರಂತೆ. ಇನ್ನರ್ಧಕ್ಕಾಗಿ ಕಾಯುತ್ತ ಕೂತರೇ ಬೋಳಿಸಿದ ಕಡೆ ಕೂದಲು ಸೊಂಪಾಗಿ ಬೆಳೆದು ನಿಲ್ಲುವ ಸಾಧ್ಯತೆ ಹೆಚ್ಚಂತೆ. ಇದು ನಮ್ಮ ವರದಿಗಾರರ ಸುದ್ದಿ.

  ಅಂದ ಹಾಗೆ ಅವರಂಗಿ ಜೇಬಿಗೆ ಕೈ ಹಾಕಿದ್ದೀರಲ್ಲ - ಏನು ಸಿಕ್ಕಿತು? ಜೋರಾಗಿ ಹೇಳಬೇಡಿ. ಅಂಚೆಯ ಮೂಲಕ ನನಗರ್ಧ ಕಳುಹಿಸಿಕೊಡಿ.

  ReplyDelete
 3. ರಾಮನಾಮವ ಜಪಿಸಿರೋ ಅಂತಾ ಯಾರೋ ಮಹಾನುಭಾವರು ಹೇಳಿದ್ದನ್ನು, ನಮ್ಮ ಅರಾಜಕಾರಣಿಗು ರಾಮಮಂದಿರನಾಮ ಅಂದುಕೊಂಡಿದ್ದಾರೆ..

  ಎಷ್ಟು ಸರ್ಕಾರ ಬಂದವು ಎಷ್ಟು ಸರ್ಕಾರ ಬಿದ್ದವು..ಮರ್ಯಾದಪುರುಷೋತ್ತಮ ಮಾತ್ರ ತಾನು ಆರಾಮಾಗಿ ಎಲ್ಲಾ ನೋಡ್ತಾ ನಿಂತಿದ್ದಾನೆ..

  ReplyDelete
 4. ಶ್ರೀತ್ರೀ ಅವರೆ,
  ಕಥೆಯು ಮುಗಿದೇ ಹೋದರೂ ಮುಗಿಯದಿರಲೀ.... ರಾಜಕೀಯ!

  ಮಾವಿನಯನಸರೆ,
  ಅವರಂಗಿ ಜೇಬಿಗೆ ಕೈ ಹಾಕಿದಾಗ ಸಿಕ್ಕಿದ್ದು ರಾಮಮಂದಿರ ನಿರ್ಮಾಣಕ್ಕೆ ಕರಸೇವೆಯಿಂದ ರಾಶಿಹಾಕಿದ್ದ ಇಟ್ಟಿಗೆಗಳು! ಹಾಗಾಗಿ ಖಂಡಿತಾ ಅರ್ಧ ಕಳಿಸಿಕೊಡುವೆ.

  ಶಿವ್ ಅವರೆ,
  ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಅಂದಿದ್ದು ಕೇಳಿ ಸಕ್ಕರೆ ಸಹಿತ ಪಾಯಸ ಸೇವಿಸುತ್ತಲೇ ಇರುವ ಜಾರಕಾರಣಿಗಳು ಚುನಾವಣೆಗಾಗಿ ಮಾತ್ರವೇ ಮಂದಿರವನ್ನು ಬಳಸಿಕೊಳ್ಳುತ್ತಿದ್ದಾರೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post