(ಬೊಗಳೂರು ಆಹಾಸಾಹಿತ್ಯ ಬ್ಯುರೋದಿಂದ)
ಬೊಗಳೂರು, ಜ.23- ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮಾವೇಶಕ್ಕೆ ಗ್ಲ್ಯಾಮರಸ್-ಸ್ಪರ್ಷ ನೀಡಲು ಉದ್ದೇಶಿಸಿರುವ ಆಯೋಜಕ ಬಳಗದವರೊಬ್ಬರ ಸಲಹೆಗೆ ಬೊಗಳೆ ಬಳಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇದುವರೆಗೆ ಕನ್ನಡಕ್ಕಾಗಿ, ಕನ್ನಡದ ಏಳಿಗೆಗಾಗಿ ಹೇಳಿಕೊಳ್ಳುವಂಥದ್ದೇನನ್ನು ಮಾಡದಿರುವ ಆಕೆಗೆ ಕನ್ನಡಕ್ಕಾಗಿ ಏನಾದರೂ ಮಾಡಲು ಈ ಸದವಕಾಶವನ್ನು ಒದಗಿಸಲು ನಿರ್ಧರಿಸಿರುವುದಾಗಿ ಬೊಗಳೆ ರಗಳೆ ಬ್ಯುರೋ ನಡೆಸಿದ ತನಿಖೆಯಿಂದ ಸಾಬೀತಾಗಿದೆ. ಕನ್ನಡದಾ ಸಮ್ಮೇಳನಕ್ಕೆ ಹೆಚ್ಚು ಜನರನ್ನು ಬರುವಂತೆ ಮಾಡುವುದೇ ಆಕೆ ಮಾಡುವ ಕನ್ನಡ ಸೇವೆಯಾಗಲಿದೆ ಎಂದು ಪತ್ತೆ ಹಚ್ಚಲಾಗಿದೆ.

ಕುವೆಂಪು ಪ್ರಣೀತ "ಸತ್ತಂತಿಹರನು ಬಡಿದೆಚ್ಚರಿಸು" ಎಂಬ ಕರೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಹದಿರೆಯದವರ ಕುದಿ ಹೃದಯ ತಟ್ಟಿರುವ ಮತ್ತು ವಯಸ್ಕರ ಹೃದಯವನ್ನೂ ರೊಯ್ಯನೆ ಕುದಿಸಿಬಿಟ್ಟಿರುವ ಸುಂದರಿಯನ್ನೇ ಈ ಸಮ್ಮೇಳನದ ಪ್ರಧಾನ ಆಕರ್ಷಣೆಯಾಗಿಸಿ ಏಳಲಾಗದವರನ್ನೂ ಎಬ್ಬಿಸಿ ಸಮ್ಮೇಳನದತ್ತ ಧಾವಿಸಿಬರುವಂತೆ ಮಾಡುವ ಪ್ರಯತ್ನವಿದು ಎಂದು ತಿಳಿದುಬಂದಿದೆ.

ಆಕೆಯ ಕೈಯಲ್ಲಿ ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸಿದರೆ ಖಂಡಿತವಾಗಿಯೂ ಅದು ಶಿವಮೊಗ್ಗ ಸಮ್ಮೇಳನಕ್ಕಿಂತಲೂ ಹೆಚ್ಚು ವಿವಾದಾಸ್ಪದವಾಗಿ ಭರ್ಜರಿ ಪ್ರಚಾರ ಪಡೆಯಲಿದೆ ಎಂಬುದು ಆಯೋಜಕರ ವಾದವಾಗಿದೆ.

ಐಶ್ವರ್ಯಾ ರೈ ವಿಶ್ವ ಸುಂದರಿಯಾದ ಸಂದರ್ಭದಲ್ಲಿ ರೈ ಎಂಬುದನ್ನು ರಾಯ್ ಎಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದಾಗ (ಬೊಗಳೆ ರಗಳೆ ಆಗ ಇರಲಿಲ್ಲ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ) ಆಕೆ ಬಂಗಾಳಿಯೋ, ಕನ್ನಡಿಗಳೋ ಎಂಬುದು ಚರ್ಚೆಗೆ ಹೇತುವಾಗಿ ಕೊನೆಗೂ ಆಕೆಯ ಮೂಲವನ್ನು ಮಾಧ್ಯಮಗಳು ಕಷ್ಟಪಟ್ಟು ದಕ್ಷಿಣ ಕನ್ನಡ ಜಿಲ್ಲೆ ಎಂದು ಪತ್ತೆ ಹಚ್ಚಿಬಿಟ್ಟಿದ್ದವು. ಹಾಗಾಗಿ ಆಕೆ ಕನ್ನಡಿಗಳು ಎಂದು ತಿಳಿದ ತಕ್ಷಣವೇ ಕರ್ನಾಟಕ ಜನತೆ ಮತ್ತು ಈ ಸಮ್ಮೇಳನ ಆಯೋಜಕರು ಆಕೆಯನ್ನು ದೊಡ್ಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಒಂದು ಕಣ್ಣು ಅತ್ತಲೇ ಇರಿಸಿದ್ದರು ಎಂದು ತಿಳಿದುಬಂದಿದೆ. ಐಶ್ ಶೀಘ್ರವೇ ಬಚ್ಚನ್ ಕುಟುಂಬದ ಸುಂದರಿಯಾಗಹೊರಟಿರುವುದರಿಂದ, ವಿವಾಹವಾದ ಮೇಲೆ ಆಕೆಯ ಗ್ಲ್ಯಾಮರ್ ಕಡಿಮೆಯಾಗುತ್ತದೆ, ಅಭಿಮಾನಿಗಳ ಸಂಖ್ಯೆ ಕುಸಿಯುತ್ತದೆ, ಆಕೆ ತೆರೆಮರೆಗೆ ಸರಿಯುತ್ತಾರೆ ಎಂಬುದನ್ನು ಮನಗಂಡಿರುವ ಆಯೋಜಕ ಬಳಗದ ಸದಸ್ಯರು, ಇನ್ನು ಮುಂದೆ ಇಂಥ ಅವಕಾಶ ಸಿಗಲಾರದು ಎಂದು ತಿಳಿದು ಈ ಕ್ರಮ ಕೈಗೊಂಡಿದ್ದಾರೆ.

ವಾಸ್ತವವಾಗಿ ಆಕೆ ಹೇಗೂ "ವಿಶ್ವ"ಸುಂದರಿ. ಹಾಗಾಗಿ "ವಿಶ್ವ"ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ಆಕೆಗೇನೂ ಕಷ್ಟವಾಗಲಾರದು ಎಂದು ಕೆಲವು ಮಂಡೆಗಳು ಯೋಚಿಸಿದ್ದವು. ಆದರೆ ಸಾಹಿತಿಗಳು ಭರ್ಜರಿಯಾಗಿ ತೆಗಳುವರು ಎಂಬ ಕಾರಣಕ್ಕೆ ಈ ಪ್ರಸ್ತಾಪ ಕೈಬಿಡಲಾಗಿತ್ತು ಎಂದು ತನಿಖಾ ವರದಿಯನ್ನು ಒಪ್ಪಿಸಲಾಗಿದೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅಭಾಕವಿವಾದ ಸಮ್ಮೇಳನ ಸಮಾರಂಭವು ಚಂಪಾ ಸಮಾರಂಪ ಆಗಿ ಪರಿವರ್ತನೆಗೊಂಡಿತ್ತು. ಅದಕ್ಕಂತೂ ಬೊಗಳೆ ರಗಳೆ ಬ್ಯುರೋಗೆ ಆಹ್ವಾನವಿರಲಿಲ್ಲ ಎಂಬುದರ ಬಗ್ಗೆ ಓದುಗ ಬಳಗವು ಅತ್ಯಂತ ಹರ್ಷ ವ್ಯಕ್ತಪಡಿಸಿತ್ತು. ಇದೀಗ ವಿಶ್ವ ಕನ್ನಡ ಸಮ್ಮೇಳನಕ್ಕೆ ಬ್ಯುರೋಗೆ ಆಹ್ವಾನ ನೀಡದೆಯೇ ಅದರ ಅಧ್ಯಕ್ಷತೆಗೆ ಮತ್ತು ಉದ್ಘಾಟನೆಗೆ ಹೆಸರುಗಳನ್ನು ಪತ್ತೆ ಹಚ್ಚುವಂತೆ ಕೋರಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷತೆಯ ಆಹ್ವಾನವನ್ನು ಬೊಗಳೆ ರಗಳೆ ಬ್ಯುರೋ ನಯವಾಗಿ ತಳ್ಳಿ ಹಾಕಿ, ಪ್ರಧಾನಿ ಪದವಿ ನಿರಾಕರಿಸಿದ ಸೋನಿಯಾ ಗಾಂಧಿಯಂತೆ ತ್ಯಾಗ, ಬಲಿದಾನ ಮುಂತಾದ ಗುಣಗಳನ್ನು ಮೆರೆದಿದೆ.

6 Comments

ಏನಾದ್ರೂ ಹೇಳ್ರಪಾ :-D

 1. ವಿಶ್ವಸುಂದರಿ ಅಂದರೆ ಯಾರವರು? ಅವರು ಈ ವಿಶ್ವಕ್ಕೇ ಅಪ್ರತಿಮ ಸುಂದರಿಯಾ? ಅವರಲ್ಲಿ ಒಂದು ಸ್ವಲ್ಪವೂ ಕುಂದು ಅಥವಾ ಕೊರತೆ ಇಲ್ಲವಾ? ಚಂಪಾ ಅವರೂ ವಿಶ್ವಸುಂದರಿಯಾ? ಬೊ-ರ ಗುಂಪಿನಲ್ಲಿ ವಿಶ್ವಸುಂದರಿಯನ್ನು ಏಕೆ ಕೆಲಸಕ್ಕೆ ಇಟ್ಟುಕೊಂಡಿಲ್ಲ. ಆಗಲಾದರೂ ಎಲ್ಲ ಕಡೆಗಳಿಂದ ಆಮಂತ್ರಣ ಬರುವುದು. ಸುದ್ದಿ ಸಂಗ್ರಹಿಸಿ, ಗ್ರಹಿಸಿ, ಗ್ರಾಹಕರಿಗೆ ಗ್ರಾಸ ಒದಗಿಸಬಹುದು. ನನ್ನ ಸಲಹೆಯನ್ನು ಸ್ವೀಕರಿಸುವಂತಿದ್ದರೆ, ಇಲ್ಲೊಬ್ಬರು ವಿಶ್ವಸುಂದರಿ ಕೆಲಸಕ್ಕಾಗಿ ಕಾಯುತ್ತಿದ್ದಾರೆ. ನಿಮ್ಮ ಕಡೆಗೆ ಕಳುಹಿಸುವೆ.

  ReplyDelete
 2. ವಿಶ್ವ ಸುಂದರಿ ಅಂದ್ರೆ....ಇಲ್ಲಿ ಯಾರೋ ಗುಲಾಬಿ ಇಸ್ಕೋತಾ ಇದ್ದಾರಲ್ಲ....ಅವರಾ??!!

  ReplyDelete
 3. ಶ್ರೀನಿವಾಸರೆ,
  ವಿಶ್ವಸುಂದರಿಯರು ಪ್ರತಿಮೆಯಂತಲ್ಲದೆ (ಅ-ಪ್ರತಿಮ)ರಾಗಿರುತ್ತಾರೆ. ಅಂದಹಾಗೆ
  ನಿಮ್ಮಲ್ಲಿ ಕೆಲಸಕ್ಕಾಗಿ ಕಾಯುತ್ತಿರುವ ವಿಶ್ವಸುಂದರಿಯನ್ನು ನಿನ್ನೆಯ ವರದಿಯಲ್ಲಿದ್ದಂತೆ ಪ್ರಯೋಗಕ್ಕೊಳಪಡಿಸಲು ಬೆಂಗಳೂರಿಗೆ ಕಳುಹಿಸಿ ನೋಡಿ. ಏನಾದ್ರೂ grass ಸಿಗೋದು ಗ್ಯಾರಂಟಿ.

  ReplyDelete
 4. ಓ... ಅನಾನಿಮಸರು ಆಗ್ಲೇ ವಿಶ್ವಸುಂದರಿಯನ್ನು ಅನ್ವೇಷಣೆ ಮಾಡಲು ತೊಡಗಿಬಿಟ್ಟಿದ್ದಾರೆ! ಪುಣ್ಯ, ಗುಲಾಬಿ ಕೊಡೋರು ಅಲ್ಲವಲ್ಲ..!

  ReplyDelete
 5. ಸಮ್ಮೇಳನ ಉದ್ಘಾಟನೆ ನಂತರ ಇಸ್ವ ಸುಂದ್ರಿ ಓದೋಕೆ ಭಾಷಣವ ಇಂಗ್ಲೀಸ್‍ನಲ್ಲಿ ಬರೆದುಕೊಡ್ತಾರ?

  ReplyDelete
 6. ಶಿವ್ ಅವರೆ,
  ನಿಮ್ "ದು"ರಾಲೋಚನೆ ಸರಿಯಾದದ್ದೇ. ಕಂಗ್ಲೀಸಿನಲ್ಲೇ ಬರೆದ ಭಾಷ್ಣ ಓದಿ, ಕನ್ನಡದಲ್ಲೇ ನಗೆಯಾಡ್ತಾರಂತೆ!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post