(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಡಿ.4- ರಾಜಕಾರಣಿಗಳೂ ಸತ್ಯ ನುಡಿಯಲಾರಂಭಿಸಿರುವುದು ಬೊಗಳೆ ರಗಳೆ ಬ್ಯುರೋವನ್ನು ವಿಶೇಷವಾಗಿ ಕೆರಳಿಸಿದ ಪರಿಣಾಮವಾಗಿ, ತಾಳ್ಮೆಗೆಡದಿರುವಂತೆ ಎಲ್ಲಾ ಪ್ರಜೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
 
ಹೀಗೆ ಸತ್ಯ ಹೇಳಲಾರಂಭಿಸಿರುವುದರಿಂದ ಕಳವಳಗೊಂಡ ಬ್ಯುರೋ ತಂಡವು ನೇರವಾಗಿ ಮಾವನ (ಮತ್ತು ತಮ್ಮ) ಸಂಪನ್ಮೂಲಗಳ ಅಭಿವೃದ್ಧಿ ಮಂತ್ರಿ ದುರ್ಜನ ಸಿಂಹ ಅವರನ್ನು ಮಾತನಾಡಲಾರಂಭಿಸಿತು. ಇದಕ್ಕೆಲ್ಲಾ ಕಾರಣವೆಂದರೆ ದೇಶದ ಜನತೆಯ ಸಹಿಷ್ಣುತೆಯೇ ಪ್ರಜಾಸತ್ತೆ ಸತ್ತೇಹೋಗದಿರಲು ಕಾರಣ ಎಂದು ಅವರು ಹೇಳಿಕೆ ನೀಡಿರುವುದು!
 
ಕಳೆದ 60 ವರ್ಷಗಳಿಂದ ಮೇಯಲು ಸಾಮರ್ಥ್ಯವಿರುವವರು ಮೇಯ್ದುಕೊಂಡೇ ಇರುವಂತಾಗಲು ಈ ದೇಶದ ಪ್ರಜೆಗಳ ತಾಳ್ಮೆ ಮತ್ತು ಪರಿಸ್ಥಿತಿಯನ್ನು ಅಳೆದು ತೂಗಿ ನೋಡಿ "ಸುಮ್ಮನಿರುವುದೇ ಲೇಸು" ಎಂದು ತೀರ್ಮಾನಿಸುವ ಗುಣಗಳೇ ಕಾರಣ ಎಂದು ಅವರು ನಮ್ಮ ಬ್ಯುರೋಗೆ ಮಾತ್ರವೇ ಸ್ಪಷ್ಟಪಡಿಸಿದ್ದಾರೆ.
 
ನೀವೇ ನೋಡಿ, ಬದುಕಲು ಬೇಕಾದ ವಸ್ತುಗಳ ಬೆಲೆಯನ್ನು ಎಷ್ಟು ಎತ್ತರಕ್ಕೇರಿಸಿದರೂ ಒಂದೆರಡು ದಿನ ಕೂಗಾಡಿ ಗಲಾಟೆ ಮಾಡುತ್ತಾರೆಯೇ ಹೊರತು, ಬೆಲೆ ತಗ್ಗಿಸುವವರೆಗೂ ಅವರೇನೂ ಬಿಗುವಾಗಿರುವುದಿಲ್ಲ. ಶಾಂತರಾಗಿ ತಮ್ಮ ಪಾಡಿಗೆ ತಾವು ಮರಳುತ್ತಾರೆ. ಅವರಿಗೂ ಪರಿಸ್ಥಿತಿಯ ಅರಿವಾಗಿರುತ್ತದೆ. ಯಾವುದೇ ಪ್ರತಿಭಟನೆ ಮಾಡಿ ಪ್ರಯೋಜನ ಇಲ್ಲ, ಆಳುವವರು ಈ ಬಗ್ಗೆ ಒಂದು ಕುಡಿನೋಟವನ್ನೂ ಹಾಯಿಸುವುದಿಲ್ಲ ಎಂಬ ಸತ್ಯಾಂಶಕ್ಕೆ ಅವರು ಒಗ್ಗಿ ಹೋಗಿದ್ದಾರೆ ಎಂದವರು ತಿಳಿಸಿದರು.
 
ಮೀಸಲಾತಿ ವಿಷಯಗಳೂ ಅಷ್ಟೇ, ಒಂದು ನೂರಿನ್ನೂರು ಮಂದಿ ಪ್ರತಿಭಟನೆ ಮಾಡಿ ಆತ್ಮದಹನ ಮುಂತಾದ ಕಾರ್ಯಗಳಿಗೆ ಮುಂದಾಗಬಹುದು. ಆದರೆ ಇದರ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಂಡರೆ, ನಮ್ಮ ಜೇಬು ತುಂಬಿಸಿಕೊಳ್ಳುವುದು, ಓಟಿನ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಸಿಕೊಳ್ಳುವುದು ಹೇಗೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾ ಇರುತ್ತಾರೆ ಎಂದು ಕ್ಯಾಕರಿಸಿ ನಕ್ಕರು.
 
ಈ ದೇಶದ ಪ್ರಜೆಗಳ ತಾಳ್ಮೆಯೇ ನಮ್ಮನ್ನು ಎಲ್ಲಾ ರಂಗಗಳಲ್ಲೂ, ಪ್ರತಿಯೊಂದು ಕ್ಷಣ ಕ್ಷಣವೂ ರಕ್ಷಿಸುತ್ತಿರುತ್ತದೆ. ಹಗರಣ ಬೆಳಕಿಗೆ ಬಂದಾಗ ಒಂದಷ್ಟು ಕೂಗಾಡುತ್ತಾರೆ, ತನಿಖಾ ಆಯೋಗ ರಚಿಸಿದ ತಕ್ಷಣ ಬಾಯಿ ಮುಚ್ಚುತ್ತಾರೆ. ತನಿಖಾ ಆಯೋಗದಲ್ಲಿ ನಮ್ಮವರನ್ನೇ ನೇಮಿಸಿದರಾಯಿತಲ್ಲಾ ಎಂದು ತಮ್ಮ ಚಾಣಕ್ಯ ನೀತಿಯ ಪ್ರಯೋಗಾನುಭವವನ್ನು ಮುಂದಿಟ್ಟರು.

10 Comments

ಏನಾದ್ರೂ ಹೇಳ್ರಪಾ :-D

 1. " ತಾಳಿದವನು ಬಾಳಿಸಿಯಾನು "

  ReplyDelete
 2. ಹಾಗಲ್ಲ Managing Director ಅವರೆ,

  ತಾಳಿಸಿದವರು ಬಾಳಿಯಾರು!

  ReplyDelete
 3. ತಾಳಿದವನು ಬಾಳಿಯಾನು
  ಬಾಳಿದವನು ಬೋಳಿಸಿಕೊಂಡಾನು
  ರಾಜಕಾರಣಿಯಿಂದ ಸತ್ಯದ ಮಾತು
  ಕಲಿಯುಗದಲಿ ತ್ರೇತಾಯುಗ ಕಂಡಿತು
  ದಿಟವಾಗಲು ನಿಮ್ಮ ಬಾಯಿಗೆ ತುಪ್ಪ ಸಕ್ಕರೆ ಹಾಕ
  ನರಕವೂ ತೋರುವುದು ನಾಕ
  ಭೋ ಅಸತ್ಯರೇ ನೀವಾಡುತಿರುವುದು ಸತ್ಯ
  ನಿಮ್ಮ ಕಣ್ಣಿಗೆ ಕಾಣುವವರೆಲ್ಲರೂ ನಿತ್ಯ

  ReplyDelete
 4. ಅನ್ವೇಷಿಗಳೇ, ಮಂತ್ರಿಗಳೆಲ್ಲ ಸತ್ಯ ನುಡಿಯಲು ಆರಂಭಿಸಿದ್ದಾರೆ. ನಿಮಗೆ ಇನ್ನು ಮೇಲೆ ನಿರುದ್ಯೋಗ ಕಾದಿದೆ. ಬೊಗಳೆ ಪತ್ರಿಕೆ ಆಫೀಸಿಗೆ ಬೀಗ ಹಾಕಿ, ನೀವು ಬೇರೆ ಕೆಲಸ ಹುಡುಕಿಕೊಳ್ಳುವುದೇ ಒಳ್ಳೆಯದು.

  ReplyDelete
 5. ಅಸತ್ಯಿಗಳೇ,

  ನಿಮಗೆ ನಾನು ಎಷ್ಟು ಹೇಳಿದೆ ಕಣ್ರೀ..ಸತ್ಯಾ ಹೇಳೋದನ್ನಾ ಪೇಟೆಂಟ್ ಮಾಡಿಸಿಕೊಳ್ಳಿ ಅಂತಾ..ಈಗ ನೋಡಿ ನಮ್ಮ ರಾಜ-ಕೀಟಾಣುಗಳೇ ಸತ್ಯ ಹೇಳೋಕೆ ಹೊರಟುಬಿಟ್ಟಿವೆ..ಹಿಂಗೆ ಎಲ್ಲರೂ ಸತ್ಯ ಹೇಳೋಕೇ ಶುರುಮಾಡಿದರೆ ಸತ್ಯ ಖಾಲಿಯಾಗಿ ಬಿಡುತ್ತೆ

  ReplyDelete
 6. ಮಾವಿನಯನಸರೆ,
  ನಿಮ್ಮ ಕವನಕ್ಕೆ ಶೀರ್ಷಿಕೆ
  ಬಾಳಿದವನು ಬೋಳಿಸಿಕೊಂಡಾನು !

  ReplyDelete
 7. ಶ್ರೀ ತ್ರೀ ಅವರೆ,

  ಬೊಗಳೆಗೆ ಬೀಗ ಹಾಕಬೇಕಿದ್ರೆ ಮಂತ್ರಿಗಳ ಕೈಬಿಸಿ ಮಾಡಬೇಕಂತೆ. ಮತ್ತೆ ನಮಗೆ ನಿರುದ್ಯೋಗ ದೊರಕಿಸಿಕೊಳ್ಳಲು ಕೂಡ ಮೊದಲ ತಿಂಗಳ ವೇತನ ಕೊಡಬೇಕಂತೆ.

  ಹಾಗಾಗಿ ನಾವು ಅತ್ತ ಕಡೆ ಹೋಗುವುದಿಲ್ಲ.
  :)

  ReplyDelete
 8. ಶಿವ್ ಅವರೆ,

  ಸತ್ಯ ವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು ಅಂತ ನಮ್ಮದು ಧ್ಯೇಯ ವಾಕ್ಯ.

  ಸತ್ಯ ಖಾಲಿಯಾದ್ರೆ ಸತ್ಯದ ಹಾಲಿಗೆ ಅಸತ್ಯದ ನೀರು ಸೇರಿಸಿ ಮಾರುತ್ತೇವೆ.

  ಜೈ ಕಲಬೆರಕೆ ತಂತ್ರಜ್ಞಾನ !

  ReplyDelete
 9. This comment has been removed by the author.

  ReplyDelete
 10. ಜಮಖಂಡಿಯೋರ್ಗೆ ಸ್ವಾಗತ ಕಣ್ರೀ,,,
  ಖರೇ ಖರೇನ ಸುಳ್ಳಿನ ಗುತ್ತಗಿ ಗುತ್ತಗಿ ಹಿಡ್ದಾರ ಅಂತ ಆರೋಪ ಮಾಡಿದ್ದೀರಲ್ರೀ...

  ಅದು ಹಂಗಲ್ಲ..
  ರಾಜಕೀಟಾಣುಗೋಳ್ ಸತ್ಯದ ಕುತ್ತಿಗೆ ಹಿಂಡ್ತಾರೆ,
  ನಾವಂತೂ ಅಸತ್ಯದ ಕುತ್ತಿಗೆ ಹಿಡ್ದಿದೀವಲ್ರೀ...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post