ಬೊಗಳೆ ರಗಳೆ

header ads

ಮುಕ್ತ ಮಾಲಿನ್ಯವಾಯು ಯಾನ!

(ಬೊಗಳೂರು ಮಾಲಿನ್ಯ ಬ್ಯುರೋದಿಂದ)
ಬೊಗಳೂರು, ಡಿ.2- ದೇಶದಲ್ಲಿ ಮುಕ್ತ ವಾಯುಯಾನ ನೀತಿಯನ್ನು ಜಾರಿಗೊಳಿಸಲಾಗಿರುವುದರಿಂದ ಸೇವನೆಗೆ ಯುಕ್ತವಾದ ವಾಯು ಇಲ್ಲದ ಕಾರಣ ಪ್ರಜೆಗಳು ತತ್ತರಿಸಿದ ಘಟನೆ ವರದಿಯಾಗಿದೆ.
 
ನಗರ ಪ್ರದೇಶಗಳಲ್ಲಿ ಪಬ್ ಸಂಸ್ಕೃತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹೆಚ್ಚಿನ ಮಂದಿ ಮುಕ್ತವಾಗಿ ವಾಯುವಿನಲ್ಲಿ ತೇಲಾಡುತ್ತಾ ಇರುತ್ತಾರಾದುದರಿಂದ ಅವರ ಮೇಲೆ ಈ ಹೊಸ ನೀತಿಯು ಯಾವುದೇ ಪ್ರಯೋಜನ ಬೀರಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.
 
ಈಗಾಗಲೇ ಕೊಚ್ಚೆ ಕೊಳಚೆಗಳು ಮಾತ್ರವಲ್ಲದೆ ವಾಹನಗಳೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ವಾಯು ಬಹುತೇಕ ಮಲಿನಗೊಂಡಿದೆ. ಇದೀಗ ಮುಕ್ತ ವಾಯು ತುಂಬಲು ಅವಕಾಶ ನೀಡಿರುವುದರಿಂದಾಗಿ ವಿದೇಶಗಳಿಂದ ಬರುವ ದುರ್ವಾಸನೆಯುಕ್ತ ತ್ಯಾಜ್ಯಗಳನ್ನೂ ತಂದು ದೇಶದ ಮಾರುಕಟ್ಟೆಗಳಲ್ಲಿ ಸುರಿಯಲಾಗುತ್ತಿದೆ.
 
ಇದರಿಂದ ಅವುಗಳು ಹೊರ ಸೂಸುವ (ದುರ್)ಗಂಧಭರಿತ ವಾಯು ನಗರವಿಡೀ ತುಂಬತೊಡಗಿದ್ದು, ಶುದ್ಧ ವಾಯುವಿಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ.
 
ಈಗಾಗಲೇ ಮುಕ್ತ ವಾಯುಯಾನದ ಸುಖವನ್ನು ವಿಮಾನಯಾನ ಕಂಪನಿಗಳು ಸೂಕ್ತವಾಗಿ ಅನುಭವಿಸುತ್ತಿದ್ದು, ಗಗನಕ್ಕೇರುತ್ತಿರುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ವಿಮಾನ ಪ್ರಯಾಣ ದರಗಳು ಗಗನದಿಂದ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
 
ಆದರೆ ವಿಮಾನ ಪ್ರಯಾಣ ದರ ಇಳಿಕೆ ಎಂದು ವಾಯುಯಾನ ಕಂಪನಿಗಳು ಮುಕ್ತವಾಗಿಯೇ ಜಾಹೀರಾತು ನೀಡಿ, conditions apply ಅನ್ನೋದನ್ನು ಆಗಸದಲ್ಲಿ ಯಾರಿಗೂ ಕಾಣಿಸದಷ್ಟು ಎತ್ತರದಲ್ಲಿ ಬರೆದಿರುವುದರಿಂದಾಗಿ ಅವುಗಳು ಯಾರ ಕಣ್ಣಿಗೂ ಗೋಚರಿಸದೆ ವಾಯುಯಾನಿಗಳ ಸಂಖ್ಯೆ ಮೇಲಕ್ಕೇರಿದೆ ಎಂದು ತಿಳಿದುಬಂದಿದೆ.
 
ಈ ಮಧ್ಯೆ, ಮುಕ್ತ ವಾಯುಯಾನ ಎಂಬ ವಿಷಯವನ್ನು ಉಚಿತ ವಾಯುಯಾನ ಎಂದು ತಿಳಿದುಕೊಂಡವರು ಕೂಡ ವಿಮಾನವೇರಲು ಧಾವಿಸತೊಡಗಿದ್ದು, ವಿಮಾನ ನಿಲ್ದಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಅಸತ್ಯಿಗಳೇ,

    ಮುಕ್ತ ವಾಯುಯಾನದ ಜೊತೆಗೆ ವಿಮಾನದಲ್ಲಿ ಮುಕ್ತಪಾನ ಮಾಡಿದರೆ ಇನ್ನೂ ಹೆಚ್ಚು ಜನ ಆಕಾಶದಲ್ಲಿ ಓಲಾಡಬಹುದಲ್ವೆ?
    ಆಗ 'ಪಬ್'ನಿಂದ ಜನರನ್ನು literally ಆಕಾಶದಲ್ಲಿ ತೇಲಿಸಬಹುದು..

    ಆ ನಿಟ್ಟಿನಲ್ಲಿ ಮಲ್ಯ ಅಂಕಲ್‍ರ ವಿಮಾನ ಕಂಪೆನಿ ಯಾವುದಾದರೂ ಇಂತ initiative ತಗೋಬಹುದು..

    ಪ್ರತ್ಯುತ್ತರಅಳಿಸಿ
  2. ಶಿವ್ ಅವರೆ,

    ನಿಮ್ಮ ಮಾತು ಸತ್ಯ.

    ನಾವು ಪಬ್ಬಿಗರನ್ನೇ ಆ ಕೆಲಸಕ್ಕಾಗಿ ಹಿಡೀತೀವಿ.

    ಮತ್ತೆ ಮಲ್ಯ ಅಂಕಲ್ ಅವರಂತೂ ಬಣ್ಣ ಬಣ್ಣದ ಹಕ್ಕಿಗಳ ಮಧ್ಯೆ ತೇಲಾಡುತ್ತಲೇ ಇರುತ್ತಾರೆ. ಅವರದೂ ಪೂರ್ಣ ಬೆಂಬಲ ದೊರೆಯಬಹುದು.

    ಪ್ರತ್ಯುತ್ತರಅಳಿಸಿ
  3. ವಾಯುಯಾನ ಇಷ್ಟು ದಿನಗಳು ಮುಕ್ತವಾಗಿರಲಿಲ್ಲವಂತೆ. ಆಕಾಶದಲ್ಲಿಯೂ ರಸ್ತೆಗಳನ್ನು ನಿರ್ಮಿಸಿ, ಇಂತಹ ವಿಮಾನಗಳು ಇಂತಹದ್ದೇ ರಸ್ತೆಗಳಲ್ಲಿ ಹೋಗಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿದ್ದಾರಂತೆ. ಇನ್ನುಮೇಲೆ ಗಂಧದ ವಾಸನೆ, ಗಂಧದ ರಸವನ್ನು ಸುಗಂಧಿನಿಯರು ಯಾತ್ರಿಗಳಿಗೆ ಹಂಚುವರಂತೆ. ಇದಕ್ಕಾಗಿ ಪ್ರಯಾಣಿಕರು ಮುಂಗಡವಾಗಿ ಅರ್ಜಿಯನ್ನು ಸಲ್ಲಿಸಬೇಕಂತೆ. ಸುಗಂಧಿನಿಯರ ಅವಶ್ಯಕತೆ ಹೆಚ್ಚಾಗಿದ್ದು, ಅವರುಗಳೂ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಕೋರಿದ್ದಾರೆ. ಯಾರು ಏನು ಅಂತ ಕೇಳಬೇಡಿ. ಸೇವೆ ಮತ್ತು ಸವಲತ್ತುಗಳು ಬೇಕಿದ್ದು, ಅರ್ಜಿ ಬೇಕಿದ್ದವರು, ನನ್ನನ್ನು ಪ್ರತ್ಯೇಕವಾಗಿ ಸಂಪರ್ಕಿಸಿ. ಅನ್ವೇಷಿಗಳ ಮೂಲಕ ಬಂದರೆ ಅವರಿಗೂ ದಲ್ಲಾಳಿ ಕೊಡಿಸುವೆ. ಮಲ್ಯರ ಅಪ್ಪನಂತಹ ಕಂಪನಿಗಳು ನಮ್ಮಲ್ಲಿವೆ.

    ಪ್ರತ್ಯುತ್ತರಅಳಿಸಿ
  4. ಮಾವಿನಯಸರೆ,

    ನಿಮ್ಮ ದುರ್ಗಂಧಿನಿಯರಿಗೆ ಜೈಲಾಗಲಿ.

    ನೀವು ನಮಗೆ ದಲ್ಲಾಳಿಯನ್ನೇ ಮಾರೋ ತಯಾರಿ ನಡೆಸುತ್ತಿದ್ದೀರೀಂತ ಗೊತ್ತಾಗಿದೆ. ದಲ್ಲಾಳಿಯ ಕಥೆ ಕೈಲಾಸ.

    ಪ್ರತ್ಯುತ್ತರಅಳಿಸಿ
  5. ಮಲ್ಯ ಅಂಕಲ್‌ ನನ್ನ ಕೈಗೂ ಸಿಗ್ತಾ ಇಲ್ಲ. ಯಾವಾಗ ವಿಚಾರಿಸಿದರೂ ಕಂಚುಕಧಾರಿಣಿಯರ ಜೊತೆ ಇರುತ್ತಾರೆ.

    ಪ್ರತ್ಯುತ್ತರಅಳಿಸಿ
  6. ಪಬ್ಬಿಗರೇ,

    ನೀವು ಕೂಡ ಮಧ್ಯೆ ನುಸುಳಿ ಅವರನ್ನು ಹುಡುಕಿಬಿಡಿ.

    ಅವರನ್ನು ಜೋರಾಗಿ ಎಳೆದು ಬೇರ್ಪಡಿಸಿ ವಿಮಾನದಲ್ಲಿ ತಂದು ಕೂರಿಸಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D