ಬೊಗಳೆ ರಗಳೆ

header ads

ಸಂಸತ್ತಿನಲ್ಲೂ ಉದ್ಯಮ ಸ್ಥಾಪನೆ

(ಬೊಗಳೂರು ದಂಧೆ ಬ್ಯುರೋದಿಂದ)
ಬೊಗಳೂರು, ನ.29- ಸುಮ್ಮನೆ ಬೈಕು, ಸ್ಕೂಟರ್ ಓಡಿಸುತ್ತಾ ಹಾಯಾಗಿ ಇರಬೇಕಾದ ಉದ್ಯಮಿಗಳೆಲ್ಲಾ ರಾಜಕೀಯ ಗೊತ್ತಿಲ್ಲದೆ "ದೇಶ ಆಳುವ ಉದ್ಯಮ"ಕ್ಕೆ ಕಾಲಿಟ್ಟರೆ ಹೀಗೇ ಆಗೋದು. ಇವರ ಉದ್ಯಮವನ್ನು ಮುಳುಗಿಸಿಯೇ ತೀರುತ್ತೇವೆ ಎಂದು ರಾಜಕೀಯ ಪಕ್ಷಗಳು ಪಣತೊಟ್ಟಿರುವ ಪ್ರಕರಣವೊಂದು ವರದಿಯಾಗಿದೆ.

ಸಂಸತ್ ಕಲಾಪ ಮುಂದೂಡಿಕೆಗೆ ಕಾರಣವಾಗುವ ರಾಜಕೀಯ ಪಕ್ಷಗಳಿಗೆ ಗಂಟೆಗೆ ಒಂದು ಕೋಟಿ ದಂಡ ವಿಧಿಸುವ ಮೂಲಕ ಇವರು ಬಹುಕೋಟಿ ರೂ.ಗಳ ಉದ್ಯಮ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜಕೀಯ ಪಕ್ಷಗಳು, ಬಾಹುಲ್ ರಜಾಜ್ ಬೈಕುಗಳ ಟಯರಿನ ಗಾಳಿ ತೆಗೆಯಲು ಸಿದ್ಧತೆ ನಡೆಸುತ್ತಿವೆ.

ಇವರಿಗೆ ಎಲ್ಲಿ ಹೋದರೂ ಉದ್ಯಮ ಮಾಡುವ ಮನಸ್ಥಿತಿ. ದಿನಾಲೂ ಪ್ರತಿ ರಾಜಕೀಯ ಪಕ್ಷವೂ ಸಂಸತ್ತಿನಲ್ಲಿ ಕೋಲಾಹಲ ಮಾಡಿ ಗದ್ದಲ ಎಬ್ಬಿಸುತ್ತಿದೆ. ಹಾಗಿರುವಾಗ ಒಂದು ಅಧಿವೇಶನದ ಅವಧಿಯಲ್ಲಿ ಭರ್ಜರಿ ಬಹುಕೋಟಿ ರೂಪಾಯಿ ಸಂಗ್ರಹವಾಗುತ್ತದೆ ಎಂಬ ಶುದ್ಧ ಉದ್ಯಮದ ಮಂಡೆಯ ರಜಾಜ್, ರಾಜಕೀಯಕ್ಕಿನ್ನೂ ಹೊಸಬರೂಂತ ಕಾಣಿಸುತ್ತೆ ಅಂತಾನೂ ಬೊಗಳೆ ಮಾತುಗಳು ಕೇಳಿಬಂದಿವೆ.

ರಜಾಜ್ ಅವರು ಪಕ್ಷೇತರನಾಗಿರುವುದೇ ಇದರ ಹಿಂದಿನ ದೊಡ್ಡ ಗುಟ್ಟು. ಯಾಕೆಂದರೆ ಇವರಿಗೆ ಪಕ್ಷವೇ ಇಲ್ಲ. ಹಾಗಾಗಿ ಅವರು ಗದ್ದಲ ಮಾಡಿದರೆ ದಂಡ ಕಟ್ಟಬೇಕಾಗಿಲ್ಲ. ಇದೇ ಕಾರಣಕ್ಕೆ ಇತರ ರಾಜಕೀಯ ಪಕ್ಷಗಳನ್ನು ಅವರ "ಉದ್ಯಮದ ಪ್ರತಿಸ್ಪರ್ಧಿ" ಎಂದು ಭಾವಿಸಿ ಮುಳುಗಿಸಲು ಹೊರಟಿದ್ದಾರೆ ಎಂದಿರುವ ರಾಜಕೀಯ ಪಕ್ಷಗಳು, ಯಾವುದೇ ಕಾರಣಕ್ಕೂ ನಮ್ಮ ರಾಜಕೀಯೋದ್ಯಮ ಮುಳುಗಲು ಬಿಡುವುದಿಲ್ಲ ಎಂದು ಪಣ ತೊಟ್ಟಿವೆ.

ನಮಗೆ ನಮ್ಮದೇ ಆದ ಖಾಸಗಿ ತುರ್ತು ಕೆಲಸಗಳಿರುತ್ತವೆ. ಯಾವುದಾದರೂ ಪಾರ್ಟಿ, ಮದುವೆ, ಸುಲಿಗೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಬೇಕಿರುತ್ತದೆ. ಅಥವಾ ರಾತ್ರಿಯಿಡೀ ಪಾರ್ಟಿ ಮಾಡಿ ಹಗಲು ನಿದ್ದೆಯ ಅವಶ್ಯಕತೆಯಿರುತ್ತದೆ. ಇದೆಲ್ಲಾ ನಾವು ಮಾಡುವುದು ದೇಹದ ... ಅಲ್ಲಲ್ಲ... ದೇಶದ ಒಳಿತಿಗಾಗಿ. ಹೀಗೆ ನಿದ್ದೆಗೆಟ್ಟಿರುವಾಗ ಕಲಾಪದಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ? ಎಂದು ಪ್ರಶ್ನಿಸಿರುವ ಅವರು, ಸದನದಿಂದ ಹೊರ ಬೀಳುವುದಕ್ಕೋಸ್ಕರ ಕಲಾಪ ಸ್ಥಗಿತಗೊಳಿಸುವಷ್ಟು ಕೋಲಾಹಲ ಮಾಡಲೇಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾವು ಗಲಾಟೆ ಮಾಡಿದರೆ ಪಕ್ಷಕ್ಕೇಕೆ ದಂಡ ವಿಧಿಸಬೇಕು ಎಂದೂ ಕೇಳಿರುವ ಅವರುಗಳು, ಬಾಹುಲ್ ರಜಾಜ್ ಅವರಿಗೆ ರಾಜಕೀಯದ ಎಬಿಸಿಡಿ ಕಲಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. dosxiyಬಹುಲ ರಜಾಜಿಗೆ ಇದ್ ಬೇಕಿತ್ತ?

    ಇದರ ಬದಲು, ಬಜಾಜ್ ಸಂಸ್ತೆಗೆ, ಮೀಸಲಾತಿಯಾದರು ಕೇಳಿದ್ದರೆ, ಸಿಗುತ್ತಿತ್ತೇನೊ.

    ರಾಹುಲ್ ಅನ್ನೊರೆಲ್ಲರು ಹೀಗೇನೇನೊ. ಹಿಂದೆ, ಗಾಹುಲ್ ರಾಂಧಿ ಕೂಡ, ಸಂಸತ್ ಕಾಲಪ ವೃತಾ ಮುಂದೂಡಿಕೆ ಆಗಿತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಲು, ಸತ್ಯಗ್ರಹ ಮಾಡಿದ್ದರು(೧ ಘಂಟೆ ಸುಧೀರ್ಘವಧಿ).

    ಒಟ್ಟಿನಲ್ಲಿ, ಸಂಸತ್ನಲ್ಲಿ ಕಲಾಪ ಮುಂದೂಡುವವರಿಗೆ ಮಾತ್ರ ಮೀಸಲಾತಿ, ಎಲ್ಲ ಕಾಂಗ್ರೇಸ್ ಮಹಿಮೆ.

    ಇಂತಿ
    ಭೂತಗಳಿಗು ಮೀಸಲಾತಿ ಕೇಳುವವ
    ಭೂತ

    ಪ್ರತ್ಯುತ್ತರಅಳಿಸಿ
  2. ಭೂತರಮೆಯೇ,

    ಉದ್ಯಮಿಗಳಿಗೆ ಎಲ್ಲೆಲ್ಲೂ ಉದ್ಯಮವೇ ಕಾಣಿಸುತ್ತದೆ ಅನ್ನೋದು ನಮ್ಮದಲ್ಲದ ಆರೋಪ.

    ಆದರೆ, ನಿಮ್ಮ ಲೋಕದಲ್ಲಿ ಮೀಸಲಾತಿ ಕೇಳೋದು ಬಿಟ್ಟು ಈ ಮಂಗಗಳ ಗ್ರಹದಲ್ಲೇ ಮೀಸಲಾತಿ ಬೇಕು ಅನ್ನೋದರ ಹಿಂದಿನ ತಥ್ಯವೇನು?

    ಪ್ರತ್ಯುತ್ತರಅಳಿಸಿ
  3. ಸಂಸದಿನಲ್ಲಿರೋವ್ರಿಗೆ ಕೆಲಸವಿಲ್ಲ. ವರ್ಷಕ್ಕಿಷ್ಟು (೨ ಕೋಟಿ) ಅಂತ ಕಾಸು ಕೊಡ್ತಾರೆ. ಅದು ಖರ್ಚಾಗಬೇಕು. ಸಂಸದಿಗರ ಹೊಟ್ಟೆ - ಗುಡಾಣ ತುಂಬಬೇಕು - ಅದರ ಮೇಲೂ ನೀವು ಕಣ್ಣು ಹಾಕಿದ್ರೆ, ನಿಮಗೆ ಸ್ವಲ್ಪ ಕೊಸರು ಸಿಗಬಹುದು. ಪ್ರಯತ್ನಿಸಿ. ಈ ಲೇಖನದ ಪ್ರತಿಯನ್ನು ಈಗಲೇ ಸಂಪದಿಗರಿಗೆ ಕಳುಹುತ್ತಿರುವೆ.

    ಪ್ರತ್ಯುತ್ತರಅಳಿಸಿ
  4. ಮಾವಿನಯನಸರೆ,
    ದಯವಿಟ್ಟು ನಮ್ಮ ಜಾತಕ ಎಲ್ಲಾ ಬಹಿರಂಗ ಮಾಡಬೇಡಿ,
    ನಮಗೆ ಸಂಸದರಿಂದ ಬರುತ್ತಿರುವ ಕೋಟಿ ಕೋಟಿಗೂ ತತ್ವಾರ ಬಂದೀತು !!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D