ಬೊಗಳೆ ರಗಳೆ

header ads

ದಾಖಲೆ: ಅಮಿತಾಭ್‌ಗೆ ಸೆಡ್ಡು ಹೊಡೆದ ಜಾರಕಾರಣಿಗಳು!

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ನ.4- ವಯೋವೃದ್ಧರೂ ನಟನಾ ವೃದ್ಧರೂ ಆದ ಬಾಲಿವುಡ್‌ನ ಪ್ರಥಮ ಪ್ರಜೆ 64ರ ಹರೆಯದ ಅಮಿತಾಭ್ ಬಚ್ಚನ್ ಅವರು ಐದು ಗಂಟೆಗಳಲ್ಲಿ 23 ದೃಶ್ಯದಲ್ಲಿ ಪಾಲ್ಗೊಂಡಿದ್ದು ದಾಖಲೆ ಎಂದು ಇಲ್ಲಿ ಸುದ್ದಿಯಾಗುತ್ತಿರುವಂತೆಯೇ ಕೆರಳಿ ಕೆಂಡವಾಗಿರುವ ರಾಜಕಾರಣಿಗಳು, ಈ ದಾಖಲೆ ತಮ್ಮ ಪಾಲಿಗೆ ಸೇರಬೇಕು ಎಂದು ಮುಗಿಬಿದ್ದ ಘಟನೆಯೊಂದು ಯಾರ ಗಮನಕ್ಕೂ ಬಂದಿಲ್ಲ.

ಅಮಿತಾಭ್ ಅವರು ಐದು ಗಂಟೆಗಳಲ್ಲಿ ಕೇವಲ 23 ಬಾರಿ ಬಣ್ಣ ಬದಲಿಸಿದ್ದಾರೆ. ಆದರೆ ನಾವು ಒಂದು ನಿಮಿಷದಲ್ಲಿ ಎಷ್ಟು ಬಾರಿ ಬಣ್ಣ ಬದಲಿಸುತ್ತೇವೆ ಎಂಬುದು ಇವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿರುವ ಜಾರಕಾರಣಿಗಳು, ಗಿನ್ನಿಸ್ ದಾಖಲೆ ಪುಸ್ತಕದ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಲು ಸಕಲ ಸಿದ್ಧತೆಗಳನ್ನೂ ನಡೆಸುತ್ತಿದ್ದಾರೆ.

ಅಮಿತಾಭ್ ಅವರಿಗೆ ವೇಷ ಬದಲಿಸುವುದು, ನಟಿಸುವುದು ಮಾತ್ರ ಗೊತ್ತಿದೆ. ಆದರೆ ನಮ್ಮದು ಯಾವುದೂ ನಟನೆ ಅಲ್ಲ. ನೈಜತೆ. ಏನಿದ್ದರೂ ಮಾಡಿ ತೋರಿಸುತ್ತೇವೆ ಎಂದಿರುವ ಜಾರಕಾರಣಿಗಳು, ಅಮಿತಾಭ್ ಅವರು ಡಯಲಾಗ್‌ಗಳನ್ನು ಕಂಠಪಾಠ ಮಾಡಿಯೋ, ಅಥವಾ ಹಿಂದೆ ಮುಂದು ನೋಡಿಕೊಂಡೋ ಹೇಳುತ್ತಾರೆ. ಆದರೆ ನಮಗೆ ಆ ತರಬೇತಿ ಎಲ್ಲಾ ಬೇಕಾಗಿಲ್ಲ. Instantaneous ಆಗಿ ನಮ್ಮ ಬಾಯಿಯಿಂದ ಸಂದರ್ಭಕ್ಕೆ ತಕ್ಕಂತೆ ಅಣಿಮುತ್ತುಗಳು ಉದುರುತ್ತವೆ. ಅದನ್ನು ಯಾರು ಬೇಕಾದರೂ ಹೆಕ್ಕಿಕೊಂಡು, ತಮಗೆ ಬೇಕಾದಂತೆ ಭಾವಿಸಿಕೊಳ್ಳಬಹುದು ಎಂದವರು ಹೇಳಿದ್ದಾರೆ.

ಮತ್ತೇನಾದರೂ ಹೆಚ್ಚು ಕಡಿಮೆಯಾದರೆ ಮರುದಿನ ಹೇಗೂ ನಿರಾಕರಣೆ ಅವಕಾಶ ಇದ್ದೇ ಇರುತ್ತದೆ ಎಂದೂ ಅವರು ಸೇರಿಸಿದ್ದು, ಗಿನ್ನೆಸ್ ದಾಖಲೆ ಪುಸ್ತಕದ ಕಚೇರಿಯತ್ತ ದಾಪುಗಾಲು ಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಸತ್ಯಕ್ಕೆ ಕನ್ನಡಿ ಹಿಡಿದಿದ್ದ್ರೀರಿ.
  ಜಾರಕಾರಣಿಗಳ ಮಾನ ಮರ್ಯಾದೆಗಳನ್ನು ಮೂರುಕಾಸು ಮಾಡಿ ಹರಾಜು ಹಾಕಿದ್ದೀರಿ. ಅವರೇನಾದರೂ ಇದನ್ನು ಓದಿದರೆ, ತುಂಬೇ ಹೂವಿನ ಗಿಡಕ್ಕೆ ಸುತ್ತಲೀ ದಾರ ಕಟ್ಟಿ ನೇಣು ಹಾಕಿಕೊಳ್ಳುವರು ಅಥವಾ ಒಂದು ತಂಬಿಗೆಯಲ್ಲಿ ನೀರು ತುಂಬಿಸಿ ಅದರೊಳಗೆ ಮುಳುಗಿ ಪ್ರಾಣಬಿಡುವರು.

  ಇಂದಿನಿಂದ ನಿಮಗೆ ಸತ್ಯಾನ್ವೇಷೀ ಎಂದು ಮರುನಾಮಕರಣ ಮಾಡಲಾಗಿದೆ.

  ಪ್ರತ್ಯುತ್ತರಅಳಿಸಿ
 2. ಅಸತ್ಯಿಗಳೇ,

  ಇದೀಗ ಬಂದ ಸುದ್ದಿಯ ಪ್ರಕಾರ ನಮ್ಮ 'ನೈಜ್ಯ ಅಭಿನಯ' ಪರಿಣತ ರಾಜಕಾರಣಿಗಳು ತಮೆಗೆಲ್ಲರಿಗೂ ಒಂದೊಂದು ದಾದಾ ಪಾಲ್ಕೆ ಪ್ರಶಸ್ತಿ ಕೊಡಬೇಕೆಂದು ಅಗ್ರಹಿಸುತ್ತಿದ್ದಾರಂತೆ..

  ಅಂದಾಗೆ ಗಿನ್ನಿಸ್ ದಾಖಲೆಯಲ್ಲಿ ಹೆಸರು ಸೇರಿಸಲು ಎಷ್ಟು ಹೆಂಡ-ಹಣ ಹಂಚಲು ಸಿದ್ದ ಅಂದರಂತೆ.ಅದಕ್ಕೆ ಗಿನ್ನಿಸ್‍ನವ್ರು ಇದೇನು ನಿಮ್ಮ ಚುನಾವಣೆನಾ ಅಂತಾ ಉಗಿದು ಕಳಿಸಿದರಂತೆ

  ಪ್ರತ್ಯುತ್ತರಅಳಿಸಿ
 3. ಇಲ್ಲ ಮಾವಿನರಸರೆ,
  ಜಾರಕಾರಣಿಗಳ ಮಾನ ಹರಾಜು ಹಾಕಿದಾಗ ಕೇವಲ ಒಂದುವರೆ ಕಾಸು ಮಾತ್ರ ಸಿಕ್ಕಿತು...

  ಸತ್ಯಾನ್ವೇಷಿ ಎಂಬ ನಾಮಕರಣ ಮಾಡಿದ ಕಾರಣ ತೀವ್ರವಾಗಿ ಆಘಾತಗೊಂಡಿರುವ ಬ್ಯುರೋ ಸಿಬ್ಬಂದಿಗಳಿಗೆಲ್ಲರಿಗೂ ನೀರು ಕುಡಿಸಲಾಗುತ್ತಿದೆ... ಗಾಳಿ ಹಾಕಲಾಗುತ್ತಿದೆ, ಅವರೆಲ್ಲ ಚಾ-ತರಿಸಿಕೊಳ್ಳುವುದನ್ನೇ ಕಾಯಲಾಗುತ್ತಿದೆ.

  ಪ್ರತ್ಯುತ್ತರಅಳಿಸಿ
 4. ಶಿವ್ ಅವರೆ,
  ಈ ಚೋರಕಾರಣಿಗಳು ಆ ಗಿನ್ನಿಸ್ ಇಲ್ಲದಿದ್ದರೇನಂತೆ.... ನಾವೇ ಬೇಕಾದಷ್ಟು ದಾಖಲೆ ಪತ್ರಗಳನ್ನು ಸಿದ್ಧಪಡಿಸಿ, ನಮಗೆ ನಾವೇ ಕೊಟ್ಟುಕೊಂಡು ಪತ್ರಿಕೆಗಳಲ್ಲಿ ಜಾಹೀರಾತು ಕೊಡಿಸಿಕೊಳ್ಳುತ್ತೇವೆ ಅನ್ನುತ್ತಿದ್ದಾರೆ...!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D