Subscribe Us

ಜಾಹೀರಾತು
header ads

ಮನಸು ಕದ್ದ ಹಸುಳೆ ಮೇಲೆ ದರೋಡೆ ಕೇಸು!

(ಬೊಗಳೂರು ಪುಟಾಣಿ ಬ್ಯುರೋದಿಂದ)

ಬೊಗಳೂರು, ನ.3- ಇದು ಹೈ-ಕೆಟ್ ಯುಗವಾಗಿರುವುದರಿಂದ ಪುಟ್ಟು ಪುಟಾಣಿಗಳು ಹುಟ್ಟುವ ಮೊದಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಾಧ್ಯತೆಗಳನ್ನು ಬೊಗಳೂರು ಬೊಗಳೆ ಬ್ಯುರೋ ಈ ರಾಬರಿ ದೇವಿ ಆಳಿದ್ದ ಬಿಹಾರದಲ್ಲಿ ಮೂರು ತಿಂಗಳ ಮಗು ಬರೋಬರಿ ರಾಬರಿ ಮಾಡಿದ್ದು ಹೌದು ಎಂಬುದು ಸಾಬೀತಾಗಿದೆ.

ಈ ಪುಟ್ಟ ಮಗು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಲೇ ಆ ಬಸ್ಸಿನಲ್ಲಿದ್ದವರ ಎಲ್ಲ ಪ್ರಯಾಣಿಕರನ್ನು ಸಂಪೂರ್ಣವಾಗಿ ಮೈಮರೆಯುವಂತೆ ಮಾಡಿತ್ತು ಎಂಬುದು ತಿಳಿದುಬಂದಿದೆ. ಇದಲ್ಲದೆ ಅದರ ಬಳಿ ಹರಿತವಾದ ಆಯುಧವೊಂದಿತ್ತು. ಅದು ಕುಡಿನೋಟದಿಂದ ಕಣ್ಣು ಪಿಳಿ ಪಿಳಿ ಮಾಡಿತೆಂದರೆ, ಅಲ್ಲಿದ್ದವರೆಲ್ಲರ ಹೃದಯ ಚುಚ್ಚಿದಂತಾಗಿ ಬೋಲ್ಡಾಗಿ ಬಿಡುತ್ತಿದ್ದರು. ಅವರೆಲ್ಲಾ ಭಾವಪರವಶರಾದಾಗ ಈ ಮಗು ಅವರ ಹೃದಯದಲ್ಲಿದ್ದ ಚಿನ್ನಾ, ರನ್ನಾ, ಮುದ್ದು... ಬಂಗಾರಾ... ಎಲ್ಲವನ್ನೂ ಕದಿಯುತ್ತಿತ್ತು ಎಂದು ಬ್ಯುರೋ ಕಂಡುಕೊಂಡಿದೆ.

ತನ್ನ ಮುದ್ದು ಮುಖಗಳನ್ನು ತೋರಿಸುತ್ತಲೇ ಹಲವಾರು ಮನಸ್ಸುಗಳನ್ನು ದರೋಡೆ ಮಾಡುವ ಈ ಮಗುವಿನ ಮೇಲೆ ಕೇಸು ಜಡಿಯಲಾಗಿದ್ದು, ಆ ಮಗು ಕದ್ದು ತನ್ನ ಮುಗ್ಧ ಮನಸ್ಸಿನಲ್ಲಿ ಶೇಖರಿಸಿಟ್ಟುಕೊಂಡ ಪ್ರೀತಿ, ವಾತ್ಸಲ್ಯವೆಲ್ಲವನ್ನೂ ಹಿಂತಿರುಗಿಸುವಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಾಗಾಗಿ... ಬಾಲ ಲೀಲೆಗಳಿಂದ ದಿನ ಕಳೆಯಲು ನೆರವಾಗುತ್ತಿದ್ದ ನಗುಮುಖದ ಪುಟಾಣಿ ಮಗು ಕಳೆದು ಹೋಗಿದೆಯೇ? ಮೊದಲು ಪೊಲೀಸ್ ಠಾಣೆಯಲ್ಲಿ ಹುಡುಕಿದರೆ ಸಿಗಬಹುದು ಎಂದು ಅಮೂಲ್ಯ ಸಲಹೆ ನೀಡಲಾಗುತ್ತದೆ.

ಅಲ್ಲಾ..., ಪುಟ್ಟ ಮಕ್ಕಳೂಂತ ಅವರಿಗಾಗಿ ನಮ್ಮ ಬ್ಯುರೋ ಏನೇನೆಲ್ಲಾ ಮಾಡಿ ಸ್ಪರ್ಧೆ ಇತ್ಯಾದಿ ಏರ್ಪಡಿಸಿದರೆ.... ಹೀಗಾ ಮಾಡೋದು!!!

ಸೂಚನೆ:

ದೇಶದ ಅತ್ಯಂತ ಪ್ರತಿಷ್ಠಿತ ಹಿಂದೂ ಪತ್ರಿಕೆಯಲ್ಲೂ ಬೊಗಳೆ ರಗಳೆಯನ್ನು Fake ಪತ್ರಿಕೆ ಎಂದು ಜರಿದು ಅವಮಾನ ಮಾಡಿರುವುದು ನಮ್ಮ ನಿರರ್ಥಕ ಪ್ರಯತ್ನಕ್ಕೆ ಸಂದ ಮನ್ನಣೆ ಎಂದು ಭಾವಿಸಲಾಗುತ್ತಿದೆ. ಕನ್ನಡ ಬೊಗಳಿಗರ ಕುರಿತು ಪ್ರಕಟವಾದ ಲೇಖನ ಇಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ನನ್ನ ಕೈಗೆ ಶ್ರೀಕೃಷ್ಣ ಎಂಬ ಪುಟ್ಟ ಕಳ್ಳ ಸಿಕ್ಕಿದ್ದೇ ಹೀಗೆ. ನನ್ನ ಅನುಭವವನ್ನೇ ನೀವು ಬರೆಯುತ್ತಿದ್ದೀರಿ ಎಂದು ತಿಳಿದಿದ್ದೆ. ನಂತರ ಇಂದಿನ ದಿನಪತ್ರಿಕೆ ನೋಡಿದ ಮೇಲೆ ನಿಜವಾದ ಸುದ್ದಿ ಗೊತ್ತಾಗಿದ್ದು.

  ಅಲ್ಲ, ಈ ಪತ್ರಿಕೆಗಳಿಗೆ ಸಿಗುವ ಮೊದಲೇ ನಿಮಗೆ ಹೇಗೆ ಸುದ್ದಿ ಸಿಗುತ್ತಿದೆ. ನಿಮ್ಮ ವರದಿಗಾರರಿಗೆ ಎಷ್ಟು ಸಂಬಳ ಕೊಡುತ್ತಿದ್ದೀರಿ? ನಾನೂ ನಿಮ್ಮಲ್ಲೇ ಕೆಲಸಕ್ಕೆ ಸೇರಬೇಕೆಂಬ ಆಸೆಯಾಗುತ್ತಿದೆ. ಸೇರಿಸಿಕೊಳ್ಳುವಿರಾ?

  ಪ್ರತ್ಯುತ್ತರಅಳಿಸಿ
 2. ಯಪ್ಪ,

  ೩ ತಿಂಗಳ ಮೊಗು ಕಳ್ಲತನ. ನಮ್ಮಲ್ಲಿ ಭೂತಗಳಿಗೆ ಹೃದಯವಿಲ್ಲದ ಕಾರಣ, ನಮ್ಮ ಹೃದಯ ದದಿಯಲಾಗಲಿಲ್ಲ.

  ಭೂತ

  ಪ್ರತ್ಯುತ್ತರಅಳಿಸಿ
 3. ಶ್ರೀಗಳೆ
  ನಮ್ಮಲ್ಲಿ ಒದರಿಗಾರರಿಗೆ ಸಂಬಳವಿಲ್ಲ, ಗಿಂಬಳವೇ ಎಲ್ಲ....
  ಬೇಕಾದಷ್ಟು ಸಂಪಾದಿಸಬಹುದಾಗಿರುವುದರಿಂದ ನಿಮ್ಮ ಮೀಸಲು ಬ್ಯಾಂಕ್ ಯಾವ ಲೆಕ್ಕ!!!

  ಪ್ರತ್ಯುತ್ತರಅಳಿಸಿ
 4. ಭೂತಕ್ಕೆ ಹೃದಯವಿಲ್ಲದಿರುವುದಕ್ಕೆ ಅದನ್ನು ಯಾರೋ ಕದ್ದಿರುವುದೇ ಕಾರಣ ಅಂತ ಗೊತ್ತಾಗಿದೆ.
  ಯಾರಿಗೆ ಕೊಟ್ಟಿದ್ದೀರಿ ಹೃದಯವನು ಭೂತವೇ?

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D