(ಬೊಗಳೂರು ಅಸತ್ಯಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ನ.2- ದೇಶದಲ್ಲಿ ಬಡತನ ನಿವಾರಿಸಲು ಬಡವರ ನಿರ್ನಾಮವೇ ಗುರಿ ಎಂದು ಹಿಂದಿನ ಕಾಲದಿಂದಲೂ ನಮ್ಮನ್ನು ಆಳುತ್ತಿರುವವರು ಹೇಳುತ್ತಾ ಬಂದಿರುವುದರ ಹಿಂದಿನ ರಹಸ್ಯ ಬಯಲಾಗಿಸಲು ಸಕಲ ಸಿಬ್ಬಂದಿ ಸಮೇತ ತಲೆಮರೆಸಿಕೊಂಡಿರುವ ಬ್ಯುರೋ ಎಚ್ಚೆತ್ತು ಹೊರಟ ಪರಿಣಾಮ ರುದ್ರಭೀಕರ ಮಾಹಿತಿಯೊಂದು ಬಯಲಾಗಿದೆ.

ಮಹಾತ್ಮಾ ಗಾಂಧೀಜಿ ತುಳಿದ ಹಾದಿ ಅನುಸರಿಸುತ್ತಿರುವವರು ನಮ್ಮ ರಾಜಕಾರಣಿಗಳು. ಅದನ್ನೀಗ ಗಾಂಧಿ ಹೆಸರಿನಲ್ಲಿ ವಂಶಪಾರಂಪರ್ಯವಾಗಿ ಚಾಚೂ ತಪ್ಪದೆ ಚಾಚಾ ನೆಹರೂ ಅವರ ಕಾಲದಿಂದಲೇ ಅನುಸರಿಸಿಕೊಂಡು ಬರಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿಯದ ವಿಚಾರ. ಅಥವಾ ತಿಳಿದಿದ್ದರೂ ನಮಗೇನೂ ಗೊತ್ತಿಲ್ಲ ಎಂದು ಸುಮ್ಮನಿರಬೇಕಾದ ಸಂಗತಿ.

ಬಡತನ ನಿವಾರಣೆಗೆ ಗಾಂಧೀಜಿ ಕರೆ ನೀಡಿದ್ದರು. ಅದನ್ನು ಅನುಸರಿಸಿದ ನೆಹರೂ ಕೂಡ ಬಡತನ ನಿವಾರಿಸುತ್ತೇವೆ ಎಂದು ಘೋಷಿಸಿದರು. ಇಂದಿರಾ ಗಾಂಧಿ ಅದನ್ನು ಬದಲಾಯಿಸಿ ಗರೀಬೀ ಹಠಾವೋ ಎಂದು ಭಾರತೀಕರಣಗೊಳಿಸಿದರು. ಆಮೇಲೆ ಅಧಿಕಾರಕ್ಕೇರಿದವರೆಲ್ಲಾ ಗರೀಬೋಂ ಕೋ ಹಠಾವೋ ಎನ್ನುತ್ತಾ ಬೆಲೆ ಏರಿಸತೊಡಗಿದರು. ಇತ್ತೀಚೆಗಷ್ಟೇ ಗರೀಬೀ ಹಠಾವೋ-ಭಾಗ-2 ಬಿಡುಗಡೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಇಷ್ಟು ಪೀಠಿಕೆಯೊಂದಿಗೆ ತನಿಖೆಯ ವಿಷಯಕ್ಕೆ ಬಂದಾಗ, ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಪ್ರಧಾನಿಗಳು ಮನಮೋಹಕವಾಗಿ ಇನ್ನು 20 ವರ್ಷಗಳಲ್ಲಿ ಬಡತನ ನಿವಾರಿಸುತ್ತೇವೆ ಎಂದು ಘೋಷಿಸಿದಾಗ ಅವರ ಬೆನ್ನ ಹಿಂದೆಯೇ ಅನ್ವೇಷಿ ಬ್ಯುರೋ ತಿರುಗಾಟ ಮಾಡಿತು.

ಅಲ್ಲಿ, ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನೆಹರೂ ಅವರ ಭಾಷಣಕ್ಕಾಗಿ ಸಿದ್ಧಪಡಿಸಿದ ಭಾಷಣದ ಪ್ರತಿಯೊಂದು ಪತ್ತೆಯಾಯಿತು. ಇದೇ ಭಾಷಣವನ್ನು ಸಮಯ ಸಿಕ್ಕಾಗ, ವೇದಿಕೆ ಸಿಕ್ಕಾಗಲೆಲ್ಲಾ ನೆಹರೂ, ಇಂದಿರಾ, ರಾಜೀವ್, ನರಸಿಂಹರಾವ್ ಮುಂತಾದ ಘಟಾನುಘಟಿಗಳೆಲ್ಲಾ ಓದಿದ್ದೇ ಓದಿದ್ದು. ಅದನ್ನೇ ಮತ್ತೆ ಮನಮೋಹಕ ಸಿಂಗರೂ ಓದಿದ್ದಾರೆ ಎಂಬುದು ಗೊತ್ತಾಗಿದೆ. ಈ ಮಧ್ಯೆ, ಆ ಭಾಷಣದ ಕ್ಯಾಸೆಟ್ ಕೂಡ ಪತ್ತೆಯಾಗಿದೆ. ಅದನ್ನು ಕಂಠಪಾಠಕ್ಕಾಗಿ ಬಳಸಲಾಗುತ್ತಿತ್ತೆಂದು ತಿಳಿದುಬಂದಿದೆ.

ಅದೇಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಧಾನಿ ಕಾರ್ಯಾಲಯದ ಆಪ್ತ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಬಂದ ಉತ್ತರ ಹೀಗಿತ್ತು:

"ನೋಡಿ ಸ್ವಾಮಿ.... ಬಡತನ ಅನ್ನೋದು ಎಷ್ಟೊಂದು ಒಳ್ಳೆಯ ಪದ! ದೇಶವಿದೇಶಗಳಲ್ಲಿ ಇದು ಪ್ರಸಿದ್ಧಿ ಪಡೆದಿದೆಯಲ್ಲದೆ ಭಾರತೀಯರೆಲ್ಲರೂ ಈ ಶಬ್ದವನ್ನು ಅತ್ಯಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇದನ್ನು ಉಚ್ಚರಿಸುವುದು ಕೂಡ ಸುಲಭ. ಇದು ಎಲ್ಲರಿಗೂ ಪರಿಚಿತವಾಗಿರುವುದರಿಂದ, ಜನರಿಗೆ ಮತ್ತಷ್ಟು ಹತ್ತಿರವಾಗಲು ನಾವು ಪ್ರತಿ ಭಾಷಣದಲ್ಲೂ ಈ ಅಮೂಲ್ಯ ಶಬ್ದವನ್ನು ಸೇರಿಸಲು ಯತ್ನಿಸುತ್ತಿದ್ದೇವೆ. ಇದು ಕೇಳಲು ಕಿವಿಗೂ ಇಂಪು, ಬಿಸಿಯಾದ ಮನಗಳಿಗೂ ಒಂದಿಷ್ಟು ತಂಪು!!!."

ಅದೇ ಕ್ಯಾಸೆಟ್ಟನ್ನು ಮತ್ತೆ ಮತ್ತೆ ರಿವೈಂಡ್ ಮಾಡೋದು, ಮತ್ತೆ ಪ್ಲೇ ಮಾಡೋದು... ಹಾಗೂ ಓದಿ, ಓದಿ ಹಳತಾದ ಭಾಷಣವನ್ನೇ ಮತ್ತೆ ಓದಿ ಬಡತನ ಶಬ್ದವನ್ನು ಚಿರಸ್ಥಾಯಿಯಾಗಿಸುವ ಯತ್ನವನ್ನು ಬಯಲಿಗೆಳೆದ ಬೊಗಳೂರಿನ ಬೊಗಳೆ ಬ್ಯುರೋಗೆ "ನಿರರ್ಥಕ ರತ್ನ" ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ಆತಂಕ ಹೆಚ್ಚಿಸಿದೆ.

2 Comments

ಏನಾದ್ರೂ ಹೇಳ್ರಪಾ :-D

 1. ಬಡತನವೇ ಈ ದೇಶದ ಆಸ್ತಿ. ಅಸ್ಥಿಭಾರ ಕೂಡಾ. ಅದನ್ನು ನಿವಾರಿಸಿದರೆ ಭಾರ-ತದ ಹೆಸರು ಬದಲಿಸಬೇಕಾಗುತ್ತದೆ. ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಎಲ್ಲೆಲ್ಲೂ ಘೋಷಿಸುತ್ತಿರುವ ಸಮಯದಲ್ಲಿ ಭಾರವನ್ನೇ ಕಳೆದುಕೊಳ್ಳುವುದು ಸರಿಯೇ?

  (ಪಿಸುದನಿಯಲ್ಲಿ - ಬಡತನ ನಿರ್ಮೂಲನ ಮಾಡಿದರೆ, ಜನಗಳಿಗೆ ಬುದ್ಧಿ ಬರತ್ತೆ, ಜಾರಕಾರಣಿಗಳು ಹೇಳ ಹೆಸರಿಲ್ಲದಂತಾಗುತ್ತಾರೆ, ನಮ್ಮ ಕಾಣಿಕೆಗಳಿಗೆ ಕುತ್ತು). ಇಂತಹ ಸಾಮಾಜಿಕ ದೌರ್ಭಾಗ್ಯಕ್ಕೆ ತುತ್ತಾಗುವುದು ಸರಿಯೇ? ನೀನೇ ಹೇಳು ಹರಿಯೇ.

  ReplyDelete
 2. ನಿಮ್ಮ ದಿಗಿಲು ಕೇಳಿ ಆತಂಕವಾಗಿದೆ ಶ್ರೀಗಳೇ.

  ಕಾಣಿಕೆ ವಿಷಯ ಅರುಹಿ ನಮ್ಮ ಬ್ಯುರೋದ ಎಲ್ಲಾ ಸಿಬ್ಬಂದಿಗಳು ನಿಮ್ಮ ಹಿಂಬಾಲ-ಕರುಗಳಾಗುವಂತೆ ಮಾಡಿಕೊಳ್ಳುವ ಸಂಚು ನಡೆಯುತ್ತಿದೆಯಲ್ಲಾ....

  ತಕ್ಷಣವೇ ನಾವು anti-ಕಾಣಿಕೆ ಸಾಫ್ಟ್‌ವೇರ್ ಒಂದನ್ನು ತಯಾರಿಸುತ್ತಿದ್ದೇವೆ.... ನಿಮಗೆ ಬೇಕಿದ್ದರೆ ಹೇಳಿ, ಎಷ್ಟು ಕಾಣಿಕೆ ಕೊಡಬೇಕು?

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post