ಬೊಗಳೆ ರಗಳೆ

header ads

ಸಮ್ಮಿಶ್ರಣ ಸರಕಾರದಲ್ಲಿ ನೈಜ ಕಿತ್ತಾಟವೇಕಿಲ್ಲ?

(ಬೊಗಳೂರು ಕಚ್ಚಾಟ ಬ್ಯುರೋದಿಂದ)
ಬೊಗಳೂರು, ಅ.30- ಜನತಾ ದಳದ ತೆನೆ ಹೊತ್ತ ರೈತ ಮಹಿಳೆಯ ಬದಲಾಗಿ ಹಿಂದಿನ ಚಕ್ರವೇ ಉರುಳಿಸಿದ ಪರಿಣಾಮವಾಗಿ ಮುಖ್ಯಮಂತ್ರಿ ಪಟ್ಟದಿಂದ ದಿಢೀರನೆ ಕೆಳಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿಯಲು ಹೊರಟಿದ್ದು ಕೇಳಿ ಆಸಕ್ತಿಯಿಂದ ಬೊಗಳೆ ರಗಳೆ ಬ್ಯುರೋ ಹೀಗೇ ತಿರುಗಾಡಿಕೊಂಡು ಅತ್ತ ಧಾವಿಸಿ ಬರಲು ಹೊರಟಿತು.

ಕಿತ್ತಾಟದಿಂದಲೇ ಸರಕಾರ ಪತನವಾಗುತ್ತದೆ ಎಂದು ಅವರು ಅನುಭವದ ನುಡಿಗಳಿಂದ ಭವಿಷ್ಯ ನುಡಿದಿದ್ದರೂ, ಈ ಬಾರಿ ಅದನ್ನು ಪ್ರಯೋಗ ಮಾಡಿಯೇ ತೀರಬೇಕು ಎಂದು ಬ್ಯುರೋ ತೀರ್ಮಾನಿಸಿ, ಕೆಲವೊಂದು ಹಣ್ಣು ಹಂಪಲುಗಳನ್ನು, ಮಾಲೆಪಟಾಕಿಯನ್ನು, ಕೊಳೆತ ಟೊಮೆಟೊವನ್ನು ಹಿಡಿದುಕೊಂಡು ಹೊರಟಿತು.

ಉಭಯ ಬಣಗಳಿಗೂ ಸರಿ ಸಮಾನಾಗಿ ಹಂಚುವ ಬದಲು, ಕಡಿಮೆ ಶಾಸಕರನ್ನು ಹೊಂದಿರುವ ತೆನೆ ಹೊತ್ತ ಮಹಿಳೆಗೆ ಹೆಚ್ಚು ಕೊಳೆತ ಟೊಮೆಟೋವನ್ನೂ, ಹೆಚ್ಚು ಶಾಸಕ ಬಲವಿರುವ ಕಮಲನಿಗೆ ಕಡಿಮೆ ಕೊಳೆತ ಮೊಟ್ಟೆಯನ್ನೂ ನೀಡಿ ಏನಾಗುತ್ತದೆ ಎಂದು ಕಾದು ಕೂರಲಾಯಿತು.

ಎಷ್ಟು ಕಾದರೂ ಏನೂ ಆಗಲೇ ಇಲ್ಲ. ಅವರದು ತಮಗೆ ಬೇಕು, ಇವರದು ಅವರಿಗೆ ಬೇಕು ಅಂತ ಅವರ್ಯಾರೂ ಎಳೆದಾಟ, ಕಿತ್ತಾಟ ಮಾಡಲೇ ಇಲ್ಲ!!!!

ಇದರ ಹಿಂದಿನ ರಹಸ್ಯ ಭೇದಿಸಲು ಹೊರಟಾಗ ಒಂದೇ ಒಂದು ವಿಷಯ ಗೊತ್ತಾಯಿತು.

ಅದೆಂದರೆ, ಇವರೆಷ್ಟು ಕಿತ್ತಾಟ ಮಾಡಿದರೂ ಏನೂ ದಕ್ಕುವುದಿಲ್ಲ. ಈಗಾಗಲೇ ತೆನೆ ಹೊತ್ತ ರೈತ ಮಹಿಳೆಯೂ ಕೈಯೂ ಪರಸ್ಪರ ಕಿತ್ತಾಡುತ್ತಲೇ ಎಲ್ಲವನ್ನೂ ಬರಿದು ಮಾಡಿದ್ದರಿಂದ, ಈಗ ಕಿತ್ತಾಟ ಮಾಡಿ ಪ್ರಯೋಜನವಿಲ್ಲ ಎಂದು ಉಭಯ ಬಣಗಳೂ ಸುಮ್ಮನಿದ್ದವು!

ಸಮ್ಮಿಶ್ರ ಸರಕಾರಗಳು ಈ ವಿಷಯದಲ್ಲಿ ಕಚ್ಚಾಟದೇ ಇರುವುದು, ಬರೇ ಮತದಾರರನ್ನು ಓಲೈಸಲು ಕೆಲವೊಂದಿಷ್ಟು ವಿಷಯಗಳನ್ನು ಎಳೆದು ತಂದು ರಾದ್ಧಾಂತ ಮಾಡುವುದು ಯಾಕೆಂಬುದರ ಹಿಂದಿನ ರಹಸ್ಯ ಬಯಲು ಮಾಡಿದ ಸಂತೋಷದಲ್ಲಿ ಬೊಗಳೆ ಬ್ಯುರೋ ಗಂಟು ಮೂಟೆ ಕಟ್ಟಿ ವಾಪಸಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಓಹ್ ನಿಮಗಿನ್ನೂ ವಿಷಯ ಗೊತ್ತಾಗಿಲ್ಲ ಅನ್ಸತ್ತೆ. ನೀವು ಕೊಟ್ಟ ಕೊಳೆತ ಟೊಮೆಟೊ ಮತ್ತು ಮೊಟ್ಟೆಗಳು ಹೊಟ್ಟೆ ಸೇರಿವೆ. ಮಣ್ಣಿನ ಮರಿಮಗನಿಗೆ ಹೊಟ್ಟೆ ಹಸಿವು ಜಾಸ್ತಿಯಾಗಿ, ಹೊಟೆಲ್‍ಗೆ ಹೋದಾಗ ಊಟ ನೀಡುವ ಬದಲು, ಒದೆ ನೀಡಿದರಂತೆ. ಅದರಿಂದ ಮರಿಮಗ ಮತ್ತು ಅವನ ಹಿಂ-ಬಾಲ-ಕರುಗಳು ನೀವು ಕಳುಹಿಸಿದ ಮಾಲನ್ನು ಮಾಲಾಮಲ್ ಮಾಡಿದ್ದಾರೆ. ಇದು ನಮ್ಮ ಅನ್ವೇಷಿಗಳು ಕಳುಹಿರುವ ಸುದ್ದಿ. ಇದಕ್ಕಾಗಿ ಪೇಟೆಂಟ್ ತೆಗೆದುಕೊಳ್ಲಲಾಗಿದೆ.

    ಪ್ರತ್ಯುತ್ತರಅಳಿಸಿ
  2. ನೀವು ಪೇಟೆಂಟ್ ಪಡೆದುಕೊಂಡಿರುವ ಕೊಳೆತ ಟೊಮೆಟೋವನ್ನು ಹಿಂದಕ್ಕೆ ಪಡೆಯಲು ಎಷ್ಟು ವರ್ಷಗಳು ಬೇಕಾದರೂ ನಾವು ಕೋರ್ಟಿನಲ್ಲಿ ಹೋರಾಡಲು ಸಿದ್ಧ ಎಂದು ಘೋಷಿಸುತ್ತಿದ್ದೇವೆ ಶ್ರೀಗಳೇ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D