ಬೊಗಳೆ ರಗಳೆ

header ads

ಪ್ರಧಾನಿ ಪದೇ ಪದೇ ವಿದೇಶ ಪ್ರಯಾಣ ಗುಟ್ಟು ರಟ್ಟು

(ಬೊಗಳೂರು ನಿಧಾನಿ ಬ್ಯುರೋದಿಂದ)

ಬೊಗಳೂರು, ಅ.31- ಮೇರಾ ಮಹಾನ್ ಭಾರತದ ನಿಧಾನಿ ಪ್ರಧಾನಿ ಮನಮೋಹಕ ಸಿಂಗ್ ಅವರು ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿರುವುದೇಕೆ ಎಂಬುದನ್ನು ಶೋಧಿಸಲು ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ವಿದೇಶ ಪ್ರವಾಸದ ಮೇಲೆ ಕಣ್ಣಿಟ್ಟು ತನಿಖೆ ನಡೆಸಲಾರಂಭಿಸಿದೆ.

ಹವಾನಾದಲ್ಲಿ ಹೋಗಿ ಮುಷರಫ್ ಜತೆ ಶಾಂತಿಯ ಹವಾ ಅನುಭವಿಸಿ ಬರುವಾಗ ವಿರೋಧ ಪಕ್ಷಗಳು ಗಲಾಟೆ ಎಬ್ಬಿಸಿದವು. ಅಂತೆಯೇ ರಷ್ಯಾ, ದಕ್ಷಿಣ ಆಫ್ರಿಕಾ, ಫಿನ್ಲೆಂಡ್, ಬ್ರಿಟನ್ ಅಂತೆಲ್ಲಾ ತಿರುಗಾಟ ಮುಗಿಸಿ ಮರಳಿ ಬರುವಾಗ ಭಾರತದಲ್ಲಿ ಗಲಾಟೆ, ಭಯೋತ್ಪಾದನೆ ಅಶಾಂತಿ, ನಕ್ಸಲ್ ಹಿಂಸಾಚಾರ, ಯುಪಿಎಯೊಳಗೆ ಭಿನ್ನಮತ....

ಈ ಕುರಿತಾಗಿಯೇ ತನಿಖೆ ನಡೆಸಲಾಗಿದ್ದು, ಹಲವಾರು ವಿಷಯಗಳು ಬಯಲಾಗಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ವಿದೇಶಾಂಗ ಸಚಿವರ ನೇಮಕಕ್ಕೆ ಹೆಚ್ಚುತ್ತಿರುವ ಒತ್ತಡ.ಯಾಕೆ ಎಂದು ನಿಧಾನಿಯ ಆಪ್ತರನ್ನು ಪ್ರಶ್ನಿಸಿದಾಗ ಅವರು ಹೇಳದಿದ್ದ ವಿಷಯವೆಂದರೆ, ವಿದೇಶಾಂಗ ಸಚಿವರ ನೇಮಕವಾದರೆ ತಮಗೆಲ್ಲಿ ವಿದೇಶ ಪ್ರವಾಸದ ಯೋಗ ತಪ್ಪಿ ಹೋಗುತ್ತದೆ ಎಂಬ ಆತಂಕ.

ಹಾಗಿದ್ದರೆ ಅವರು ವಿದೇಶ ಪ್ರಯಾಣಕ್ಕೆ ಹಾತೊರೆಯುತ್ತಿರುವುದೇಕೆ? ಎಂದು ಕೇಳಿದಾಗ... ಮೊದಲಿಗೆ ಉತ್ತರಿಸಲು ಹಿಂದು ಮುಂದು ನೋಡಿದರೂ, ಆ ಬಳಿಕ ಬಾಯಿ ಮುಚ್ಚಿ ವಿಷಯ ಹೇಳಿಯೇ ಬಿಟ್ಟರು.

ಸರಕಾರ ಅಧಿಕಾರಕ್ಕೆ ಬಂದು ಅದರ ಅರ್ಧ ಅವಧಿ ಮುಗಿಯುತ್ತಾ ಬಂದಿದೆ. ಈ ಅವಧಿಯಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಲ್ಲಿ ಅದು ಹೇಗೆ ಬದುಕುತ್ತಾರೋ ಗೊತ್ತಿಲ್ಲ. ಹಾಗಾಗಿ ಭಾರತದಲ್ಲಿ ಜೀವಿಸುವುದಕ್ಕಿಂತ ವಿದೇಶ ವಾಸವೇ ಅಗ್ಗದ ಸಂಗತಿ. ಅಲ್ಲೆಲ್ಲಾ ಪೆಟ್ರೋಲ್ ಬೆಲೆ ಏರಿತು, ತರಕಾರಿ ಬೆಲೆ ಏರಿತು ಅಂತ ಹೇಳಿಕೊಳ್ಳುವವರೂ ಇಲ್ಲ. ಯಾವ ಮಂಡೆ ಬಿಸಿಯೂ ಇಲ್ಲ ಎಂಬುದು ನಿಧಾನಿ ಕಚೇರಿಯಿಂದ ದೊರೆಯದ ಸಮಜಾಯಿಷಿ.

ಅದಲ್ಲದೆ, ಭಾರತದಲ್ಲಿದ್ದರೆ ಎಡಪಕ್ಷಗಳನ್ನು ಆಗಾಗ್ಗೆ ಎದುರಿಸಬೇಕು, ಮಾಜಿ ವಿದೇಶಾಂಗ ಸಚಿವ ನಟವರ ಸಿಂಗರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನೋಸಿಯಾ ಗಾಂಧಿ ಕೂಡ ಯಾಕೋ ಮುಗುಂ ಆಗಿದ್ದಾರೆ... ಈ ಎಲ್ಲ ತೊಂದರೆ ತಾಪತ್ರಯಗಳು ನಮಗೇಕೆ ಎಂಬುದು ಅವರ ಅಭಿಮತವೆಂದು ತಿಳಿದುಬಂದಿದೆ.

ಇಲ್ಲಿದ್ದರೆ ಒಂದಿಲ್ಲೊಂದು ಹಗರಣ ಬಯಲಾಗುತ್ತಾ ಇರುತ್ತದೆ, ಯುಪಿಎ ಸರಕಾರ ಮಾಡಿದ 'ಮಹಾನ್' ಕಾರ್ಯಗಳಿಗೆಲ್ಲಾ ನ್ಯಾಯಾಂಗವು ತಲೆ ತೂರಿಸಿ ಹಿಂದೆ ಜಗ್ಗುತ್ತಾ ಅಪಮಾನ ಮಾಡುತ್ತಿದೆ, ಈ ಕೋರ್ಟುಗಳು ಕೂಡ ನಮಗೆ ಮನಬಂದಂತೆ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವೆನ್ನಲಾಗುತ್ತಿದೆ.

-----------------------

ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕೊಡುಗೆ.....

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ....

ನಾಳಿನ ಸಂಚಿಕೆಯಲ್ಲಿ....

ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡವೇ ನಮ್ಮ ತಾಯಿ ತಂದೆ ಎಂದೆಲ್ಲಾ ಹೇಳುತ್ತಿರುವವರಿಗಾಗಿಯೇ ಸಿದ್ಧಪಡಿಸಲಾದ ವಿಶೇಷ ಕೊಡುಗೆ.

ಹೆಚ್ಚಿನ ವಿವರಗಳಿಗೆ ನಾಳಿನ ಬೊಗಳೆ ರಗಳೆ ನೋಡಿ...!!!

ನೋಡಲು ಮರೆಯದಿರಿ.... ಮರೆತು ನಿರಾಶರಾಗದಿರಿ!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ನಿಧಾನಿಗಳ ಈ ಗುಟ್ಟನ್ನು ರಟ್ಟು ಮಾಡಿದ್ದಕ್ಕೆ ನಿಮಗೊಂದು ಪೆಟ್ಟು. ಇದರ ಹಿಂದೆ ಗೋನಿಯಾ ಸಾಂಧಿಯವರ ಹಸ್ತಕ್ಷೇಪವಿದೆಯೇ? ಕಾಣದ ವಿದೇಶೀ ಕೈವಾಡವಿದೆಯೇ? ಸ್ವಲ್ಪ ವಿಶದೀಕರಿಸಬೇಕು.

  ಪ್ರತ್ಯುತ್ತರಅಳಿಸಿ
 2. ಶ್ರೀಶ್ರೀಶ್ರೀಗಳೆ
  ಈ ಗುಟ್ಟನ್ನು ರಟ್ಟು ಮಾಡಿರುವುದರ ಹಿಂದೆ ಬೆಟ್ಟಿಂಗಿನ ಕೈವಾಡವಿದೆಯಾದುದರಿಂದ ಸಹಜವಾಗಿ ವಿದೇಶೀ ಸಂಪರ್ಕವಿದೆ. ಅದರಲ್ಲೂ ವಿದೇಶಾಂಗ ಸಂಪರ್ಕ, ಮತ್ತಷ್ಟು ನಿಖರವಾಗಿ ಹೇಳಬೇಕೆಂದರೆ ನಟವರ ಇರಾಕ್ ಸಂಪರ್ಕವಿದೆ.

  ಪ್ರತ್ಯುತ್ತರಅಳಿಸಿ
 3. ಜನರು ಗುಟ್ಟನ್ನು ಮುಟ್ಟಲು ಹೆದರುತ್ತಿರುವಾಗ, ನೀವು, ಪತ್ತೆ ಹಚ್ಚಿ ಪ್ರಕಟಿಸಿಯು ಬಿಟ್ಟಿರಿ.

  ಭೂತ ಜಗತ್ತಿನ ಬಗ್ಗೆ ಕುತೂಹಲ ತೋರದಿದ್ದರಷ್ಟೆ ಸಾಕು.

  ಭೂತ

  ಪ್ರತ್ಯುತ್ತರಅಳಿಸಿ
 4. ಭೂತರಾಜರೆ,
  ನಿಮ್ಮ ಲೋಕದಲ್ಲಿ ಕನವರಿಕೆಗಳು ಕವನ ರೂಪ ತಳೆಯುತ್ತಿರುವುದು ಗಮನಕ್ಕೆ ಬಂದ ಕಾರಣ.... ಗುಟ್ಟು ರಟ್ಟು ಮಾಡುವಾಸೆ!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D