(ಬೊಗಳೂರು ಭ್ರಷ್ಟಾಚಾರಿ ಬ್ಯುರೋದಿಂದ)
ಬೊಗಳೂರು, ಅ.28- ಲೋಕಾಯುಕ್ತರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವುದನ್ನು ಓದಿ ಬೊಗಳೆ ರಗಳೆ ಬ್ಯುರೋ ಕುದಿಯತೊಡಗಿದ್ದು, ಈ ಬಿಸಿಯಿಂದಾಗಿ ಶೀಘ್ರವೇ ಬೇಳೆ ಬೇಯುವ ಸಾಧ್ಯತೆಗಳಿವೆ.

ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವೇ ಆಗಿಬಿಟ್ಟಿರುವ ಭ್ರಷ್ಟಾಚಾರವನ್ನು ನಿವಾರಿಸಲು ಲೋಕಾಯುಕ್ತರು ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಸ್ವಅರ್ಥಾಭಿವೃದ್ಧಿ ಮಂಡಳಿಯು, ಈ ಭ್ರಷ್ಟಾಚಾರವನ್ನು ಇನ್ನಿಲ್ಲದಂತೆ ಮಾಡಿದರೆ, ದೇಶದ (ಅಂದರೆ ರಾಜಕಾರಣಿಗಳು, ಅಧಿಕಾರಶಾಹಿಯ) ಅರ್ಥಾಭಿವೃದ್ಧಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.

ಈಗಿನ ಪೀಳಿಗೆಗೆ ಭ್ರಷ್ಟಾಚಾರ ಮಾಡುವುದೇ ಕೆಲಸ. ಅದರ ನಿರ್ಮೂಲನೆ ವಿಷಯವನ್ನೆಲ್ಲಾ ಮುಂದಿನ ಪೀಳಿಗೆಗೆ ಬಿಡುವುದು ಬಿಟ್ಟು ಇವರಿಗೇಕೆ ಅದರ ಉಸಾಬರಿ ಎಂದು ಪ್ರಶ್ನಿಸಿರುವ ಮಂಡಳಿ ಅಧ್ಯಕ್ಷ ಭ್ರಷ್ಟ ಕುಮಾರ್ ಅವರು, ಬೇಕಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಡ್ಡಾಯ ಮಾಡಿದಂತೆ, ಹುಟ್ಟಿದ ತಕ್ಷಣ ಮಗುವಿಗೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಬೇಕಿದ್ದರೆ ಕಲಿಸುವ ವ್ಯವಸ್ಥೆ ಮಾಡೋಣ ಮತ್ತು ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗುವುದು ಹೇಗೆಂಬ ಬಗ್ಗೆಯೂ ಒಂದು ಬದಿಯಲ್ಲಿ ಕಲಿಸೋಣ ಎಂದು ಹೇಳಿದ್ದಾರೆ.

ಸದ್ಯದ ಅಧಿಕಾರದಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ ಎಂಬ ಲೋಕಾಯುಕ್ತರ ಮಾತನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಈಗಾಗಲೇ ಕೋಟಿ ಕೋಟಿ ಆಸ್ತಿಯನ್ನು ಬಯಲಿಗೆ ಎಳೆದುಹಾಕಿ ಪ್ರದರ್ಶಿಸಿದ್ದು ಯಾವ ಅಧಿಕಾರದಿಂದ ಎಂದು ಪ್ರಶ್ನಿಸಿದ್ದಾರೆ. ಯಾರಿಗೂ ತಿಳಿಯದ ಜಾಗದಲ್ಲಿ ಈ ಚಿನ್ನಾಭರಣಗಳು ಕೊಳೆಯದಂತೆ ಮತ್ತು ಅದು ಲೋಕಕ್ಕೆಲ್ಲಾ ತಿಳಿಯಲಿ, ಜನರೂ ಸಂತೋಷ ಪಡಲಿ ಎಂದು ಅವರೇ ಆಗಾಗ್ಗೆ ಇಂಥ ಚಿನ್ನಾಭರಣ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ಮತ್ಯಾಕೆ ಅವರಿಗೆ ಇನ್ನಷ್ಟು ಅಧಿಕಾರ ಎಂದು ಪ್ರಶ್ನಿಸಿರುವ ಭ್ರಷ್ಟಕುಮಾರ್, ಅವರ ಕೈಗೆ ದಂಡ ಕೊಟ್ಟು ನಮ್ಮಂಥವರು ದಂಡ ತೆರಬೇಕೇ ಎಂದು ಕೇಳಿದ್ದಾರೆ,

ಲೋಕಾಯುಕ್ತರ ಕೈಗೆ ಕತ್ತರಿ ಕೊಟ್ಟು ನಮ್ಮ ಜೇಬು ಕತ್ತರಿಸಿಕೊಳ್ಳಲು ನಾವಂತೂ ಖಂಡಿತಾ ತಯಾರಿಲ್ಲ, ಅವರಿಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೆ ನಮ್ಮ ಗಂಭೀರ ವಿರೋಧವಿದೆ. ಈಗಾಗಲೇ ಚಿನ್ನಾಭರಣ ಪ್ರದರ್ಶನದೊಂದಿಗೆ, ಅದರ ಒಡೆಯರ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಇಷ್ಟೇ ಸಾಕು, ಹೆಚ್ಚಿನ ಶಿಕ್ಷೆಯ ಅಗತ್ಯವೇ ಇಲ್ಲ ಎಂದು ಹೇಳಿರುವ ಅವರು, ಕೊನೆಗೊಂದು ನುಡಿ ಮುತ್ತು ಉದುರಿಸಿದ್ದಾರೆ.

ಎಲ್ಲರನ್ನೂ ಶಿಕ್ಷಿಸುವ ಅಧಿಕಾರ ಲೋಕಾಯುಕ್ತರಿಗೆ ಕೊಟ್ಟುಬಿಟ್ಟರೆ, ಈ ದೇಶದಲ್ಲಿ ಭ್ರಷ್ಟಾಚಾರಿಗಳ ಸಂಘದ ಗತಿಯೇನು ಎಂದು ಅವರು ಪ್ರಶ್ನಿಸಿರುವುದು ಉತ್ತರ ಸಿಗದ new type question ಎಂದು ಪರಿಗಣಿಸಲಾಗಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಇಂತಹ ಹೊಸ ಮಾದರಿಯ ಪ್ರಶ್ನೆಗಳು, ಹೊಸ ಕೋಲಾಯುಕ್ತರು ನಮಗೂ ಬೇಡ. ನಮ್ಮ ಪಾಡಿಗೆ ನಾವು ಎಲ್ಲೋ ಏನೋ ಮೇಯ್ಕೊಂಡು ನಿಂತಿದ್ರೆ, ನಮ್ಮ ಮೇಲೆ ಸವಾರಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳೋವ್ರಂತೂ ನಮಗೆ ಖಂಡಿತ ಬೇಡ.

    ನಾಳೆಯೇ ಗಲ್ಲಿಗೆ ಹೋಗಿ ಕಾರಜಾರಣಿಗಳಿಗೆ ಕಾಣಿಕೆ ಸಲ್ಲಿಸಿ ಬರಬೇಕು. ಒಳ್ಳೆಯ ಸಮಯದಲ್ಲಿ ಸುದ್ದಿ ತಿಳಿಸಿದ ನಿಮಗೊಂದು ಗುದ್ದು.

    ReplyDelete
  2. ಗಲ್ಲಿಗೆ ಏರಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೀರಲ್ಲಾ... ನಮ್ಮ ಕಾಣಿಕೆ ಇತ್ತ ಕಳುಹಿಸಿಬಿಡಿ. ನೀವು ಗಲ್ಲಿಗೇರಬೇಕಾಗಿಲ್ಲ, ನಾವೇ ಎಲ್ಲವನ್ನೂ ನೋಡಿಕೊಳ್ಳುತ್ತೇವೆ. ಆದರೆ ಕೋಲಾಯುಕ್ತರಿಗೆ ಮಾತ್ರ ಹೇಳಬೇಡಿ.

    ಆದರೆ ಕಾರು ಇರುವ ಜಾರಣಿಯರಿಗೆ ಕಾಣಿಕೆ ಸಲ್ಲಿಸಲು ನೀವೇಕೆ ಹೊರಟಿರಿ ಎಂಬ ಸಂದೇಹ ಕಾಡುತ್ತಿದೆ. ಕೂಡಲೇ ಪರಿಹರಿಸಿ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post