ಬೊಗಳೆ ರಗಳೆ

header ads

ನಮ್ಮ ಪಾ(ತ)ಕಿ ಮಿತ್ರ ಪರೀಕ್ಷೆಯಲ್ಲಿ ಪಾಸಾಗಲಿ

(ಬೊಗಳೂರು ಭಯೋತ್ಪಾದನಾ ಬ್ಯುರೋದಿಂದ)
ಬೊಗಳೂರು, ಅ.19- ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದಾಗಿ ನಿಧಾನಿ ಮನಮೋಹಕ ಸಂಗ್ ಮತ್ತೆ ಮತ್ತೆ ಘೋಷಿಸಿದ್ದಾರೆ.
 
ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಮುಂಬಯಿ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿದೆ ಎಂದೆಲ್ಲಾ ನಮ್ಮ ಕೆಲಸವಿಲ್ಲದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
 
ನಮ್ಮ ಬೇಹುಗಾರಿಕಾ ಏಜೆನ್ಸಿಗಳು, ರಕ್ಷಣಾ ಪಡೆಗಳು ಮತ್ತಿತರ ದೇಶರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಇಲಾಖೆಗಳು ಮಾಡಿರುವ ಪರೀಕ್ಷೆ ಸರಿ ಇಲ್ಲ. ಇವೆಲ್ಲದರಲ್ಲಿ ನಮ್ಮ ನೆರೆಯ ಮಿತ್ರ ರಾಷ್ಟ್ರವಾಗಿರುವ ಪಾತಕಿಸ್ತಾನ ಅನುತ್ತೀರ್ಣವಾಗಿದೆ. ಮಿತ್ರರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾದುದರಿಂದ ಅದಕ್ಕೆ ನಾವೇ ಪರೀಕ್ಷೆ ನಡೆಸುತ್ತೇವೆ, ಹೇಗಾದರೂ ಅವರು ಉತ್ತೀರ್ಣರಾಗಬೇಕು ಎಂದು ಅವರು ಹೇಳಿದರು.
 
ಭಯೋತ್ಪಾದಕ ಚಟುವಟಿಕೆಯಲ್ಲಿ ಎತ್ತಿದ ಕೈ ಆಗಿರುವ ಮತ್ತು ನರ್ಸರಿಯಿಂದಲೇ ಭಯೋತ್ಪಾದಕ ಶಿಕ್ಷಣದಲ್ಲಿ ಪಳಗಿರುವ ಅನುಭವಿ ರಾಷ್ಟ್ರವೊಂದರ ಸಹಾಯ ಪಡೆದು ಉಗ್ರವಾದದ ವಿರುದ್ಧ ಹೋರಾಡಲು ರೂಪಿಸಲಾಗಿರುವ ಭಾರತ-ಪಾತಕಿಸ್ತಾನ ಜಂಟಿ ಕಾರ್ಯತಂತ್ರ ವ್ಯವಸ್ಥೆಯ ಕುರಿತು ಪುತ್ರಿಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
 
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಸಿದ್ಧಾಂತ ನಮ್ಮದು ಎಂದ ಅವರು, ಈಗೆಲ್ಲಾ ಚುಚ್ಚುತ್ತಿರುವುದು ಸಣ್ಣ ಮುಳ್ಳುಗಳು. ಕಣ್ಣಿಗೇ ಕಾಣಿಸುವುದಿಲ್ಲ. ಇನ್ನೂ ದೊಡ್ಡ ಮುಳ್ಳು ಚುಚ್ಚಿದ ನಂತರ, ಅದು ಕಣ್ಣಿಗೆ ಕಂಡರೆ ಅದನ್ನು ತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಅಳಿದುಳಿದಿರುವ ಸ್ವದೇಶೀಯರಿಗೆ ಭರವಸೆ ನೀಡಿದರು.
 
ಮಿತ್ರರ ರಕ್ಷಣೆಯೇ ನಮ್ಮ ಕರ್ತವ್ಯ. ಮಿತ್ರರು ಏನು ಮಾಡಿದರೂ ಸಹಿಸಬೇಕು ಎನ್ನುವುದು ಮೈತ್ರಿ ಧರ್ಮ. ಅವರೆಲ್ಲಾ ವಿಭಿನ್ನ ರೀತಿಯ (ಮಾರಣ) ಹೋಮಗಳನ್ನು ನಡೆಸುತ್ತಾ ಸುಭಿಕ್ಷೆಗಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದ ಅವರು, ಭಯೋತ್ಪಾದನೆ ಸೃಷ್ಟಿಸುವುದು ಪಾತಕಿಸ್ತಾನಕ್ಕೆ ರಾಜಕೀಯ ಅನಿವಾರ್ಯವಾಗಿದ್ದರೆ, ಅದನ್ನು ಸಹಿಸಿಕೊಂಡು ಭಾರತವೊಂದು ಸಹಿಷ್ಣು ರಾಷ್ಟ್ರ ಎಂದು ಜಗತ್ತಿಗೇ ತೋರಿಸಿಕೊಡುವುದು ನಮ್ಮ ರಾಜಕೀಯ ಅನಿವಾರ್ಯ ಎಂದು ವಿವರಿಸಿದರು.
 
ಪಾತಕಿಸ್ತಾನದಲ್ಲಿ ಬಹುಸಂಖ್ಯಾತರ ರಕ್ಷಣೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆಯೋ, ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೂ ಅದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಇಲ್ಲದಿದ್ದರೆ ನಾವು ಮತ್ತೊಮ್ಮೆ ಆರಿಸಿಬಂದು ದೇಶ ಸೇವೆ ಮಾಡುವುದಾದರೂ ಹೇಗೆ ಎಂದವರು ಪ್ರಶ್ನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಪಾತಕಿಸ್ತಾನದ ಪ್ರಮುಖ ಉತ್ಪಾದನೆ ಏನು ಗೊತ್ತೆ? "ಭಯೋತ್ಪಾದನೆ". ಅಸಲು ಸಂಗತಿ ಹೀಗಿರುವಾಗ ನೀವು ಅದರಲ್ಲಿ ಅಸತ್ಯವನ್ನು ಹುಡುಕಲು ಹೊರಟಿದ್ದೀರಾ? ಶುದ್ಧ ತಪ್ಪು. ಆದುದರಿಂದ ನಿಮಗೆ ದೀಪಾವಳಿ ಉಡುಗೊರೆಯಾಗಿ ಭೂತಕನ್ನಡಿ ನೀಡಲಾಗುತ್ತದೆ. ವಿವರಗಳಿಗೆ ನನ್ನ ಬ್ಲಾಗ್ ಓದಿ.

    -ಪಬ್

    ಪ್ರತ್ಯುತ್ತರಅಳಿಸಿ
  2. ಪಾತಕಿ ಪರೀಕ್ಷೆಯಲ್ಲಿ ಪಾಲ್ಗೊಳ್ಳದಿದ್ದರೆ ಪಾಸು ಮಾಡಿಸಬಹುದು. ಪರೀಕ್ಷೆ ತೆಗೆದುಕೊಂಡರೆ ಸ್ವಲ್ಪ ಕಷ್ಟವಾಗುವುದು. ಅಂದ ಹಾಗೆ ಶಾಲೆಗೆ ಹೋಗ್ತಿದ್ದಾರಾ? ಪಾಕಿಯಲ್ಲಿರೋರೆಲ್ಲಾ ಶಾಲೆಗೆ ಹೋಗದ ಪಾಪಿಗಳಂತೆ. ನನಗ್ಯಾರೋ ಹೇಳಿದ್ದು, ನಾನು ಕೇಳಿದ್ದು, ನಿಮಗೆ ತಿಳಿಸುತ್ತಿರೋದು.

    ಪ್ರತ್ಯುತ್ತರಅಳಿಸಿ
  3. " ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಸಿದ್ಧಾಂತ ನಮ್ಮದು ಎಂದ ಅವರು, ಈಗೆಲ್ಲಾ ಚುಚ್ಚುತ್ತಿರುವುದು ಸಣ್ಣ ಮುಳ್ಳುಗಳು. ಕಣ್ಣಿಗೇ ಕಾಣಿಸುವುದಿಲ್ಲ. ಇನ್ನೂ ದೊಡ್ಡ ಮುಳ್ಳು ಚುಚ್ಚಿದ ನಂತರ, ಅದು ಕಣ್ಣಿಗೆ ಕಂಡರೆ ಅದನ್ನು ತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಅಳಿದುಳಿದಿರುವ ಸ್ವದೇಶೀಯರಿಗೆ ಭರವಸೆ ನೀಡಿದರು"------ ಇದು ಸಕತ್ತಾಗಿದೆ.

    ಪ್ರತ್ಯುತ್ತರಅಳಿಸಿ
  4. ಪಬ್ಬೇಶ್ವರರೇ,
    ನಿಮ್ಮ ಭೂತ ಕನ್ನಡಿ ಪಡೆದ ಮೇಲೆ ಇನ್ನು ಈ ಜನ್ಮವೇ ಬೇಡ ಅಂತ ತೋಚುತ್ತಿದೆ. ಅಂಥ ಉಡುಗೊರೆ ಕೊಟ್ಟಿದ್ದಕ್ಕೆ ಮತ್ತು ಮೋಕ್ಷಕ್ಕೆ ದಾರಿ ತೋರಿದ್ದಕ್ಕೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. ಗೋವಿಂದ ಗೋವಿಂದ ಗೋ......ವಿಂದಾ....!!!!!
    ಏನೆಲ್ಲಾ ಅವತಾರ ಎತ್ತುತ್ತೀರೋ... ತಿಳಿಯಲೊಲ್ದು...
    ನೀವು ನಮಗೆ ತಿಳಿವಳಿಕೆ ಮೂಡಿಸಿದ್ದಕ್ಕೆ ಮತ್ತೊಂದು ಗೋವಿಂದ ನಾಮ ಹಾಕುತ್ತೇವೆ...!!!

    ಪ್ರತ್ಯುತ್ತರಅಳಿಸಿ
  6. ಸುರೇಖಾ ಅವರೆ,
    ಮೊದಲ ಬಾರಿ ಬಂದಿದ್ದೀರಿ... ಸಕತ್ತೆಯಾಗಿದೆ ಅಂದಾಗ ಸ್ವಲ್ಪ ಹೆದರಿಕೆಯಾಗಿರುವ ಕಾರಣ ಮತ್ತು ಕಾಮೆಂಟಿಸಿದವರ ಲಿಂಕು ಕ್ಲಿಕ್ಕಿಸಿದಾಗ ಪೇಜ್ ನಾಟ್ ಫೌಂಡ್ ಅಂತ ಬರೋ ಕಾರಣ.... ಪಾತಕಿಸ್ತಾನದ್ದೇ ಭಯ ಆಗ್ತಾ ಇದೆ... ದಯವಿಟ್ಟು ಸರಿಪಡಿಸಿಕೊಳ್ಳಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D