ಬೊಗಳೂರು ವಸ್ತ್ರ(ನಾಪತ್ತೆ)ಶೋಧ ಬ್ಯುರೋದಿಂದ

ಬೊಗಳೂರು, ಆ.7- ತಾನು ಬಟ್ಟೆ ಧರಿಸುವುದಕ್ಕಿಂತಲೂ ಮಕ್ಕಳಲ್ಲಿ ವಸ್ತ್ರ ಧರಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವ ಖ್ಯಾತ ವಸ್ತ್ರ ದ್ವೇಷಿ ಅಭಿನೇತ್ರಿಯರಲ್ಲೊಬ್ಬಳಾದ 'ಎಲ್ಲವನ್ನೂ ಬಿಟ್ನಿ' ಸ್ಪಿಯರ್ಸ್, ಈಗ ಬಟ್ಟೆ ಬಿಚ್ಚುವುದೆಂದರೆ ಏನೆಂದೇ ತಿಳಿಯದ ಮುಗ್ಧ ಮಕ್ಕಳಿಗೆ ಬಟ್ಟೆ ತೊಡಿಸಲು ಹೊರಟಿರುವ ಅಂಶ ಇಲ್ಲಿ ಬಯಲಾಗಿದೆ.

ಹುಟ್ಟುಡುಗೆ ಎಂಬ ಪದಕ್ಕೆ ಹೊಸ ಅರ್ಥವೋ... ಅಪಾರ್ಥವೋ... ಕಲ್ಪಿಸಿ ಮೆರೆದಾಡುವ ನಟೀಮಣಿಯರಲ್ಲಿ 'ಬಟ್ಟೆ ಬಿಟ್ಟಿ' ಸ್ಪಿಯರ್ಸ್ ಕೂಡ ಒಬ್ಬಳು. ಈ ಕಾರಣಕ್ಕೆ ಆಕೆ ಹುಟ್ಟಿದ ಮಕ್ಕಳಿಗೆ ಮಾತ್ರವಲ್ಲದೆ ಇನ್ನೂ ಹುಟ್ಟದಿರುವ ಮಕ್ಕಳಿಗೂ ಬಟ್ಟೆ ತೊಡಿಸಲು ಮುಂದಾಗಿರುವುದಕ್ಕೆ ಆಕೆಯ ಮನದಲ್ಲಿ ಮನೆಮಾಡಿರುವ ಪಾಪ ಪ್ರಜ್ಞೆಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತಾನಂತೂ ಸಾಕಷ್ಟು ಬಟ್ಟೆ ತೊಟ್ಟುಕೊಳ್ಳಲಾಗಲಿಲ್ಲ, ಮುಂದಿನ ಪೀಳಿಗೆಯ ಭವ್ಯ ಭವಿಷ್ಯದ ರೂವಾರಿಗಳಾದ ಮಕ್ಕಳೂ ತನ್ನಂತಾಗುವುದು ಬೇಡ ಎಂಬ ಉದ್ದೇಶದಿಂದ ಯಾರಿಗೂ ಬೇಡವಾಗಿದ್ದ ಈ ಕೆಲಸಕ್ಕೆ ಕೈ ಹಚ್ಚಿರುವುದಾಗಿ ಬಹಿರಂಗವಾಗಿ ಆಕೆ ಹೇಳಿಕೆ ನೀಡಿದ್ದರೂ ಅವಳ ಒಳಮನಸ್ಸಿನ ಉದ್ದೇಶ ಬೇರೆಯೇ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ. ಆದರೆ ಬ್ರಿಟ್ನಿಯ ದು(ದೂ)ರಾಲೋಚನೆಯೇ ಅವಳು ಕೈಗೆ ಹಚ್ಚಿಕೊಂಡ ಹೊಸ ಸಾಹಸಕ್ಕೆ ಕಾರಣ ಎಂಬುದು ಅಸತ್ಯಾನ್ವೇಷಿ ತನಿಖೆಯಿಂದ ಗೊತ್ತಾಗಿದೆ.

ತನಿಖೆ ಪ್ರಕಾರ, Rampನಲ್ಲಿ ಮಾರ್ಜಾಲ ನಡಿಗೆ (cat walk) ಯಾವೆಲ್ಲಾ ಬಟ್ಟೆಗಳನ್ನು ಯಾವ ರೀತಿ ತೊಟ್ಟುಕೊಂಡರೆ ಏನೆಲ್ಲಾ ಕಾಣಿಸಬಹುದು, ಮತ್ತು ಏನನ್ನೆಲ್ಲಾ ಯಾವ ರೀತಿ ಕಾಣಿಸದೇ ಇರಬಹುದು ಎಂಬುದನ್ನು ಮಾತ್ರವಲ್ಲದೆ, ಕೆಲವನ್ನು ಕಾಣಿಸಿಯೂ ಕಾಣಿಸದಂತೆ ಮಾಡುವುದು ಹೇಗೆ ಎಂಬುದೇ ಮುಂತಾಗಿ ಪ್ರಯೋಗ ಮಾಡಿ ನೋಡುವುದಕ್ಕಾಗಿ ಆಕೆ ಮಕ್ಕಳನ್ನು ಆರಿಸಿಕೊಂಡಿದ್ದಾಳೆ ಎನ್ನಲಾಗಿದೆ.

ಪುಟ್ಟ ಮಕ್ಕಳಿಗೆ ಯಾವ ರೀತಿ ಬಟ್ಟೆ ಹಾಕಿದರೂ ಯಾರು ಕೂಡ ನಗುವುದೂ ಇಲ್ಲ ಎಂಬುದು ಒಂದು ಕಾರಣವಾದರೆ, ನೋಡುವವರ ಕಣ್ಣಿನೊಳಗೆ ಯಾವ ಕೆಟ್ಟ ಭಾವನೆಯೂ ಮೂಡಲಾರದು ಎಂಬುದು ಮತ್ತೊಂದು ಕಾರಣ. ಮಿನಿ ಹಾಕಿದರೆ, ಮಿಡಿ ಹಾಕಿದರೆ, ಮಿನಿ-ಮಿಡಿ ಯಾವುದೂ ಹಾಕದಿದ್ದರೆ, ಈಜುಡುಗೆ ಧರಿಸಿದರೆ, ಈಜುಡುಗೆ ಧರಿಸದೇ ಇದ್ದರೆ, ಬಿಕಿನಿ ತೊಟ್ಟರೆ, ಬಿಕಿನಿ ಸುಟ್ಟರೆ... ಎಂಬಿತ್ಯಾದಿ ಯೋಚನೆಗಳನ್ನು.... ಕೊನೆಯಲ್ಲಿ ನ್ಯಾಪ್‌ಕಿನ್ ಧರಿಸಿ Rampಗೆ ಬಂದರೆ ಹೇಗಿರುತ್ತದೆ ಎಂದು ನೋಡಲು ಈ 'ಎಲ್ಲಾ ಬಿಟ್ನಿ' ಸ್ಪಿಯರ್ಸ್ ಮಕ್ಕಳಿಗೆ ತೊಡಿಸಿ ನೋಡುತ್ತಿದ್ದಾಳೆ ಎಂಬುದು ಗುಪ್ತ ತನಿಖೆಯಿಂದ ತಿಳಿದುಬಂದ ಸಂಗತಿ.

ಮಗುವಿಗೆ ಬಟ್ಟೆ ತೊಡಿಸಿದ ಬ್ರಿಟ್ನಿ- ಚಿತ್ರ ಇಲ್ಲಿದೆ.

ಈ ಮಧ್ಯೆ, ಬ್ರಿಟ್ನಿಯ ಉಡುಗೆ ನೋಡಿ ಪುಟ್ಟ ಮಕ್ಕಳೇ ಆಕೆಗೆ ಬಟ್ಟೆ ತೊಡಿಸಲು ಮುಂದಾಗಿರುವುದು ಇತ್ತೀಚೆಗೆ ಬಂದ ಸುದ್ದಿ!!!

ಧಮಕಿ

ಹಿಟ್ (ಒದೆತ) ಕೌಂಟರ್ (ಪೆಟ್ಟಿಗೆ) 8000ದ ಮಿತಿ ಮೀರಿದ್ದರಿಂದಾಗಿ ತೀವ್ರ ಆಘಾತಗೊಂಡಿರುವ ಬೊಗಳೆ ರಗಳೆ ಬ್ಯುರೋ ಒಂದು ದಿನ ಕಚೇರಿ ಮುಚ್ಚಿ ಮೌನ ವ್ರತ ಆಚರಿಸಿದ ಪರಿಣಾಮವಾಗಿ ಶನಿವಾರದ ಸಂಚಿಕೆ ಪ್ರಕಟವಾಗಿರಲಿಲ್ಲ ಎಂದು ತಿಳಿಸಲು ಖಂಡಿತಾ ವಿಷಾದಿಸುವುದಿಲ್ಲ.

ಗ್ರಹದಿಂದ ಉಚ್ಚಾಟನೆ: ಇದರೊಂದಿಗೆ, ಕೇಂದ್ರ ಸರಕಾರ ಬೊಗಳೆ Blogspotಅನ್ನು Block-spot ಮಾಡಿದ ಬಳಿಕ, "ಬ್ಲಾಗಿಗರಿಗೆ ಉಳಿಗಾಲವಿಲ್ಲ" ಎಂಬ ನಮ್ಮ ಬ್ಯುರೋದ ರಗಳೆಯನ್ನು ಕನ್ನಡ ಬ್ಲಾಗಿಗರ ಗ್ರಹವೂ ಬೆಂಬಲಿಸಿದ ಪರಿಣಾಮವಾಗಿ ಅಲ್ಲಿ ನಮ್ಮ ಬೊಗಳೆ ರಗಳೆ ಪ್ರಕಟವಾಗುತ್ತಿಲ್ಲ. ಬೊಗಳೆ-ರಗಳೆ Black-spot ಆಗದಿದ್ದರೂ blocked-spot ಆಗಿದೆ ಅಂತ ಗೊತ್ತಾಗಿದೆ.

ಈ ಬ್ಯುರೋದ ಅನಾಮಿಕರು ಈ ಗ್ರಹಕ್ಕೆ ಸೇರಿದವರಲ್ಲ ಎಂದು ಸಾರಿದ ಈ ಗ್ರಹ ಇದುವರೆಗೆ ನೀಡಿದ ಸಹಕಾರಕ್ಕೆ ನಮ್ಮ ಅಭೂತಪೂರ್ವ ಧನ್ಯವಾದಗಳನ್ನು ಬೋರಲಾಗಿ ಬಿದ್ದ ಬ್ಯುರೋ ಸಲ್ಲಿಸುತ್ತಿದೆ.

10 Comments

ಏನಾದ್ರೂ ಹೇಳ್ರಪಾ :-D

 1. ಈ ಬ್ರಿಟ್ನಿ ಅಂದ್ರೆ ಬ್ರಿಟನ್ನಿನ ರಾಣಿಯೋ ಅಥವಾ ರಾಜಕುಮಾರಿಯೋ (ಡೈನೋ ಥರ). ಇವಳ ಉಡುಗೆಯನ್ನು ಮಕ್ಕಳಿಗೆ ತೊಡಿಸಿದರೆ, ಆ ಉಡುಗೆ ದೊಗಲೆಯಾಗಿ ಬಿದ್ದು ಹೋಗೋಲ್ವೇ? ಹಾಗೆ ಆಗಲಿ ಅನ್ನೋ ದೃಷ್ಟಿಯಿಂದಲೇ ಹೀಗೆ ಮಾಡ್ತಿರಬೇಕು. ತನಗೂ ಬೇಡ, ಪರರಿಗೂ ಬೇಡ ಎನ್ನುವ ದೂರದುದ್ದೇಶ. ಅಂದ ಹಾಗೆ ಇಂತಹ ಲಲನೆಯರು ನಮ್ಮ ದೇಶದಲ್ಲಿ ಹೆಚ್ಚಾದರೆ ಬಡಮಕ್ಕಳೆಲ್ಲರೂ ಸಂತೋಷ ಪಡುವರು.

  ಕೊನೆಯ ಒದೆತ ನೋಡಿದ್ರೆ, ನೀವ್ಯಾವುದೋ ಪರಗ್ರಹದವರಿರಬೇಕು ಅಂತ ತಮ್ಮ ಮನೆಯಿಂದ ಆಚೆಗೆ ಹಾಕಿರಬೇಕು ಅನ್ಸತ್ತೆ. ಅಂದ ಹಾಗೆ ನೀವು ತಟ್ಟೆಯಲ್ಲಿ ಬಂದಿರಾ (ಸಾಸರ್)? ತಟ್ಟೆಯಲ್ಲಿ ಬರುವವರು ಅನಾಥರು ಅಂತ ಹೊರಗೆ ಹಾಕ್ತಾರಂತೆ. ಯೋಚಿಸಬೇಡಿ, ನಾನೂ ನಿಮ್ಮ ಹಿಂದೆಯೇ ನಿಂತಿರುವೆ. ಯಾರೋ ಎಲ್ಲೋ ಕವಳ ಹಾಕಿಯೇ ಹಾಕ್ತಾರೆ.

  ಮೇರಾ ಭಾರತ್ ಮಹಾನ್!

  ReplyDelete
 2. ಮಾವಿನಯನಸರೆ,
  ಆಕೆಗೆ ಬಟ್ಟೆ ತೊಡಿಸಲೇಬೇಕಾಗಿಲ್ಲ, ತೊಟ್ಟರೂ ತಾನಾಗೇ ಜಾರುಬಂಡಿಯಂತೆ ಬಿದ್ದುಹೋಗುತ್ತದೆ ಅಂತ ಕೇಳಿದ್ದೇವೆ.

  ಮತ್ತೆ ನಾವು ಅನ್ಯಗ್ರಹ ಜೀವಿ - UFO (Unidentified Foreign Object) ಆಗಿರೋದ್ರಿಂತ ಅದಕ್ಕೆ Object ಮಾಡಿರ್ಬೇಕು.

  ನಿಮ್ಮೆಲ್ಲರಿಂದಾಗಿ ಈಗ ಹಾರೋ ತಟ್ಟೆಯಲ್ಲಿ.... ಹಾರೋ ನೆಟ್ಟಿನಲ್ಲಿ ಹಾರಾಡ್ತಾ ಇದೇವೆ.

  ReplyDelete
 3. 1) ಮಿನಿ-ಮಿಡಿ ಗೆ someಬಂಧಿಸಿದಂತೆ :

  ಮನಮಿಡಿಯುವಂಥದಲ್ಲದಿದ್ದರೂ ಮಿನಿ ವಿಚಾರವೊಂದನ್ನು ನಿಮ್ಮ ಬ್ಯೂರೋದ ಗಮನಕ್ಕೆ ತರುತ್ತೇನೆ. "VENI... VIDI... VICI...", (I came, I saw, I conquered) ಎಂಬ ಸೀಸರೋಕ್ತಿಯನ್ನು ನೀವು ಕೇಳಿರಬಹುದು. ಬಟ್ಟೆಗಳಿಗೆ (ಎಸ್ಪೆಷಲಿ ಮಿನಿ-ಮಿಡಿಗಳಿಗೆ) ಕತ್ತರಿ ಹಾಕಿದರೆ ಆಗ Scissorಓಕ್ತಿಯೂ ಅದೇ ಆಗುತ್ತದೆ - "ಮಿನಿ... ಮಿಡಿ... I see"!


  2. ಆ ಗ್ರಹ ಕ್ಕೆ some ರಿಲೀಸಿಸಿದಂತೆ:

  "ಆ ಗ್ರಹ ದೊಡೆದುರಂದೊ ಅರಿಗಳಂ ನಿಗ್ರಹಿಸೊ ವ್ಯಾಘ್ರನಿವನೊ... ಉಗ್ರಪ್ರತಾಪಿ..." ಎಂದು ಅರ್ಜುನ ಬಬ್ರುವಾಹನನೆದುರು ಗುಡುಗಿದ ಹಾಗೆ 'ಆ ಗ್ರಹ'ದವರೆದುರು ನೀವೂ ಆಗ್ರಹ ಮಾಡಿ!

  ReplyDelete
 4. Scissor ಮೂಲಕ ಸೀರೆ ಮಿಡಿಯಾಗುವ ವಿಚಾರ ಹೇಳಿ ನಾವು ಕಣ್ಣು ತೆರೆದು ನೋಡುವಂತೆ ಮಾಡಿದ್ದೀರಿ ಜೋಷಿಯವರೆ.

  ಆ-ಗ್ರಹಕ್ಕೆ ಆಗ್ರಹ ಮಾಡಿದ್ದೆವು. ಆದರೆ ಏನೋ ಹೊಸ ಸಿದ್ಧಾಂತವಂತೆ. ಅದು ರಾದ್ಧಾಂತವಾಗಿದೆ.

  ReplyDelete
 5. Congratulations Anveshi, 8000+ yeatu biddiddakke!!!

  ReplyDelete
 6. ಎಷ್ಟೂ ಏಟು ತಿಂದ್ರೂ ಇನ್ನೂ ಬುದ್ಧಿ ಬರಲಿಲ್ಲವಲ್ರಿ? ಬ್ರಿಟ್ನಿಗೆ ಅಭಿನೇತ್ರಿ ಎಂದಿದ್ದೀರಿ ಅದಕ್ಕೇ ಏನೋ ಅವಳ 'ನಟನೆ'ಯನ್ನು ನಾವೆಲ್ಲಾ ಬಾಯಿಬಿಟ್ಟ್ ನೋಡೋದು!
  ಗ್ರಹಕ್ಕೆ ಗ್ರಹಚಾರ ಕಾಡಿರಬೇಕು, ಇಲ್ಲಾ ಗ್ರಹಣ ಹಿಡಿದಿರಬೇಕು, ಸರಿ ಮಾಡಿ ಎಂದು ಕೇಳಿ ನೋಡಿದ್ದೀರೇನೂ?

  ReplyDelete
 7. ಸಿಂಧು,
  ಅಬ್ಬಾ... ನಿಮ್ಮ ಏಟೇ ಜೋರಾಗಿಬಿದ್ದಿದೆ.
  ಸ್ವಲ್ಪ ಮೆತ್ತಗೆ ಹಿಟ್ ಮಾಡಿ, ಬೊಗಳೆ ಗುಳ್ಳೆ ಒಡೆದೀತು... :)

  ReplyDelete
 8. ಅಭಿ ನೇತ್ರಿಗಳೆಲ್ಲಾ ಅಭಿನಯವನ್ನೇ ಬೇರೆಯರ ನೇತ್ರಕ್ಕೆ ರಂಜನೆಯಾಗುವಂತೆ ಮಾಡುವುದೇ ಅಭಿನಯ ಅಂತ ತಿಳಿದುಕೊಂಡಿದ್ದಾರೆ ಕಾಳು ಅವರೆ,

  ಗ್ರಹ ಗತಿ ಬಹುಶಃ ಸರಿಯಾಗಲಾರದೇನೋ,... ಯಾಕಂದ್ರೆ ನಮ್ ಹೆಸರು ಈ ಗ್ರಹದ್ದಲ್ಲ.

  ReplyDelete
 9. ಅಸತ್ಯಿಗಳೇ,
  ನೀವು ಹಿಂಗೆ ಬ್ರಿಟ್ನಿ ಬಟ್ಟೆ ಬಗ್ಗೆ ಪುಗಸಟ್ಟೆ ಪ್ರಚಾರ ಕೊಟ್ಟಿದ್ದು ಕೇಳಿ ಸಾಕ್ಷಾತ್ ಬ್ರಿಟ್ನಿಯೇ ನನಗೆ ಕರೆ ಮಾಡಿ ಅತೀವ ಸಂತಸವನ್ನು ವ್ಯಕ್ತಪಡಿಸಿ, ಹಾಗೆಯೇ ನಿಮಗೆ ಒಂದೆರಡು ಬಟ್ಟೆಗಳನ್ನು ಪ್ರೀಯಾಗಿ ಕಳುಸಿತ್ತಿದ್ದಾಳೆ.ನಿಮ್ಮ ವಿಳಾಸ ಕೇಳಿದಳು..ನಾನು 'ಬೊಗಳೇ ರಗಳೆ,ಭಾರತ' ಅಂತಾ ಬರೀ ಸಾಕು ಅಂತಾ ಹೇಳಿದೆ..ಸರಿಯಲ್ವ :)

  ಅಂದಾಗೆ ಬ್ರಿಟ್ನಿ ತನ್ನೆಲ್ಲ ವಸ್ತ್ರತ್ಯಾಗ ಮಾಡಿ ಮಕ್ಕಳಿಗೆ ಬಟ್ಟೆ ತೊಡಿಸುತ್ತಿದ್ದರೆ ವಿ-ವಸ್ತ್ರ್ರ-ವೀ-ಕ್ಷಣ-ಪ್ರಿಯರಾದವರೂ ಬಟ್ಟೆಗೆ ಕಿಚ್ಚು ಹಚ್ಚೆಂದ..

  ReplyDelete
 10. ಅಯ್ಯಯ್ಯೋ... ಶಿವ್ ಅವರೆ,
  ಬ್ರಿಟ್ನಿ ಕಳುಹಿಸಿದ ಬಟ್ಟೆ ತೊಟ್ಟು ಅಳಿದು ಉಳಿದ ಮಾನ ಮರ್ಯಾದೆ ಎಲ್ಲಾ ಹೋಗುವ ಸಲಹೆ ನೀಡ್ತಾ ಇದೀರಾ...

  ಬಟ್ಟೆಗೆ ಕಿಚ್ಚು ಹಚ್ಚೆಂದ ಶಿವಜ್ಞರ ಹೇಳಿಕೆ ಹಿಂದೆ ಏನೋ ಅನುಮಾನವಿದೆ... :)

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post