Subscribe Us

ಜಾಹೀರಾತು
header ads

ಇದೋ ಬಂದಿದೆ ಹೊಸತು- ಬಿಟ್ಟಿ ಟೆಕ್ನಾಲಜಿ!

(ಬೊಗಳೂರು ಉದ್ಯೋಗ ಬದಲು ಬ್ಯುರೋದಿಂದ)

ಬೊಗಳೂರು, ಜು.31- ದೇಶದಲ್ಲಿ ಐಟಿ, ಎನ್‌ಟಿ (ಎಂಪ್ಟಿ ಅಲ್ಲ-ನ್ಯಾನೋ ಟೆಕ್ನಾಲಜಿ), ಬಿಟಿ (ಬಯೋ ಟೆಕ್ನಾಲಜಿ) ಮುಂತಾದವು ತೀವ್ರಗತಿಯಿಂದ ಬೆಳೆಯುತ್ತಾ ಬಂದಿರುವಂತೆಯೇ ಹೊಸದಾಗಿ 'ಬಿಟ್ಟಿ ಟೆಕ್ನಾಲಜಿ' ಉದ್ಯಮವೊಂದು ಬೇರೆಲ್ಲರನ್ನೂ ಹಿಂದಿಕ್ಕಿ ಧಾವಿಸತೊಡಗಿದೆ. ಆದರೆ ಬಿಟಿ ಟೆಕ್ನಾಲಜಿ ಅಂತ ಕೆಲವರು ತಪ್ಪು ತಿಳಿದು ಬೇಸ್ತು ಬಿದ್ದ ಪ್ರಸಂಗವೂ ಅಲ್ಲಲ್ಲಿ ನಡೆದಿದೆ.

ಈ ಹೊಸ ತಂತ್ರಜ್ಞಾನಕ್ಕೆ ವೈದ್ಯೋ ನಾರಾಯಣೋ ಹರಿಃ ಖ್ಯಾತಿಯ ನರಾರಿ (ನರಿ ಅಲ್ಲ, ನರ+ಅರಿ=ನರ ವೈರಿ)ಗಳೂ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ.

ಓದುಗರು ಕೂಡ ಈ ಹೊಸ ಬಿಟ್ಟಿ ಉದ್ಯಮದಲ್ಲಿ ಹಣ ಹೂಡುವ ಮೂಲಕ ಭರ್ಜರಿ ಗಿಟ್ಟಿ-ಸಿಕೊಳ್ಳಬಹುದೆಂದು ಬೊಗಳೆ ರಗಳೆ ಬ್ಯುರೋ ಅಬ್ಬರದ ಅಪ-ಪ್ರಚಾರ ಮಾಡಲಾರಂಭಿಸಿದೆ.

ಹೆಚ್ಚಿನ ವಿವರಗಳು ನಮ್ಮ ಪ್ರತಿಸ್ಪರ್ಧಿ ಜಾಲವಾಗಿರುವ ಸಿಎನ್ಎನ್-ಐಬಿಎನ್ ಎಂಬ ತಾಣದ ಪುಟದಲ್ಲಿದೆ.ಆದರೆ ಈ ಪ್ರತಿಸ್ಪರ್ಧಿ ನೆಟ್-ಪತ್ರಿಕೆಯು ಎಲ್ಲವನ್ನೂ ಅರ್ಧಂಬರ್ಧ ಮಾಹಿತಿ ನೀಡಿ ಓದುಗರನ್ನು ಗೊಂದಲಕ್ಕೀಡುಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ದೊರೆಯದ ಅ-ಸತ್ಯಗಳು ಅವರಿಗೆ ದೊರಕುವಂತಾಗಲಿ ಎಂಬ ಉದ್ದೇಶದಿಂದ ಈ ಕಿರಿಕಿರು ಮಾಹಿತಿ.
ಅರ್ಹತೆ

ಈ ಬಿಟ್ಟಿ ಉದ್ಯಮಕ್ಕೆ ಬೇಕಾದ ಅರ್ಹತೆ ಎಂದರೆ ನಿಮ್ಮ ಅಂಗಾಂಗಗಳು ನೆಟ್ಟಗಿರಬಾರದು, ಸೊಟ್ಟಗಿರಬೇಕು. ಈ ಅರ್ಹತೆ ಯಾರಿಗಿಲ್ಲವೋ, ಅವರಿಗೆ ಅನುಕೂಲವಾಗಿಸಲು ಸಾಕಷ್ಟು ಕೇಂದ್ರಗಳು ದೇಶಾದ್ಯಂತ ಅಣಬೆಯಂತೆ ತಲೆಎತ್ತುತ್ತಿವೆ.
ಎಷ್ಟು ಖರ್ಚಾಗುತ್ತದೆ?

ಒಂದು ಬೆರಳು ಕತ್ತರಿಸಲು 500ರಿಂದ 1000 ರೂ. ವಿಧಿಸಲಾಗುತ್ತದೆ. ಒಂದು ಕಾಲು ಅಥವಾ ಕೈ ಕತ್ತರಿಸಬೇಕಿದ್ದರೆ 5 ಸಾವಿರದಿಂದ 10 ಸಾವಿರದವರೆಗಿನ ಅತ್ಯಾಧುನಿಕ ಕಟ್-ಕೇಂದ್ರಗಳೂ ಇವೆ. ಈ ಕಟ್ ಕೇಂದ್ರಗಳು ಕೈ-ಕಾಲುಗಳನ್ನು ಮಾತ್ರವೇ ಕಟ್ ಮಾಡದೆ, ಜೇಬು ಕೂಡ ಸರಿಯಾದ ರೀತಿಯಲ್ಲೇ ಕಟ್ ಮಾಡುತ್ತವೆ ಎಂಬುದನ್ನು ಬೊ.ರ. ಬ್ಯುರೋ ಕಂಡುಕೊಂಡಿದೆ.
ಉಚಿತ.... ಉಚಿತ....

ಆಮೇಲೆ.... ಇಲ್ಲಿ ನಾಲಿಗೆ ಕಟ್ ಉಚಿತ ಎಂಬ ಜಾಹೀರಾತು ಕೂಡ ಇದೆ. ಆದರೆ ಅದಕ್ಕೆ ಒಂದು ಸಣ್ಣ (ಕಟ್ ಮಾಡಿದ ಕಾಲ್ಬೆರಳಿನ ಮೂಲಕ !) ಹೆಜ್ಜೆಯನ್ನು ನೀವು ಮುಂದಿಡಬೇಕು. "ಈ ಬಗ್ಗೆ ನಾವು ಪೊಲೀಸರಿಗೆ ಹೇಳಿಬಿಡುತ್ತೇವೆ" ಅಂತ ಒಂದೇ ವಾಕ್ಯ ಹೇಳಿದರಾಯಿತು, ನಿಮ್ಮ ನಾಲಿಗೆ ಕಟ್ ಉಚಿತ!
0% Installment Scheme!

ಬಿಟ್ಟಿ ಜಾಹೀರಾತು ಪ್ರಕಾರ, ನೀವು ಉಚಿತವಾಗಿಯೇ ಕೈ-ಕಾಲು ಕಳೆದುಕೊಳ್ಳಬಹುದು. ಇದಕ್ಕೆ 0% installment ಸೌಲಭ್ಯವೂ ಇದೆ. ಆದರೆ ಈ installment ಮಾತ್ರ life-long ಆಗಿರುತ್ತದೆ. ನೀವು ಮಾಡಬೇಕಾದುದಿಷ್ಟೆ. "ನಿಮ್ಮ ದಂಧೆಯ ಬಗ್ಗೆ ಎಲ್ಲವನ್ನೂ ಬಟಾಬಯಲು ಮಾಡಿ, ಕ್ರಮ ಕೈಗೊಳ್ಳುತ್ತೇವೆ" ಎಂಬ ಅಣಿಮುತ್ತು ಉದುರಿಸಿದರಾಯಿತು.

ತಕ್ಷಣವೇ ನಿಮ್ಮ ಅದುರುತ್ತಿರುವ ಕೈ ಅಥವಾ ಕಾಲು ಉದುರಿರುತ್ತದೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ನೀವು ಬೀದಿಗೆ ಬಿದ್ದಿರುತ್ತೀರಿ. ಅಂದರೆ ಬೀದಿಯ ಬದಿಯಲ್ಲೇ ನಿಮಗೊಂದು ಆಸನ ನೀಡಿ ಅದರ ಮೇಲೆ ತಂದು ಕುಳ್ಳಿರಿಸಲಾಗುತ್ತದೆ. ಪ್ರತಿದಿನ ಅಥವಾ ಪ್ರತಿ ವಾರ, ತಿಂಗಳು ಅಂತ ನೀವು ಅವರಿಗೆ installment ನೀಡಿದರಾಯಿತು.
ಮನೆ... ಅಲ್ಲಲ್ಲ... ಬೀದಿ ಬಾಗಿಲಿಗೇ ಸೇವೆ!

ಮತ್ತೆ, installment ನೀವೇ ಹೋಗಿ ಕಟ್ಟಬೇಕೆಂದಿಲ್ಲ. ಅವರೇ ನಿಮ್ಮ ಬಳಿಗೆ ಬರುತ್ತಾರೆ. installment ನೀಡದಿದ್ದರೆ ಮತ್ತೊಂದು ಕಾಲೋ, ಕೈಯೋ ಕತ್ತರಿಸಲು ಬಿಟ್ಟಿ-ಮಾಫಿಯಾ ತಂಡದವರು ಬರುತ್ತಾರೆ. "ಕಳೆದುಕೊಳ್ಳುವ ಅಂಗಗಳ ಸಂಖ್ಯೆ ಹೆಚ್ಚಿದಂತೆ ಸಂಪಾದನೆಯೂ ಹೆಚ್ಚಾಗುತ್ತದೆ" ಎಂಬ ಬಿಟ್ಟಿ ಟೆಕ್ನಾಲಜಿ ಸೂತ್ರವನ್ನು ಅವರು ಪಾಲಿಸುತ್ತಾರೆ.
ನ್ಯೂಟನ್‌ಗೇ ಸವಾಲು

ನ್ಯೂಟನ್ನನ Thery of Gravity ಯಿಂದ ಪ್ರೇರಣೆ ಪಡೆದು ಇವರು Theory of earn-ity ರೂಪಿಸಿದ್ದಾರೆ. ಅದರ ಪ್ರಕಾರ, Every human body makes the earning which is inversely proportional to the number of organs and directly proportional to the organs which are in deficit.
ಮನವರಿಕೆ

ಬೊಗಳೆ ರಗಳೆ ಬ್ಯುರೋ ಮುಚ್ಚಿ ಮುಂಬಯಿಗೆ ಹೋಗಬೇಕು ಅಂತ ಮೊನ್ನೆ ಇಲ್ಲಿ ಯಾಕೆ ಹೇಳಿದ್ದೇವೆ ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಪ್ರತಿಸ್ಪರ್ಧಿ ಪತ್ರಿಕೆ ಸಿಎನ್ಎನ್-ಐಬಿಎನ್ ಬ್ಯುರೋ ಮಾನವೀಯತೆ ತೋರಿ ನಮ್ಮ ಸಹಾಯಕ್ಕೆ ಬಂದಿದೆ.

Post a Comment

7 Comments

 1. This comment has been removed by a blog administrator.

  ReplyDelete
 2. This comment has been removed by a blog administrator.

  ReplyDelete
 3. ಟಿವಿಯವರು ಠೀವಿಯಿಂದ ಈಗ ಪ್ರಕಟಿಸುತ್ತಿದ್ದಾರೆ. ಈ ಬದುಕುವಪರಿಯ ಬಗ್ಗೆ ನಾನು ಈ ಹಿಂದೆಯೇ ಬರೆದಿದ್ದೆ. ನನ್ನನ್ನು ಕೇಳೋರೇ ಇಲ್ಲ :(

  ReplyDelete
 4. ಓ....... ಮಾವಿನಯನಸರೇ,
  ನಿಮಗೆ ಹಣ ಮಾಡಲು ಒಳ್ಳೆ ಅವಕಾಶ.!!!!
  ಕಾಪಿ ರೈಟ್ ಅಂತ ಕೇಸು ಹಾಕಿ ಬೇಕಾದಷ್ಟು ಕಾಫಿ ಕುಡಿಯಿರಿ....!!!!

  ReplyDelete
 5. ಅರೆ ಇಸ್ಕಿ, ನಿಮ್ದು ಯಾವ್ದು ಟೆಕ್ನಾಲಜಿ ಸಾಮಿ, ಅದೇನೋ ಮೈಸೂರ್‌ನಿಂದ ಇನ್ಫೋಸಿಸ್ ಮಾಡ್‌ತೈತಲ್ಲಾ ಅದಾ?

  ReplyDelete
 6. This comment has been removed by a blog administrator.

  ReplyDelete
 7. ಕಾಳು ಅವರೆ
  (ಅವರೆ ಕಾಳು?)

  ನಿಮ್ದು ಇಸ್ಕಿ ಟೆಕ್ನಾಲಜಿ ನಮಗ್ ವ್ಹಿಸ್ಕಿ ಟೆಕ್ನಾಲಜಿ ಅಂತಾ ಕೇಳ್ಸಾಕ್ ಹತ್ತೈತೇ....

  ಬೊಗಳೆಗೆ ನಿಮಗೆ ಸ್ವಾಗತ....
  ನಿಮ್ಮ ಕಾಲಚಕ್ರನೂ ಕಾಲಿನ ಚಕ್ರದ್ಹಾಗೇ ತಿರುಗ್ತಾ ಇರ್ಲಿರೀ...

  ReplyDelete

ಏನಾದ್ರೂ ಹೇಳ್ರಪಾ :-D