(ಬೊಗಳೂರು ಗುಟ್ರಟ್ಟು ಬ್ಯುರೋದಿಂದ)
ಬೊಗಳೂರು, ಜು.10- ದೇಶಾದ್ಯಂತ ಕಳ್ಳತನದ ಹೊಸ ವರಸೆಯೊಂದು ಆರಂಭವಾಗಿದ್ದು, ವಿಶೇಷವಾಗಿ ಹೆಂಗಸರು ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಆಗಾಗ್ಗೆ ಗುಟ್ಟು ರಟ್ಟಾಗುತ್ತಿರುವುದರಿಂದ ಈ ಹೊಸ ಹಗರಣವು ಬೆಳಕಿಗೆ ಬಂದಿದ್ದು, ಕೋಕಾ ಕೋಲಾ ಕಂಪನಿಯ ಗುಟ್ಟುಗಳನ್ನು ಮೂಟೆ ಕಟ್ಟಿ ಪೆಪ್ಸಿ ಕಂಪನಿಗೆ ಮಾರಾಟ ಮಾಡಿರುವ ವಿಷಯ ಈ ಹಗರಣಕ್ಕೆ ಹೊಸದೊಂದು ಸೇರ್ಪಡೆ.

ಈ ಹಿನ್ನೆಲೆಯಲ್ಲಿ ಗುಟ್ಟು ಮಾಡುವವರು, ಗುಟ್ಟು ಹೇಳುವವರು ಮತ್ತು ಗುಟ್ಟಾಗಿಯೇ ಏನೇನೋ ಮಾಡಿ ಮುಗಿಸುವವರು ಗಟ್ಟಿಯಾಗಿ ಕಟ್ಟು ಕಟ್ಟಿ ಇರಿಸಲು ಮತ್ತು ಅದನ್ನು ಬಿಟ್ಟುಕೊಡದಿರುವುದು ಸೂಕ್ತ ಎಂದು ಭಾವಿಸಲಾಗಿದೆ.
ಹೆಂಡಸರ ಬಗ್ಗೆ ವಿಶೇಷ ಗಮನ

ಗುಟ್ಟು ರಟ್ಟಾಗಿಸುವಲ್ಲಿ ಪರಿಣತವಾಗಿರುವ ಹೆಂಡಸರ ಮೇಲೆ ದೇಶ ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳ ಕೆಂಡಗಣ್ಣು ಬಿದ್ದಿದೆ ಎಂದು ವರದಿಯಾಗಿದೆ.

ಗುಟ್ಟೊಂದು ಹೇಳುವೆ, ಹತ್ತಿರ ಹತ್ತಿರ ಬಾ ಎಂದು ಮುಂದುವರಿಯುವ ಮತ್ತು ಈ ಹಾಡನ್ನೂ ಮುಂದುವರಿಸುವ ಗಂಗಸರ (ತುಳುವಿನಲ್ಲಿ ಗಂಗಸರ= ಹೆಂಡಸಾರಾಯಿ) ಮೇಲೂ ಅವರ ಗುಮಾನಿ ಹೆಚ್ಚಾಗತೊಡಗಿದೆ.

ಹೆಂಡಸಾರಾಯಿಗಳೆಲ್ಲಾ ತಮ್ಮ ಬೊಂಬಾಯಿಯಿಂದ "ನಿಮಗೆ ಮಾತ್ರ ಹೇಳುವೆ, ಬೇರಾರಿಗೂ ಹೇಳಬೇಡಿ" ಅಂತ ಊರಿಗೆಲ್ಲಾ ಕೇಳಿಸುವಂತೆಯೂ, ಕಂಡಕಂಡವರೆದುರು ಹೇಳುವುದರಿಂದಾಗಿಯೂ ಈ ಗುಟ್ಟು ಬರೇ ರಟ್ಟಾಗುತ್ತದೆ ಹೊರತು ಕಳವಾಗುವ ಸಾಧ್ಯತೆಗಳಿಲ್ಲ.

ಆದರೆ ಗಂಗಸಾರಾಯಿಗಳು ಗುಟ್ಟುಗಳನ್ನೆಲ್ಲಾ ಬಾಟ್ಲಿಯಲ್ಲಿ ಸಂಗ್ರಹಿಸಿ, ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟುಗೂಡಿಸಿ ಬೇರೆಯವರಿಗೆ ಮಾರಾಟ ಮಾಡುವ ಸಾಧ್ಯತೆಗಳು ಈ ಪ್ರಕರಣದಿಂದ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸರ್ವರೂ ತಮ್ಮ ತಮ್ಮ ಗುಟ್ಟುಗಳನ್ನು ಗಟ್ಟಿಯಾಗಿ ತಮ್ಮ ತಮ್ಮಲ್ಲೇ ಇರಿಸಿಕೊಂಡು ಬೇರೆಯವರು ಎಷ್ಟೇ ಎಳೆದಾಡಿದರೂ ಬಿಟ್ಟುಕೊಡದಂತೆ ಸೂಚಿಸಲಾಗಿದೆ.
ಅಸತ್ಯಾನ್ವೇಷಿ ಗುಟ್ಟು ರಟ್ಟಿಸುವ ಸಂಚು!
ಈ ಮಧ್ಯೆ, ಗುಟ್ಟು ರಟ್ಟಾಗುವ ಪ್ರಕ್ರಿಯೆಗಳಿಂದ ಅಸತ್ಯಾನ್ವೇಷಿಗೂ ಬಿಸಿ ತಟ್ಟಿದ್ದು, ನಂ.1 ಪ್ರತಿಸ್ಪರ್ಧಿ ವಿಜಯ ಕರ್ನಾಟಕ ಪತ್ರಿಕೆಯೂ ಬೊಗಳೆ ರಗಳೆ ಬ್ಯುರೋ ವಿರುದ್ಧ (ತಲೆ)ತಿರುಗಿ ಬಿದ್ದಿದೆ. ಅದರ ಜು.3ರ ಸಂಚಿಕೆಯ ಸಿಂಪ್ಲಿ ಸಿಟಿ ಪುಟದಲ್ಲಿ ಸ್ವಾಮೀಜಿಯವರೊಬ್ಬರ ಮೂಲಕ ಅಸತ್ಯಾನ್ವೇಷಿಯ ಗುಟ್ಟು ರಟ್ಟಾಗಿಸುವ ಬಹಿರಂಗ ಸಂಚು ನಡೆದಿದೆ.

"ಅಸತ್ಯಾನ್ವೇಷಿಯಾದವನು ಈ ಸಮಾಜದ ರೀತಿ ನೀತಿಗಳನ್ನು ಒಪ್ಪುವುದಿಲ್ಲ, ಸುಳ್ಳು, ಸುಲಿಗೆ, ಮೋಸ, ಅನೀತಿ, ಬೂಟಾಟಿಕೆ ಇವುಗಳಿಗೆ ಅವನು ಹತ್ತಿರವಾಗುತ್ತಾನೆ" ಎಂಬ ಸ್ವಾಮೀಜಿ ಹೇಳಿಕೆಯನ್ನು ಬೇಕೆಂದೇ 180 ಡಿಗ್ರಿ ತಿರುಚಿ, ನಮ್ಮ ಮರ್ಯಾದೆ ತೆಗೆಯಲೆಂದೇ ಪ್ರಕಟಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ಹತ್ತಿಕ್ಕುವ ಕಾಯಿದೆ ಜಾರಿಗೊಳಿಸಬೇಕೆಂದು ನಮ್ಮ ಬ್ಯುರೋ ಜೋರಾಗಿ ಅರಚಾಡುತ್ತದೆ.

13 Comments

ಏನಾದ್ರೂ ಹೇಳ್ರಪಾ :-D

 1. ಇನ್ಮೇಲೆ ನಾನು ಯಾರಿಗೂ ಬ್ಲಾಗಿನಲ್ಲಿ ಗುಟ್ಟು ಹೇಳೋಲ್ಲ. ಎಲ್ಲವನ್ನೂ ನೀವು ಪಬ್ಲಿಕ್ ಮಾಡಿಬಿಡ್ತೀರ.

  ReplyDelete
 2. ಓ ಮಾವಿನ ರಸಾಯನರೆ,

  ನಿಮ್ಮ ಗುಟ್ಟು ಎಲ್ಲವೂ ಮುಂಬಯಿಯ ಮಳೆಯಲ್ಲಿ ತೊಯ್ದು ಹೋಗಿದೆಯಂತೆ....
  ಮತ್ತೆ ಶಿವಸೈನಿಕರು ಬೆಂಕಿ ಹಚ್ಚಿ ಚಳಿ ಓಡಿಸಿದ್ದಾರಂತೆ...

  ಹೇಗಿದ್ದೀರಾ ಈಗ? :)

  ಯಾಕೆ ಕೇಳ್ತಾ ಇದೀನಿ ಅಂದ್ರೆ, ಶಿವಸೈನಿಕರೇನಾದ್ರೂ ನಿಮ್ಮ ಭಾವಚಿತ್ರಕ್ಕೆ ಬೆಂಕಿ ಕೊಟ್ಟರೋ ಅಂತ... ನಿಮ್ಮ ಮುಖವೇ ಕಾಣಿಸ್ತಾ ಇಲ್ಲ....!

  ReplyDelete
 3. ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೆ...
  ಕೊಟ್ಟದ್ದು ತನಗೆ ರಟ್ಟಿಸಿದ್ದು ಪರರಿಗೆ...

  ಎಂಬ ಚಿತ್ರಗೀತೆಯ ಸಾಲುಗಳಮ್ಮೂ ಸ್ವಲ್ಪ ಪರಾಮರ್ಶಿಸಬೇಕು. ಮುಖ್ಯವಾಗಿ ಹೈಲೈಟಿಸಲ್ಪಟ್ಟಿರುವ 'ರಟ್ಟಿಸಿದ್ದು' ಪದವನ್ನು. ರಟ್ಟಿಸುವುದು ಎಂದರೆ ಗುಟ್ಟು ರಟ್ಟಾಗಿಸುವುದು (ಆ ರಟ್ಟನ್ನು, ಗುಟ್ಟು ಬರೆದಿಟ್ಟಾ ಪುಸ್ತಕಕ್ಕೆ ಕವಚವಾಗಿ ಉಪಯೋಗಿಸಬಹುದು) ಅಂತ ಒಂದು ಅರ್ಥ; ತುಳು ಭಾಷೆಯಲ್ಲಿ 'ರಟ್ಟಿಸುವುದು' ಎಂದರೆ 'ಎರಚುವುದು' (ಉದಾ: ನೀರು, ಕೆಸರು ಇತ್ಯಾದಿಯನ್ನು ರಟ್ಟಿಸುವುದು) ಎಂಬ ಅರ್ಥವೂ ಇದೆ. ಗುಟ್ಟನ್ನು ಮತ್ತು ಗುಟ್ಟಿನಲ್ಲಿರುವ 'ರಸ'ವನ್ನು ರಟ್ಟಿಸುವುದು ಕೆಲವರಿಗೆ ಅತಿ ಮೋಜಿನ ಚಟ/ಆಟ/ಹವ್ಯಾಸ/ಅಭ್ಯಾಸ/ಚಾಳಿ.

  ReplyDelete
 4. "ನಮ್ಮ ಬ್ಯುರೋ ಜೋರಾಗಿ ಅರಚಾಡುತ್ತದೆ..."

  ಅದಕ್ಕೆ

  "ಬ್ಯುರೋ, ರೋ ಮತ್..." ಎಂದು 'ಹಿಂದಿ'ನಿಂದ ಪುಸಲಾಯಿಸಿ!

  ReplyDelete
 5. ನನ್ನ ಚಿತ್ರ ಯಾರೋ ಕದ್ದು ಬಿಟ್ಟಿದ್ದಾರೆ. ಸ್ವಲ್ಪ ಹುಡುಕಿಕೊಡುವಿರಾ? ಅದಕ್ಕೆ ಏನೇನು ಶಾಂತಿ ಮಾಡಬೇಕೋ ಅದೆಲ್ಲವನ್ನೂ ಮಾಡುವೆ - ಜೊತೆಗೆ ಸೂಕ್ತ ದಕ್ಷಿಣೆಯನ್ನೂ ಕೊಡುವೆ. ಚೊತ್ತ ರಾಜನ್‍ಗೆ ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳುವೆ.

  ReplyDelete
 6. ಜೋಷಿಯವರೆ,
  ಚೆನ್ನಾಗಿಯೇ ರಟ್ಟಿಸಿದ್ದೀರಿ. (ಎರಡೂ ಅರ್ಥದಲ್ಲಿ)!
  ಮತ್ತೊಂದು...
  ಕುಟ್ಟಿ-ದೊಣ್ಣೆ ಆಡುವಾಗ ಕುಟ್ಟಿಯನ್ನು ದೊಣ್ಣೆಯಿಂದ ದೂರಕ್ಕೆ ರಟ್ಟಿಸಿದಂತೆ ನೀವು ಕುಟ್ಟಿದ್ದು ನಮ್ಮ ಬ್ಯುರೋಗೆ ಜೋರಾಗಿಯೇ ತಟ್ಟಿದೆ. ಕಣ್ಣಿಗೇನೂ ಆಗಿಲ್ಲ!
  ---------
  ರೋ ಮತ್ ಅಂತ ಹೇಳಿದಾಗ, ಅದು ರೋಮನ್ ಅಂತ ಪ್ರೂಫ್ ಮಿಸ್ಟೇಕ್ ಆದ ಪರಿಣಾಮ ಅದೇನೂ ವಿಶ್ವಕಪ್ ಗೆದ್ದ ಇಟಲಿಯೂ ಮಲಗಿದಲ್ಲೇ ಒಮ್ಮೆ ನಲುಗಿತಂತೆ. ಅಂತೆಯೇ ನಮ್ಮ ಕಾಂಗ್ರೆಸ್ ಅಧ್ಯಕ್ಷರ ಮನೆಯೂ ಒಮ್ಮೆ ಜೋರಾಗಿಯೇ ಸಂತಸ ಆಚರಿಸಿತು ಅಂತ ಸುದ್ದಿ ಇದೆ. ನೋಡೋಣ.

  ReplyDelete
 7. ಮಾವಿನ ಅರಸರೆ,
  ನಿಮ್ಮ ಚಿತ್ರ ಕದ್ದರೆ ಅದೇಕೆ ಹೃದಯವನ್ನೇ ಯಾರೋ ಕದ್ದಿದ್ದಾರೆ ಅಂತ ನಲುಗುತ್ತೀರಿ?

  ಅಲ್ಲೇ ಮುಂಬಯಿ ಮಳೆಯ ಪ್ರವಾಹದಲ್ಲಿ ತೇಲಿ ಹೋಗಿರಬಹುದು. ನೋಡಿ, ನಮ್ಮೂರಿನ ಸಮುದ್ರಕ್ಕೆ ಬಂದರೆ ಹೆಕ್ಕಿಕೊಳ್ಳುವೆ. ಆಗದೆ?

  ReplyDelete
 8. ಆ ಕೋಕಾ ಕೋಲಾದಲ್ಲಿ ಅಂತಾ ಮಹಾ ಗುಟ್ಟೇನ್ರೀ ಇರೋದು ?
  ಎಲ್ಲರಿಗೂ ಗೊತ್ತಿಲ್ವೆ ಅದರಲ್ಲಿ ಇರೋದು ಕೀಟನಾಶಕ-ಗೊಬ್ಬರ ಇತ್ಯಾದಿ..ಅದೆಲ್ಲ ಗೊತ್ತಿದ್ದರು ಅದನ್ನು ಮಾರಲು ಹೊರಟವರು ಎಂತವರು ಅದನ್ನು ಕೊಳ್ಳಲು ಹೊರಟವರು ಇನ್ನೆಂತವರು..

  ನಿಮ್ಮಗೆ ಗುಟ್ಟುಗಳಿಗೆ ನೀವೇ ಜವಬ್ದಾರರು ಅಂತ ಇನ್ಮೇಲೆ ಬೋರ್ಡ್ ಹಾಕಿಕೊಳ್ಳಬೇಕಾ ಹೆಂಗೆ?

  ReplyDelete
 9. ಅಸತ್ಯಾನ್ವೇಷಿಗಳೇ, ನನ್ನ ಹೃದಯ ಕದಿಯಲು ಯಾರೂ ಬರೋಲ್ಲ ಬಿಡಿ. ಬಾಯಲ್ಲಿ ಹಲ್ಲಿಲ್ಲ, ತನುವಲ್ಲಿ ಕಸುವಿಲ್ಲದ ಯಾರನ್ನೂ ಮೆಚ್ಚಿಸಲಾಗದ ಪ್ರಾಣಿ ನಾನು. ಆದರೆ ಚಿತ್ರವನ್ನು ಕದ್ದೊಯ್ದು ಮನೆಯವರನ್ನು ಬ್ಲಾಕ್ ಮೈಲ್ ಮಾಡುವ ಸಾಧ್ಯತೆ ಇದೆಯೇ ಎನ್ನುವ ನಿಟ್ಟಿನಲ್ಲಿ ಅನ್ವೇಷಿಸಿ ನನಗೆ ವರದಿ ಕೊಡುವಿರಾ?

  ನಿಮ್ಮ ಶುಲ್ಕದ ಬಗ್ಗೆ ಚಿಂತೆ ಬೇಡ. ಸೂಕ್ತವಾಗಿ ನಾನು ನಿಮ್ಮನ್ನು ನೋಡಿಕೊಳ್ಳುವೆ.

  ReplyDelete
 10. ಹಾಂ... ಶ್ಯೂ ಅವರೆ,
  ಕೋಕಾ ಕೋಲಾದಲ್ಲಿ ಇರೋದು ಬೇರೆಯೇ ಸಂಗತಿ ಅಂತ ನಮಗೆ ಯಾವತ್ತೋ ಗೊತ್ತಾಗಿತ್ತು. ಬಹುಶಃ ಅದಕ್ಕೆ ಈ ರೀತಿ ಕದ್ದಿರಬಹುದು.

  ReplyDelete
 11. ಮಾವಿನರಸರೆ,
  ನಿಮ್ಮನ್ನು ಯಾರು ಕೂಡ ಬ್ಲ್ಯಾಕ್ ಮೇಲ್ ಮಾಡಲಾರರು. ಆದ್ರೆ ಆ ಭಾವ ಚಿತ್ರ ಹಿಡಿದುಕೊಂಡು ಯಾರಿಗಾದರೂ ಇ-ಮೇಲ್ ಮಾಡಿಯಾರು.

  ReplyDelete
 12. Interesting site. Useful information. Bookmarked.
  »

  ReplyDelete
 13. I find some information here.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post