Subscribe Us

ಜಾಹೀರಾತು
header ads

ಭೂಮಿ 1.2 ಡಿಗ್ರಿ ಚಿತ್ರದುರ್ಗದತ್ತ ವಾಲಿದ್ದೇಕೆ?

(ಬೊಗಳೂರು ಕಲ್ಕೋಟೆ ಬ್ಯುರೋದಿಂದ)
ಬೊಗಳೂರು, ಜು.3- ಕರ್ನಾಟಕದ ವೀರರ ಮಣಿಯೂ ವೀರ ರಮಣಿಯೂ ಆಗಿರುವ ಒನಕೆ ಓಬವ್ವ ಇದ್ದ ನಾಡಿನಲ್ಲಿ ಇತ್ತೀಚೆಗೆ ಪೊಲೀಸರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ ಮಾತ್ರವಲ್ಲ, ಇಡೀ ಭೂಮಿಯೇ ಜನಸಂಖ್ಯಾ ಭಾರದಿಂದಾಗಿ ಚಿತ್ರದುರ್ಗದತ್ತ ಒಂದಿಂಚು ವಾಲಿರುವ ಅಂಶವು ಭೂ'ಗರ್ಭ'ಶಾಸ್ತ್ರಜ್ಞರನ್ನೆಲ್ಲಾ ಕುಲಗೆಡಿಸಿಬಿಟ್ಟಿದೆ.

ಇದರ ಹಿನ್ನೆಲೆ ಅರಸಿ ಹೋದಾಗ ಕಂಡು ಬಂದ ಅಸತ್ಯ ಮತ್ತಷ್ಟು ಕುಚೋದ್ಯಕರವಾಗಿದೆ. ನಾಡಿನ ಎಲ್ಲ ಪೊಲೀಸರು ಕೂಡ ಚಿತ್ರದುರ್ಗಕ್ಕೆ ವರ್ಗಾವಣೆ ಕೊಡಿ ಎಂದು ರಾಜ್ಯದ ಪೊಲೀಸ್ ಮಹಾ ವರಿಷ್ಠರ ಕಚೇರಿ ಎದುರು ಸಾಲುಗಟ್ಟಿ ನಿಂತಿರುವುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ. ತಕ್ಷಣವೇ ಹೆಡೆಮುರಿ ಕಟ್ಟಿಕೊಂಡು ಸರ್ವ ಸನ್ನದ್ಧವಾಗಿ ಇದರ ಹಿನ್ನೆಲೆ ಅನ್ವೇಷಣೆಗೆ ಏಕ ಸದಸ್ಯ ಬ್ಯುರೋದ ಮತ್ತೊಂದು ತಂಡ ಪಯಣ ಆರಂಭಿಸಿತು.

ಹೀಗೆ ಏಕಾಂಗಿ ಬ್ಯುರೋದ ಉಭಯ ತಂಡಗಳು ಕಂಡುಕೊಂಡ ರದ್ದಿಗಳನ್ನು ಕಲೆ ಹಾಕಿದಾಗ ಇದೆಲ್ಲಾ ಒನಕೆ ಓಬವ್ವನಿಗಾಗಿ ಅಲ್ಲ, ಬದಲು ಲಟ್ಟಣಿಗೆ ಓಬವ್ವರಿಗಾಗಿ ಎಂಬ ಅಮೂಲ್ಯ ಅಂಶ ಬಯಲಾಯಿತು. ಇದಕ್ಕೆಲ್ಲಾ ಕಾರಣ ವಿಜಯ ಕರ್ನಾಟಕ ಪತ್ರಿಕೆಯ ಮೇಲಿನ ವರದಿ ಎಂದು ಊಹಿಸಲಾಗಿದೆ.

ಇಲ್ಲಿ ಪೊಲೀಸರಿಗೆ ಮದುವೆ ಉಚಿತ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘೋಷಿಸಿರುವುದರಿಂದ, ಈಗಾಗಲೇ ವರದಕ್ಷಿಣೆ ಕೊಡಲಾಗದೆ ಪರಿತಪಿಸುತ್ತಿದ್ದ ಕನ್ಯಾಪಿತೃಗಳು ಕೂಡ ಅಲ್ಲಿನ ಪೊಲೀಸರ ಮನೆಯೆದುರು ಸಾಲುಗಟ್ಟಿ ನಿಂತಿದ್ದರು. (ಸೂಚನೆ: ಈ ಕನ್ಯಾ ಪಿತೃಗಳನ್ನು ಕ.ಪಿ.ಗಳು ಅಂತ ಕರೆಯುವುದನ್ನು ನಮ್ಮ ಬ್ಯುರೋ ಕಡ್ಡಾಯವಾಗಿ ಖಂಡಿಸುತ್ತದೆ.)

ಮುಂದಿನ ಕ್ಯೂ ನಿಲ್ಲುವ ಸರದಿ ಹೆರಿಗೆ ಆಸ್ಪತ್ರೆಗಳಲ್ಲಿ. ಇಲ್ಲಿ ನಿಂತವರು ವರ್ಷದ ಹಿಂದಷ್ಟೇ ಮದುವೆಯಾದ ಹೆಣ್ಣುಮಕ್ಕಳು. ಹೆಚ್ಚಿನವರು ಹೆಣ್ಣು ಹೆರುವ ನಿರೀಕ್ಷೆಯಲ್ಲಿರುವವರು. ಹೆಣ್ಣು ಹೆತ್ತರೆ ಆ ಕುಟುಂಬಕ್ಕೆ ತಲಾ 2 ಸಾವಿರ ರೂ. ದೊರೆಯುತ್ತದೆ ಎಂಬ ಘೋಷಣೆ ಇದಕ್ಕೆ ಕಾರಣ. ಈ ಕಾರಣಕ್ಕೆ ಬಹುಪತ್ನಿ ವಲ್ಲಭರಾಗಿರುವ ಕೆಲವು ಮಂದಿ ಪೊಲೀಸರು, ತಮ್ಮ ಗಂಟು ಪಡೆಯಲು ಮತ್ತು ಅದನ್ನು ಇಡುಗಂಟಾಗಿಸಲು, ಇನ್ನಷ್ಟು ಬೆಳೆಸಲು "ಬೇಕಾಗುವ" ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಕಲ್ಲಿನ ಕೋಟೆಯ ಸುತ್ತಮುತ್ತೆಲ್ಲಾ ಮಕ್ಕಳ ಕಿಲ ಕಿಲ ನಗು, ಕಿರುಚಾಟದಿಂದ ತುಂಬಿಹೋಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಜನಸಂಖ್ಯಾ ಹೆಚ್ಚಳದ ಪರಿಣಾಮವಾಗಿ ಈಗಾಗಲೇ ವಾಲಿರುವ ಭೂಮಿಯ ವಾಲಿಕೆಯು ಇನ್ನೂ 2.05 ಡಿಗ್ರಿಗೆ ಏರುವ ಸಾಧ್ಯತೆ ಇದೆ ಎಂದು ಭೂಗರ್ಭವತಿ ಶಾಸ್ತ್ರಜ್ಞರು ತಿಳಿಸಿದ್ದಾರೆ.

Post a Comment

13 Comments

 1. ನಮ್ಮೂರಿನ ಬಗ್ಗೆ ನನಗೇ ವಿಷಯ ತಿಳಿದಿಲ್ಲ. ನಿಮ್ಮ ಸುದ್ದಿಗಾರನಿಗೆ ರೈಟರ್ಸ್ ಪ್ರಶಸ್ತಿ ಕೊಡಿಸಲೇಬೇಕು. ಸದ್ಯಕ್ಕೆ ನಾನು ಊರಿಗೆ ಹೋಗುವಂತಿಲ್ಲ. ಮನೆ ಮಂದಿಯೆಲ್ಲ ನಿಮ್ಮ ವರದಿ ಓದಿಬಿಟ್ಟಿದ್ದಾರೆ. ಬಾಗಿಲಿನಲ್ಲೇ ಪೊರಕೆ ತಯಾರಿದೆ.

  ಈ ವಿಷಯ ತಿಳಿಸಿ ನನ್ನನ್ನು ಸಂದಿಗ್ಧಕ್ಕೆ ಸಿಲುಕಿಸಿದ್ದಕ್ಕೆ ಮರುಗುತ್ತಿರುವೆ.

  ReplyDelete
 2. ನೀವು ಕೂಡ ಕಲ್ಲಿನ ಕೋಟೆಯವರಾ?
  ಹಾಗಿದ್ದರೆ ನಿಮಗೂ ಒನಕೆ ಅಲ್ಲಲ್ಲ.... ಲಟ್ಟಣಿಗೆ ಓಬವ್ವರ ಬಗ್ಗೆ ಚೆನ್ನಾಗಿಯೇ ತಿಳಿದಿರಬೇಕು.!

  ನೀವು ಕೊಟ್ಟ ಸೈತಾನ್ಸ್ ಪ್ರಶಸ್ತಿಯನ್ನು ವರದಿಗಾರ ಬದಲು ಸೊಂಪಾದ-ಕರುವಿಗೇ ದಯವಿಟ್ಟು ಕಳುಹಿಸಿಕೊಡುವುದು. ಇಲ್ಲವಾದಲ್ಲಿ ಸೂಕ್ತ ಕ್ರಮ....

  ನೀವು ಮರುಗುತ್ತಿರುವುದೇಕೆ,? ನಿಮ್ಮನ್ನೇನೂ ನಮ್ಮ ವರದಿಗಾರರು ಬಾಗಿಲ ಸಂದಿನಲ್ಲಿ ಸಿಲುಕಿಸಿಲ್ಲವಲ್ಲ!

  ReplyDelete
 3. ಮಾನವಿಲ್ಲದ ವರದಿಗಾರರಿಗೆ, ಇದೀಗ ಸ್ವಲ್ಪ ಹೊತ್ತಿನ ಮುಂಚೆ ನಿಮಗೆ ಇತ್ತ ಪ್ರಶಸ್ತಿಯನ್ನು ನಿಮ್ಮ ಕರುವಿಗೆ ಕೊಟ್ಟುಬಿಡಿ, ಇಲ್ದೇ ಇದ್ರೆ ಗೊತ್ತಲ್ಲ ... ಚೊತ್ತ ರಾಜನ್!!!

  ಸೊಂಪಾದಕರೇ, ಒನಕೆ ಓಬವ್ವ ಲಟ್ಟಣಿಗೆ ಲಕ್ಕವ್ವ ನಮ್ಮ ಮನೆಯವರೇ! ಅದಕ್ಕೇ ನಾನು ಮರುಗುತ್ತಿರುವುದು. ಅವರಿಲ್ಲದಿದ್ದರೆ ಆಹಾ! ನಾನೂ ಊರಿಗೆ ಹೋಗಬಹುದಿತ್ತಲ್ಲ ಅಂತ. ಹೋಗ್ಲಿ ಬಿಡಿ, ನನಗೂ ವಯಸ್ಸಾಯ್ತು, ಕಾಡು ಬಾ ಅಂತಿದೆ. ಪ್ರಶಸ್ತಿ ನಿಮಗೆ ಬಂದು ತಲುಪಿತೇ ತಿಳಿಸುವುದು.

  ReplyDelete
 4. ಚಿತ್ರದುರ್ಗದ ಕಲ್ಲಿನ ಕೋಟೆ
  ಅದರ ಸುತ್ತಲೂ ಪೊಲಿಸ್‌ಭರಾಟೆ
  ಹಳಸಿದ curryಯ ಹೂರಣವಾಗಿಸಿದ
  ಸ"ಮೋಸ"ಗಾರರಿಗೆ ಕನ್ಯಾರ್ಥಿಗಳ ತರಾಟೆ!
  ಪುಣ್ಯಭೂಮಿಯು ಈ ಬೀಡು ಸಿದ್ಧರು ಹರಸಿದ ಸಿರಿನಾಡು...

  ಪದ್ಯದ ಭಾವಾರ್ಥ (ಅಕ್ಕಾರ್ಥ ಸಹ) ಏನೆಂದರೆ, 'ಹುಡುಗಿ ನೋಡಲು' ಬಂದ ಭಾವಿ ಪೊಲಿಸ್ ಅಳಿಯಂದಿರಿಗೆ ಕಪಿಗಳು ತಂತಮ್ಮ ಹೆಣ್ಮಕ್ಕಳ ಕೈಯಿಂದ ಉಪ್ಪಿಟ್ಟು-ರವಾಕೇಸರಿ (ಟಿಪಿಕಲ್ ಕನ್ಯಾಪರೀಕ್ಷೆ ತಿಂಡಿ) ಮಾಡಿಸುವ ಬದಲು ಹಳಸಿದ ಪಲ್ಯವನ್ನೇ ಮಸಾಲೆಯಾಗಿಸಿದ ಸಮೋಸ ಮಾಡಿಸಿ ಬಡಿಸಿದ್ರಂತೆ.

  * * *

  ಶೀರ್ಷಿಕೆ ಕೆಣಕು: ಚಿತ್ರದುರ್ಗ"ದತ್ತ" ಎಲ್ಲ ಪೊಲೀಸರು ಲಗ್ಗೆ ಇಟ್ಟರೆ ಮತ್ತೆ ದತ್ತಪೀಠದಲ್ಲಿ ಗಲಭೆ ಉಂಟಾದರೆ ಅಲ್ಲಿಗೆ ಪೊಲೀಸರು ಬೇಡವೆ?

  ReplyDelete
 5. ವಿಶ್ವಕನ್ನಡಕ್ಕೆ ಕೊಟ್ಟ ತಂತು ಸರಿಯಾಗಿಲ್ಲ. ಅದು vishwakannada.com ಅಲ್ಲ. vishvakannada.com ಆಗಬೇಕು.

  -ಪವನಜ

  ReplyDelete
 6. ಡಾ| ಪವನಜ,

  ಅನ್ವೇಶಿ ಕಂತುಪಿತ(ನ ಭಕ್ತ). ಹಾಗಾಗಿ ಕಂತು ಕಂತಾಗಿ (ಲಂಚ ತಗೊಂಡು) ತಂತು ರಿಪೇರಿಮಾಡುತ್ತಾರೆಂದುಕೊಳ್ಳೋಣ.

  ಇಲ್ಲಾಂದರೆ "ತಂತುಪಿತನ ದಿವ್ಯನಾಮ ಮಂತ್ರವನ್ನು ಜಪಿಸುವವಗೆ..." ಶುಭ ಹಾರೈಕೆಗಳು.

  ReplyDelete
 7. ಯದಾ ಯದಾ ಗರ್ಭಸ್ಯ ಗ್ಲಾನಿರ್ಭವತಿ ಅನ್ವೇಶಿ ಗರ್ಭಾಸಂಸ್ಥಾಪನಾರ್ಥಾಯ ಸಂಭವಾಮಿ ದುರ್ಗೇ

  -ಪಬ್

  ReplyDelete
 8. ಮಾವಿನಯನಸರೆ,
  ನಿಮ್ಮ ಖೋಟಾ ರಾಜನ್ ಭೀತಿಯಿಂದ ಪ್ರಶಸ್ತಿಯನ್ನು ಕರುವಿಗೆ ತೋರಿಸಿದ್ದೇವೆ (ಮತ್ತೆ ಅದನ್ನು ಜೇಬಿಗಿಳಿಸಿದ್ದೇವೆ).

  ದುರ್ಗದ ಕಡೆಗಿನ ನಿಮ್ಮ ಮಾರ್ಗ ದುರ್ಗಮವಾಗದೆ ಥಳುಕು ಬಳುಕಾಗಿರಲಿ ಅಂತ ಹಾರೈಕೆ!

  ReplyDelete
 9. ಜೋಷಿಯವರೆ
  ಚಿತ್ರದುರ್ಗದ ಕಲ್ಲಿನ ಕೋಟೆ
  ಅದರ ಸುತ್ತಲೂ ಪೆರ್ಗುಡೆ ಮಾಟೆ
  ಅಂತ ನಮ್ಮೂರಲ್ಲಿ ಕೇಳಿದ್ದೆ.
  ಆದ್ರೆ ಕರಿಯ ಸಮೋಸ ಮಾಡ್ತಾನೆ ಅಂತ ಇದೇ ಮೊದಲು ಕೇಳಿದ್ದು.

  (*ಪೆರ್ಗುಡೆ ಮಾಟೆ = ತುಳುವಿನಲ್ಲಿ ಹೆಗ್ಗಣದ ಬಿಲ)

  ದತ್ತ ಪೀಠದತ್ತ ಸಾಗಲು ಪೋಲಿಗಳು ಮಾತ್ರ ಉಳಿದಿರುತ್ತಾರೆ. ಇಲ್ಲವೇ ದುರ್ಗದಲ್ಲೇ ಅದನ್ನು ತಂದು ಇರಿಸಿಕೊಂಡು ಕಾವಲು ಕಾಯುತ್ತಾರೆ. ಟೂ ಇನ್ ವನ್.!

  ReplyDelete
 10. ಡಾ.ಪವನಜರೇ,
  ಇದು ನಮ್ಮ ನೀತಿ.
  ಅಂದರೆ ಅನ್ಯಾಯ, ಅನೀತಿ ಎಲ್ಲವೂ ಇಲ್ಲೇ ಮೇಳೈಸಿರುತ್ತದೆ.
  ಈ ಕಾರಣಕ್ಕೆ, ಜೋಷಿಯವರು ಹೇಳಿದಂತೆ ನಿಮ್ಮ ಒಂದೇ ಒಂದು ಕಂತು ಬಾರದ ಕಾರಣ ಹೀಗೆ ಸತಾಯಿಸಿದ್ದು.

  ಹಾಂ....
  ಈಗ ಬಂತು ನಿಮ್ಮ ಕಂತು.
  ತಗೊಳ್ಳಿ ಒಂದು ತಂತು...

  ReplyDelete
 11. ಹ್ಹ ಹ್ಹ ಹ್ಹ
  ಪಬ್ಬಿನಲ್ಲಿ ಸಖತ್ತಾಗಿ ಏರಿಸಿಕೊಂಡು
  ಗರ್ಭ ಸಂಸ್ಥಾಪನೆಗೆ ಹೊರಟ ಅನಾನಸ್ ಅವರಿಗೆ ಅಶುಭಾಕಾಂಕ್ಷೆಗಳು....

  ReplyDelete
 12. ಅಸತ್ಯಾನ್ವೇಶಿ ಅವರೆ ನಿಮ್ಮ ಬ್ಲಾಗ್ ಸೂಪರ್.

  ReplyDelete
 13. ಅಬ್ಬಾ ಪಾಪು!!!???,

  ಕಾಮೆಂಟ್ ಎಲ್ಲಿದೆ ಅಂತ ನಾನು ಅಲೆಮಾರಿಯಂತೆ ಹುಡುಕಾಡಿದೆ. ಕೊನೆಗೂ ಸಿಕ್ತಲ್ಲ... ಅಬ್ಬ...!!!

  ತಿಂಗಳಿಂದ ನೀವು ಅಲೆಮಾರಿಯಂತೆ ತಿರುಗಾಡ್ತಾ ಇದ್ದೀರೀಂತ ಕಾಣ್ಸುತ್ತೆ. ಅದ್ಕೆ ಇಷ್ಟು ದಿನದ ಬಳಿಕ ಇಲ್ಲಿಗೆ ತಲುಪಿದ್ದೀರಿ. ಹೀಗೇ ಅಲೆಯುತ್ತಿರಿ.

  ಆದ್ರೆ ಜೊತೆಗೆ ಬ್ಲಾಗ್ ಕೂಡ ಮುಂದೋಡಿಸುತ್ತಿರಿ.

  ReplyDelete

ಏನಾದ್ರೂ ಹೇಳ್ರಪಾ :-D