ಬೊಗಳೆ ರಗಳೆ

header ads

ಒತ್ತಡವೇ? ಪ್ರಾಣಿಮಿಕ ಹೀಲಿಂಗ್ ಮಾಡಿಸಿಕೊಳ್ಳಿ!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಜೂ.27- ಕಚೇರಿಯಲ್ಲಿ ಕಚೇರಿ ಕೆಲಸದ ಮಧ್ಯೆ ಸ್ವಂತ ಕೆಲಸಕ್ಕೆ ಸಮಯ ಸಿಗದೆ ಒತ್ತಡ ಅನುಭವಿಸುತ್ತಿದ್ದೀರೇ? ಅದರ ನಿವಾರಣೆಗೆ ಬೂಗಲ್ (Boogle !) ಸರ್ಚ್ ಮಾಡಿದಾಗ ಸಿಕ್ಕಿದ್ದು ಪ್ರಾಣಿಗಳ ಹೀಲಿಂಗ್ ಕೇಂದ್ರ. ಸರಿ... ನೆಟ್ಟೋದುಗರನ್ನೆಲ್ಲಾ ಒಂದು ಬಾರಿ ಸ್ಮರಿಸಿಕೊಂಡು ಈ ಪ್ರಾಣಿಮಿಕ ಹೀಲಿಂಗ್ ಕೇಂದ್ರದೊಳಗೆ ಕಾಲಿಟ್ಟಾಗಲೇ ಪ್ರಾಣಿಗಳ ಅರಚಾಟ ಮೂಗಿಗೆ ಬಡಿದು, ಅಸಹನೀಯ ವಾಸನೆ ಕಿವಿಗೆ ಕೇಳಿಸಿದ್ದು ವಿಶೇಷ. ಇದು ಒತ್ತಡದ ಪರಿಣಾಮವೋ ಎಂಬುದು ಪರೀಕ್ಷಿಸಬೇಕಾಗಿದೆ.

ಹೀಗೆ ಯೋಚಿಸುತ್ತಿದ್ದಾಗ, ಸಮೀಪದಲ್ಲೇ ಹಾಕಿರುವ ಒಂದು ಬೋರ್ಡು ರಪಕ್ಕನೆ ಕಿವಿಗೆ ಬಡಿದು ಕಣ್ಣಿಗೆ ರಾಚಿತು. "ಇಲ್ಲಿ ಪ್ರಾಣ ಇರುವವರಿಗೆ ಮಾತ್ರ ಪ್ರವೇಶ".

ಆದರೆ ಈ ಬೋರ್ಡಿನ ಹಿನ್ನೆಲೆ ಶೋಧಿಸಿದಾಗ ತಿಳಿದುಬಂದ ಅಂಶವೇನೆಂದರೆ ಅದು ಈ (ಹಣೆ)ಬರಹವನ್ನು ಬರೆದವರ ತಪ್ಪು. ತ್ರಾಣ ಇದ್ದವರಿಗೆ ಮಾತ್ರ ಎಂದಾಗಬೇಕಿತ್ತು. ಈಗಿನ ಶೈಲಿಯ ಜಾಹೀರಾತುಗಳಲ್ಲಿ ಹಾಕುವಂತೆ ಶೇ.50 ಡಿಸ್ಕೌಂಟ್ ಎಂದು ಬರೆದಿದ್ದರೆ, ನಿಮ್ಮ ಕಣ್ಣನ್ನು ಅದಕ್ಕೆ ಅಂಟುವಂತೆ ಮುಂದೆ ಚಾಚಿ ನೋಡಿದರೆ ಮಾತ್ರ ತಿಳಿಯುವ "Up To" ನಂತರ ಶೇ.50 ಅಂತ ಗೋಚರಿಸುವಂತೆ ಇಲ್ಲೂ ಕೂಡ between the lines ಏನಾದರೂ ಇರಬಹುದೇ ಎಂಬ ಸಂಶಯ ಕಾಡಿದಾಗ, ಆಶ್ಚರ್ಯ, ನಮ್ಮ ಸಂಶಯ ನಿಜವಾಯಿತು. ಅಲ್ಲಿ ತ್ರಾಣ ಎಂಬ ಪದಕ್ಕಿಂತ ಮೊದಲು "ಜೇಬಿನಲ್ಲಿ" ಎಂದು ಸೇರಿಸಲಾಗಿತ್ತು!

ಪ್ರೇಮಜ್ವರ ಪೀಡಿತರಿಗೆ ವಿಶೇಷ ಡಿಸ್ಕೋಉಂಟು!

ಇಲ್ಲಿ ಪ್ರೇಮ ಜ್ವರ ಪೀಡಿತ ಹಕ್ಕಿಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆಯಲ್ಲದೆ ಇದಕ್ಕೆ Discoಉಂಟು. ಕಾರಣವಿದೆ. ಯಾಕೆ?

ಕಾರಣ ಇಲ್ಲಿದೆ.

ಮನಸ್ಸು ಅರಳಿದಾಗ, ಪ್ರಫುಲ್ಲಿತವಾದಾಗ, ಉಲ್ಲಸಿತವಾದಾಗ, ಅನುರಾಗ ಅರಳಿದಾಗ ಸಂತೋಷ ಉಕ್ಕಿ ಹರಿಯುತ್ತದೆ. ಹಾಲು ಬಿಸಿಯಾಗಿದ್ದು ಹೆಚ್ಚಾದಾಗ ಪಾತ್ರೆಯಿಂದ ಮೇಲೆ ಉಕ್ಕಿ ಬಂದು ಸ್ಟವ್ ಮೇಲೆಲ್ಲಾ ಚೆಲ್ಲಿದಂತೆ, ಈ ರೀತಿ ಉಕ್ಕಿ ಹರಿದ ಸಂತೋಷವನ್ನು ಶೇಖರಿಸಲಾಗುತ್ತದೆ. ಅದನ್ನು ಸಂಗ್ರಹಿಸಿ ಬೇರೆ ಪ್ರಾಣಿಗಳ ಹೀಲಿಂಗಿಗೆ ಮಾರಲಾಗುತ್ತದೆ! ಇಲ್ಲಿ ನಿಮ್ಮ ಡಿಸ್ಕೋಗೆ ಕೊಟ್ಟ ಕಡಿತದ ಹಣ ಅಲ್ಲಿ ಬಂತು. (ಡಿಸ್ಕೋ ಅಂದರೆ ಕಡಿತದಿಂದ ಕೈಕಾಲು, ಮೈ ಪರಚಿಕೊಳ್ಳುವ ಹೊಸ ಡ್ಯಾನ್ಸ್ ಅಂತ ತಪ್ಪು ತಿಳಿಯಬಾರದಾಗಿ ಸೂಚನೆ.)

ಕೊನೆಯದಾಗಿ, ತಮ್ಮ ಪ್ರಾಣವನ್ನೇ ಬೇರೆಯವರ ಮೇಲೆ ಇಟ್ಟವರಿಗೂ ಚಿಕಿತ್ಸೆ ಇಲ್ಲ ಅಂತೇನೂ ತಿಳಿಯಬೇಡಿ. ಅಂಥವರಿಗೂ ಇದೆ. ಅದುವೇ Twin heart meditation ಎಂಬ ಅದ್‌ಭೂತ ವಿಧಾನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ನಮ್ಮಲ್ಲ್ಲಿ ಒತ್ತಡವೇ ಇಲ್ಲ. ಆದ್ದರಿಂದ ಈ ಪ್ರಾಮಾಣಿಕ ಹೀಲಿಂಗ್ ಬೇಕಿಲ್ಲ. ಆದರೂ ಒಂದು ಸಂಶಯ. ಇದು ಕೆಲಸದ ಒತ್ತಡವೋ ಅಥವಾ ದೇಹದಲ್ಲಿ ಉಂಟಾಗುವ ನೈಸರ್ಗಿಕ ಒತ್ತಡವೋ? ದೇಹದ ಒತ್ತಡವನ್ನು ಈಲಿಂಗ್ ಮಾಡಬಹುದಾದರೆ ಬಹಿರ್ದೆಶೆಗೆ ಹೋಗುವ ಪರಿಸ್ಥಿತಿಯೇ ಇರೋಲ್ಲ. ಆಗ ಹೊಟ್ಟೆಯೂ ಹಸಿವಾಗುವುದಿಲ್ಲ. ಆಹಾ ಎಂತಹ ಸ್ವರ್ಗದ ಜೀವನ. ನನ್ನ ಸಂಶಯ ಪರಿಹರಿಸುವಿರಾ?

    ಈ ಪ್ರೇಮ ಜ್ವರ ಎಂದರೇನು? ಪ್ರೇಮ ಮಾಡಿದವರಿಗೆ ಜ್ವರ ಬರತ್ತೋ ಅಥವಾ ಪ್ರೇಮ ಅಂತ ಹೆಸರಿರುವರಿಗೆ ಜ್ವರ ಬರತ್ತೋ? ಪ್ರೇಮ ಮಾಡೋದಂದ್ರೆ ಏನೂಂತ ನನಗೆ ಗೊತ್ತೇ ಇಲ್ಲ. ಪ್ರೇಮ ಮಾಡೋಕ್ಕೆ ಯಾರು ಯಾರು ಬೇಕು, ಅವರುಗಳೇನು ಮಾಡಬೇಕು, ತಿಳಿಸಿದರೆ, ಪ್ರಯತ್ನ ಮಾಡುವೆ. ಮೆಡಿಕಲ್ ಸೌಲಭ್ಯ ತೆಗೆದುಕೊಳ್ಳಲು ನನಗೆ ವರುಷಕ್ಕೊಮ್ಮೆ ಜ್ವರ ಬರುತ್ತದೆ. ಆದರೆ ಈ ಡಿಸ್ಕೊ ಎಂದರೇನೂಂತ ಗೊತ್ತಿಲ್ಲ. ಇಸ್ಕೊ, ಕಿತ್ಕೊ, ಬಿದ್ಕೊ ಗೊತ್ತು. ಡಿಸ್ಕೊ ಇದೇ ವಂಶದ್ದೇ?

    ಇವತ್ತಿನ ಸಂಚಿಕೆಯನ್ನು ಓದಿದ ಮೇಲೆ ನನಗೆ ವಿಪರೀತ ಸಂಶಯಗಳು. ಈ ಪತ್ರಿಕೆಯನ್ನು ಓದಲು ನಾನು ಅಯೋಗ್ಯ ಎಂದೆನಿಸುತ್ತಿದೆ. ನಿಮ್ಮ ಮಾತುಗಳು ಸ್ವಲ್ಪವೂ ಅರ್ಥವಾಗುತ್ತಿಲ್ಲ.

    ಪ್ರತ್ಯುತ್ತರಅಳಿಸಿ
  2. ಓಹ್, ಹಳೆಯ ರೂಪ ತೋರಿಸಿಕೊಟ್ಟ ಶ್ರೀನಿವಾಸರೇ,
    ನಿಮ್ಮ ಗೊಂದಲಗಳಿಗೆಲ್ಲಾ ಪರಿಹಾರ ಸಿಗಬೇಕಿದ್ರೆ, ಪಂಡಿತರೇ ಬರಬೇಕು (ಬೊಗಳೆ ಪಂಡಿತರಲ್ಲ).

    ಒತ್ತಡ ಅಂದರೆ- ಎಂತಡ, ಎತ್ತಡ ಅಲ್ಲ, ಒತ್ತಬೇಡ ಅಂತಲೂ ಇರಬಹುದು.

    ಪ್ರೇಮ ಜ್ವರ ಅಂದರೆ ಇತ್ತೀಚೆಗೆ ಕಾಲೇಜುಗಳಲ್ಲಿ ಸಾಮಾನ್ಯವಾಗಿಬಿಡುತ್ತಿರುವ ಒಂದು ಸಾಂಕ್ರಾಮಿಕ ಜ್ವರ. ಅದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಂದರೆ ಕೆಲವು ಏಕಮುಖ, ಕೆಲವು ದ್ವಿಮುಖ, ಕೆಲವು ತ್ರಿಕೋನ ಪ್ರೇಮ ಇತ್ಯಾದಿ ವಿವಿಧ ಬಗೆಗಳಿವೆ. ಇನ್ನಷ್ಟು ಮಾಹಿತಿ ದೊರೆಯಬೇಕಿದ್ದರೆ ನೀವು ಐಶ್ವರ್ಯಾ ರೈ, ವಿವೇಕ್ ಒಬೀ-ರೈ, ಕರಿಷ್ಮಾ .... ಓ ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ ಖಾನನನ್ನು ಕೇಳಿಕೊಳ್ಳಿ. ಹೇಗೂ ನಿಮಗೆ ಹತ್ತಿರದವರಲ್ವ.

    ಆಮೇಲೊಂದು ವಿಷ್ಯ.
    ನಿಮ್ಮ ಅಯೋಗ್ಯತೆಗೆ ಧನ್ಯವಾದಗಳು! :)

    ಪ್ರತ್ಯುತ್ತರಅಳಿಸಿ
  3. ನನ್ಗೆ ಬರಿ ಸೈಕಲ್ ಚಕ್ರ ಗೊತ್ತಿತ್ತು. ಈ ಚಕ್ರಗಳು ಇದ್ವು ಅಂತ ಇವತ್ತೆ ಗೊತ್ತಗಿದ್ದು. ಇನ್ ಮುಂದೆ ನಾನು ಬೂಗಲ್ ಸರ್ಚ್ ಉಪಯೋಗಿಸ್ತಿನಿ. ಹೊಸ ಹೊಸ ವಕ್ರವಾದ ಚಕ್ರಗಳು ಸಿಗ್ಬೊಹುದು.

    ಪ್ರೇಮ ಜ್ವರ ಸಂಕ್ರಮಿಕ ಅಂತ ಈಗ ಗೊತ್ತಯ್ತು ನೋಡಿ, ಅದಕ್ಕೆ ಏನೊ ತಿಕೋನ, ಚತುಶ್ಕೋನ ಪ್ರೇಮ ಕಥೆಗಳು ಬರೋದು?

    ಭೂತ

    ಪ್ರತ್ಯುತ್ತರಅಳಿಸಿ
  4. ತ್ರಿಕೋನ ಸ್ಪರ್ಧೆಯ ಬಗ್ಗೆ ಚಿತಾವಣೆ ಸಂದರ್ಭದಲ್ಲಿ ಕೇಳಿದ್ದೆ ನೋಡಿದ್ದೆ ಅಷ್ಟೇ ಹೊರತು, ಪ್ರೇಮದ ಬಗ್ಗೆ ನನಗೆ ಗೊತ್ತಿಲ್ಲ. ಏನೋ ನೀವು ಹೇಳೋದು ನನಗೆ ಅರ್ಥ ಆಗ್ತಿಲ್ಲ. ಎಷ್ಟಾಗಲಿ ನೀವೇ ಹೇಳಿದಂತೆ ನಾನು ಓಬಿರಾಯನ ಕಾಲದವನು.

    ನೀವು ತಿಳಿಸಿದ ಕರಿಷ್ಮಾ - ಚರಿಷ್ಮಾ, ಐಶ್ವರ್ಯ ಇವರೆಲ್ಲರೂ ಇನ್ನೂ ಚಿಕ್ಕ ಮಕ್ಕಳಲ್ಲವೇ? ಮೊನ್ನೆಮೊನ್ನೆ ನಮ್ಮ ಮನೆ ಮುಂದೆ ಆಟ ಆಡ್ತಿದ್ದವರು. ಅವರಿಗೆ ಈ ಜ್ವರ ಬಂದಿದೆಯಾ?

    ಕಲಿಗಾಲವಯ್ಯ ಕಲಿಗಾಲ
    ಬೇಸಿಗೆಯಲ್ಲೂ ಚಳಿಗಾಲ
    ಮುದುಕರಿಗೆ ಕಾಲವಲ್ಲವೇ ಅಲ್ಲ
    ಪಡ್ಡೆ ಹುಡುಗರೇ ಲೋಕದಲ್ಲೆಲ್ಲಾ

    ಕೈ ತಪ್ಪಿ ಪಂಚಾವತಾರಗಳಲ್ಲಿ ಒಂದು ರೂಪ ಆಚೆಗೆ ಬಂದುಬಿಟ್ಟಿದೆ. ಈ ವಿಷಯ ಯಾರಿಗೂ ಹೇಳಬೇಡಿ. ಸಂಜೆ ಪೆಪ್ಪರ್‍ಮೆಂಟು ತಂದುಕೊಡುವೆ.

    ಪ್ರತ್ಯುತ್ತರಅಳಿಸಿ
  5. ಭೂತಾತ್ಮರೇ,
    ಇದು ಲೈಫ್ ಸೈಕಲ್ ಕಣ್ರೀ....
    ವಕ್ರ ವಕ್ರ ಚಕ್ರಗಳು ದೊರೆಯುತ್ತಲೇ ಇರುತ್ತವೆ. ಆದರೆ ಬಕ್ರಗಳಿಗೆ ಮಾತ್ರ ಎನ್ನೋದನ್ನು ನಾನು ಹೇಳೋದಿಲ್ಲ.!!!

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,

    ನಿಮ್ಮ ಪಂಚಾವತಾರದ ಬಳಿಕ ಪಂಚಕಲ್ಯಾಣವಾಗುವುದೇ?
    ಯಾಕಂದ್ರೆ ಮೊದಲ ಕಾಮೆಂಟಿನಲ್ಲಿ ತಲೆ ತೋರಿಸದವರು ಈಗ ತಲೆ ತೂರಿಸಿದ್ದೀರಲ್ಲ? ಹೇಗೆ? ಅಂದ್ರೆ ಮೂಗು ತೂರಿಸಿ ನಿಮಗೆ ಅಭ್ಯಾಸವಾಗಿದ್ದಂತಿದೆಯಲ್ಲ!!!
    :)

    ಪಡ್ಡೆ ಹುಡುಗ್ರ ಸುದ್ದಿಗೆ ಬಂದ್ರೆ
    ನಿಮ್ಮ ಅಡ್ಡೆಯೆಲ್ಲಾ ಮಟ್ಯಾಷ್ ಆಗುತ್ತೆ
    ಅಂತ ಅಡ್ಡಾದಿಡ್ಡಿ ಎಚ್ಚರಿಕೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D