(ಬೊಗಳೂರು ಪರದೇಸಿ ಬ್ಯುರೋದಿಂದ)

ಬೊಗಳೂರು, ಜೂ.6- ಭಾರತದಲ್ಲಿ ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾ, ಒಂದೆರಡು ಇರುವೆ, ನಾಯಿಮರಿ, ಬೆಕ್ಕಿನ ಮರಿಗಳನ್ನಷ್ಟೇ ಕೊಂದಿದ್ದ ದಾವೂದ್ ಇಬ್ರಾಹಿಂನನ್ನು ಅಮೆರಿಕವು ಪಾತಕಿ ಎಂದು ಘೋಷಿಸಿರುವುದು ವಿಶೇಷವಾಗಿ ಪಾತಕಿಸ್ತಾನದ ಹುಬ್ಬೇರಿಸಿದೆ.

ಭಾರತದಲ್ಲಿ ಒಂದೆರಡು ನೊಣಗಳನ್ನು ಕೊಂದು, ಮುಖಕ್ಕೆ ಹಾಕುವ ಬಿಳಿ ಪುಡಿ (ಅದಕ್ಕೆ ಹೆರಾಯ್ನ್, ಚರಸ್ ಇತ್ಯಾದಿ ಹಣೆಪಟ್ಟಿ), ಒಂದೆರಡು ಆಟಿಕೆ ಎ.ಕೆ.-47 ಬಂದೂಕುಗಳು ಇತ್ಯಾದಿಗಳನ್ನು ಸಾಗಿಸುತ್ತಿದ್ದರೂ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಕಂಡೂ ಕಾಣದಂತೆ ಮುಖ ತಿರುಗಿಸಿ, ಎಲ್ಲವೂ ರವಾನೆಯಾದ ಬಳಿಕ ಆತನನ್ನು "ಕಳ್ಳ ಸಾಗಾಟಗಾರ" ಅಂತ ಘೋಷಿಸಿ ದಾವೂದ್‌ಗೆ ಅನ್ಯಾಯ ಎಸಗಿದ್ದಾರೆ ಎನ್ನುವುದು ಪಾತಕಿಸ್ತಾನದ ವಾದ.

ಮುಂಬಯಿಯಲ್ಲಿ ಆತ ಸಣ್ಣಪುಟ್ಟ ನೆಲಗುಮ್ಮದಂತಹ ಬೆಳ್ಳುಳ್ಳಿ ಪಟಾಕಿ ಸಿಡಿಸಿ ದೀಪಾವಳಿ ಅಚರಿಸಿದ ಎಂದ ತಕ್ಷಣ ಭಾರತೀಯರು ಸರಣಿ ಬಾಂಬ್ ಸ್ಫೋಟ ಎಂದು ಕೂಗಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಾಗ್ಗೆ ಪಟಾಕಿ ಸಿಡಿಸುತ್ತಾ ವಿಶಿಷ್ಟವಾದ ಹೋಮ ಆಚರಿಸುತ್ತಿದ್ದ ಅಲ್ ಖೈದಾ ಸೌಮ್ಯಗಾಮಿಗಳ ಪಡೆಗೂ ಆತನ ಪರಮ ಬೆಂಬಲವಿದೆ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ. ಈ ಹೋಮವನ್ನೇ ಭಾರತವು ಮಾರಣ ಹೋಮ ಅಂತ ಹೆಸರಿಟ್ಟು ಬೊಬ್ಬಿಡುತ್ತಿದೆ ಎಂದು ದೂರಿರುವ ಪಾಕಿಸ್ತಾನದ ಪರಮಪಾತಕಿ ಸಾಮಾನ್ಯ (ಜನರಲ್) ವ್ಯಕ್ತಿಯು ಈಗ ಅಮೆರಿಕದ ವಿರುದ್ಧ ಜೋರಾಗಿ ಮನಬಂದಂತೆ ಬೊಬ್ಬಿರಿಯುವುದಾಗಿ ಘರ್ಜಿಸಿದ್ದಾನೆ. ಇಲ್ಲದಿದ್ದಲ್ಲಿ ಡಸ್ಟ್ ಬಿನ್ ಲಾಡೆನ್ ತನ್ನನ್ನು ಸುಮ್ಮನೆ ಬಿಡಲಾರನೆಂಬುದು ಆತನ ಆತಂಕ.

ದಾವೂದ್ ಪಾತಕಿಸ್ತಾನದಲ್ಲಿ ಸಣ್ಣ ಸಣ್ಣ ಕೆಲವು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರೂ, ಆತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ, ಪಾಕಿಸ್ತಾನವು ಅವನಿಗೆ ರಾಜಾಶ್ರಯ ನೀಡಿದೆ ಎಂದು ಭಾರತ-ಅಮೆರಿಕಗಳು ಗುಲ್ಲೆಬ್ಬಿಸುತ್ತಿವೆ ಎಂದು ದೂರಿರುವ "ಪರವಾಗಿಲ್ಲ ರಫ್ ಮೀಸೆ" ಅವರು, ಇಷ್ಟು ಬೇಗನೆ ದಾವೂದ್‌ನನ್ನು ಪರಮ ಪಾತಕಿ ಎಂದು ಹೆಸರಿರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಪಾತಕಿ ಹಣೆಪಟ್ಟಿ ಅಂಟಿಸುವ ಮೊದಲು ನಮ್ಮಲ್ಲಿ ಒಂದು ಮಾತು ಕೇಳಬಹುದಿತ್ತು. ಇದರಿಂದ ಅಮೆರಿಕ ಮತ್ತು ಭಾರತದ ವಿರುದ್ಧ ದಾವೂದ್‌ ತನ್ನೆಲ್ಲಾ ಘನಕಾರ್ಯಗಳನ್ನು ಪೂರ್ಣವಾಗಿ ಸಿದ್ಧ ಮಾಡಿಟ್ಟುಕೊಳ್ಳಲು ಸಹಾಯವಾಗುತ್ತಿತ್ತಲ್ಲ ಎಂಬುದು "ಪರವಾಗಿಲ್ಲ ರಫ್ ಮೀಸೆ"ಯ ಆಕ್ಷೇಪ. ಅಲ್ಲದೆ, ದಾವೂದ್ ಕೂಡ ಒಂದಿಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದಿತ್ತಲ್ಲ ಅನ್ನೋದು ಆಕ್ಷೇಪ.

ಈ ಬಗ್ಗೆ ತೀವ್ರ ಖಂಡನೆಯ ಅಂಗವಾಗಿ ಎ.ಕೆ.-47 ಬಂದೂಕುಗಳುಳ್ಳ "ಬೊಕೆ"ಯನ್ನು ಪ್ರೀತಿಯಿಂದ ಅಮೆರಿಕ ಅಧ್ಯಕ್ಷೀಯ ಕಚೇರಿಗೆ ರವಾನಿಸಲಾಗುತ್ತದೆ ಎಂದು ಅಸತ್ಯಾನ್ವೇಷಿಗೆ ನೀಡಿದ ಶೇಷ ಸಂದರ್ಶನದಲ್ಲಿ "ರಫ್ ಮೀಸೆ" ತಿಳಿಸಿದೆ.

ಸಂದೇಹ: ಈ ಮಧ್ಯೆ, ದಾವೂದ್‌ನನ್ನು ಅಮೆರಿಕವು ಪಾತಕಿ ಅಂತ ಕರೆದಿದ್ದೋ ಅಥವಾ ಒಂದಕ್ಷರ ಅಳಿಸಿ ಪಾಕಿ ಅಂತ ಕರೆದಿದ್ದೋ ಎಂದು ತಿಳಿಯಲು ಸತ್ಯ ಶೋಧನಾ ತಂಡವೊಂದನ್ನು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್‌ಗೆ ಕಳುಹಿಸುವುದಾಗಿ ಪಾತಕಿಸ್ತಾನ ಹೇಳಿದೆ.

--------------------

ಸೂ: ಇಂದಿನ ದಿನಾಂಕ 6-6-6 ಎಂದು ಆಗಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಸತ್ಯಾನ್ವೇಷಿ, ಇದು ನಮ್ಮನ್ನು ಗೊಂದಲಕ್ಕೆ ಸಿಲುಕಿಸುವ ಯತ್ನ ಎಂದು ಯಾರದೋ ವಿರುದ್ಧ ಕಿಡಿ ಕಾರಿದ್ದಾರೆ.

16 Comments

ಏನಾದ್ರೂ ಹೇಳ್ರಪಾ :-D

  1. ಹೆ ಕನ್ನಡಿಗ, ನನ್ನ ನಮಸ್ಕಾರ
    -Prashanth CM

    ReplyDelete
  2. ನನ್ನ ಸ್ನೇಹಿತ ದಾವೂದ್ (ಈಗ ಡೇವಿಡ್ ಎಂದು ಹೆಸರು ಬದಲಿಸಿಕೊಂಡಿದ್ದಾನೆ) ಬಗ್ಗೆ ನೀವುಗಳೆಲ್ಲಾ ಯಾಕೆ ಅಪಪ್ರಚಾರ ಮಾಡುತ್ತಿದ್ದೀರಿ. ಅವನೆಷ್ಟು ಒಳ್ಳೆಯವನು ಎಂದು ನನಗೆ ಮಾತ್ರ ಗೊತ್ತು. (ನನ್ನ ದಿನದ ವೆಚ್ಚಗಳೆಲ್ಲವನ್ನೂ ಅವನೇ ಭರಿಸುತ್ತಾನೆ).

    ಸದ್ಯ ಅಮೆರಿಕದ WTC ಗೆ ಹೋಗ್ತಿದ್ದೀರಲ್ಲ. ನಮ್ಮೂರಿಗೆ ಬರ್ಬೇಡಿ. ದಮ್ಮಯ್ಯ, ನಾನು WTCಯಲ್ಲಿ ಕೆಲಸ ಮಾಡ್ತಿರೋದನ್ನು ನಿಮ್ಮ ವರದಿಗಾರನಿಗೆ ತಿಳಿಸ್ಬೇಡಿ.

    ಇಂದು ೦೬/೦೬/೦೬ ನಲ್ಲಿ ಏನು ವಿಶೇಷವಿದೆ? ಆಗಲೇ ದಾವೂದ್ ಬಂದು, ಇಂದು ಕೆಟ್ಟ ದಿನ ಎಂದು ಹೇಳಿ, ಹೆದರಿ, ಬೆಳಗ್ಗೆಯೇ ನವಗ್ರಹ ಹೋಮ ಮಾಡಿಸಿ ದಾನ ತೆಗೆದುಕೊಟ್ಟಿದ್ದಾರೆ. ನಿಮಗೂ ಬೇಕಿದ್ದರೆ ವಾಗ್ದಾನ ಕೊಡಿಸುವೆ.

    ReplyDelete
  3. ಓ ಚೀಫ್ ಮಿನಿಸ್ಟರ್ ಪ್ರಶಾಂತರಿಗೆ ಸ್ವಾಗತ.
    ನೀವೇಕೆ ಕನ್ನಡದಲ್ಲಿ ಬ್ಲಾಗಿಸಬಾರದು?

    ReplyDelete
  4. ಅಂದ್ರೇ.... ಮಾವಿನಯನಸ ಅವರೆ, ನೀವು ದೆವ್ವಿಡ್ ಬಂಟರೋ?

    ನವಗ್ರಹ ಹೋಮವೆ? ನಾನೇನೋ ದೆವ್ವಿಡ್ ಪ್ರಭಾವಿತ ಮಾರಣ ಹೋಮವೋ ಅಂತ ತಿಳ್ಕಂಡಿದ್ದೆ....

    ನಿಮ್ಮ ಲಿಂಕ್ ಬಗ್ಗೆ ಲಾರ್ಜ್ ಬುಷ್ ನಿಗೆ ಏನೂ ಹೇಳದಿರಬೇಕಾದ್ರೆ....
    ಮಾಮೂಲಿ ಬರ್ಲಿ...!

    ReplyDelete
  5. ಮಾಮೂಲಿಯನ್ನು ಕಳುಹಿಸಿರುವೆ. ದಾವೂದಿನ ಬಂಟ ಚೊತ್ತ ಬಾಜನ್ ಕೈನಲ್ಲಿ ಒಂದು ಪೆಟ್ಟಿಗೆಯನ್ನು ಕಳುಹಿಸಿರುವೆ. ಬಂದು ತಲುಪಿತೇ? ದಯವಿಟ್ಟು ಲಾರ್ಜ್ ಬುಷ್‍ನಿಗಾಗಲೀ ಅಥವಾ ಪುರ್ತುಗಲ್ಲಿನವರಿಗಾಗಲೀ ನನ್ನ ಬಗ್ಗೆ ತಿಳಿಸಬೇಡಿ.

    ಮಾಮೂಲಿ ಕಡಿಮೆಯಾಗಿದ್ದರೆ ಅಡ್ಜಸ್ಟ್ ಮಾಡಿಕೊಳ್ಳಿ, ಚೊತ್ತನಿಗೆ ಒಂದು ಕೈ ಸರಿಯಿಲ್ಲ. ನಿಮ್ಮ ಕೈ ನೋಡಿಕೊಂಡಾನು?

    ReplyDelete
  6. ಖೋಟಾ ರಾಜನ್ ತಿಂದಿತ್ತ ಪೆಟ್ಟಿಗೆ ಸಿಕ್ಕಿದೆ. ಆದ್ರೆ ಆತ ಬಂದಿದ್ದೇಕೆಂದು ಬಡಪೆಟ್ಟಿಗೆ ಅರ್ಥವಾಗಿಲ್ಲ. ಬಂದ ತಕ್ಷಣ ಆತ ಪೆಟ್ಟಿಗೇ ನಿಂತ (ಪೆಟ್ಟು ನೀಡಲು ಸ್ವಾಮೀ).
    ಬಹುಶಃ ನನ್ನ ಒಂದು ಕೈ ನೋಡಿಕೊಳ್ಳಲು ಇರಬೇಕು!

    ReplyDelete
  7. 6-6-6 ಅಂದ ದಿನಾಂಕ ಇದ್ರೆ ನಿಮಗೆ ಮಂಡೆಬೆಚ್ಚ ಯಾಕೆ ಮಾರಾಯ್ರೇ?

    ಆರು ಆರು ನೀ ಆರು ಎಲ್ಲಿಂದ ಬಂದೆ ಯಾವೂರು... ಅಂತ ಹಾಡಿದ್ರೆ ಆಯ್ತು, ನಾಳೆ ಆಗುವಾಗ ನಿಮ್ಮ ಮಂಡೆಬೆಚ್ಚ ತನ್ನಷ್ಟಕ್ಕೇ ಎದ್ದುಹೋಗುತ್ತದೆ, ನೀವು 'ಏಳು' ಅಂತ ಹೇಳೋದೂ ಬೇಡ!

    ReplyDelete
  8. ನಾಳೆ ಯಾರಾದ್ರೂ ಬಂದು
    ಏಳು ಏಳು ನೀ ಏಳು...
    ರಸ್ತೆ ಬದಿ ಮಲಗಿರುವೆಯೇಕೆ ಎದ್ದೇಳು
    ಅಂದು ಬಿಟ್ರೆ....?

    ReplyDelete
  9. Ri..oLLe thamashe title llu :P

    ReplyDelete
  10. ಏಳು ಏಳು ನೀ ಏಳು... ಅನ್ನೋದು ಮುಂದಿನ ವರ್ಷ ಜುಲೈ ಏಳನೇ ತಾರೀಕಿಗೆ. ಅಲ್ಲಿಯವರೆಗೆ ಹಾಯಾಗಿ ಗೊರಕೆ ಹೊಡೀರಿ.

    ReplyDelete
  11. ಒಳ್ಳೆಯವರಿಗೆ ಕಾಲವಿಲ್ಲ ಅನ್ನೋದು ಇದಕ್ಕೆ ರೀ..

    ಛೇ..ಇಂತಹ ಪಾಪಿ..ಕ್ಷಮಿಸಿ..ಪಾಪದ ಕೂಸಿಗೆ ಎಂತಹ ಹಣೆಪಟ್ಟಿ....ಕಲಿಯುಗ ಕಣ್ರೀ ಇದು..

    ತವಿಶ್ರೀ ಅವರೇ, ಅಯ್ಯೋ ನೀವು ಸುಮ್ಮನಿರಿಪ್ಪ..ನಿಮ್ಮನ್ನು ಸಹ ಅದೇ ಹಣೆಪಟ್ಟಿಗೆ ಸೇರಿಸಿದರೆ ನಮಗೆ ಯಾರು ಮಾವಿನಯನಸ ಮಾಡಿಹಾಕಬೇಕು ??

    ೬-೬-೬ ಸೈತಾನನ ಅಂಕಿಯಂತೆ..ಅದು ಅಶುಭಕರಿ ಅಂತಾ ಪಾಶ್ಚತ್ಯರಲ್ಲಿ ಒಂದು ನಂಬಿಕೆ..

    ReplyDelete
  12. ಮಾವಿನ ರಸಾಯನಕ್ಕೂ ಡಸ್ಟ್ ಬಿನ್‌ಗೂ ಏನು ಸಂಬಂಧ ಎಂದು ತಿಳಿಯಲು ತಲೆ ಕೆಡಸಿಕೊಂಡು ಉತ್ತರ ಸಿಗದೆ ಕಡೆಗೆ ಎರಡು ಪೆಗ್ ಜಾಸ್ತಿ ಹಾಕಬೇಕಾಯಿತು.

    ~~~~~~~~ ^^^^ &&& *** ((( ))))!!!!!!

    -ಪಬ್

    ReplyDelete
  13. ಜೋಷಿ ಅವರೆ, ಒಂದು ವರ್ಷ ಆರಾಮವಾಗಿ ನಿದ್ದೆ ಮಾಡಲು ರಜೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

    Zzzzzzzzzzz! ಗೊರಕೆ ಕೇಳಿಸುತ್ತಿದೆ ತಾನೆ?

    ReplyDelete
  14. ಶಿವ್ ಅವರೆ,
    ನಿತ್ಯಾನ್ನದ ಕರೀ, ಅಶುಭ ಕರೀ.... ಅನ್ನೋ ಶೋಕ ಕೇಳಿದ್ದೀರಲ್ಲಾ?

    ಕಲಿಯುಗದಲಿ ಪಾಪಿಯ ನಾಮವ ನೆನೆದರೆ....
    ಕುಲ ಕೋಟಿಗಳು ಉದ್ಧರಿಸುವವೋ ಎನ್ನಬಹುದೇ?

    ReplyDelete
  15. ಸೋನಿ ಅವರೆ,
    ನಿಮಗೆ ತಮಾಷೆ ಮಾರಾಯ್ರೇ, ಪಾತಕಿಗಳಿಗೆ ಪ್ರಾಣ ಸಂಕಟ.

    ReplyDelete
  16. ಅರೆ!!!
    ಪಬ್ಬಿನಲ್ಲಿ ಕಂಠ ಮಟ್ಟ ಏರಿಸಿಕೊಂಡು ತೂರಾಡುತ್ತಾ ಮತ್ತಷ್ಟು ಪೆಗ್ಗೇರಿಸುತ್ತಿರುವ ಈ ಅನಾನಿಮಸರು ಯಾರು?

    ಎರಡು ಪೆಗ್ ನಿಂದ ಒಂದು ಪೆಗ್ ಡಿಲೀಟ್ ಮಾಡ್ರೀ!

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post