ಬೊಗಳೆ ರಗಳೆ

header ads

ಹೆಚ್ಚಾದ ಹುಚ್ !

(ಬೊಗಳೂರು ಕಾಲೇಜು ಬ್ಯುರೋದಿಂದ)
ಬೊಗಳೂರು, ಮೇ 25- ಅಸತ್ಯ ಅನ್ವೇಷಿಯ 'ಅಸತ್ಯ ಶೋಧನಾ ತಂಡ' ಈ ಬಾರಿ ನುಗ್ಗಿದ್ದು ಹುಟ್ಟೂರು ಸಮೀಪದ ಕಾಲೇಜಿನ ಕ್ಯಾಂಟೀನ್‌ಗೆ. ಇದಕ್ಕೆ ಕಾರಣ, ಇಲ್ಲಿ ಭಾರಿ 'ಹಾಲಾ'ಹಲವಾಗುತ್ತಿದೆ ಎಂಬ ಫೋನ್ ಕರೆ.

ಕಾಲೇಜು ಕ್ಯಾಂಟೀನ್‌ಗೆ ಹಸಿದ ಹೆಬ್ಬುಲಿಯಂತೆ ನುಗ್ಗಿದ 'ಅಸತ್ಯ ಶೋಧನಾ ತಂಡ'ದ ಕಿವಿಗೆ ಗಲಾಟೆ, ರಂಪಾಟ, ಬೊಬ್ಬೆ ಕೇಳಿಸುತ್ತಿದೆಯೇ ಹೊರತು, ಏನೂ ಗೋಚರಿಸದು. ಸಾಸಿವೆ ಕಾಳನ್ನು ಮೇಲಿನಿಂದ ಕೆಳಕ್ಕೆ ಹಾಕಿದರೆ ಅದು ನೆಲಕ್ಕೆ ಮುಟ್ಟಲಾಗದಷ್ಟು ಕಿಕ್ಕಿರಿದ ಜನಸಂದಣಿ ಮಧ್ಯೆ, ಉಸಿರನ್ನು ದೀರ್ಘವಾಗಿ ಹೊರಬಿಟ್ಟು ದೇಹವನ್ನು ಸಾಸಿವೆ ಕಾಳಿನಷ್ಟು ಕಿರಿದಾಗಿಸಿ ಒಳನುಗ್ಗಿದ ಅಸತ್ಯ ಅನ್ವೇಷಿಗೆ ವಿಷಯವನ್ನು ಹೊಟ್ಟೆಯಿಂದ ಹೊರಬಗೆಯಲು ಬಹಳ ತ್ರಾಸವಾಗಿತ್ತು.

ಕೊನೆಗೆ ಗೊತ್ತಾದ್ದೆಂದರೆ, ಇದೆಲ್ಲಾ ಆ ಹುಚ್ಚೇ ಗೌಡನ ಕಿತಾಪತಿ ಎಂಬುದು.
ವಿಷಯ ಏನೂಂದ್ರೆ, ಹುಚ್ಚೇ ಗೌಡ ಎಂಬ ಹೆಸರನ್ನು ಆತನ ಕ್ಲಾಸ್‌ಮೇಟ್ಸ್ ಎಲ್ಲರೂ ಹುಚ್ಚು ಗೌಡ ಎಂದೇ ಕರೆದು ರೇಗಿಸುತ್ತಿದ್ದರು. ಇದರಿಂದ ಆತ ತೀರಾ ರೋಸಿ ಹೋಗಿದ್ದ. ಇದಕ್ಕಾಗಿ ಆತ ತನ್ನ ಹೆಸರನ್ನು ಇನಿಷಿಯಲ್ಸ್ ಉಪಯೋಗಿಸಿ 'ಹೆಚ್.' ಗೌಡ ಎಂದಷ್ಟೇ ಬರೆಯತೊಡಗಿದ.

ಕ್ಲಾಸ್‌ಮೇಟ್ಸ್ ಇದರಿಂದ ಮತ್ತಷ್ಟು ಸಂತೋಷ ಪಟ್ಟರು. ಅವರಿಗೆ ರೇಗಿಸಲು ಹೊಸ ಅಸ್ತ್ರ ಸಿಕ್ಕಂತಾಗಿತ್ತು. ಹೇಗೆ ಗೊತ್ತೇ? ಅವರೆಲ್ಲಾ '' ಈಗ ಹುಚ್ಚೇಗೌಡನ ಹುಚ್ಚು ಇದ್ದದ್ದು ಹೆಚ್ಚಾಗಿದೆ'' (ಹೆಚ್ ಆಗಿದೆ) ಅಂತ ರೇಗಿಸಲಾರಂಭಿಸಿದ್ದರು. ಇದಕ್ಕಾಗಿಯೇ ಆತ ಆಕಾಶ ಬಿರಿಯುವಂತೆ ಕ್ಯಾಂಟೀನ್‌ನಲ್ಲಿ ತನ್ನ ಕ್ಲಾಸ್‌ಮೇಟ್ಸ್ ಮೇಲೆ ಕೂಗಾಡುತ್ತಿದ್ದ.!

ಕಾಮೆಂಟ್‌‌ ಪೋಸ್ಟ್‌ ಮಾಡಿ

14 ಕಾಮೆಂಟ್‌ಗಳು

  1. ಅನ್ವೇಷಿಗಳೇ,

    ನಿಮ್ಮ ರೋಧನದಿಂದ ನಾನು ಹೊಟ್ಟೆ ಬಿರಿಯುವಷ್ಟು ನಕ್ಕಿದ್ದರಿಂದ ನನ್ನ ಅಳುವೂ ನಿಂತಿದ್ದಲ್ಲದೇ ಪಕ್ಕದಿಂದ 'ಏನ್ಯಾಯ್ತು?' ಎಂಬ ಧ್ವನಿಯೂ ಬಂದಿತು!

    ನಮ್ಮ ತರಗತಿಯಲ್ಲೂ ತಿಪ್ಪೇ ಸ್ವಾಮಿ ಇದ್ದ, ಅವನಿಗೆ ಸುಂದರೇಶ ಯಾವಾಗಲೂ 'ನೊಣ' ಎಂದು ರೇಗಿಸುತ್ತಿದ್ದುದನ್ನು ನೆನಪು ಮಾಡಿದ ನಿಮಗೆ ಏನೆಂದು ಬಯ್ಯಲಿ?

    ಪ್ರತ್ಯುತ್ತರಅಳಿಸಿ
  2. ಈ 'ಹುಚ್ಹ್' ಪ್ರಕರಣವನ್ನು ಅಸತ್ಯಾನ್ವೇಷಿ ರಿಪೋರ್ಟರನು ಹೆಡ್ಡಾಫೀಸಿಗೆ ತಕ್ಷಣವೇ ರಿಪೋರ್ಟಿಸಿದ್ದು 'ಹಚ್' ನಿಸ್ತಂತುದೂರವಾಣಿಯ ಕೃಪೆ ಎಂಬುದನ್ನೇಕೆ ಮರೆತಿರಿ?

    ಕ್ಯಾಂಟೀನ್ ಮೇಲಿನ ಆಕಾಶ ಬಿರಿದದ್ದರಿಂದ ಆ ಕ್ಯಾಂಟೀನ್ ನಲ್ಲಿ ಈಗ 'ಬಿರಿಯಾನಿ' ಮಾತ್ರ ಲಭ್ಯ ಎಂಬ ಸುದ್ದಿ ಸಹ ನಿಮ್ಮ ವರದಿಯಲ್ಲಿಲ್ಲ!

    ಅಷ್ಟಾಗಿ ಅದೀಗ canteen ಇದ್ದದ್ದು can(not)teen ಆಗಿದೆಯಂತೆ ಎಂದು ನಿಮ್ಮ ಪ್ರತಿಸ್ಪರ್ಧಿ ಪ್ರೇತಿಕೆಯು ಈಗಾಗಲೇ ಒದರಿದೆ!

    ಪ್ರತ್ಯುತ್ತರಅಳಿಸಿ
  3. ಹುಚ್ಚೇಗೌಡರಿಗೂ ಅಸತ್ಯಾನ್ವೇಷಿಗಳಿಗೂ ಏನೋ ಸಂಬಂಧ ಇದೆ ಎಂಬ ಅನುಮಾನ ಬಂದಿದೆ. ಅಸತ್ಯ ಅಲ್ಲಿಗೆ ಹೋದ ನಂತರ ಗಲಾಟೆ ಆಗಿದ್ದೂ, ಅಲ್ಲಿಯವರೆವಿಗೆ ಶಾಂತರಾಗಿ ಎಲ್ಲರೂ ಕಾಫೀ ಹೀರುತ್ತಿದ್ದದ್ದೂ, ಇವರ ಕಂಡ ಕೂಡಲೇ ಪೋಲಿಗಳು ಕಾಫೀ ಬಿಟ್ಟು ಪೀಪೀ ಊದಿದ್ದೂ, ಏಕೆ? ಸರಿಯುತ್ತರ ಹೇಳದೇ ಇದ್ದರೆ ತಲೆ ಎರಡು ಹೋಳಾಗಿ ಒಳಗೇನೂ ಇಲ್ಲ ಎಂಬುದು ಜಗಜ್ಜಾಹೀರಾಗುವುದರಲ್ಲಿ ಸಂಶಯವಿಲ್ಲ.
    ಅಂದ ಹಾಗೇ ನಿಮಗೆ ತಗುಲಿದ್ದ ವೈರಲ್ ಜ್ವರ ಈಗ ಯಾರ ಬಳಿಗೆ ಹೋಗಿದೆ. ಕ್ಯಾಂಟೀನಿಗೆ ಹೋಗಬೇಡಿ ಎಂದರೂ ಕೇಳದೇ ಹೋಗಿ, ಜ್ವರ ತರಿಸಿಕೊಂಡಿರಿ. ದೊಡ್ಡವರ ಮಾತು ಕೇಳದಿದ್ದರೆ ತೊಂದರೆ ಖಚಿತ ಎಂಬುದು ಈಗಲಾದರೂ ನಂಬುವಿರಾ?

    ಪ್ರತ್ಯುತ್ತರಅಳಿಸಿ
  4. ಬರೀ "ಹಾಲಾ-ಹಲ"ವಾಗಿದ್ದರೆ ಚೆನ್ನಾಗಿತ್ತು, ಇದರ ಜೊತೆಗೆ
    "ಆಲ್ಕೊ-ಹಾಲ" ಬೆರೆತು, ಆ "H" factor ಹೆಚ್ಚಾಗಿ, ನಮ್ಮ ಗೌಡರು ಕೂಗಾಡಿ ದಣಿದು ಹೋಗಿದ್ದರೆ ಅಂತ ಪ್ರಾರ್ಥಮಿಕ ಸುದ್ದಿ ಹೇಳಿವೆ. ಇದನ್ನು ನೆಪವಾಗಿಟ್ಟುಕೊಂಡು ಹೊಸ ಹೆಸರನ್ನು ಕೊಟ್ಟಿದ್ದಾರೆ ಅದೇ H.D (Hಚ್ಚಾಗಿ Daಣಿದ)ಗೌಡ ಅಂತ. ತನ್ನ ನೆರವಿಗೆ 'ಅಸತ್ಯ ಶೋಧನಾ" ತಂಡ ಸಹಾಯ ಮಾಡುತ್ತದೆ ಎಂದು ನಂಬಿ ಕೈಚಾಚಿದ್ದರೆ, ನೀವು ಹೀಗೆ handgiving ಮಾಡುವುದು ಸರಿಯೇ ??

    ಪ್ರತ್ಯುತ್ತರಅಳಿಸಿ
  5. ಅಂತರಂಗಿಗಳೆ,
    ನಿಮಗೆ ಪಕ್ಕದಿಂದ ಏನಾಯ್ತು ಎಂಬ ಧ್ವನಿ ಕೇಳಿಸಿತು ಎಂದು ನೀವು ಹೇಳಿರುವುದು, ಇದೇ ಕಾಲೇಜ್ ಗಲಾಟೆ ಸಂದರ್ಭ ಒಬ್ಬಾತ ಅಮೆರಿಕನ್ ವಿದ್ಯಾರ್ಥಿ ಅರೆಬರೆ ಕನ್ನಡದಲ್ಲಿ "ಏ ನಾಯಿ ಥೂ" ಎಂದು ಆತ್ಮೀಯತೆಯಿಂದ ಕೇಳಿದ್ದನ್ನು ಉಲ್ಲೇಖಿಸಲು ಮರೆತಿರುವುದನ್ನು ನೆನಪಿಸಿತು.

    ಪ್ರತ್ಯುತ್ತರಅಳಿಸಿ
  6. ಹೌದು ಜೋಷಿಯವರೆ,
    ಒದರಿಗಾರರು ಹೆಡ್ಡರಾಫೀಸಿಗೆ "ಎಲ್ಲಿ ಹೋದರೂ ಹಿಂಬಾಲಿಸುವ" ಬಾಲ ಇಲ್ಲದ (ನಿಸ್ತಂತು?) ನಾಯಿಯ ಮೂಲಕವೇ (ಹಚ್ ಜಾಹೀರಾತು!) ಈ ಸುದ್ದಿ ರವಾನಿಸಿದ್ದು.

    ಬಿರಿಯಾನಿ ತಿಂದು ನಮ್ಮ ಒದರಿಗಾರರೂ ಹೊಟ್ಟೆ ಬಿರಿದಾನೆಯಂತಾಗಿದ್ದಾರೆ. ಇನ್ನು ನಿಮ್ಮ ವಿಚಿತ್ರಾನ್ನದ ಉಪ್ಪು, ಹುಳಿ, ಖಾರ, ಸಿಹಿ ಸೇರಿದರಷ್ಟೇ ಸರಿಯಾಗಬಹುದು.

    ನಾವು ಕಾಲೇಜು ಬಿಟ್ಟ ಬಳಿಕವೂ ಅಲ್ಲಿಗೆ ಹೋದ ಕಾರಣ ಅಲ್ಲಿನ ಕ್ಯಾನ್ ಟೀನ್ ಈಗ can not teen ಆಗಿದೆ ಅಂತ ನೀವು ಮುಸಿ ಮುಸಿ ನಗುವುದೇಕೆ ಅಂತ ಗೊತ್ತಾಗಿಲ್ಲ :-)

    ಪ್ರತ್ಯುತ್ತರಅಳಿಸಿ
  7. ಮಾವಿನಯನಸ ಅವರೆ,
    ನಮ್ಮ ಹೆಸರಲ್ಲಿ ಹೆಚ್ ಆಗುವುದಕ್ಕೆ ಯಾವುದೇ ಹುಚ್ ಇನಿಷಿಯಲ್ಸ್ ಇಲ್ಲ. ಆದ್ರೂ ನಾವು ಅಲ್ಲಿ ಹೋಗಿದ್ದು ಗಲಾಟೆ ಮಾಡಲಿಕ್ಕಲ್ಲ. ಗಲಾಟೆ (ಎಬ್ಬಿಸಿ?) ನೋಡಲು.

    ನಮಗೆ ತಗುಲಿದ್ದು ವೈರಲ್ ಜ್ವರ ಅಲ್ಲ, ಕ್ಯಾಂಟೀನಿನಲ್ಲಿ, ವಿಶೇಷವಾಗಿ ಕಾಲೇಜು ಕ್ಯಾಂಟೀನಿನಲ್ಲಿ ಮೆತ್ತಿಕೊಂಡ ಕಾರಣ ಅದು ಕ್ಯಾನ್ - ಟೀನ್ ಜ್ವರ ಅಂತ ಸಾಬೀತಾಗಿದೆ ಅಂತ ಜೋಷಿಯವರು ತಿಳಿಸಿದ್ರು.

    ಆಮೇಲೆ,

    ದೊಡ್ಡೋರೆಲ್ಲಾ ಜಾಣರಲ್ಲ,
    ಚಿಕ್ಕವರೆಲ್ಲಾ ಕೋಣರಲ್ಲ,
    ಹಿರಿಯರು ಹೇಳಿದ ಮಾತುಗಳೆಲ್ಲಾ...
    ಎಂದೂ ನಿಜವಲ್ಲ ...
    ಎಂದೂ ನಿಜವಲ್ಲ...

    ಎಂಬ ಮಾತು ನನಗಿನ್ನೂ ಮರೆತುಹೋಗಿಲ್ಲ ಅಂತ ತಿಳಿದಿದ್ದೀರಾ?

    ಪ್ರತ್ಯುತ್ತರಅಳಿಸಿ
  8. ಚುಂಬನವಾಸಿ ಪವ್ವೀ ಅವರೆ,

    ಹೆಚ್ಆದ ದಣಿವೇ ಗೌಡರು ಹೆಚ್ಚಿನ ಸಮಾರಂಭಗಳಲ್ಲಿ ದಣಿವಾರಿಸಿಕೊಂಡು ಸುದ್ದಿಮಾಡುತ್ತಿದ್ದುದು ನಿಮಗೆ ಗೊತ್ತಲ್ವಾ? ಪ್ರಧಾನಿಯಾಗಿದ್ದಾಗಿನಿಂದಲೂ ಅವರೊಂಥರಾ ನಿಧಾನಿ.

    ಮತ್ತೆ ಅವರಿಗೆ ಕೈಹಿಡಿದು-ಕೈಕೊಟ್ಟು ಮತ್ತು ಚಾಚಿದ ಕೈ ಹಿಡಿದೆಳೆದು ತುಂಬಾ ಅಭ್ಯಾಸವಾಗಿಬಿಟ್ಟಿದೆ ಅನ್ನೋದು ಕೈಚಿಹ್ನೆಯ ಪಕ್ಷ ಮತ್ತು ಧರಂ ಸಿಂಗ್ ಅಭಿಮತಗಳಲ್ಲೊಂದು.

    ಹೇಗಿದೆ ನಿಮ್ಮ "ಬನ"?

    ಪ್ರತ್ಯುತ್ತರಅಳಿಸಿ
  9. ಅಂತೂ ನಾನು ಜಾಣನಲ್ಲ ನೀವು ಕೋಣ ಅಲ್ಲ ಅಂತ ಹೇಳ್ತಿದ್ದೀರ. ಸರಿ, ನಮ್ಮೂರಿಗೆ ನಮ್ಮ ಏರಿಯಾಗೆ ಬನ್ನಿ - ಒಂದು ಕೈ ನೋಡಿ ಕೊಳ್ತೀನಿ. (ಎರಡೂ ಕೈ ನೋಡಿಕೊಂಡ್ರೆ ಆಮೇಲೆ ಕೈಯೇ ಇಲ್ಲದ ಹಾಗೆ ನೀವು ಮಾಡ್ಬಿಟ್ರೆ ಅನ್ನೋ ಹೆದರಿಕೆ).

    ಪ್ರತ್ಯುತ್ತರಅಳಿಸಿ
  10. ನಿಮ್ಮೂರಿಗೆ ಬರೋವಾಗ ಎರಡೂ ಕೈಗಳನ್ನು ಜೇಬಿನೊಳಗಿರಿಸಿಕೊಂಡು (ಪಿಕ್ ಪಾಕೆಟ್ ಆಗದಂತೆ ಜೋಪಾನ) ಎರಡು ಕಾಲುಗಳನ್ನು ಮಾತ್ರ ಉಡುಗೆಯಿಂದ ಹೊರಕ್ಕೆ ಬಿಟ್ಟುಕೊಂಡು ಬರುತ್ತೇನೆ.

    ಆಮೇಲೆ, ನಿಮ್ಮ ಏರಿಯಾದಲ್ಲಿ ಅರುಣ್ ಗಾವ್ಳಿ ಕಡೆಯವರಿಗೆ, ದಾವೂದ್, ಮಸ್ತಾನ್, ಛೋಟಾ ಕಡೆಯವರಿಗೆ ನೀವು ಪ್ರವೇಶ ನೀಡುವುದಿಲ್ಲ ಅಂತ ಕೇಳಿದ್ದೇನೆ. ಯಾಕೆ?

    ಪ್ರತ್ಯುತ್ತರಅಳಿಸಿ
  11. "ನಿಮ್ಮೂರಿಗೆ ಬರೋವಾಗ ಎರಡೂ ಕೈಗಳನ್ನು ಜೇಬಿನೊಳಗಿರಿಸಿಕೊಂಡು ..."

    - ಆಗ ಮಾವಿನಯನಸ ಅವರು, "ಅನ್ವೇಷಿಗಳೇ, ನಿಮಗೆ ಒಟ್ಟು ಎಷ್ಟು ಕೈಬೆರಳು?" ಎಂದು ಪ್ರಶ್ನಿಸಿದರೆ ಅಲ್ಲಿಂದಲೇ ಎಣಿಸಿ "ಹನ್ನೊಂದು!" ಎಂದು ಹೇಳಬೇಡಿ!

    ಪ್ರತ್ಯುತ್ತರಅಳಿಸಿ
  12. ಬನ ಬಣ ಬಣ ಗೊಟ್ಟುತ್ತಿದೆ, ನಾನು ಬನದಲ್ಲಿ ವಾಸಿಗಳಿಲ್ಲದೆ, ಬನ್ ತಿನ್ನುವ ಪರಿಸ್ಥಿತಿಗೆ ಬಂದಿದ್ದೇನೆ. ಪಾ.....ಪ ಪವ್ವಿ

    ಪ್ರತ್ಯುತ್ತರಅಳಿಸಿ
  13. ಜೋಷಿಯವರೆ,xಟ್ರಾ ಬೆರಳ್ಗೆ ಉರುಳ್....!!

    ಪ್ರತ್ಯುತ್ತರಅಳಿಸಿ
  14. ಪಾ...ಪಾ... ಪವ್ವಿ ಅವರೆ,
    ನೆನೆವುದೆನ್ನ ಮನಂ ಚುಂ-ಬನವಾಸಿ ದೇಶಮಂ...
    ಅನ್ನೋದು ಬಹುಷಃ ಎಲ್ಲರಿಗೂ ನೆನಪಿದೆಯಲ್ಲಾ,,,,?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D