ಬೊಗಳೆ ರಗಳೆ

header ads

ವೈದ್ಯೋ ನಾರಾಯಣೋ 'ಹರಿಃ' !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಮೇ 11- ಇದು ಯಾಂತ್ರಿಕ ಯುಗ. ಇಲ್ಲಿ ಮಾನವನ ದೇಹದ ಒಂದೊಂದು ಯಂತ್ರಗಳೂ ಒಂದೊಂದು ದಿಕ್ಕಿಗೆ ಕೆಲಸ ಮಾಡುತ್ತವೆ. ಮೆದುಳು ಇರಬೇಕಾದಲ್ಲಿ ಕಿಡ್ನಿ ಬಂದು ಕೂತಿದೆ. ಈ ಕಾರಣಕ್ಕೆ ಹಿಂಸೆ, ಅನಾಚಾರಗಳು ಮೇಳೈಸುತ್ತಿವೆ. ಇಂದಿನ ಯಾಂತ್ರಿಕರಿಗಿಂತ ಹಿಂದಿನ "ತಾಂತ್ರಿಕ"ರಿರುವ ಯುಗದಲ್ಲೇ ಚೆನ್ನಾಗಿತ್ತು. ಅಂದಿನ ಮನುಷ್ಯರು ಕೂಡ ನಿಜವಾದ ಮನುಷ್ಯರೇ ಆಗಿದ್ದರು. ಅಂದಿನ ಮನುಷ್ಯರಿಗೆ ಪ್ರಾಣಿಗಳ ಗುಣಗಳಿರಲಿಲ್ಲ....

ಈ ಒಂದು ಪರಿಚಯದೊಂದಿಗೆ ಇಲ್ಲಿ ಪ್ರಕಟವಾಗಿರುವ ಸುದ್ದಿಗೆ ಆಸ್ಪತ್ರೆಯ ವೈದ್ಯರು ಮತ್ತು ಇಂಥ ಆಸ್ಪತ್ರೆ ಕಟ್ಟಿಸಿ ಅದನ್ನು ಬೆಳೆಸದೆಯೇ ತಮ್ಮ ಜೇಬು ಬೆಳೆಸುತ್ತಿರುವ ರಾಜಕಾರಣಿಗಳು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ವೈದ್ಯರು ಮುಷ್ಕರ ಹೂಡುತ್ತಿದ್ದರೆ, ಇತ್ತ ವೈದ್ಯರು ನೀಡಿದ ಸ್ಪಷ್ಟನೆಯನ್ನು ಅವರದೇ ಮಾತುಗಳಲ್ಲಿ ಕೇಳಿ:

ಹಿಂದೆ ಹೆರಿಗೆ ಮಾಡಿಸುವಾಗ ವಿದ್ಯುತ್ ಇತ್ತೇ? ಕತ್ತಲೆ ಕೋಣೆಯಲ್ಲೇ ಹೆಚ್ಚೆಂದರೆ ಸೀಮೆಣ್ಣೆ ಬುಡ್ಡಿ ದೀಪವನ್ನೋ ಟಾರ್ಚ್ ಬೆಳಕಿನಲ್ಲೋ ಹೆರಿಗೆ ಮಾಡಲಾಗುತ್ತಿತ್ತಲ್ಲವೇ? ಆಗ ಹುಟ್ಟಿದ ಮನುಷ್ಯರ ಬುದ್ಧಿ ಎಷ್ಟು ನೆಟ್ಟಗಿತ್ತು! ಇಂದು ನಾವೆಲ್ಲಾ ಇಂಥ ಒಳ್ಳೆ ಸ್ಥಿತಿಗೆ ಬರಲು ಈ ರೀತಿ ಹುಟ್ಟಿದವರೇ ಕಾರಣವಲ್ಲವೆ? ಇದೇ ಕಾರಣಕ್ಕೆ ಮುಂದೆಯೂ ಇಂತಹ ನಿಜವಾದ ಮನುಷ್ಯರೇ ಹುಟ್ಟುವಂತಾಗಲು ಈಗಿನ ಸರಕಾರಿ ಆಸ್ಪತ್ರೆಗಳಿಗೆ ದಶಕಗಳಿಂದ ವಿದ್ಯುತ್ ಒದಗಿಸಲಾಗುತ್ತಿಲ್ಲ.

ಹಾಗಿದ್ದರೆ ಸಮೀಪದಲ್ಲೇ ಶವಸಂಸ್ಕಾರಕ್ಕೆ ಅವಕಾಶ ನೀಡಿದೆಯಲ್ಲ, ಅದೇಕೆ ಎಂದು ಅಸತ್ಯಾನ್ವೇಷಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವಣ, ಜರಾಸಂಧ, ಕೀಚಕ, ಯಮ ಮಹಾಶಯರು, "ಸ್ವಲ್ಪ ಆಧುನಿಕತೆ ಟಚ್ ಇರಲಿ ಅಂತ ಈ ವ್ಯವಸ್ಥೆ. ಹೆರಿಗೆಗೆ ಬಂದವರು ಸರಿಯಾಗಿ ಹಣ ದಾನ ಮಾಡದಿದ್ದರೆ, ಆಸ್ಪತ್ರೆ ಸಿಬ್ಬಂದಿಗೆ ಕೋಪ ಬರುವುದು ಸಹಜ. ವೈದ್ಯರಿಗೆ ಬಾರದಿದ್ದರೂ ಆಸ್ಪತ್ರೆ ನಡೆಸುವ ಸರಕಾರಿ ಅಧಿಕಾರಿಗಳಿಗೆ ಖಂಡಿತಾ ಕೋಪ ಬರುತ್ತದೆ. ಆಗ "ಮೇಲಿನಿಂದ" ಆದೇಶ ಪಡೆದು "ಮುಂದುವರಿಯುವಂತಾಗಲು" ಮತ್ತು ಮುಂದಿನ ಕರ್ಮಗಳನ್ನು ಸೂಕ್ತವಾಗಿ ನೆರವೇರಿಸಲು ಈ ವ್ಯವಸ್ಥೆ ಎಂದು ಒಕ್ಕೊರಲಿನಿಂದ ತತ್ತರಿಸಿದ್ದಾರೆ.

ಆದರೆ ವೈದ್ಯೋ ನಾರಾಯಣೋ ಹರಿಃ ಎಂಬ ಜನಪ್ರಿಯ ಉಕ್ತಿಯೇ ಇದೆಯಲ್ಲ ಎಂದು ಕೇಳಿದಾಗ ಅವರು ಕೂಲ್ ಆಗಿ ತತ್ತರಿಸಿದ್ದು ಹೀಗೆ: "ಈ ವಾಕ್ಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿ ಹರಿಃ ಅನ್ನೋ ಪದಕ್ಕೆ ಬೇರೊಂದು ಅರ್ಥವಿದೆ. ಉದಾಹರಣೆಗೆ ಮುರಹರ (ಮುರಾಸುರನನ್ನು ಸಂಹರಿಸಿದವ), ದುಃಖಹರ (ದುಃಖವನ್ನು ವಿನಾಶಗೊಳಿಸುವವ). ಈ ಉಕ್ತಿ ಸರಿಯಾಗಿಯೇ ಇದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮ ಪ್ರಕಾರ ಇದರರ್ಥ, ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದುಡ್ಡು ಬಿಚ್ಚದಿದ್ದರೆ ವೈದ್ಯರು ನಾರಾಯಣ ಬಂದರೂ ಅವರನ್ನು 'ಹರೋಹರ' ಮಾಡಿಬಿಡುತ್ತಾರೆ. ದಯವಿಟ್ಟು ಅರ್ಥಮಾಡಿಕೊಳ್ಳಿ"!

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ವಾಪಸ್ ಬಂದ್ರಾ...?

    ಒಳ್ಳೇದಾಯ್ತು ಬಿಡಿ LJಯಲ್ಲಿ ಅಸತ್ಯಾನ್ವೇಷಿಯನ್ನೇ ಬ್ಲಾಕ್ ಮಾಡಿದ್ದಾರೆ. :-D

    ಬ್ಲಾಗ್‌ಸ್ಪಾಟ್‌ನಲ್ಲೇ ನಿಮ್ಮ ಬೊಗಳೆ ಮುಂದುವರಿಸಿ. :) ಶುಭವಾಗಲಿ...:-)

    ಪ್ರತ್ಯುತ್ತರಅಳಿಸಿ
  2. ಮಿಸ್ಟರ್ ಅನ್ವೇಷ್, ಬಹಳ ದಿನಗಳ ನಂತರ ನಿಮ್ಮ ಬ್ಲಾಗಿಗೆ ನನ್ನ ಕಾ.....ಮೆಂಟು ಕೊಡೋಕೆ ಬಂದಿದ್ದೀನಿ. ಸ್ವೀಕರಿಸುತ್ತೀರೇನು? ಹೌದು LJ ಅಂದ್ರೆ ಏನು? VJ, RJ ತರ ಇದೂ ಒಂಥರಾ ...ಜಾಕಿ ಏನು? ನಂಗೆ VJ, RJ ಆಗ್ಲಿಕ್ಕೆ ಆಗ್ಲಿಲ್ಲ, atleast LJ ನಾದ್ರೂ ಆಗೋಣ ಅಂತ...

    ಪ್ರತ್ಯುತ್ತರಅಳಿಸಿ
  3. ಹಲವು ಸುದೀರ್ಘ ಕಾಲದ ಅಗಲುವಿಕೆಯ ಬಳಿಕ ತಾಣಕ್ಕೆ ಏಟು ಕೊಟ್ಟ ಕನ್ನಡ ಕಿಲಾಡಿಗೆ ಬಾವಿ ಕಮ್ಮಿ (ವೆಲ್- ಕಮ್).
    LJ ಅಂದ್ರೆ ಜೀವಂತ ದಿನಚರಿ ಅಂತ. ಅಂದ್ರೆ ಲೈವ್ ಜರ್ನಲ್ ಅಂತ... ಅಲ್ಲೂ ನೀವು ಕನ್ನಡದ ತೇರು ಎಳೆಯಬಹುದಾದ ಒಂದು ಬೊಗಳೆ ತಾಣವದು.
    ಆಮೇಲೆ..... ಲೈವ್ ಬ್ಯಾಂಡ್ ಅಂದ್ಕೊಂಡು ಅಲ್ಲಿ ಹೋಗಿಬಿಟ್ಟೀರಿ ಜೋಕೆ.... ಬ್ಲಾಗಿನ ಬಾಗಿಲು ಹಾಕಿಯಾರು...!

    ಪ್ರತ್ಯುತ್ತರಅಳಿಸಿ
  4. LJ ಅಂದ್ರೆ ಲಗಾಟಿ ಜನಾರ್ಧನ ಅಂತ ನಾನು ತಿಳಿದಿರೋದು. ಲಗಾಟಿ ಗೊತ್ತಲ್ಲ ಕೋತಿಮರಿಗಳು ಹೊಡೆಯುವ ಪಲ್ಟಿ.

    ಅದಿರ್ಲಿ, ಈ ಲೇಖನದಿಂದ ಒಂದು ಸತ್ಯದ ಅರಿವಾಗ್ತಾ ಇದೆ. ಇಷ್ಟು ದಿನಗಳು ನಾನು ನಡೆದರೆ ಕೈ ನೋಯುತ್ತಿತ್ತು. ಕೆಮ್ಮಿದರೆ ಹೊಟ್ಟೆ ನೋವುತ್ತಿತ್ತು. ತಲೆಯ ಮೇಲೆ ಮೊಟಕಿದರೆ (ಒಬ್ಬರಿಗೇ ಅಧಿಕಾರ ಇರೋದು ಅಂತ ಪ್ರತ್ಯೇಕವಾಗಿ ಹೇಳ್ಬೇಕಿಲ್ಲ), ಅಂಗೈ ನೋಯುತ್ತಿತ್ತು. ಇದು ಆಗಿರುವುದು ಒಂದು ಸಣ್ಣ ಆಪರೇಷನ್ ಆದ ಮೇಲೆ. ಆಗ ವೈದ್ಯರು ನಾರಾಯಣ, ನನ್ನ ನರವನ್ನೂ ಹರಿದವರು ಎಂದು ತಿಳಿದಿರಲಿಲ್ಲ.

    ಕಣ್ತೆರೆಸಿದ್ದಕ್ಕೆ ಧನ್ಯವಾದಗಳು. ಅಂದ ಹಾಗೇ ನೀವೂ ವೈದ್ಯ ವೃತ್ತಿ ಹಿಡಿದಿದ್ದೀರಾ?

    ಪ್ರತ್ಯುತ್ತರಅಳಿಸಿ
  5. ಮಾವಿನರಸರೇ,

    ಸಣ್ಣ ಸೂಚನೆ: ಲಗಾಟಿ ಹೊಡೆಯುವ ಕೋತಿಗಳಿಗೆ ಬಾಲವಿದ್ದರೂ ಜನಾರ್ದನನಿಗೆ ಎಂದಿಗೂ ಬಾಲ ಕೊಡದಿರಿ.

    ನಾನು ಕೂಡ ವೈದ್ಯ ವೃತ್ತಿ ಮಾಡುತ್ತೇನೆ. ಆದರೆ ಕೆಲವೊಂದು ಹೊಟ್ಟೆ ಹುಣ್ಣಾಗಿಸುವ ಗುಳಿಗೆ ಕೊಡಲು ಗೊತ್ತಿದೆ ಅಂತ ಸ್ನೇಹಿತ ಶಿಖಾಮಣಿಗಳು ಆಗಾಗ್ಗೆ ಹೇಳುತ್ತಿರುತ್ತಾರೆ.

    ಮತ್ತೆ, ನಿಮ್ಮ ಅಂಗಾಂಗ ನೋವು ಇರುವುದೇತಕ್ಕೆ ಅಂತ ನನಗೀಗ ಹೊಳೆಯುತ್ತಿದೆ. ನೀವು ಕೂಡ ನನ್ನಿಂದ ಗುಳಿಗೆ ತೆಗೆದುಕೊಂಡವರೇ ಅಲ್ಲವೇ? ಜ್ಞಾಪಿಸಿಕೊಳ್ಳಿ.... ಗೊತ್ತಾದರೆ ಈ ವಿಷಯ ಮಾತ್ರ ಎಲ್ಲೂ ಹೇಳಬೇಡಿ. ನನ್ನ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ.

    ನಾವೆಲ್ಲಾ ಅದನ್ನು ಒಳಗಿಂದೊಳಗೇ ಸರಿ ಮಾಡಿಕೊಳ್ಳೋಣ... ಆಗದಾ...?

    ಪ್ರತ್ಯುತ್ತರಅಳಿಸಿ
  6. ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರಃ
    ಯಮಃ ಹರತಿ ಪಾಪಾನಿ ವೈದ್ಯಃ ಪ್ರಾಣಾನ್ ಧನಾನಿ ಚ||

    ಅಂತ ಒಂದು ಸುಭಾಷಿತವಿದೆ. (ವೈದ್ಯ ಎಂದರೆ ಯಮರಾಜನ ಸಹೋದರ. ಯಮನಾದರೋ ಪ್ರಾಣವನ್ನು ಮಾತ್ರ ಖೀಂಚಿದರೆ, ವೈದ್ಯ ಪ್ರಾಣವನ್ನೂ ಅದಕ್ಕೆ ಮೊದಲು ಹಣವನ್ನೂ ದೋಚುತ್ತಾನೆ... ಎಂದು ಅರ್ಥ).

    ಇವತ್ತಿನ ಬೊಗಳೆಗೆ ಉತ್ತರವಾಗಿ ಹರಿಹರ-ರಾಘವಾಂಕರ ರಗಳೆ ಯಾವುದೂ ಸಿಕ್ಕಿಲ್ಲವಾದ್ದರಿಂದ ಈ ಸುಭಾಷಿತವನ್ನು ಪೋಸ್ಟಿಸಿದ್ದೇನೆ.

    ಪ್ರತ್ಯುತ್ತರಅಳಿಸಿ
  7. ನಡೆವುದು ಕೈಗಳಿಂದ. ಅದಕ್ಕೇ ಅಲ್ವೇ ಹೆಚ್ಚು ನಡೆದರೆ ನನ್ನ ಕೈಗಳು ನೋಯುವುದು. ಬೊಗಳೆ ರಗಳೆ ಪ್ರಾರಂಭವಾದಾಗಿನಿಂದ ಇದು ನನಗೆ ಕರಗತವಾಗಿದೆ. ನಿಮಗೂ ಹೇಳಿಕೊಡಲೇ?

    ಪ್ರತ್ಯುತ್ತರಅಳಿಸಿ
  8. ವಿಚಿತ್ರಾನ್ನಿಗಳೇ,
    ಜೀವನದ ಪರಮಾಸತ್ಯಗಳಲ್ಲೊಂದನ್ನು ಢಾಣಾಢಂಗುರ ಮಾಡಿದ್ದಕ್ಕೆ ಅನಂತಾನಂತ ಧನ್ಯವಾದಗಳು. ಅದರಲ್ಲೂ ಆ ಅಮೂಲ್ಯ ಸುಭಾಷಿತದ ಕೊನೆಯ ಸಾಲು ನಮ್ಮ ಕಣ್ಣು ತೆರೆಸಿದೆ.
    ಆಗಾಗ್ಗೆ ಈ ರೀತಿ ಕಣ್ಣು ತೆರೆಸುತ್ತಿರಿ....

    ನಿಮ್ಮ ಇನ್ನೊಂದು ಸುಭಾಷಿತವನ್ನು "ನಮ್ಮವರ" ಅಂತರಂಗದಲ್ಲಿ ಓದಿದ್ದೆ (ಉಪ್ಪಿಟ್ಟೋಪಿಟ್ಟು ಗೋವಿಂದ... ಉಪ್ಪಿಟ್ಟು ಗರುಡಧ್ವಜ...) ಇವೆಲ್ಲಾ ಪ್ರಾತಃಸ್ಮರಣೀಯ ಸುಭಾಷಿತಗಳಲ್ವೆ?

    ಪ್ರತ್ಯುತ್ತರಅಳಿಸಿ
  9. ಮಾವಿನರಸರೆ,
    ನುಡಿದಂತೆ ನಡೆಯಲು ಕೈಗಳೇ ಅಗತ್ಯವಲ್ವಾ. ಅಂತೆಯೇ ಮೊನ್ನೆ ಗಿಜಿಗುಟ್ಟುವ ಮುಂಬಯಿ ಲೋಕಲ್ ಟ್ರೈನಲ್ಲಿ ನಮ್ಮ ಕಾಲಿಗೆ ಸೊಳ್ಳೆ ಕಚ್ಚಿದರೆ, ಯಾರದ್ದೋ ಕಾಲನ್ನು ಕೆರೆಯಲು ಕೂಡ ಕೈಗಳೇ ಬೇಕಲ್ವ?
    ಆದಕಾರಣ ಕೈಯನ್ನು ಸ್ವಲ್ಪ ಜೋಪಾನವಾಗಿಟ್ಟುಕೊಳ್ಳಿ, ಅಷ್ಟರವರೆಗೆ ಹೇಗಾದರೂ ಎಲ್ಲವನ್ನೂ ಕಾಲ್-ಗತ ಮಾಡಿಕೊಳ್ಳಿ... ಕರಗತ ಮಾಡಿಕೊಳ್ಳಲು ನಿಮ್ಮ ಆಶ್ರಯಕ್ಕೆ ಬರುವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D