ಬೊಗಳೆ ರಗಳೆ

header ads

ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಏರುಪೇರು

ತಮಿಳುನಾಡಿನಲ್ಲಿ ಕಲರ್ ಟಿವಿ ಕೊಡುವ ಡಿಎಂಕೆ ಅಧಿಕಾರಕ್ಕೆ
(ಬೊಗಳೂರು ಸ್ವಂತ ವರದಿ)
ಬೊಗಳೂರು, ಮೇ 12- ಇತ್ತ ತಮಿಳುನಾಡಿನಲ್ಲಿ ತಾತ ನರುಣಾಕಿಧಿ ನೇತೃತ್ವದ ಡಿಎಂಕೆ ಸರಕಾರ ಗದ್ದುಗೆ ಏರಿರುವಂತೆಯೇ ರಾಜ್ಯದ ಸೆಕೆಂಡ್ ಹ್ಯಾಂಡ್ ಟಿವಿ ಮಾರುಕಟ್ಟೆಯಲ್ಲಿ ಭಾರಿ ಚಟುವಟಿಕೆ ಕಂಡುಬಂದಿದ್ದು, ಹೊಸ ಟಿವಿ ಬರುತ್ತದೆ ಎಂಬ ಕಾರಣಕ್ಕೆ ತಮಿಳು ತಲೆಗಳು ತಮ್ಮ ತಮ್ಮ ಮನೆಯಲ್ಲಿದ್ದ ಟಿವಿ ಸೆಟ್‌ಗಳನ್ನು ಸೆಕೆಂಡ್ ಹ್ಯಾಂಡ್ ಟಿವಿ ಮಾರುಕಟ್ಟೆಗೆ ಇಳಿಸಿದ್ದರಿಂದ ಮಾರುಕಟ್ಟೆಯೇ ಏರುಪೇರಾಗಿದೆ.

ಅಧಿಕಾರಕ್ಕೆ ಬಂದರೆ ಕಲರ್ ಟಿವಿ ಕೊಡುತ್ತೇವೆ ಎಂದು ಡಿಎಂಕೆ ತನ್ನ ಚುನಾವಣಾ ಪ್ರಣಾಳಶಿಶುವಿನಲ್ಲಿ ಹೇಳಿದ್ದ ಕಾರಣ ಈ ದಿಢೀರ್ ಬೆಳವಣಿಗೆ ಕಂಡುಬಂದಿದ್ದು, ಮಾರುಕಟ್ಟೆಯ ಈ ಮಹಾನ್ ತಲ್ಲಣವನ್ನು ಶಮನಗೊಳಿಸಲು ಮುಂದಾಗಿರುವ ಹೊಸ ಸರಕಾರವು, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಇದೇ ಟಿವಿ ಸೆಟ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಬಳಿಕ ಅದಕ್ಕೆ ಹೊಸ ಕವಚ ತೊಡಿಸಿ ತಮ್ಮ ಚುನಾವಣಾ ಆಶ್ವಾಸನೆಯನ್ನು ಈಡೇರಿಸುವುದು ಅದರ ದೂ(ದು)ರಾಲೋಚನೆ ಎನ್ನಲಾಗುತ್ತಿದೆ.

ನಮ್ಮ ಟಿವಿ, ನಮ್ಮದೇ ಕೇಬಲ್: ಟಿವಿ ಖರೀದಿಸಿದವರೆಲ್ಲರೂ ತಮ್ಮ ಕುಟುಂಬದ್ದೇ ಆದ ಸನ್, ಉದಯ, ಜೆಮಿನಿ, ತೇಜ, ಸೂರ್ಯ, ಉಷೆ ಮುಂತಾದ ಚಾನೆಲ್‌ಗಳನ್ನೇ ನೋಡುವಂತಾಗಬೇಕು. ಇದರಿಂದ ಕೇಬಲ್ ಆಪರೇಟರ್ಸ್ ನೇತೃತ್ವ ವಹಿಸಿರುವ ತಮ್ಮ ಕುಟುಂಬಿಕನೇ ಆಗಿರುವ ಮಾರನ್‌ಗೂ ಕೇಬಲ್ ಶುಲ್ಕ ರೂಪದಲ್ಲಿ ಸಾಕಷ್ಟು ಮಾಸಿಕ ವರಮಾನ ಬರುತ್ತದೆ.ಇದರೊಂದಿಗೆ (ಇದುವರೆಗೆ ಮಾಡಿದಂತೆ), ಈಗ ಮಾಜಿಯಾಗಿಬಿಟ್ಟಿರುವ ಮುಖ್ಯಮಂತ್ರಿ ಜಯಲಲಿತಾ ಸಾಧನೆಗಳು ದೇಶ-ವಿದೇಶಗಳಲ್ಲಿ ಪ್ರಸಾರವಾಗದಂತೆ ತಡೆದಂತೆಯೂ ಆಗುತ್ತದೆ ಎಂಬ ಗುಟ್ಟು ಬಯಲಾಗಿದೆ. ಇದುವರೆಗೆ ತಮ್ಮ ಬದ್ಧವಿರೋಧಿ ಜಯಲಿತಾ ಬಗ್ಗೆ ದೇಶಾದ್ಯಂತ ವೀಕ್ಷಕರು ಕೆಟ್ಟ ಭಾವನೆ ಹೊಂದುವಂತಾಗುವಲ್ಲಿ ಇವರ ಟಿವಿ ನೆಟ್‌ವರ್ಕ್‌ನ ಕೊಡುಗೆ ಅಪಾರ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಹೊರಗೆ ಕಲರ್, ಒಳಗೆ?: ಎಲ್ಲರಿಗೂ ಟಿವಿ ನೀಡುವ ಈ ಘೋಷಣೆಯ ಹಿಂದಿರುವ ಮಿಥ್ಯವನ್ನು ಅಸತ್ಯಾನ್ವೇಷಿ ಸಂಶೋಧಿಸಿದಾಗ ಕಂಡುಬಂದ ಈ ವಿಷಯಕ್ಕೆ ಈಗೀಗ ಹೆಚ್ಚಿನ ಮಹತ್ವ ಬರತೊಡಗಿದೆ.
ಆದರೆ ಡಿಎಂಕೆ ಕಲರ್ ಟಿವಿ ಅಂತ ಹೇಳಿಕೊಂಡಿದ್ದರೂ, ಕಲರ್‌ಫುಲ್ ಮಾತು ಉಳಿಸಿಕೊಳ್ಳುವ ಸಲುವಾಗಿ ಕಪ್ಪು ಬಿಳುಪು ಟಿವಿಯನ್ನೇ ಹಲವು ಚಿತ್ರ ವಿಚಿತ್ರ ವರ್ಣಗಳ ಅಲಂಕಾರದೊಂದಿಗೆ ನೀಡುತ್ತಾರೆಯೇ ಎಂಬುದು ಕಾದುನೋಡಬೇಕಾದ ಸಂಗತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಸನ್‍ನಿಧಿ (ಪನ್ ಕೃಪೆ: ವಿ.ಕ) ಠೀವಿಯಿಂದಲೇ ಕೊಡುತ್ತಿರುವುದು ಟೆಲಿ'ವಿಷ'ನ್ ಎಂಬ 'ವಿಷ'ಯ ಅಸತ್ಯಾನ್ವೇಷಿಗಳಿಗೇಕೆ ಅರಿವಾಗಲಿಲ್ಲವೊ!

  ಪ್ರತ್ಯುತ್ತರಅಳಿಸಿ
 2. ಓಹ್... 'ಅ'ಜ್ಞಾಪಿಸಿದ್ದಕ್ಕೆ ಧನ್ಯವಾದಗಳು ಜೋಷಿಯವರೆ,
  ತಮಿಳುತಲೆಗಳ ನಾಡಲ್ಲಿ "ಕರುಣಾ"ನಿಧಿಗೆ "ಜಯ", "ಜಯ"ಲಲಿತಾಗೆ "ಕರುಣಾ"ಜನಕ ಸೋಲು...
  ಸನ್ "ಟಿವಿ" ಬಳಗಕ್ಕೆ ಠೀವಿಯ ಗಳಿಕೆಯ ಉದಯ... ಎಲ್ಲೋ... ನೆನಪಾಗತೊಡಗಿದೆ...!

  ಪ್ರತ್ಯುತ್ತರಅಳಿಸಿ
 3. ಗೊತ್ತಾಗಲಿಲ್ವೇ - ಉದಯ ತಾತನ ಹೃದಯದೊಳಗೆ ಸೇರಿದೆ. ಶಸ್ತ್ರ ಚಿಕಿತ್ಸೆ ಮಾಡಿದರೆ ಮಾತ್ರ ಆಚೆ ಬರುವುದು. ಜಯಮ್ಮನವರು ತಮ್ಮ ಹೆಸರನ್ನು ಅಪಜಯಮ್ಮ ಎಂದು ಮಾಡಿಕೊಂಡಿದ್ದಾರಂತೆ. ಮುಂಬರುವ ಅಧಿವೇಶನಗಳಲ್ಲಿ ತಮಿಳು ತಲೆಗಳ ನಡುವೆ ಹೇನಾಗಿ ಕಾಡುವೆನೆಂದು ಭೀಷಮ್ಮ ಪ್ರತಿಜ್ಞೆ ಮಾಡಿ ತಲೆಗೂದಲನ್ನು ಬಿಚ್ಚಲಾರದಂತೆ ಕಟ್ಟಿದ್ದಾರಂತೆ.

  ನರುಣಾಕಿಧಿ ಮನೆಯಲ್ಲೇ ಗದ್ದುಗೆ ಏರಿ ತಮ್ಮ ಪಾದುಕೆಯನ್ನು ಸ್ಟಾಲಿನ್ ತಲೆಯ ಮೇಲಿಟ್ಟು ಆಡಳಿತ ನಡೆಸುವರಂತೆ. ಇನ್ನೂ ಹೆಚ್ಚಿನ ಬೊಗಳೆ ಸುದ್ದಿ ಬೇಕಿದ್ರೆ ನನ್ನ ತಿಂಗಳ ಸಂಬಳ ಮೊದಲು ಕೊಡಿ ಎಂದು ಕೇಳುತ್ತಿರುವ ...

  ಪ್ರತ್ಯುತ್ತರಅಳಿಸಿ
 4. ಮಾವಿನರಸರೆ,
  ನಿಮ್ಮ ತಂಗಳ ಸಂಬಳವನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಅಂಚೆಯವ ಬಚ್ಚಿಟ್ಟುಕೊಂಡರೆ ನಮ್ಮ ಏಕಸದಸ್ಯ ಬೊಗಳೆ ಬ್ಯುರೋ ಜವಾಬ್ದಾರವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

  ಜೋಷಿಯವರು ಹೇಳಿದ 83 ವರ್ಷದ ಸನ್-ನಿಧಿಗೆ ಅಧಿಕಾರದಲ್ಲಿರುವಾಗಲೇ ಹೊರ ಲೋಕಕ್ಕೆ ಯಾನ ನಡೆಸುವ ಆಸೆ ಇದೆ ಅಂತ ಗುಸುಗುಸು ಇದೆ. ಇದಕ್ಕಾಗಿ ಸನ್-ಮಗ ಸ್ಟಾಲಿನ್ (ಸದ್ದಾಂ ಹುಸೇನ್ ಪುತ್ರ ಉದೈ ನೆನಪಿಗೆ ಬರುತ್ತಿದೆ)ಉದಯಿಸಲು ನೋಡುತ್ತಿದ್ದಾರಂತನೂ ಕುಸುಕುಸು ಇದೆ.

  ಪ್ರತ್ಯುತ್ತರಅಳಿಸಿ
 5. ಓಹ್ ತಲೆಬುರುಡೆ ಅವರೆ, .... ಅಲ್ಲಲ್ಲ ತಲೆಹರಟೆ ಅವರೆ, ನಿಮಗೆ ಸ್ವಾಗತ ಸ್ವಾಮೀ....
  ಎಲ್ಲಾ ಓಕೆ? ನಿಮ್ಮ ತಲೆಯ ಮಾಂಸ-ಖಂಡಗಳೆಲ್ಲಾ ಖಾಲಿಯಾಗಿ ಬುರುಡೆ ಮಾತ್ರ ಉಳ್ಕೊಂಬಿಟ್ಟಿದೆಯೇಕೆ? ಅದ್ರೊಳ್ಗೆ ಎಲ್ಲಾದ್ರೂ ಮೆದುಳು ಇರಬಹುದೆ? ಸ್ವಲ್ಪ ಹುಡುಕಿ ನೋಡಿ!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D