ಬೊಗಳೆ ರಗಳೆ

header ads

ಉಸಿರೇ.... ಉಸಿರೇ.... ನೀ ಹೃದಯ ಕೊಲ್ಲಬೇಡ...

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಮೇ 10- ಉಸಿರುಕಟ್ಟಿ ದಾಖಲೆ ಮಾಡುವ ತನ್ನ ಆರೋಗ್ಯಕರ ಪ್ರಯತ್ನವೊಂದಕ್ಕೆ ತಣ್ಣೀರೆರಚಿದ್ದರಿಂದ ಅಮೆರಿಕದ ಮಾಯಾಜಾಲ ಪ್ರವೀಣ ಡೇವಿಡ್ ಬ್ಲೈನ್ ಕೆಂಡಾಮಂಡಲನಾಗಿದ್ದಾನೆ.

ನಗರ ಪ್ರದೇಶದ ವಾಯುಮಾಲಿನ್ಯದಿಂದ ಸ್ವಲ್ಪಮಟ್ಟಿನ ಬಿಡುವು ಪಡೆದು ಗೋಲದೊಳಗೆ ನೀರು ತುಂಬಿ ಅದರಲ್ಲಾದರೂ ವಾಯುಸೇವನೆ ಇಲ್ಲದೆ ಸ್ವಲ್ಪ ಆರಾಮವಾಗಿರೋಣ ಎಂದುಕೊಂಡರೆ ಇವರು ಬಿಡುತ್ತಿಲ್ಲವಲ್ಲ ಎಂಬ ಕೊರಗು ಆತನದು.

ಮನೆಯಲ್ಲಿ ಪತ್ನಿಯ ಕಾಟ, ಹೇಗೂ ದಿನಂಪ್ರತಿ ಉಸಿರುಕಟ್ಟಿಸುವ ವಾತಾವರಣ. ಅದನ್ನೇ ದಾಖಲೆಯಾಗಿ ಪರಿವರ್ತಿಸಬಾರದೇಕೆ. ವಾತಾವರಣದಲ್ಲಿರುವ ಕಲುಷಿತ ವಾಯುಸೇವನೆಗಿಂತ ಈ ವಿಧಾನ ಆರೋಗ್ಯಕ್ಕೂ ಪೂರಕವಲ್ಲವೆ ಎಂದು ಡೇವಿಡ್ ತನ್ನನ್ನು ಸಂದರ್ಶಿಸಿದ ಅಸತ್ಯಾನ್ವೇಷಿಯನ್ನು ಪ್ರಶ್ನಿಸಿದ್ದಾನೆ.

ಮನೆಯಲ್ಲಿ ಹೇಗೂ ಉಸಿರುಕಟ್ಟೀ... ಕಟ್ಟೀ... ಅಭ್ಯಾಸವಾಗಿಬಿಟ್ಟಿದೆ. ಅದೇ ಭರವಸೆಯಲ್ಲಿ ಈ ದಾಖಲೆಗೆ ಮುಂದಾದೆ ಎಂದು ತಿಳಿಸಿರುವ ಡೇವಿಡ್, ಅಸತ್ಯಾನ್ವೇಷಿಯ ಕುತೂಹಲಭರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, "ಇಷ್ಟಕ್ಕೂ ನಾನು ಕಟ್ಟಿಕೊಂಡದ್ದು ನನ್ನ ಕೊನೆಯುಸಿರನ್ನು ಅಲ್ಲವಲ್ಲ?" ಎಂದು ಪ್ರತಿ-ಪ್ರಶ್ನಿಸಿದ್ದಾನಲ್ಲದೆ, ನೀವೇಕೆ ಉಸಿರುಕಟ್ಟಿದಂತೆ ಚಡಪಡಿಸಬೇಕು ಎಂದು ಕೇಳಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಅಲ್ಲಾ ನಿಮ್ಮ ವರದಿಗಾರರಿಗೆಷ್ಟು ಕೊಬ್ಬು. ಒಮ್ಮೆಯೂ ನನ್ನನ್ನು ಸಂದರ್ಶಿಸಲೇ ಇಲ್ಲ. ಇಷ್ಟು ವರ್ಷಗಳು ಸಂಸಾರ ಮಾಡಿರುವ ನನಗೇನು ಉಸಿರು ಕಟ್ಟೋಕೆ ಬರೋಲ್ವಾ? ಅಥವಾ ಎಂಥದೇ ವಾಯು ಮಾಲಿನ್ಯವಿದ್ದರೂ ಉಸಿರಾಡೋಕ್ಕೆ ಬರೋಲ್ವಾ? ಯಾವಾಗ ಬರ್ತೀರೋ ಅಂತ ಚಡಪಡಿಸ್ತಿದ್ದೀನಿ. ಇನ್ನೊಂದು ಗುಟ್ಟಿನ ವಿಷಯ - ಸಂದರ್ಶನಕ್ಕೆ ಅಂತ ಬರೋವ್ರಿಗೆ ಉಚಿತ ಊಟ ವಸತಿಯ ಏರ್ಪಾಡು ಮಾಡುವೆ.

  ಪ್ರತ್ಯುತ್ತರಅಳಿಸಿ
 2. ನಿಮ್ಮ ಸಂ-ದರ್ಶನಕ್ಕೆ ಬರಬೇಕಿದ್ದರೆ ಎಷ್ಟು ಸಮ್ ಕೊಡುತ್ತೀರಿ?ಯಾಕಂದ್ರೆ ಇದು ನಮ್ಮ ಮಣ್ಣಿನ ಗುಣ ಸ್ವಾಮೀ....!

  ಪ್ರತ್ಯುತ್ತರಅಳಿಸಿ
 3. ಅದೆಲ್ಲಾ ಗುಟ್ಟಿನ ವಿಷಯ. ಹಣ ಕೊಡ್ತೀನಿ ಅಂದ್ರೆ ಮನೆ ಮುಂದೆ ಕ್ಯೂ ನಿಲ್ತಾರೆ. ಹೇಗಿದ್ರೂ ಬಿಟ್ಟಿ ಊಟ ಕೊಡ್ತೀನಲ್ಲ. ಇನ್ನೇನು ಬೇಕು ಹೇಳಿ. ಹೊಟ್ಟೆ ತುಂಬಿದ್ರೆ ಜೀವನದಲ್ಲಿ ಇನ್ನೇನೂ ಬೇಡ. ಅಷ್ಟೇನಾದ್ರೂ ಬೇಕಿದ್ರೆ ಸ್ವಲ್ಪ ಅಧ್ಯಾತ್ಮ ವಿಚಾರವನ್ನು ನಿಮ್ಮ ತಲೆಗೆ ತುಂಬುವೆ.

  ಪ್ರತ್ಯುತ್ತರಅಳಿಸಿ
 4. ಅಯ್ಯಯ್ಯೋ.... ಅಧ್ಯಾತ್ಮಿಕ ವಿಚಾರ ತುಂಬ್ಲಿಕ್ಕೆ ತಲೆಯೇ ಇಲ್ವಲ್ಲಾ....

  ಆದ್ರೆ ನೋಡಿ... ಹೊಟ್ಟೆ ತುಂಬಿದ್ರೆ ಸಾಕು, ಬೇರೇನೂ ಬೇಡ ಅಂತ ಹೇಳಿ ನೀವು ಈ ಯುಗದಲ್ಲಿ ವಿಶ್ವದಾಖಲೆ ಮಾಡಲು ಹೊರಟಿರುವಂತಿದೆಯಲ್ಲ...? ಹಾಗಿದ್ದರೆ ನಿಮ್ಮ ಶ್ವಾಸಕೋಶ ತುಂಬುವುದು ಬೇಡವೆ?, ಹೃದಯ ತುಂಬುವುದು ಬೇಡವೆ?, ಕೊಟ್ಟ ಕೊನೆಗೆ.... ಜೇಬು ತುಂಬುವುದು ಬೇಡವೆ?

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D