33+104 = ಸುದೀರ್ಘ ದಾಂಪತ್ಯ ಜೀವನ
(ಬೊಗಳೂರು ಬ್ಯುರೋದಿಂದ)
ಬೊಗಳೂರು, ಮೇ 3- ಜೀವನದಲ್ಲೇ ಮೊದಲ ಬಾರಿ 33ರ ಯುವಕನೊಬ್ಬ 104 ವರ್ಷದ ಅ.........ಜ್ಜಿಯನ್ನು ಮದುವೆಯಾಗಿರುವ ಸುದ್ದಿ ಇಲ್ಲಿ ನೀಡಿರುವುದನ್ನು ಓದಿದ ಅಸತ್ಯಾನ್ವೇಷಿ ಮಲೇಷಿಯಾಕ್ಕೆ ಧಾವಿಸಿ, ಈ ಹಣ್ಣು ಹಣ್ಣು ಯುವಕ ಮತ್ತು ಯುವ ಮುದುಕಿಯರ ಸಂದರ್ಶನ ನಡೆಸಿದ್ದಾನೆ.

ಸಂದರ್ಶನದ ಸಾರ ಇಲ್ಲಿದೆ. ವರ ಮಹಾಶಯ ಮಹಮ್ಮದ್ ನೂರಾ ಛೇ ಮೂಸಾ (Muhamad Noor Che Musa) ಮತ್ತು ನಾಚಿ ನಾಚಿ ಮುಖವೆಲ್ಲಾ ಸುಕ್ಕುಗಟ್ಟಿದ್ದ ನವವಧು ವ್ಯಾಕ್ ಕೊಂದರ್ (Wook Kundor) ಅಸತ್ಯಾನ್ವೇಷಿ ಎದುರು ಬೊಚ್ಚು ಬಾಯಿ ಬಿಟ್ಟದ್ದು ಹೀಗೆ:

ಅನ್ವೇಷಿ: ನೀವು ಮದುವೆಯಾಗಿದ್ದೇಕೆ?
ನೂರಾ ಛೆ: ಎಲ್ಲರೂ ಆಗುತ್ತಾರೆ, ಅದಕ್ಕೆ.ವ್ಯಾಕ್ ಕೊಂದರ್ : ಮದುವೆ ಆಗಿ ಆಗಿ ಅಭ್ಯಾಸವಾಗ್ಬಿಟ್ಟಿದೆ ನೋಡಿ, ಬಿಡಕ್ಕಾಗಲ್ಲ.

ಅನ್ವೇಷಿ: ಇದು ನಿಮಗೆ ಎಷ್ಟನೇ ಮದುವೆ?
ನೂರಾ ಛೇ: ಇದೇ ಮೊದಲು ಪ್ರಯತ್ನಿಸಿದ್ದೇನೆ.
ವ್ಯಾಕ್ ಕೊಂದರ್ : ನಾವೀಗ 21ನೇ ಶತಮಾನದಲ್ಲಿದ್ದೀವಿ, ಹಿಂದಿನ ಶತಮಾನದ್ದೂ ಸೇರಿ ನನ್ನದು 21ನೇ ಮದುವೆಯಿದು!

ಅನ್ವೇಷಿ: ನಿಮ್ಮ ಹೆಸರಿಗೂ 104ರ ಅಜ್ಜಿಯನ್ನು ಮದುವೆಯಾಗುವುದಕ್ಕೂ ಸಂಬಂಧವಿದೆಯೆ?
ನೂರಾ ಛೇ: ಅಷ್ಟೂ ಗೊತ್ತಾಗಲ್ವ. ನಾನು ನೂರಾ, ಆಕೆಗೆ ನೂರಾ ನಾಕು. ಈ ಸಾಮ್ಯತೆ ನಮ್ಮನ್ನು ಬಲವಾಗಿ ಹಿಡಿದಿಟ್ಟಿರುತ್ತದೆ.

ಅನ್ವೇಷಿ: ನಿಮ್ಮ ಜೀವನದಲ್ಲಿ ಮದುವೆ ಸಂಖ್ಯೆ ಹೆಚ್ಚಿಸುವ ಯೋಚನೆಯಿದೆಯೆ?
ನೂರಾ ಛೇ :ಯಾಕಿಲ್ಲ, ನನ್ನಜ್ಜಿ.... ಅಲ್ಲಲ್ಲ.... ಹೊಸ ಪತ್ನಿ ಈಗಾಗಲೇ 21 ಮದುವೆಯಾಗಿ'ಬಿಟ್ಟಿ'ರುವಾಗ ನಾನು ಅದನ್ನು ಮೀರಿಸೋದು ಬೇಡವೆ?
ವ್ಯಾಕ್ ಕೊಂದರ್: ಈ ಶತಮಾನದ ಅಂತ್ಯದೊಳಗೆ ಮದುವೆಯ ಸಂಖ್ಯೆಯನ್ನು ಡಬ್ಬಲ್ ಆಗಿಸುವ ಯೋಚನೆಯಿದೆ. ನೋಡೋಣ, ಆ ದೇವರು ಕಣ್ಣು ಬಿಟ್ಟರೆ ವಿಶ್ವದಾಖಲೆ ಮಾಡಬಹುದು.

ಅನ್ವೇಷಿ: ನಿಮ್ಮ ಹಿಂದಿನ ಗಂಡಂದಿರ ಗಡಣ ಎಲ್ಲಿದೆ, ಏನು ಮಾಡುತ್ತಿದೆ?
ವ್ಯಾಕ್ ಕೊಂದರ್: ಮದುವೆಯಾಗುವುದು ನನ್ನ ಕೆಲಸ. ಅವರೆಲ್ಲಿದ್ದಾರೆ, ಏನಾಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂದೆಲ್ಲಾ ಯೋಚಿಸುವುದು ಅವರಿಗೇ ಬಿಟ್ಟ ವಿಚಾರ.

ಅನ್ವೇಷಿ: ನೂರಾ 4 ಅವರೆ, ನಿಮ್ಮ ಹೆಸರಲ್ಲೇಕೆ ಛೆ ಎಂಬ ಶಬ್ದವಿದೆ?
ನೂರಾ: ಗೊತ್ತಿಲ್ಲ. ಈಕೆಯನ್ನು ಮದುವೆಯಾದ ನಂತರ ಅದು ತಾನೇ ತಾನಾಗಿ ಹೆಸರಿಗೆ ಅಂಟಿಕೊಂಡಿತು.

ಅನ್ವೇಷಿ: ಮಿಲಿಟರಿ ಏಕೆ ಬಿಟ್ಟಿರಿ?
ನೂರಾ: ಮದುವೆಯಾಗಲು.

ಅನ್ವೇಷಿ: ನಿಮ್ಮ ಭವಿಷ್ಯದ ಯೋಚನೆ ಏನು?
ವ್ಯಾಕ್ ಕೊಂದರ್: ಇದುವರೆಗೆ ಒಂಟಿ ಜೀವನ ಸಾಕಾಗಿದೆ. ಇನ್ನು ಮನೆತುಂಬಾ ಮಕ್ಕಳನ್ನು ಅವುಗಳೊಂದಿಗೆ ಆಡುತ್ತಾ ಕಾಲ ಕಳೆಯೋದು.
ನೂರಾ:ನಮ್ಮದು ಸುದೀರ್ಘ ದಾಂಪತ್ಯ ಜೀವನ ಎಂಬ ವಿಶ್ವಾಸವಿದೆ. ಯಾಕೆಂದರೆ ಆಕೆಗೆ ಈಗಾಗಲೇ 104 ವರ್ಷ, ನನಗೆ 33 ಸೇರಿದರೆ 137 ವರ್ಷ. ಇದು ವಿಶ್ವದಾಖಲೆಗೆ ಸೇರುತ್ತದೆಯೋ... ದಯವಿಟ್ಟು ಒಮ್ಮೆ ಚೆಕ್ ಮಾಡಿ ನೋಡಿಬಿಡಿ.

ಅನ್ವೇಷಿ : ಧನ್ಯವಾದ.
ನೂರಾ ಮತ್ತು ವ್ಯಾಕ್ ಕೊಂದರ್: ನಿಮಗೂ ಧನ್ಯವಾದ. ಮುಂದಿನ ಮದುವೆಗೆ ಇನ್ವಿಟೇಶನ್ ಕಳುಹಿಸುತ್ತೇವೆ, ಖಂಡಿತಾ ಬರಬೇಕು.

4 Comments

ಏನಾದ್ರೂ ಹೇಳ್ರಪಾ :-D

 1. ಕಲಿಗಾಲವಯ್ಯ ಕೇಡುಗಾಲ. ಕೊಂದರ್‍ಗೆ ಯಾಕೆ ಬೇಕಿತ್ತಪ್ಪ ಈ ವಯಸ್ಸಿನಲ್ಲಿ ಮದುವೆ. ಇನ್ಯಾವುದೂ ಪುಟ್ಟ ಪಾಪು ಸಿಕ್ಲಿಲ್ವಾ? ಈ ಮುದುಕಮ್ಮನ ಆಸ್ತಿಯ ಬಗ್ಗೆ ಏನೂ ಮಾಹಿತಿ ಸಿಕ್ಲಿಲ್ವಾ? ಸಿಕ್ಕಿದ್ದಿದ್ರೆ ೨೨ನೆಯದಕ್ಕೆ ಪ್ರಯತ್ನಿಸಬಹುದು.

  ReplyDelete
 2. ಕೊಂದರ್ ಳಲ್ಲಿ ಎಂದೂ ಕುಂದದ ಉತ್ಸಾಹ
  ನೂರಾಛೆಯ ತನುಮನದಿ ಯೌವನದ ಮೋಹ
  ಎರಡೂ ಸೇರಿ ಹೀಗೊಂದು ಕೌತುಕದ ವಿವಾಹ
  ಪತ್ರಿಕೆಗಳಿಗೆ ಓದುಗರಿಗೆ ಇಂಥ ಸುದ್ದಿಗಳದೇ ದಾಹ!

  ReplyDelete
 3. ಮಾವಿನಯನಸರೇ,
  ಮುದುಕಮ್ಮನ ಆಸ್ತಿ ಮೇಲೆ ನನ್ನ ಕಣ್ಣಿಲ್ಲ, ಆ ಆಸ್ತಿಗೇ ನನ್ನ ಮೇಲೆ ಕಣ್ಣಿತ್ತು ಅಂತ ನೂರ್ ಬಾರಿ ಹೇಳಿದ್ದಾನಂತೆ. ಆದ್ರೆ ಅವರಿಬ್ಬರೂ ಆಸ್ತಿ ನಮ್ಮ ಬಳಿ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ ಅನ್ನುವುದನ್ನು ಅಸತ್ಯಾನ್ವೇಷಿ ತಡವಾಗಿ ವರದಿಸಿದ್ದಾರೆ.

  ReplyDelete
 4. ಶ್ರೀ ಜೋಷಿಯವರಿಗೆ ಜೋಷ್ ಭರಿತ ಸ್ವಾಗತ.
  ಈ ಮದುವೆ(ಸುದ್ದಿ)ಗೆ ನೀವು ಕಾಮೆಂಟಿಸಿದ ವಿಚಿತ್ರಾನ್ನ ಸಖತ್ತಾಗಿದೆ ಅಂತ 104 ಮತ್ತು 33 ಇಬ್ಬರೂ ಹೇಳಿದ್ದು, ಮುಂದಿನ ಮದುವೆಗೆ ವಿಚಿತ್ರಾನ್ನಿಗಳಿಗೇ ಆರ್ಡರ್ ನೀಡಬೇಕೂಂತಾನೂ ಪಟ್ಟುಹಿಡಿದಿದ್ದಾರೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post