ಬೊಗಳೆ ರಗಳೆ

header ads


ಭಾರತಕ್ಕೆ ದೃಷ್ಟಿ ತಗುಲದಂತಾಗಲು

ಮೀಸಲಾತಿ ಅವಶ್ಯ: ಮಾಜಿ ನಿಧಾನಿ
(ಬೊಗಳೂರು ಬ್ಯುರೋದಿಂದ)
ಬೊಗಳೂರು, ಮೇ 4- ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿಜ್ಞಾನಿಗಳು, ಸಾಫ್ಟ್ ವೇರ್ ಎಂಜಿನಿಯರ್‌ಗಳು ಖ್ಯಾತನಾಮರಾಗಿ ಭಾರತದ ಹೆಸರು ಕೂಡ ಉನ್ನತಿಗೇರುತ್ತಿರುವುದರಿಂದ ತೀವ್ರವಾಗಿ ಕಳವಳಗೊಂಡಿರುವ ಮಾಜಿ ನಿಧಾನಿ, ಮಂಡಲೋದ್ಧಾರಕ ಖ್ಯಾತಿಯ ಮೀಸಲಾತಿ ಪ್ರಲಾಪ್ ಸಿಂಗ್ ಅವರು, ಹೀಗೇ ಮುಂದುವರಿದರೆ ಭಾರತಕ್ಕೆ ಜಗತ್ತಿನಾದ್ಯಂತ ಜನರ ದೃಷ್ಟಿ ತಗುಲಬಹುದು ಎಂದು ಆತಂಕಿಸಿದ್ದಾರೆ.

ಈ ಕಾರಣಕ್ಕಾಗಿ, ಎಲ್ಲಾ ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಮೀಸಲಾತಿ ಜಾರಿಗೆ ಬರಬೇಕು. ಇದರಿಂದಾಗಿ ದೇಶದಲ್ಲಿ ಜಾತಿ ರಾಜಕಾರಣ ಉತ್ತಮ ಬೆಳವಣಿಗೆ ಕಾಣುತ್ತದೆ. ಇದುವರೆಗೆ ತಮ್ಮನ್ನೆಲ್ಲಾ ಶೋಷಿಸುತ್ತಾ ಬಂದಿರುವ ಪ್ರತಿಭಾವಂತರ ಸಂತತಿ ಅಳಿದು, ಭಾರತ ಮತ್ತೆ ತನ್ನ "ಗತ" ವೈಭವವನ್ನು ಮರಳಿಪಡೆಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಜಾರಿಗೆ ತಂದರೆ ಅಂತಾರಾಷ್ಟ್ರೀಯ ಸ್ತರದಲ್ಲಿ ಭಾರತದ ಬಗೆಗಿನ ಪ್ರಚಾರ ಕಡಿಮೆಯಾಗುತ್ತದೆ. ಪ್ರತಿಭಾವಂತರೆಲ್ಲಾ ವಿದೇಶಗಳಿಗೆ ಓಡಿ ಹೋಗಿ ಅಲ್ಲಿನ ಕೀರ್ತಿ ಹೆಚ್ಚಿಸಿ, ಆ ದೇಶಕ್ಕೆ ಇಡೀ ಜಗತ್ತಿನ ದೃಷ್ಟಿ ತಾಗುವಂತೆ ಮಾಡುತ್ತಾರೆ. ಇದರಿಂದ ಆ ದೇಶವು ದೃಷ್ಟಿ ತಗುಲಿದ್ದಕ್ಕೆ ಶಾಂತಿ ಮಾಡಿಸಿಕೊಳ್ಳಬೇಕಾಗುತ್ತದೆ, ಇತ್ತ ಭಾರತವು ಕೆಟ್ಟ ದೃಷ್ಟಿಯಿಂದ ಪಾರಾಗುತ್ತದೆ ಎಂದು ಅವರು ಉವಾಚಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಮೀಸಲು ಬೇಕು: ಈ ಮಧ್ಯೆ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಮೀಸಲಾತಿ ಜಾರಿಗೊಳಿಸಿ ದೇಶವನ್ನು ಮತ್ತೊಮ್ಮೆ ಮಂಡಲ್ ಸಿಂಗ್ ಆಡಳಿತಾವಧಿಯ ಅಲ್ಲೋಲ ಕಲ್ಲೋಲಕ್ಕೆ ಒಳಪಡಿಸುವ ಕೇಂದ್ರ ಹಿಂದುಳಿದ ಸಂಪನ್ಮೂಲ ಮಂತ್ರಿ ದುರ್ಜನ್ ಸಿಂಗ್ ಪ್ರಸ್ತಾಪವನ್ನು ಉತ್ತರ ಪ್ರದೇಶದ ಓಟಿನ ಬ್ಯಾಂಕ್‌ನ ಮಹಾ ವ್ಯವಸ್ಥಾಪನಾ ನಿರ್ದೇಶಕರಾದ ಮಾಯಾಂಗನೆ, ಮುಲಾಮು ಸಿಂಗ್ ಹಾಗೂ ಕರ್‌ನಾಟಕದ ಮಾಜಿ ಉಪನಿಧಾನಿ ಸಿದ್ದರಾದ್ಧಾಂತಯ್ಯ ಸ್ವಾಗತಿಸಿದ್ದಾರೆ.

ಇತ್ತೀಚೆಗೆ ಭಾರತವು ಕ್ರಿಕೆಟ್, ಟೆನಿಸ್, ಚೆಸ್ ಮತ್ತಿತರ ರಂಗಗಳಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಇದರಿಂದಾಗಿ ದೃಷ್ಟಿ ತಗುಲದಂತಾಗಲು ಈ ರಂಗಗಳಲ್ಲೂ ಶೇ.99 ಮೀಸಲಾತಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಾಗಿದ್ದರೆ, ಮಹಿಳಾ ಟೆನಿಸ್ ರಂಗವನ್ನು ಹಿಂದುಳಿದವರಿಗೆ ಮೀಸಲಿಡಬೇಕೆ ಎಂಬ ಅಸತ್ಯಾನ್ವೇಷಿ ಪ್ರಶ್ನೆಗೆ ಸ್ವಲ್ಪ ಯೋಚಿಸಿದ ಮುಲಾಮು ಸಿಂಗ್, ಹೌದಲ್ಲ, ನನಗದು ಹೊಳೆಯಲೇ ಇಲ್ಲ. ಸದ್ಯಕ್ಕೇನೂ ಅದರ ಅವಶ್ಯಕತೆ ಕಾಣಿಸುತ್ತಿಲ್ಲ. ಅಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಮೆರೆಯುತ್ತಿದ್ದಾರಲ್ಲ ಎಂದು ನಗುತ್ತಾ ಉತ್ತರಿಸಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಾಪಸ್ ಬಂದ ಮಾಜಿ ನಿಧಾನಿಗಳು, ಪ್ರಧಾನಿ ಹುದ್ದೆಗೂ ಮೀಸಲಾತಿ ಅನ್ವಯಿಸಬೇಕು. ಅಲ್ಲದೆ, ಶಿಕ್ಷಕ ಹುದ್ದೆಗಳಿಗೂ ಮೀಸಲಾತಿ ಅನ್ವಯಿಸಿದರೆ ಪ್ರತಿಭಾವಂತರೆಲ್ಲಾ ಪಲಾಯನ ಮಾಡುತ್ತಾರೆ, ಇದರಿಂದ ಭವಿಷ್ಯದ ಭವ್ಯ ಪ್ರಜೆಗಳನ್ನು ರೂಪಿಸುವ ಶಾಲೆಯ ಮಟ್ಟದಿಂದಲೇ ಭಾರತದ ಹೆಸರಿಗೆ ದೃಷ್ಟಿ ತಗುಲದೆ "ಸುರಕ್ಷಿತ"ವಾಗಿರುವಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಮೊದಲು ದುರ್ಜನ್ ಸಿಂಗ್ ಮಂತ್ರಾಲಯದಿಂದಲೇ ಇಂಥದ್ದು ಆರಂಭವಾಗಲಿ ಎಂದು ಅಭಿಪ್ರಾಯಪಟ್ಟರು.

ವಿಶ್ವಸುಂದರಿಗೂ ಮೀಸಲು: ಈ ಮಧ್ಯೆ, ಉ.ಪ್ರ.ದ (ತಪ್ಪಾಗಿ ಉಪದ್ರ ಎಂದು ಓದದಿರಿ) ಮಾಯಾಂಗನೆ ಅವರು ಅಸತ್ಯಾನ್ವೇಷಿಯನ್ನು ಫೋನ್ ನಲ್ಲಿ ಸಂಪರ್ಕಿಸಿ, "ನನ್ನದೂ ಒಂದು ಆಗ್ರಹ ಇದೆ, ವಿಶ್ವ ಸುಂದರಿ ಪಟ್ಟಕ್ಕೂ ಮೀಸಲಾತಿ ಬೇಕು, ಸಾಧ್ಯವಾಗದಿದ್ದರೆ ಭಾರತ ಸುಂದರಿ ಪಟ್ಟಕ್ಕಾದರೂ ಮೀಸಲಾತಿ ನೀಡಬೇಕು, ಇದನ್ನು ನಿಮ್ಮ 'ಬೊಗಳೆ ರಗಳೆ'ಯಲ್ಲಿ ಪ್ರಕಟಿಸಿ" ಎಂದು ತಾಕೀತು ಮಾಡಿದ್ದಾರೆ.
-----------------------
ಇಂ'ದಿನ' ವಿಶೇಷ
ಇಂದು 04-05-06ರ ಮಧ್ಯಾಹ್ನ 1 ಗಂಟೆ, 2 ನಿಮಿಷ, 3 ಸೆಕೆಂಡುಗಳಾಗುವ ಹೊತ್ತಿಗೆ ಕಂಪ್ಯೂಟರ್/ಡಿಜಿಟಲ್ ಕ್ಯಾಲೆಂಡರ್‌ಗಳು 1:2:3:4/5/6 ಅಂತ ತೋರಿಸುತ್ತದೆ. ಇದು ಈ ಜನ್ಮದಲ್ಲಿ ಒಮ್ಮೆ ಮಾತ್ರ ಕಾಣಸಿಗುವ ವಿದ್ಯಮಾನ!

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

 1. ಅನ್ವೇಷಿಗಳೇ,

  ವಿದೇಶಕ್ಕೆ ಹೋಗುವವರಿಗೂ ಹಾಗೂ ಬ್ಲಾಗ್‌ನಲ್ಲಿ ಬರೆಯುವವರಿಗೂ ಮೀಸಲಾತಿ ಅನ್ವಯವಾಗುವಂತಿರಬೇಕಿತ್ತು!

  ಉ.ಪ್ರ.ದ 'ಮಾಯಾ'ಂಗನೆಯ ಮುಂದೆ ಬೇರೆ ಯಾವ ಸುಂದರಿ ಗೆಲ್ಲಲು ಸಾಧ್ಯವಿದೆ ನೀವೇ ಹೇಳಿ?

  ೧೨೩೪೫೬
  ಆ ಸಮಯ ತೋರಿಸೋದು ಬೆಳಗ್ಗಿನ ಜಾವ ಒಂದು ಘಂಟೆಗಲ್ಲವೇ?

  ಇತಿ,
  ನಿಮ್ಮವ

  ಪ್ರತ್ಯುತ್ತರಅಳಿಸಿ
 2. ನಿಮ್ಮಲ್ಲಿ ಶೇಕಡಾ ಎಷ್ಟು ಮೀಸಲಾತಿ ಇದೆ. ಅಂದರೆ, ಬ್ಲಾಗು ಬರೆಯುವವರು, ಬ್ಲಾಗನ್ನು ಬಗ್ಗಿಸುವವರು, ಬ್ಲಾಗನ್ನು ಬಗ್ಗಿ ನೋಡುವವರು, ಇತ್ಯಾದಿ. ತಕ್ಷಣ ಅಂಕಿ ಅಂಶಗಳನ್ನು ಕೊಡಿ. ಈ ಕೆಲಸವನ್ನು ಸರ್ಕಾರ ನನಗೆ ವಹಿಸಿದೆ. ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಪರವಾಗಿಲ್ಲ ನಾನೆಲ್ಲಾ ನೋಡಿಕೊಳ್ತೀನಿ, (ನೀವು ಮಾತ್ರ ನನ್ನನ್ನು ನೋಡಿಕೊಳ್ಳುವಂತಿದ್ದರೆ ಮಾತ್ರ)

  ಪ್ರತ್ಯುತ್ತರಅಳಿಸಿ
 3. ನಮ್ಮವ ನೀವು ಅವರೆ,
  ನಿಮ್ಮ ಮೀಸಲಾತಿ ಪ್ರಸ್ತಾಪವನ್ನು ಚಿಂತಾಜನಕವಾಗಿ ಪರಿಶೀಲಿಸಲಾಗುತ್ತದೆ. ಆದರೆ ಪರಿಶೀಲನೆಗೂ ಸ್ವಲ್ಪ ಮೀಸಲಾತಿ ಮಿತಿ ಇದೆಯಲ್ಲಾ.....

  1234567 ವಿಷಯದಲ್ಲಿ ನಿಮ್ಮ ಹೇಳಿಕೆ ಸರಿ. ಆದರೆ ನಾನು ಅದನ್ನು ಬ್ಲಾಗಿನಲ್ಲಿ ತುರುಕಿಸಿದಾಗ ತಡವಾಗಿತ್ತು, ಅದಕ್ಕಾಗಿ ರೈಲ್ವೇ ಟೈಮಿಗೆ ಬೈ ಬೈ ಹೇಳಿ, ಮುಂದಿನ ಆಯ್ಕೆಗಾಗಿ ಗಾಳಿ ಬಂದಾಗ ತೂರಿಕೊಂಡಿದ್ದೇನೆ. ಅಡಿಗೆ ಬಿದ್ರೂ ಮೂಗು ಮೇಲೆ ಅನ್ನಿಸಿದ್ರೆ ನಾವು ಬೇಜವಾಬ್ದಾರರಲ್ಲ.

  ಪ್ರತ್ಯುತ್ತರಅಳಿಸಿ
 4. ವಿನಯವಂತ ಮನಸ್ಸಿನವರೆ,
  ಓಹ್ ನೀವು ಕರ್ ನಾಟಕ ಸರಖಾರದವರೆ? ನೀವು ಬ್ಲಾಗ್, ಬಗ್ಗು ಎಂಬಿತ್ಯಾದಿ ಹೇಳಿ ನಮ್ಮಲ್ಲಿ ಭೀತಿ ಹುಟ್ಟಿಸುತ್ತಿದ್ದೀರಿ. ಯಾವ bug ಅಂತ ಸ್ವಲ್ಪ ಹೇಳಿಬಿಡಿ. ನಮ್ಮಲ್ಲಂತೂ ಸಂಪಾದಕ, ವರದಿಗಾರ, ಪುಟವಿನ್ಯಾಸಕಾರ ಜತೆಗೆ ಓದುಗರದೂ ಸೇರಿಸಿ ಶೇ.100 ಮೀಸಲಾತಿ (* ಒಬ್ಬರಿಗೆ ಮಾತ್ರ * ಶರತ್ತುಗಳು ಅನ್ವಯ)!

  ದಿನಾಲೂ ನಿಮಗೆ ಬೊಗಳೆಯ ಕಸದಬುಟ್ಟಿಯನ್ನೇ ರವಾನಿಸುತ್ತಿದ್ದರೂ, ನಿಮಗೆ ಸಾಲದೇ? ಇರ್ಲಿ, ಅದ್ರೂ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.

  ಪ್ರತ್ಯುತ್ತರಅಳಿಸಿ
 5. ಅನ್ವೇಷಿಗಳೇ,

  '1234567' ಎಂದು ಬರೆದು ಇನ್ನು ೬೧ ವರ್ಷದಲ್ಲಿ ಆಗಬಹುದಾದ ವಿದ್ಯಮಾನದ ಸುಳಿವನ್ನು ನೀಡಿ ನಿಮ್ಮ ಆಶಾವಾದವೆನ್ನೋ 'ಅಸತ್ಯ'ದ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.

  ನಿಮ್ಮ ಅನ್ವೇಷಣೆ ನಿರಾತಂಕವಾಗಿ ಮುಂದುವರೆಯಲಿ!

  ನಿಮ್ಮವ

  ಪ್ರತ್ಯುತ್ತರಅಳಿಸಿ
 6. 1234567 ಎಂದು ಬರೆದು ಇನ್ನು ೬೧ ವರ್ಷಗಳ ನಂತರ ಆಗೋ 'ಅಸತ್ಯ'ವನ್ನು ನೆನಪಿಸುವಂಥಾ ಜಾಣರಪ್ಪಾ ನೀವು.

  ಜೊತೆಗೆ ಅಲ್ಲೀವರೆಗೂ ಬದುಕಿರ್ತೀನೆ ಅಂತ್ಲೇ ಅಂದುಕೊಳ್ಳುವ ಆಶಾವಾದವನ್ನೇ ನಾನೂ ಇಟ್ಟುಕೊಂಡಿದ್ದೇನೆ.

  ಇತಿ,
  ನಿಮ್ಮವ

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D