(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.13- ನಾಮ ಹಾಕಿಸಿಕೊಳ್ಳಲು ಯಾವತ್ತೂ ತುದಿಗಾಲಲ್ಲಿ ನಿಂತಿರುವವರಿಗೆ ನೈಟಿ ಹಾಕಿಕೊಂಡೇ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ 'ನೈಟಿ ಅನು'ಗೆ ಮಂಪರು ಪರೀಕ್ಷೆ ಮಾಡಲಾಗುತ್ತದೆ ಎಂಬ ವರದಿ ವಿಜಯ ಕರ್ನಾಟಕ ಏ.12, 2006ರ ಸಂಚಿಕೆಯ 3ನೇ ಪುಟದಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ಅಸತ್ಯಾನ್ವೇಷಿ, ನೇರವಾಗಿ ಬೆಂಗಳೂರಿಗೆ ಧಾವಿಸಿದಾಗ ವಿಶ್ವದಾಖಲೆಯೊಂದು ಬಯಲಿಗೆ ಬಂದ ಪ್ರಸಂಗ (ಬೇರೆಲ್ಲೋ) ವರದಿಯಾಗಿದೆ!

ಇದಕ್ಕೆ ಕಾರಣ, ನೈಟಿ ಅನು ಎಂಬ ಹೆಸರೇ ಆಗಿದೆ. ನೈಟಿ ಅನುವನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಆಕೆ ನೈಟಿ ಹಾಕದಿದ್ದುದೇ ಹೊಸ ದಾಖಲೆ. ನೈಟಿಯನ್ನು ನೈಟ್‌ನಲ್ಲಿ ಅಲ್ಲದಿದ್ದರೂ, ಯಾವತ್ತೂ ತೊಟ್ಟುಕೊಂಡು ನೈಂಟಿ ಹಾಕಿಕೊಂಡು ಟೈಟ್ ಆಗಿಯೇ ವಂಚನಾ ಕೌಶಲ್ಯ ಪ್ರದರ್ಶಿಸುತ್ತಿದ್ದ ನೈಟಿ ಅನು, ಮಂಪರು ಪರೀಕ್ಷೆಗಾಗಿ ಮಂಪರಿನಲ್ಲಿದ್ದಾಗಲೇ ಅಲ್ಲಿನ ಪರೀಕ್ಷಕರಿಗೇ ಟೋಪಿ ಹಾಕಿ ತನ್ನ ಕೌಶಲ್ಯ ಮೆರೆದಿದ್ದಳು.

ಮಂಪರು ಪರೀಕ್ಷೆ ಆದ ತಕ್ಷಣವೇ ನಿಮ್ಮ ಹಣವನ್ನು ದುಪ್ಪಟ್ಟು ಆಗುವಂತೆ ಮಾಡುತ್ತೇನೆ ಎಂಬ ಆಮಿಷವನ್ನು ಮಂಪರಿನಲ್ಲೇ ಒಡ್ಡಿದ ಆಕೆ ಡಾ.ನರಪೇತಲ ನಾರಾಯಣ ಅವರಿಗೆ ಬಲೆ ಬೀಸಿದ್ದಳು. ಡಾ.ನರಪೇತಲ್ ಅವರು ಮರು ಮಾತನಾಡದೆ ನೈಟಿಯ ಚೂಟಿತನಕ್ಕೆ ಬಲಿಯಾಗಿದ್ದರು. ತಾವು ಹಣವನ್ನು ಹೇಗೆ ಮೇಜಿನ ಅಡಿಯಿಂದ ಕೈಚಾಚಿ ತೆಗೆದುಕೊಂಡು ಸಂಗ್ರಹಿಸಿಟ್ಟಿದ್ದರೋ, ಅದೇ ರೀತಿ ಮೇಜಿನಡಿಯಿಂದ ನಿಂತಲ್ಲೇ ಕೈಚಾಚಿ 10 ಲಕ್ಷ ರೂ.ಗಳನ್ನು ಆಕೆಗೆ ನೀಡಿದ್ದರು.

ಮಂಪರು ಪರೀಕ್ಷೆಯಾದ ತಕ್ಷಣ ನೈಟಿ ಅನುವನ್ನು ಪೊಲೀಸರು ತರಾತುರಿಯಲ್ಲಿ ಕರೆದುಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಅಥವಾ ಅಲ್ಲೇ ರಾದ್ಧಾಂತ ಎಬ್ಬಿಸಿದರೆ ತಮ್ಮ ಹುದ್ದೆಗೇ ಸಂಕಷ್ಟ ಎಂದು ತಿಳಿದು ಡಾ.ನರಪೇತಲ ಸುಮ್ಮನಾಗಬೇಕಾಯಿತು.

ಆಕೆ ಸುಖಾಸುಮ್ಮನೆ ಏನೇನೂ ಕಷ್ಟವಿಲ್ಲದೆ ದೊರೆತ 10 ಲಕ್ಷ ರೂ.ಗಳನ್ನು ನೈಟಿಯೊಳಗೆ ತುರುಕಿಸಿಕೊಂಡು ಅದನ್ನು ಪೊಲೀಸರಿಗೆ ನೀಡಲು ಸಿದ್ಧತೆ ನಡೆಸುತ್ತಿದ್ದಾಳೆ ಎಂಬ ಅಂಶ ಅಸತ್ಯಾನ್ವೇಷಿಯ ಕಿವಿಗೆ ಬಿದ್ದಿದೆ.

5 Comments

ಏನಾದ್ರೂ ಹೇಳ್ರಪಾ :-D

 1. ಅಸತ್ಯಾನ್ವೇಷಿಗಳೇ ತಮ್ಮ ಅನ್ವೇಷಣೆಯಿಂದ ಅರ್ಧ ಸತ್ಯ... ಅಲ್ಲಲ್ಲ... ಅರ್ಧ ಸುಳ್ಳಷ್ಟೇ ಬಹಿರಂಗಗೊಂಡಂತೆ ತೋರುತ್ತದೆ. ನರಪೇತಲ ಡಾಕ್ಟರನಿಂದ ಲಕ್ಷಗಟ್ಟಲೆ ಲೂಟಿ ಹೊಡೆದು ನೈಟಿಯೊಳಕ್ಕೆ ಸೇರಿಸಿದ ನಂತರ ಮತ್ತೊಮ್ಮೆ ನೈಂಟಿ ಏರಿಸಿದ ನೈಟಿ ಅನುಳನ್ನು 'ಬಹಿರಂಗ'ಗೊಳಿಸಲು ಪೊಲೀಸಲು ಟೈಟಾಗಿ ಪ್ರಯತ್ನ ನಡೆಸಿದ್ದು ಅಶರೀರವಾಣಿಯಿಂದ ದೃಢಪಟ್ಟಿದೆ. ಒಳಗಿರುವ ಗುಟ್ಟನ್ನು ರಟ್ಟು ಮಾಡುವುದಕ್ಕಾಗಿ ಪೊಲೀಸಲು ಟೈಟಾದ ನೇಟಿಯನ್ನು ಟೈಟಾಗಿ ಎಳೆದಾಗ 'ನಗ್ನ ಸತ್ಯ' ಬಹಿರಂಗವಾಯಿತಂತೆ. ತಮ್ಮ ಕಣ್ಮುಂದಿನ ಚಮತ್ಕಾರವನ್ನು ಕಣ್ಣೆವೆಯಿಕ್ಕದೆ ವೀಕ್ಷಿಸಿದ 'ಪೋಲಿ'ಸರು ತಮ್ಮ ಸಾಹಸಕ್ಕಾಗಿ ರಾಷ್ಟ್ರಪತಿ ಪದಕ ಪಡೆಯಲು ಯೋಚಿಸುತ್ತಿದ್ದಾರಂತೆ...

  ReplyDelete
 2. ಸ್ವಾಮಿ ಬೊಗಳೆ ಪಂಡಿತರೆ, ನಿಮ್ಮ ಕತ್ತೆ ಪುರಾಣದ ಮೇಲೆ ನನ್ನ ಅಭಿಪ್ರಾಯ ಕೆತ್ತಲು ಹೋದರೆ ಕಾಮೆಂಟೇ ನಾಪತ್ತೆ... ನಿಮ್ಮ ಉಗಿ ಬಂಡಿಯ ಮೇಲೆ ನನ್ನ ವ್ಯಾಮೋಹ ದಿನಾ ದಿನಾ ಜಾಸ್ತಿ ಆಗ್ತಾ ಇದೆ. ಸದ್ಯಕ್ಕೆ ನೀವು ರೈಲು ಬಂಡಿ ಓಡಿಸುವುದನ್ನು ನಿಲ್ಲಿಸಿ ನನ್ನ ಅಭಿಪ್ರಾಯ ಕೆತ್ತ ಅವಕಾಶ ಮಾಡಿಕೊಡಿ...

  ReplyDelete
 3. ಸಾರಥಿ ಅವರೆ,
  ಪೊಲೀಸರು ರಾಷ್ಟ್ರಪತಿ ಪದಕಕ್ಕೆ ಸಲ್ಲಿಸಿದ ಅರ್ಜಿ ಸ್ವೀಕೃತವಾಗಿದೆ. ಇದಕ್ಕೆ ಕಾರಣ ಅವರು ನೈಟಿಯೊಳಗಿನ ಲಕ್ಷ ರೂಪಾಯಿಗಳಿಗಾಗಿ ಕೂಡ ಅರ್ಜಿ ಸಲ್ಲಿಸಿದ್ದೇ ಆಗಿರುತ್ತದೆ.
  ಇನ್ನೊಂದು ವಿಷಯ,
  ನಿಮ್ಮ ಕತ್ತೆ ಪುರಾಣ ಯಾಕೆ ಆಗುತ್ತೆ ನಾಪತ್ತೆ ಅಂತ ಶೋಧಿಸಲು ನಮ್ಮ ಅಸತ್ಯಾನ್ವೇಷಣ ತಂಡ ಹೊರಟಿದೆ. ಎರಡೆರಡು ಬಾರಿ ಬ್ಲಾಗ್ ನಲ್ಲಿ ತುರುಕಿದರೂ ಈ ಕತ್ತೆ ಚಿತ್ರ ಸಮೇತ ನಾಪತ್ತೆಯಾಗುವುದು ನಮಗೆ ನಮ್ಮ ಪ್ರತಿಸ್ಪರ್ಧಿಗಳ ಕೈವಾಡವಿದೆಯೋ ಎಂಬ ಶಂಕೆಗೆ ಕಾರಣವಾಗಿದೆ. ಆ ಕತ್ತೆಯನ್ನು ಮತ್ತೆ ಹಿಡಿದು ತರುತ್ತೇನೆ ಎಂದು ಆಶ್ವಾಸನೆ ನೀಡುತ್ತಿದ್ದೇನೆ. ಅಲ್ಲಿವರೆಗೆ ನೀವು ಗಾರ್ದಭ ಎಂದು ಹೆಸರು ನಮೂದಿಸಿ ಸರ್ಚ್ ದಿ ಬ್ಲಾಗ್ ಲಿಂಕ್ ಮೂಲಕ ಹುಡುಕಿದರೆ ಕತ್ತೆ ಪತ್ತೆ ಆಗುತ್ತೆ. ಗುಡ್ ಲಕ್.

  ReplyDelete
 4. ಅಸತ್ಯಾನ್ವೇಷಿಗಳೇ,

  Nighty ಅನುವಿನ Alwaysy ವಂಚನೆ ಪುರಾಣ ಮಜ ಕೊಟ್ಟಿತು. ನಿಮ್ಮ ಬೊಗಳೂರು ಬ್ಯೂರೊದ ಈ ಇನ್ವೆಸ್ಟಿಗೇಟಿವ್ ವರದಿ ತುಂಬಾ ಚೆನ್ನಾಗಿದೆ. Kudos to your staff!!!

  ReplyDelete
 5. ನಮ್ಮ ಬೊಗಳೂರು ಒದರಿಗಾರರಿಗೆ ನೀವು Kudos ಹೇಳಿ ನೈಟಿ ಅನುವಿನಂತೆ ಆಮಿಷವೊಡ್ಡಿದ್ದು ಒಂಚೂರು ಹಿಡಿಸಲಿಲ್ಲ ನೋಡಿ. ಆದ್ರೂ ಸಕಾಲದಲ್ಲಿ ಎಚ್ಚರಿಸಿದ್ದಕ್ಕೆ ಥ್ಯಾಂಕ್ಸ್. ಒದರಿಗಾರರ ಮೇಲೆ ಒಂದು ಕಣ್ಣು ಇರಿಸಲಾಗುತ್ತದೆ ಎಂದು ಭರವಸೆ ನೀಡುತ್ತೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post