Subscribe Us

ಜಾಹೀರಾತು
header ads

ನಿಧನಕ್ಕೆ ದಾಂಧಲೆ: ಸಮಾಜವಿದ್ರೋಹಿ

ಸಂಘದಿಂದ ಗಿನ್ನೆಸ್ ದಾಖಲೆಗೆ ಅರ್ಜಿ
(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.15- ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ರೋಶಿತರಾದ ಡಾ.ಭೋಜ್ ದುರಭಿಮಾನಿಗಳ ಯಾನೆ ಸಮಾಜಘಾತುಕ ಸಂಘದ ಸದಸ್ಯರು, ಸುತ್ತ ಮುತ್ತ ಯಾರ ತಂಟೆಗೂ ಹೋಗದೆ ಮೌನವಾಗಿ ರೋದಿಸುತ್ತಿದ್ದ ಬಸ್ಸು, ಕಾರು, ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಬೊಗಳೂರಿನಿಂದ ವರದಿಯಾಗಿದೆ.

ಇದಲ್ಲದೆ, ಡಾ.ರಾಜ್ ಸಾವಿನ ಸುದ್ದಿ ಕೇಳಿ ಆಘಾತದಿಂದ ಅಳುತ್ತಿದ್ದ ಜನರನ್ನು ಹಿಗ್ಗಾಮುಗ್ಗ ಎಳೆದಾಡಿದ ದುರಭಿಮಾನಿಗಳ ಸಂಘದ ಸದಸ್ಯರು, ಅವರಿಗೆ ಕಲ್ಲಿನಿಂದ ಹೊಡೆದು, ಅವರ ವಾಹನಗಳಿಗೂ ಕಲ್ಲೇಟು ನೀಡಿ ಏನೂ ಆಗದವರಂತೆ ತೆರಳಿದ್ದಾರೆ.ಇನ್ನೂ ಮುಂದುವರಿದ ಸಮಾಜಘಾತುಕ ಸಂಘದ ಸದಸ್ಯರು, ಡಾ.ರಾಜ್ ಶವವನ್ನು ವಿಧಾನ ಸೌಧದೊಳಗೆ ತಂದು ಸಾರ್ವಜನಿಕ ದರ್ಶನಕ್ಕೆ ಇರಿಸಬೇಕು ಎಂದು ಕೂಗಾಡತೊಡಗಿದರು.

ಮಚ್ಚು, ದೊಣ್ಣೆ ಹಿಡಿದುಕೊಂಡು, ಕಂಠ ಮಟ್ಟ ಏರಿಸಿಕೊಂಡಿದ್ದ ಇತರ ಸದಸ್ಯರು ತಮ್ಮ ಕಂಠ ಬಿರಿಯುವಂತೆ ಈ ದುರಾಲೋಚನೆಗೆ ಗಾರ್ದಭ ಸಂಘದ ಸದಸ್ಯರು ಕೂಡ ತಲೆತಗ್ಗಿಸುವಷ್ಟು ಜೋರಾಗಿ ಅರಚಾಡಿ ತಮ್ಮ ಬೊಬ್ಬಲ ಸೂಚಿಸಿದರು.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ರೀತಿ ಮಾಡುವುದು ಅಸಾಧ್ಯ ಎಂದ ಪೊಲೀಸರ
ಮೇಲೇ ದಾಳಿ ನಡೆಸಿದ ದುರಭಿಮಾನಿಗಳು, ಪೊಲೀಸರಲ್ಲೊಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿ ಕಲ್ಲಿನಿಂದ ಚಚ್ಚಿ ಚಚ್ಚಿ ಸಾಯಿಸಿ ಕೇಕೆ ಹಾಕಿದರು.

ಇದರಿಂದಾಗಿ ನಾಡು ಕಂಡ ಮಹಾನ್ ನಟ, ಕನ್ನಡ ಪ್ರೇಮಿ ಡಾ.ರಾಜ್ ಕುಮಾರ್ ಅವರು ಸಾವಿನಲ್ಲೂ ನಡುಬೀದಿಯಲ್ಲೇ ಉಳಿಯುವಂತಾಯಿತು. ಬೊಗಳೂರಿನ ಹೆಸರಿಗೆ, ಡಾ.ರಾಜ್ ಹೆಸರಿಗೆ ಮಸಿ ಬಳಿಯುವ 'ಸಾಧನೆ'ಯ ಹಿನ್ನೆಲೆಯಲ್ಲಿ ಸಮಾಜವಿದ್ರೋಹಿಗಳ ಸಂಘವು ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ಹೊರಟಿದೆ ಎಂದು ತಿಳಿದುಬಂದಿದೆ.

ಅಸತ್ಯಾನ್ವೇಷಿ ತಂಡ ತನಿಖೆ: (ದುರ್)ಅಭಿಮಾನದ ಹೆಸರಲ್ಲಿ ಅ'ರಾಜ'ಕತೆ ಸೃಷ್ಟಿಯಾದ ಹಿನ್ನೆಲೆಯನ್ನು ಕೆದಕಲು ಹೊರಟ ಅಸತ್ಯಾನ್ವೇಷಣಾ ತಂಡಕ್ಕೆ ಕೆಲವು ಮಹತ್ವದ ಸುಳಿವುಗಳು ಸಿಕ್ಕಿಯೇ ಬಿಟ್ಟವು. ಅದರ ಜಾಡು ಹಿಡಿದು ಹೋದಾಗ ದಾಂಧಲೆ ನಡೆಸುತ್ತಿದ್ದವನೊಬ್ಬ ವಿಷಯ ಬಾಯಿಬಿಟ್ಟ.ಈ ಹಿಂದಿನ ಸರಕಾರಕ್ಕೆ ಆಗಾಗ್ಗೆ ಮುಳ್ಳಿನಂತೆ ಚುಚ್ಚುತ್ತಲೇ, ಮುಖ್ಯಮಂತ್ರಿ ವಿರುದ್ಧ ರಣತಂತ್ರ ರೂಪಿಸುತ್ತಿದ್ದ ಕೇಡಿ ವಕುಮಾರ್ ಎಂಬ ದುಷ್ಟ ರಾಜಕಾರಣಿಯೇ ಇದರ ಹಿಂದಿದ್ದಾನೆ ಎಂದು ಆತ 'ಬೊಗಳೆ-ರಗಳೆ' ತಂಡದೆದುರು ಬೊಗಳಿದ್ದಾನೆ.

ಹಿಂದಿನ ಸರಕಾರದಲ್ಲಿ ತಮ್ಮ ಉದ್ದನೆಯ ಮೂಗು ತೂರಿಸುವ ಯತ್ನದಲ್ಲಿದ್ದಾಗಲೇ, ಆ ಸರಕಾರವನ್ನು ಹೈಜಾಕ್ ಮಾಡಿ 'ಕಮಲ'ನ ಜತೆಗೆ ಕೈಜೋಡಿಸಿ ತಮ್ಮ ಸರಕಾರ ಪ್ರತಿಷ್ಠಾಪಿಸಿದ ತೆನೆ ಹೊತ್ತ ರೈತ ಮಹಿಳೆಯನ್ನು ಕೆಳಕ್ಕಿಳಿಸುವುದೇ ಕೇಡಿ ವಕುಮಾರ್ ಉದ್ದೇಶ ಎಂಬ ಅಂಶ ಬಯಲಾಗಿದೆ.
ಚಿತ್ರ: ಸಮಾಜ ಘಾತುಕ ಸಂಘ ಸದಸ್ಯರು ವಾಹನ ಪುಡಿಗಟ್ಟಿ, ಗಿನ್ನೆಸ್ ದಾಖಲೆಗೆ ಅರ್ಜಿ ಸಲ್ಲಿಸುವ ಕೆಲವೇ ಕ್ಷಣಗಳ ಮೊದಲು
(ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಪ್ರಿಯ ಸಂಪಾದಕರೇ,
  ನಿಮ್ಮ ಬ್ಯೂರೊದ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದೇ. ಮೊನ್ನೆ ಬೆಂಗಳೂರಿನಲ್ಲಿ ಸಂಭವಿಸಿದ ಗಲಭೆ ಸಂಬಂಧ ನಿಮ್ಮ ಪತ್ರಿಕೆಯ ತನಿಖಾ ವರದಿಯನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಸುದ್ದಿ.

  ಪ್ರತ್ಯುತ್ತರಅಳಿಸಿ
 2. ಹೌದು, ಹೌದು, ನಮಗೂ ಸುದ್ದಿ ಬಂದಿದೆ ವಿಶ್ವನಾಥರೇ. ಮುಖ್ಯಮಂತ್ರಿಗಳ ಕಚೇರಿಯ ಕ.ಬು.ವಿನಲ್ಲಿ ನಮ್ಮ ಪತ್ರಿಕೆ ತುಂಬಿ ತುಳುಕಾಡುತ್ತಿರುವುದನ್ನು ನಾವು ಕೂಡ ಗಂಭೀರವಾಗಿ ಪರಿಗಣಿಸದೆಬಿಡುವುದಿಲ್ಲ...!

  ಪ್ರತ್ಯುತ್ತರಅಳಿಸಿ
 3. ಅಯ್ಯೋ, ಬೊಗಳೆ ಅಂತಾನೂ ಒಂದು ಬ್ಲಾಗ್ ಇದೆಯಾ!!!

  ಪ್ರತ್ಯುತ್ತರಅಳಿಸಿ
 4. ಶ್ರೀ ತ್ರೀ ಅವರೆ,
  ದಯವಿಟ್ಟು ಬೆಚ್ಚಿ ಬೀಳಬೇಡಿ. ನೀವು ಬೆಚ್ಚಿ ಬಿದ್ದರೆ ನಮ್ಮ ಪತ್ರಿಕಾ ಲಾಯಕ್ಕೊಂದು ಕೆಟ್ಟ ಹೆಸರು. ಹಾಗಾಗಿ, ನೀವು ಬೆಚ್ಚಿದರೂ ಅಯ್ಯೋ ಅಂತ ಜೋರಾಗಿ ಕೂಗಬೇಡಿ. ಬೇರೆಯವರಿಗೆ ಕೇಳಿಸಿದರೆ.... ನಮ್ಮ ಬೊಗಳೂರು ಬ್ಯುರೋ ಗತಿ ಏನಾಗಬೇಡ! ನೀವು ಬೇಕಿದ್ದರೆ ಬೊಗಳೆ ಬದ್ಲು ಬ್ಲಾಗ್ ಅಂತಾನೇ ಕರೀರಿ...

  (ಸಣ್ಣ ಧಮಕಿ: ಬೊಗಳೆಯ ರಗಳೆ ಕೇಳಿಸಿಕೊಂಡಿದ್ದಕ್ಕೆ ಧನ್ಯವಾದಗಳು!)

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D