ಪ್ರಮೋದ್ ಜಹಾಪನಾಗೆ ಗುಂಡು ಹಾಕುವ

ಮೊದಲು ತಾನೇ ಗುಂಡು ಹಾಕಿಕೊಂಡಿದ್ದ !


(ಬೊಗಳೂರು ಬ್ಯುರೋ ತ್ವರಿತ ಸುದ್ದಿ ವಿಭಾಗ)
ಬೊಗಳೂರು, ಏ.22- ಮುಂಬಯಿಯಲ್ಲಿ ಲಕ್ ಮಣ ಖ್ಯಾತಿಯ (ಬಿಜೆಪಿಯ ಶ್ರೀಮಾನ್ ರಾಂ ಸೋದರ) ಪ್ರಮೋದ್ ಜಹಾಪನಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಸುದ್ದಿ ಬೊಗಳೆಯ ನವಗೆಳೆಯ ತವಿಶ್ರೀ ಅವರಿಂದ ತಿಳಿಯುತ್ತಲೇ, ಅಲ್ಲಿಗೆ ಧಾವಿಸಿದಾಗ, ಅಲ್ಲಿನ ಅಧೋಲೋಕದ ಆಟಾಟೋಪದಿಂದಾಗಿ ರೈಲು ನಿಲ್ದಾಣದಲ್ಲೇ 3 ಸುತ್ತು ತಿರುಗಿ ಕೈಭಾಷೆಯಲ್ಲೇ ನೀರು ಕೇಳುವಷ್ಟರ ಮಟ್ಟಿಗೆ ನಮ್ಮ ಅಸತ್ಯಾನ್ವೇಷಿ ಬೆಚ್ಚಿ ಬಿದ್ದ ಪ್ರಸಂಗ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳ ಮುಖ(ಪುಟ)ದಲ್ಲಿ ಮಂದಹಾಸದ ವಕ್ರ ಗೆರೆಯೊಂದು ಮೂಡಲು ಕಾರಣವಾಗಿದೆ.

ಪ್ರಮೋದ್ ಜಹಾಪನಾ ಮೇಲೆ ಗುಂಡು ಹಾರಿಸುವುದಕ್ಕೆ ಮೊದಲೇ ಅವರ ಸಹೋದರ, ಆರೋಪಿ ಅಧೋಲೋಕ ಪ್ರವೀಣನು ತಾನೂ ಕೂಡ ಹೊಟ್ಟೆಗೆ ಗುಂಡು ಹಾಕಿಕೊಂಡಿದ್ದ ಎಂಬುದು ಅಸತ್ಯಾನ್ವೇಷಿ ತನಿಖೆಯಿಂದ ಬಯಲಾಗಿದೆ.

ಅಂಡರ್ ದಿ ವರ್ಲ್ಡ್: ಅಧೋಲೋಕ ಪ್ರವೀಣನಿಗೆ ಅಂಡರ್ ದಿ ವರ್ಲ್ಡ್ ಕೊಲೆಕ್ಷನ್ ಸೆಂಟರ್ ಇದೆ ಎಂಬುದು ಕೂಡ ಗೊತ್ತಾಗಿದೆ. ಈತನಿಗೆ ರಾಜಾ ಛೋಟನ್ ಮತ್ತು ಗರುಣ್ ಆವ್ಳಿಯ ಮಚ್ಚು-ಲಾಂಗುಗಳು ಮತ್ತು ಗುಂಡು-ಪೆಗ್ಗುಗಳ ಪರಿಚಯ ಚೆನ್ನಾಗಿದೆ ಎಂಬ ವಿಷಯ ಅಸತ್ಯಾನ್ವೇಷಿಯ ಅಂಡರ್ ವರ್ಲ್ಡ್ ಕನೆಕ್ಷನ್‌ನಿಂದ ಗೊತ್ತಾಗಿದೆ ಎಂದು ಪತ್ರಿಕೆಯು ಯಾರಿಗೂ ಗೊತ್ತಾಗದಂತೆ ಹೇಳಲು ಬಯಸುತ್ತದೆ.

ಇದೊಂದು ಎಕ್ಸ್ ಜ್ಯೂಸಿವ್ ವರದಿ ಎಂದು ಬೊಗಳೆ ಬಿಡಲು ನಿರ್ಧರಿಸಲಾಗಿದ್ದರೂ, ಅಸತ್ಯಾನ್ವೇಷಿಯೂ ಜಗತ್ತಿನ ತಳ ಭಾಗದಲ್ಲಿ (ಅಂಡರ್ ವರ್ಲ್ಡ್ ನಲ್ಲಿ ಯಾರಿಗೂ ಗೊತ್ತಾಗದಂತೆ) ಗುಂಡು ಹಾಕಲು ಹೋಗಿದ್ದರಿಂದಾಗಿ ನಮ್ಮ ಮಾನ ಹರಾಜಾಗುತ್ತದೆಂಬ ಕಾರಣಕ್ಕೆ ಅದನ್ನು ಇಲ್ಲಿ ಬಹಿರಂಗಪಡಿಸಲಾಗುತ್ತಿಲ್ಲ.

ಈ ನಡುವೆ, ಸಾಲಾ ಬಾಹೇಬ್ ಥ್ಯಾಕರೆ ಎಂಬ ಹಳೆ ಹುಲಿ ಈಗ ವೃದ್ಧಾಪ್ಯದಿಂದಾಗಿ ಕಾಡಿನ ಮೂಲೆಯಲ್ಲಿ ಕೂತಿರುವುದರಿಂದಾಗಿ, ರಾಜಾ ಛೋಟನ್ ತನ್ನ ಬೇಳೆ ಬೇಯಿಸಿಕೊಳ್ಳಲು ಇತರ ರಾವಣರಾಸಂಧಕೀಚಕಮ ಪುಡಾರಿಗಳನ್ನು ಆರಿಸಿಕೊಳ್ಳುತ್ತಿದ್ದಾನೆ ಎಂಬ ಅತ್ಯಂತ ರಹಸ್ಯ ವಿಷಯವನ್ನು ಬಟಾಬಯಲು ಮಾಡದಂತೆ ಪತ್ರಿಕೆ ನಮ್ಮ ಓದುಗರನ್ನು ಬೋಂಡಾ ಪಡೆಯ ಮೂಲಕ ಬೆದರಿಸಲು ನಿರ್ಧರಿಸಿದೆ. ಓದುಗರು ಸಹಕರಿಸಲು ವಿನಂತಿಸಲಾಗಿದೆ.
ಇದಕ್ಕೆ ಇತ್ತೀಚಿನ ಮಚ್ಚು-ಲಾಂಗು ಸಹಿತದ ಕನ್ನಡ (ವಿ)ಚಿತ್ರಗಳನ್ನು ಬಳಸಲು ಪತ್ರಿಕೆ ನಿರ್ಧರಿಸಿದೆ.

ಐಸಿಯು ಒಳಗೆ ಪತ್ರಿಕಾಗೋಷ್ಠಿ: ಇಷ್ಟೆಲ್ಲದರ ನಡುವೆಯೇ, ಜಹಾಪನಾ ಅವರು ಆಸ್ಪತ್ರೆಯ ಐಸಿಯು ಕೊಠಡಿಯೊಳಗೇ ಸುದ್ದಿಗೋಷ್ಠಿ ಕರೆದು, ಈ ಘಟನೆಯನ್ನು ಖಂಡಿಸಿರುವುದಾಗಿ ಅಸತ್ಯಾನ್ವೇಷಿ ವರದಿ ಮಾಡಿದ್ದಾರಾದಾರೂ, ಜಹಾಪನಾ ಅವರು ತಮ್ಮ ಸ್ಥಿತಿ ಈಗ ಹೇಗಿದೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

2 Comments

ಏನಾದ್ರೂ ಹೇಳ್ರಪಾ :-D

  1. ಕಟು ಸತ್ಯವನ್ನು ನವಿರಾದ ಹಾಸ್ಯದ ಸಕ್ಕರೆ ಪಾಕದಲ್ಲಿ ಅದ್ದಿ ಚೆನ್ನಾಗಿ ನಿರೂಪಿಸಿದ್ದೀರ. ಬರವಣಿಗೆಯ ಕ್ರಾಂತಿ ಹೀಗೆಯೇ ಮುಂದುವರೆದು ಕುರುಡು ಲೋಕಕ್ಕೆ ದೃಷ್ಟಿಯನ್ನಿತ್ತು ಕೈಲಾದ ಸೇವೆ ಮಾಡಿರಿ.

    ReplyDelete
  2. ನಿಮ್ಮ ಶುಭ ಹಾರೈಕೆಯಿಂದ ನಮ್ಮ ಶುಗರ್ ಲೆವೆಲ್ ಹೆಚ್ಚುವ ಸಾಧ್ಯತೆ ಇರುವುದರಿಂದ ಕಡಿಮೆ ಸಿಹಿ ಇರುವ ಸಕ್ಕರೆಯನ್ನು ಕಳುಹಿಸಲು ಕೋರಲಾಗಿದೆ.

    ಸಕ್ಕರೆ ತಯಾರಿ ವೇಳೆ ಮೂಳೆಯನ್ನು(bone) ಬಳಸುತ್ತಾರೆ ಎಂಬುದನ್ನು ಕೇಳಿಬಲ್ಲೆ. ಈ ಕಾರಣಕ್ಕೆ ನಿಮ್ಮ ಸಕ್ಕರೆಯ ಹಾರೈಕೆಗಳು ನಮ್ಮ ಬೆನ್ನೆಲುಬನ್ನು (backbone)ಇನ್ನಷ್ಟು ಗಟ್ಟಿಯಾಗಿಸುತ್ತದೆ ಎಂಬ ಭರವಸೆಯಿದೆ.
    ನಮಸ್ಕಾರಗಳು (ಮೆಣಸ್ ಖಾರ ಎಂದು ಭಾವಿಸಬಾರದಾಗಿ ವಿನಂತಿ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post